About the Author

ಅರಣ್ ಜೋಳದಕೂಡ್ಲಿಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜೋಳದಕೂಡ್ಲಿಗಿಯ ಜಿ. ಹನುಮಂತಪ್ಪ, ಎಸ್. ನಾಗರತ್ನಮ್ಮ ಅವರ ಮಗನಾಗಿ 13.02.1980 ರಲ್ಲಿ ಜನಿಸಿದರು. ಕೂಡ್ಲಿಗಿ ತಾಲೂಕಿನ ಹಾರಕನಾಳು, ಉಜ್ಜಿನಿ, ಕೊಟ್ಟೂರಿನಲ್ಲಿ ಪದವಿವರೆಗಿನ ಶಿಕ್ಷಣ ಮುಗಿಸಿದ ಅವರು ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು ಸದ್ಯಕ್ಕೆ ಪ್ರೊ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಜನಪದ ಕವಿಗಳ ಕುರಿತು ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಅರುಣ್ ಅವರ ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010),  ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017)

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ, ಹೊನ್ನಾವರದ ಜಾನಪದ ಪ್ರಕಾಶನ ನೀಡುವ `ಜಾನಪದ ದೀಪ ಪ್ರಶಸ್ತಿ’ ಪ್ರಜಾವಾಣಿ, ಸಂಚಯ ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಎಂ.ಎಂ.ಕಲ್ಬುರ್ಗಿ ಅವರ ಕೊಲೆಯ ತನಿಕೆಯ ವಿಳಂಬವನ್ನು ವಿರೋಧಿಸಿ ಕನ್ನಡ ಸಾಹಿತ್ಯ ಪರಿಷತ್ತು ನೀಡಿದ `ಅರಳು ಸಾಹಿತ್ಯ ಪ್ರಶಸ್ತಿ’ಯನ್ನು ಸರಕಾರಕ್ಕೆ ಹಿಂತಿರುಗಿಸಿದ್ದಾರೆ.

ಈತನಕ ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ನೂರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕವಿತೆ, ಕಥೆ, ಸಂಶೋಧನ ಪ್ರಬಂಧಗಳು ಇವರ ಸೃಜನಶೀಲ ಅಭಿವ್ಯಕ್ತಿ ಕ್ರಮವಾಗಿದೆ. 2010 ರಿಂದ `ಕನ್ನಡ ಜಾನಪದ’ ಎನ್ನುವ ವೆಬ್ ಬ್ಲಾಗ್‍ನ್ನು ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಜೀವಪರ ಸಂಗತಿಗಳ ಬಗ್ಗೆ ಚರ್ಚೆ ಸಂವಾದಗಳನ್ನು ನಡೆಸುತ್ತಾರೆ.

ಅರುಣ್ ಜೋಳದಕೂಡ್ಲಿಗಿ

(13 Feb 1980)

BY THE AUTHOR