ಕರ್ನಾಟಕ ಸಂಸ್ಕೃತಿ ಸಮೀಕ್ಷೆ

Author : ಎಚ್‌. ತಿಪ್ಪೇರುದ್ರಸ್ವಾಮಿ

Pages 817

₹ 600.00




Year of Publication: 2015
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು

Synopsys

ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಯು ಅನಾದಿ ಕಾಲದಿಂದ ಇಂದಿನವರೆಗಿನ ಕರ್ನಾಟಕದ ಸಂಸ್ಕೃತಿ ಪರಂಪರೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದೆ. ಭಾರತೀಯ ಸಂಸ್ಕೃತಿಯ ಹಿನ್ನೆಲೆಯನ್ನು ಒದಗಿಸಿ, ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯಾಖ್ಯೆಯಿಂದ ಆರಂಭಿಸಿ ಭಾರತೀಯ ಸಂಸ್ಕೃತಿಯಲ್ಲಿ ಸಮನ್ವಯ ಧರ್ಮವನ್ನು ರೂಪಿಸುವುದರೊಂದಿಗೆ ಈ ಅಧ್ಯಾಯದಲ್ಲಿ ಸಿಂಧೂ ಸಂಸ್ಕೃತಿಯಿಂದ ಆರಂಭಿಸಿ ಗುಪ್ತರ ಕಾಲದ ಕಲೆಯವರೆಗೂ ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳ ಸೂಕ್ಷ್ಮ ಪರಿಚಯ ಮಾಡಿಕೊಟ್ಟಿದೆ. ಕರ್ನಾಟಕದ ರಾಜಕೀಯ ಇತಿಹಾಸ, ಆಡಳಿತ ಕ್ರಮ, ಶಾಸನಗಳಲ್ಲಿ ಮತ್ತು ಸಾಹಿತ್ಯದಲ್ಲಿ ಕಾಣಬಹುದಾದ ಸಂಸ್ಕೃತಿ, ಜಾನಪದ ಸಾಹಿತ್ಯ, ವಾಸ್ತುಶಿಲ್ಪ ಸಂಗೀತ ಮತ್ತು ನೃತ್ಯ, ಹಾಗೂ ಚಿತ್ರಕಲೆಗಳ ಪರಿಚಯವನ್ನು ನೀಡಲಾಗಿದೆ. 

About the Author

ಎಚ್‌. ತಿಪ್ಪೇರುದ್ರಸ್ವಾಮಿ
(03 February 1928 - 28 October 1994)

ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್‌ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...

READ MORE

Awards & Recognitions

Reviews

ನಾವು, ನಮ್ಮತನ ಮತ್ತು ನಮ್ಮ ಹೆಮ್ಮೆ- ಪ್ರಜಾವಾಣಿ

 

ಕರ್ನಾಟಕ ಸಂಸ್ಕೃತಿ ಸಮೀಕ್ಷೆ 

ಕನ್ನಡ ಸಾಹಿತ್ಯ, ವಿಶೇಷವಾಗಿ ವೀರಶೈವ ಸಾಹಿತ್ಯ ಧರ್ಮಗಳ ಸಂಶೋಧನೆಗಳಲ್ಲಿ ನಿರತರಾಗಿ ಹೆಸರಾಂತ ಕನ್ನಡ ಲೇಖಕರಾದ ಪ್ರಾಧ್ಯಾಪಕ ತಿಪ್ಪೇರುದ್ರಸ್ವಾಮಿಗಳ ಕೃತಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದೆ. ಇದರಲ್ಲಿ ಹತ್ತು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯ ಭಾರತೀಯ ಸಂಸ್ಕೃತಿಯ ಹಿನ್ನೆಲೆಯನ್ನು ಒದಗಿಸಿದೆ. ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯಾಖ್ಯೆಯಿಂದ ಆರಂಭಿಸಿ ಭಾರತೀಯ ಸಂಸ್ಕೃತಿಯಲ್ಲಿ ಸಮನ್ವಯ ಧರ್ಮವನ್ನು ರೂಪಿಸುವುದರೊಂದಿಗೆ ಈ ಅಧ್ಯಾಯದಲ್ಲಿ ಸಿಂಧೂ ಸಂಸ್ಕೃತಿಯಿಂದ ಆರಂಭಿಸಿ ಗುಪ್ತರ ಕಾಲದ ಕಲೆಯವರೆಗೂ ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳ ಸೂಕ್ಷ್ಮ ಪರಿಚಯ ಮಾಡಿಕೊಡಲಾಗಿದೆ. 'ಭಾರತೀಯ ಸಂಸ್ಕೃತಿಯ ಸಾರವನ್ನು ಅಳವಡಿಸಿಕೊಂಡಿರುವ ಕರ್ಣಾಟಕ, ತನ್ನ ಸಾಧನೆಯಿಂದ ಹೇಗೆ ಅದಕ್ಕೆ ವಿಶಿಷ್ಟ ಚೈತನ್ಯವನ್ನಿತ್ತಿದೆ ಎಂಬುದನ್ನು ನೋಡುವುದಷ್ಟೇ' ಈ ಅಧಾಯದ ಉದ್ದೇಶ. ಉಳಿದ ಅಧಾಯಗಳಲ್ಲಿ ಕರ್ಣಾಟಕದ ರಾಜಕೀಯ ಇತಿಹಾಸ, ಆಡಳಿತ ಕ್ರಮ, ಶಾಸನಗಳಲ್ಲಿ ಮತ್ತು ಸಾಹಿತ್ಯದಲ್ಲಿ ಕಾಣಬಹುದಾದ ಸಂಸ್ಕೃತಿ, ಜಾನಪದ ಸಾಹಿತ್ಯ, ವಾಸ್ತುಶಿಲ್ಪ ಸಂಗೀತ ಮತ್ತು ನೃತ್ಯ, ಹಾಗೂ ಚಿತ್ರಕಲೆಗಳ ಪರಿಚಯವನ್ನು ಸಾಕಷ್ಟು ವಿಸ್ತಾರವಾಗಿಯೇ ಕೊಡಲಾಗಿದೆ. 

ಕರ್ನಾಟಕದ ಸಂಸ್ಕೃತಿಯ ಎಲ್ಲ ಮುಖಗಳ ಸಂಗ್ರಹವಾದ ದರ್ಶನ ಇಲ್ಲಿ ನಮಗಾಗುತ್ತದೆ. ಇದಕ್ಕಾಗಿ ಲೇಖಕರು ಸಂಗ್ರಹಿಸಿರುವ ವಿವರಗಳು ಅಚ್ಚರಿಯನ್ನುಂಟುಮಾಡುವಂತಿದೆ. ಶಾಸನ ಸಾಹಿತ್ಯ, ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯಗಳನ್ನಂತೂ ಇವರು ಇಲ್ಲಿ ಒಟ್ಟುಗೂಡಿಸಿರುವುದು, ಕನ್ನಡ ಪ್ರಾಧ್ಯಾಪಕರೊಬ್ಬರಿಗೆ ಅತಿಶಯವಲ್ಲದ ಕೆಲಸವೆನಿಸಬಹುದಾದರೂ, ಮೊದಲನೆಯ ಅಧ್ಯಾಯದಲ್ಲಿ ನೀಡಿರುವ ಭಾರತೀಯ ಸಂಸ್ಕೃತಿಯ ಪರಿಚಯಾತ್ಮಕ ಅಧ್ಯಾಯ, ಕರ್ಣಾಟಕದ ವಾಸ್ತುಶಿಲ್ಪ, ಲಲಿತಕಲೆಗಳನ್ನು ಕುರಿತಾದ ಅಧ್ಯಾಯಗಳನ್ನೋದಿದಾಗ ಲೇಖಕರು ವಿಷಯ ಸಂಗ್ರಹಣೆಗಾಗಿ ಪಟ್ಟಿರುವ ಸಾರ್ಥಕ ಶ್ರಮ ಅರ್ಥವಾಗುತ್ತದೆ. ಈ ಕೃತಿಯ ಹಿಂದೆ ಗಾಢವಾದ ವಿಸ್ತಾರವಾದ ಅಧ್ಯಯನವಿದೆ. ನನಗೆ ತಿಳಿದಂತೆ ಬಹುಶಃ ಭಾರತದ ಇತರ ಭಾಷೆಗಳಲ್ಲಿ ಇಂತಹ ಕೃತಿ ರಚನೆಯಾಗಿಲ್ಲವೇನೋ !

ಸಂಗ್ರಹಿತ ವಿಷಯಗಳನ್ನು ಅಚ್ಚುಕಟ್ಟಾಗಿ ಪರಿಶೀಲಿಸಿ, ವಿಶ್ಲೇಷಿಸಿ, ವ್ಯವಸ್ಥಿತವಾಗಿ ಅರ್ಥಪೂರ್ಣವಾಗಿ ಉದ್ದೇಶ ಸಫಲವಾಗುವಂತೆ ರೂಪಿಸುವುದರಲ್ಲಿಯೂ ಲೇಖಕರು ಬಹಳ ಜಾಣ್ಮೆಯನ್ನು ತೋರಿಸಿದ್ದಾರೆ. ಇದು ಕೇವಲ ಪರಿಶ್ರಮದ ಕೆಲಸವಷ್ಟೇ ಆಗಿಲ್ಲ; ವಿಚಿಕಿತ್ಸಕ ದೃಷ್ಟಿ ಸಹ ಇಲ್ಲಿದೆ. ಕರ್ಣಾಟಕ ಸಂಸ್ಕೃತಿಯನ್ನು ಜನಸಾಮಾನ್ಯರಿಗೂ ತಿಳಿಯುವಂತೆ ವಿಷಯವನ್ನು ಲೇಖಕರು ನಿರೂಪಿಸಿದ್ದಾರೆ. ಮೂಲಸಾಮಗ್ರಿಗಳನ್ನು ಬಳಸಿ ಸುಲಭವಾಗಿ ಓದಿಸಿಕೊಂಡು ಹೋಗುವಂತಹ ಸುಲಲಿತವಾದ ಶೈಲಿಯನ್ನು ಲೇಖಕರು ಬಳಸಿದ್ದಾರೆ. ಈ ವಿಷಯಗಳಲ್ಲಿನ ತಜ್ಞರಿಗೆ ಇಲ್ಲಿನ ಕೆಲವು ವಿಷಯಗಳು ವಿವಾದಾತ್ಮಕವೂ, ಒಪ್ಪಿಕೊಳ್ಳಲಾಗದಂತಹವೂ ಆಗಿರಬಹುದಾದರೂ, ಅಂತಹ ವಿಷಯಗಳ ನಿರೂಪಣೆಯಲ್ಲಿ ಲೇಖಕರು ಭಾವುಕರಾಗಿದ್ದು ವಿವಾದಕ್ಕೆ ಆಸ್ಪದ ನೀಡದಂತಹ ಚಾತುರ್ಯವನ್ನು ತೋರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು -ಅರ್ಥಶಾಸ್ತ್ರಜ್ಞರು, ಇಂತಹ ವಿಷಯಗಳಲ್ಲಿ ಕೇವಲ ಮನೋಹರವೆಂಬಷ್ಟನ್ನೇ ಅಲ್ಲದೆ, ಸಮಾಜದಲ್ಲಿರುವ ಹುಳುಕುಗಳನ್ನೂ, ಬಡವ, ಬಲ್ಲಿದ, ಮೇಲುವರ್ಗ- ಕೆಳವರ್ಗ ಇತ್ಯಾದಿಗಳನ್ನು ಸಹ ಕಾಣಲು ಯತ್ನಿಸುತ್ತಿದ್ದಾರೆ. ಇಂತಹ ಜನರಿಗೆ ಈ ಗ್ರಂಥದಲ್ಲಿ ಅಂತಹದೇನೂ ಇಲ್ಲದಿರುವುದು ಒಂದು ಕುಂದಾಗಿ ಕಾಣಬಹುದು. ಇಲ್ಲಿ ಕಾಣುವುದೆಲ್ಲ ನಾಣ್ಯದ ಒಂದು ಮುಖ. ಅದರ ಇನ್ನೊಂದು ಮುಖವೆಂಥದು ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರಕಲಾರದು. ಇದು ಕುಂದು ಎಂದು ಹಳೆಯ ತಲೆಮಾರಿನವರಿಗೆ ಅನಿಸಲಾರದಾದರೂ, ಇತ್ತೀಚಿನ ತಲೆಮಾರಿನವರಿಗೆ ಇದು ಎದ್ದು ಕಾಣಬಹುದೇನೋ !

ಆದರೆ, ಭಾರತಾಂತರ್ಗತ ಕರ್ಣಾಟಕದ ಸಂಸ್ಕೃತಿಯ ಪರಿಚಯ ಮಾಡಿಕೊಡುವುದರಲ್ಲಿ ಈ ಸಮೀಕ್ಷೆ ಯಶಸ್ವಿಯಾಗಿದೆ ಎಂಬುದರಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ. ಇಂತಹ ಕೃತಿಯನ್ನು ಕನ್ನಡಿಗರಿಗೆ ನೀಡಿರುವುದಕ್ಕಾಗಿ ಲೇಖಕರು ಅಭಿನಂದನಾರ್ಹರು. 

-ಬಾ. ರಾ. ಗೋಪಾಲ್ 

 

ಕರ್ಣಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ) 

ಮೊದಲನೆಯ ಆವೃತ್ತಿ 1968, ಎರಡನೆಯ ಮುದ್ರಣ 1974 ಡಿ ವಿ ಕೆ ಮೂರ್ತಿ ಕೃಷ್ಣಮೂರ್ತಿಪುರಂ ಮೈಸೂರು 570 004

ಡೆಮ್ಮಿ ಅಷ್ಟ 825 ಪುಟಗಳು ಬೆಲೆ ರೂ.40-00 

ಕೃಪೆ: ಗ್ರಂಥಲೋಕ, ಜನೆವರಿ 1981

 

Related Books