About the Author

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು.

ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ನಡೆಸಿದರು. ಪ್ರಗತಿಶೀಲ ಸಾಹಿತ್ಯದ ಚಳವಳಿ (1943-44) ಯಲ್ಲಿ ನಿರತರಾದರು. ಬಿಎಂಶ್ರೀ ಅವರ ಕಾಲದಲ್ಲಿ ಕನ್ನಡ ನುಡಿ ಸಂಪಾದಕರಾಗಿದ್ದ ಅವರು ಕೇಂದ್ರ ಸಚಿವ ದಿವಾಕರರ ಹಿಂದಿ ಪ್ರತಿಪಾದನೆಯನ್ನು ವಿರೋಧಿಸಿ ಪತ್ರಿಕೆಯನ್ನು ತೊರೆದರು.

ಕನ್ನಡ ಚಳವಳಿ ನೇತಾರರಾಗಿ ರಾಮಮೂರ್ತಿ ಅವರೊಡನೆ ಸೇರಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಿ ಕನ್ನಡಾಭಿಮಾನ ಬೆಳೆಸಿದರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದರು. ತಮ್ಮ ಅದ್ಭುತ ವಾಗ್ವೈಖರಿಯಿಂದ ನಾಡಿನಲ್ಲೆಲ್ಲಾ ಜನಪ್ರಿಯರಾಗಿದ್ದ ಅವರ ಮೊದಲ ಕಾದಂಬರಿ ಗೃಹಲಕ್ಷ್ಮೀ. ತಮ್ಮ ಕಾದಂಬರಿಗಳ ಮೂಲಕ ಕನ್ನಡ ಓದುಗರನ್ನು ಹೆಚ್ಚಿಸಿದ್ದು ಇವರ ಹೆಗ್ಗಳಿಕೆ.

ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ (1907) ನೀಡಿ ಸನ್ಮಾನಿಸಿತು. ಸಾಹಿತ್ಯ ಪರಿಷತ್ತು ಮಣಿಪಾಲದಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನ (1960) ಅಧ್ಯಕ್ಷರನ್ನಾಗಿ ಆಯ್ಕೆಮಾಡಿತ್ತು. ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ ಕಲೆಗಳಲ್ಲಿ ಅಪಾರ ಒಲವು, ವಿಮರ್ಶಾ ಶಕ್ತಿ ಇದ್ದ ಅನಕೃ ಅವರು ಅವೆಲ್ಲ ವಿಷಯಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. 1971ರ ಜುಲೈ 4ರಂದು ಅವರು ನಿಧನರಾದರು.

ಸಾಹಿತ್ಯ ಮತ್ತು ಕಾಮಪ್ರಚೋದನೆ, ಕನ್ನಡ ಕುಲರಸಿಕರು(ಜೀವನ ಚರಿತ್ರೆ), ಬರಹಗಾರನ ಬದುಕು (ಆತ್ಮಕಥೆ), ಬಣ್ಣದ ಬೀಸಣಿಗೆ, ಮದುವೆಯೋ ಮನೆಹಾಳೋ (ನಾಟಕಗಳು), ಗಾರ್ಕಿಯ ಕಥೆಗಳು, ಸ್ಟೋರಿ ಆಫ್ ಇಂಡಿಯಾ (ಅನುವಾದಗಳು), ಕರ್ನಾಟಕ ಕಲಾವಿದರು, 100 ಕಾದಂಬರಿ ಸೇರಿದಂತೆ 200ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

 

ಅ.ನ.ಕೃ (ಅ.ನ. ಕೃಷ್ಣರಾಯ)

(09 May 1908-04 Jul 1971)

Books by Author