About the Author

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ.

ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ಭಟ್ ಅವರು ಲೇಖಕರು ಮತ್ತು  ಅಧ್ಯಯನಶೀಲ ವಿದ್ವಾಂಸರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಮೇಲೆ ಡಾಕ್ಟರೇಟ್ ಪದವಿಯನ್ನೂ ಪಡೆದಿರುವ ಅವರು ಪ್ರಕೃತ ಬೆಳ್ಮಣ ನ ಸ.ಪ.ಪೂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.

 “ಕಲ್ಲುಕಂಬವೇರಿದ ಹುಂಬ' ಸಾಮಾಜಿಕ ಕಾದಂಬರಿಯಾಗಿದ್ದು, ನಾಡಿನ ಜನಪ್ರಿಯ ವಾರಪತ್ರಿಕೆ 'ತರಂಗ' ಏರ್ಪಡಿಸಿದ್ದ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ತುಳುನಾಡಿನ ಜನರ ನಂಬಿಕೆ, ಆರಾಧನಾ ಪರಂಪರೆ, ಪುರಾಣ, ಐತಿಹ್ಯ, ಇತಿಹಾಸಗಳನ್ನೆಲ್ಲ ವಿವರವಾಗಿ ಕಲಾತ್ಮಕವಾಗಿ ತಮ್ಮ ಕೃತಿಗಳಲ್ಲಿ ದಾಖಲಿಸುತ್ತಾರೆ.

ನಾಲ್ಕು ಪ್ರಸ್ತಾವನೆಗಳು - ಕರಾವಳಿ ಸಾಹಿತ್ಯ ಕಥನ ಪುಸ್ತಕಕ್ಕೆ 2018ರ  ಇನಾಂದಾರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ  ಪುಸ್ತಕವು ಅವರು ತಮ್ಮ ಮಹತ್ತ್ವದ ಕೃತಿಗಳಿಗೆ ಆಳವಾದ ಅಧ್ಯಯನ ಮತ್ತು ವಿಶಿಷ್ಟ ದೃಷ್ಟಿಕೋನದಿಂದ ಬರೆದ ದೀರ್ಘ ಪ್ರಸ್ತಾವನೆಗಳ ಸಂಗ್ರಹವಾಗಿದೆ. ಈ ಎಲ್ಲ ಬರಹಗಳಲ್ಲಿ ಕರಾವಳಿಯ ಶತಮಾನದ ಸಾಹಿತ್ಯ ಕೇಂದ್ರದಲ್ಲಿರುವುದು ಮಹತ್ವದ ವಿಷಯ. ಅವರ ಗ್ರಂಥಗಳಲ್ಲಿ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡದ ಶತಮಾನದ ಕತೆಗಳು, ಉಡುಪಿ ಜಿಲ್ಲೆಯ ಶತಮಾನದ ಕತೆಗಳು ಮುಖ್ಯವಾದವು.  ಅಲ್ಲದೆ ಅವರು ಉತ್ತರಾಧಿಕಾರ ಹಸ್ತಾಂತರ ಮೂರು ಹೆಜ್ಜೆ ಭೂಮಿ, ಕಲ್ಲುಕಂಬವೇರಿದ ಹುಂಬ, ಅನಿಕೇತನ ಮುಂತಾದ ಕಾದಂಬರಿಗಳನ್ನು ಬರೆದು ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಸಂಪಾದಿಸಿದ ಬದುಕು ಭಾವದ ಕತೆಗಳು ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಪದವಿ ತರಗತಿಗೆ ಪಠ್ಯಪುಸ್ತಕವಾಗಿತ್ತು.
ಕತೆ ಕಾದಂಬರಿ, ವಿಮರ್ಶೆ, ಸಂಸ್ಕೃತಿಚಿಂತನೆ, ಅನುವಾದ, ಸಂಪಾದನೆ, ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಮತ್ತು  ಪರಿಶ್ರಮವುಳ್ಳ ಅವರು ರಾಜ್ಯ ಅಂತಾರಾಜ್ಯಮಟ್ಟದ ವಿಚಾರಗೋಷ್ಠಿಗಳಲ್ಲಿ ಪ್ರಬಂಧಮಂಡನೆ, ಅಧ್ಯಕ್ಷತೆ ವಹಿಸಿದ್ದಾರೆ. 5 ಕಾದಂಬರಿಗಳು, 4 ಕಥಾಸಂಕಲನಗಳು, 3 ವೈಚಾರಿಕ ಕೃತಿಗಳನ್ನು 25 ವಿಮರ್ಶೆಯ ಕೃತಿಗಳು, 8 ಅನುವಾದ ಕೃತಿಗಳು, 7 ಕೃತಿಗಳನ್ನು ಸಂಪಾದಿಸಿದ್ದು ಸೇರಿ, ಒಟ್ಟು 70  ಕೃತಿಗಳನ್ನು ಪ್ರಕಟಿಸಿದ್ದಾರೆ.

ಬಿ. ಜನಾರ್ದನ ಭಟ್

Books by Author

Awards