About the Author

ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು.  ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ಪತ್ರಿಕೆಗಳಲ್ಲಿ ಬೆಳಕು ಕಂಡವು. ಇವರು ಬರೆದ ಮೊದಲ ಕಾದಂಬರಿ ‘ನಿಲುಕದ ನಕ್ಷತ್ರ’ ವನ್ನು ಸಂಯುಕ್ತ ಕರ್ನಾಟಕ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪ್ರಕಟಿಸಿ ಪ್ರೋತ್ಸಾಹಿಸಿದರು. ನಂತರ ಅವರು ಬರೆದ ಕಪ್ಪುಕೊಳ, ಬೆಸುಗೆ, ಮೃಗತೃಷ್ಣಾ, ಬಿಂದಿಯಾ, ಆಕರ್ಷಿತ, ಯೋಗಾಯೋಗ ಮುಂತಾದ ಇಪ್ಪತ್ತಕ್ಕೂ ಮೀರಿ ಕಾದಂಬರಿಗಳು ಸುಧಾ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ’ಮೈತ್ರಿ, ಕಪ್ಪುಕೊಳ, ಬೆಸುಗೆ, ಹುತ್ತದ ಸುತ್ತ, ಯೋಗಾಯೋಗ, ವಿಜೇತ, ಮೃಗತೃಷ್ಣಾ, ಆನಂದವನ, ನಾನು ಲೇಖಕಿ ಅಲ್ಲ, ಬಿಂದಿಯಾ, ಆಕರ್ಷಿತ, ನಿಮಿತ್ತ, ಬಾಲ್ಯಸಖ, ಪ್ರೇಮಸೋಪಾನ, ಮತ್ತು ವಿಸ್ಮೃತಿ’ ಅವರ ಪ್ರಮುಖ ಕಾದಂಬರಿ. ‘ತುಪ್ಪದ ದೀಪ’ ಮತ್ತು ‘ದಂತಗೋಪುರ’ ಎಂಬ ಎರಡು ಕಥಾಸಂಕಲನಗಳು.  ಬೆಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ. ಅವೇ ಹೆಸರಿನಿಂದ ಚಲನಚಿತ್ರವಾಗಿ ತೆರೆಕಂಡಿದೆ. ’ಮೃಗಕೃಷ್ಣಾ’ ಕಾದಂಬರಿಯು ‘ಕಾಮನಬಿಲ್ಲು’ ಎಂಬ ಹೆಸರಿನಿಂದಲೂ ವಿಸ್ಮೃತಿ ಕಾದಂಬರಿಯು ‘ಮನ ಮಿಡಿಯಿತು’ ಎಂಬ ಹೆಸರಿನಿಂದಲೂ ಚಲನ ಚಿತ್ರಗಳಾಗಿ ಮೆಚ್ಚುಗೆ ಪಡೆದವು.

ಗೋರೂರು ಪ್ರತಿಷ್ಠಾನ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಸರೋಜದೇವಿಯವರು ತಮ್ಮ ಮಗಳು ಭುವನೇಶ್ವರಿಯ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ. ಅವರು 2007 ನವೆಂಬರ್‌ 07 ರಂದು ನಿಧನರಾದರು.

ಅಶ್ವಿನಿ (ಎಂ. ವಿ. ಕನಕಮ್ಮ)

(01 Nov 1933)