About the Author

ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ.

ಅವರ ಪ್ರಕಟಿತ ಕೃತಿಗಳು: 
ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001),  ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017)
ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ಸಲಹಿ(2017)
ಕಾದಂಬರಿ: ಹೊಳೆ ಮಕ್ಕಳು(2011)
ನಾಟಕ: ಮಹಾಗಾರುಡಿ(2009), ಅರಿವಿನಾಳ ಅಬ್ಬಿ(2017)
ಪ್ರವಾಸ ಕಥನ: ಹೇಮಕುಂಡ ಮತ್ತು ಹಿಮಲಿಂಗ(2012)
ವಿಮರ್ಶೆ: ಕಡಲಂತೆ ಕಾರಂತ(1997, 2011), ಅರಿವಲಗು(2002), ಶಿವಶಕ್ತಿ ಸಂಪುಟ(2011), ಎಚ್.ಎಸ್. ಶಿವಪ್ರಕಾಶ್(2014), ವಿಸ್ತರಿಸುವ ವರ್ತುಲ(2015), ಬೇಂದ್ರೇನೆ ಸಖಿ ಬೇಂದ್ರೆ(2017)
ಭಾಷಣ\ಲೇಖನ\ಪ್ರಬಂಧ: ಪ್ರಕೃತಿ ಸಂಸ್ಕೃತಿ ಸಂಲಗ್ನ(2014)
ಸಂಪಾದನೆ:  ಜಾಂಬವತಿ ಕಲ್ಯಾಣ(1995, 1997), ಹೊನ್ನೇರು(1995), ಬಾಲಮಹಾಂತ(1996), ಗೇಬ್ರಿಯಲ್ ಗಾರ್ಸಿಯಾಮಾರ್ಕ್ವಿಸ್ ವಾಚಿಕೆ(1997),, ಅನುಭವಾಮೃತ(2004, 2011) ಕನ್ನಡ ಶ್ರೀರಾಘವೇಂದ್ರಸ್ತೋತ್ರ ಮತ್ತಿತರ ಹಾಡುಗಳು(2008), ಬೆಳುವಲ(2013), ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ-ಕನ್ನಡ ನಿಘಂಟು(2014)
ಅನುವಾದ: ಗಾಲಿಬ್ : ವ್ಯಕ್ತಿತ್ವ ಮತ್ತು ಯುಗಾಂತ(2014), ನವಸಾಕ್ಷರ ಮಾಲಿಕೆ: ಶಿಶುನಾಳ ಶರೀಫ(1994)
ಜೀವನ ಚರಿತ್ರೆ: ಚಾಂದ್ರಾಯಣ(2017) ಪ್ರಕಟಗೊಂಡಿವೆ. 

ಬಿದರಹಳ್ಳಿ ಅವರ ‘ಶಿಶು ಕಂಡ ಕನಸು’, ‘ಹಂಸೆ ಹಾರಿತ್ತು’ ಎರಡೂ ಕಥಾ ಸಂಕಲನಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’(1993, 2000) ಲಭಿಸಿದೆ. ಅಲ್ಲದೇ ‘ಶಿವಾನಂದಪಾಟೀಲ್ ಪ್ರಶಸ್ತಿ’ (2000) ಹಾಗೂ ‘ಮಹಲಿಂಗರಂಗ ಪ್ರಶಸ್ತಿ’(2003)ಗಳು ಸಂದಿವೆ. ಚೀಲೂರಿನಲ್ಲಿ ನಡೆದ ಹೊನ್ನಾಳಿ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ(2011), ಬೆಂಗಳೂರಿನಲ್ಲಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ(2011), ನುಡಿಸಿರಿ ಕವಿಸಮಯ ಕವಿನಮನ(2016)ಸೇರಿದಂತೆ ಹಲವು ಗೌರವಗಳು ಸಂದಿವೆ.  ಅಲ್ಲದೇ ಕನ್ನಡದ ಅನೇಕ ಪ್ರಾತಿನಿಧಿಕಸಂಕಲನಗಳಲ್ಲಿ ‘ಮುಗ್ಧ ಹೂಗಳು’, ‘ಸೂರ್ಯದಂಡೆ’, ‘ಪೊಂಗುರಲಿ’, ‘ಪ್ರತಿಸಾರಿಯಂತಲ್ಲ ಬಿಡಿ ಈ ಸಾರಿ ಬಂದ ಮಳೆ’, ‘ಕಣ್ಣಾರೆ ಕಂಡು ಧನ್ಯನಾದೆ’, ಮುಂತಾದ ಕವಿತೆಗಳು ಸೇರ್ಪಡೆಯಾಗಿವೆ. 

‘ಸೋಗಿಲು’ ಕತೆಯನ್ನು ಲಕ್ಷ್ಮಿಚಂದ್ರಶೇಖರ್ ಮತ್ತು ‘ಬಿತ್ತಕ್ಕೆ ಬೇರಿನ ಚಿಂತೆ’ ಕತೆಯನ್ನು ಕೆ. ಶಾಮಲಾ ಇಂಗ್ಲಿಷ್ ಗೆ ಅನುವಾದಿಸಿದ್ದು, ಅವು ಕೇಂದ್ರ ಸಾಹಿತ್ಯ ಅಕಾಡೆಮಿಯ ದ್ವೈಮಾಸಿಕ INDIAN LITERATURE ನಲ್ಲಿ ಪ್ರಕಟವಾಗಿವೆ. ‘ಸೋಗಿಲು’ ಕತೆಯ ಇಂಗ್ಲಿಷ್ ಅನುವಾದ ಸುರೇಶ್ ಕೋಹ್ಲಿ ಸಂಪಾದಿಸಿದ MORE STORIES FROM MODERN INDIA ಸಂಕಲನಕ್ಕೆ  ಆಯ್ಕೆಯಾಗಿದೆ, ಇದೇ ಕತೆ ಸಿ. ರಾಘವನ್ ರಿಂದ ಮಲಯಾಳಂಗೂ ಅನುವಾದವಾಗಿದೆ ಜೊತೆಗೆ ಎಚ್.ಸಿ. ಚಿದಾನಂದಮೂರ್ತಿ ‘ಅಲ್ಲಾರಾಮ’ ಎಂಬ ನಾಟಕರೂಪಕ್ಕೆತಂದು ರಂಗಪ್ರದರ್ಶನ ನೀಡಿ, ರಂಗಪಠ್ಯರೂಪದಲ್ಲು ಪ್ರಕಟಿಸಿದ್ದಾರೆ.

‘ತಲೆ ಬಳಸುವ ಕಲೆ’ ಕತೆಯನ್ನು ಪ್ರಖ್ಯಾತ ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಕಥಾನಾಟಕವನ್ನಾಗಿಸಿ ರಂಗದಮೇಲೆ ತಂದಿದ್ದಾರೆ. ಈ ಕತೆಯನ್ನು ಶೀತಲ್ ದೇವುಳಗಾಂವ್ಕರ್ ಮರಾಠಿಗೆ ಅನುವಾದಿಸಿದ್ದಾರೆ. ‘ಬಿತ್ತಕ್ಕೆ ಬೇರಿನ ಚಿಂತೆ’, ‘ಸೋಗಿಲು’ ಕತೆಗಳನ್ನು ಲಿಯೊ ಜೋಸೆಫ್ ತಮಿಳಿಗೆ ಅನುವಾದಿಸಿದ್ದಾರೆ. ‘ಜೀವಹಂಸ’ ಕತೆ ಕುವೆಂಪು ವಿಶ್ವವಿದ್ಯಾನಿಲಯದ ಪದವಿತರಗತಿ ಪಠ್ಯಪುಸ್ತಕದಲ್ಲಿ ಹಾಗೂ ‘ಹೊಳೆ ಹುಣ್ಣಿಮೆ’ ಕವಿತೆ ದಾವಣಗೆರೆ ವಿಶ್ವವಿದ್ಯಾನಿಲಯದ ಪದವಿತರಗತಿ ಪಠ್ಯಪುಸ್ತಕಗಳಲ್ಲಿ ಸೇರಿದ್ದು ಅವರ ‘ಮುಗ್ಧ ಹೂಗಳು’ ಕವಿತೆ ಹರಿಹರದ ಎಸ್. ಜೆ.ವಿ.ಪಿ ಅಟಾನಮಸ್ ಕಾಲೇಜಿನ ಪದವಿ ತರಗತಿ ಪಠ್ಯ ಪುಸ್ತಕ ಹಾಗೂ ಕರ್ನಾಟಕ ಸರ್ಕಾರದ 8ನೇ ತರಗತಿ ತೃತೀಯಭಾಷಾ ಕನ್ನಡಪಠ್ಯ ಪುಸ್ತಕಗಳಲ್ಲಿ ಸೇರಿವೆ. 

ಸಾಹಿತ್ಯ ಚಟುವಟಿಕೆಗಳಲ್ಲಿ  ಸದಾ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅವರು ‘ಹೊಳೆರಂಗ ತಂಡ’ಕಟ್ಟಿ ಹೊನ್ನಾಳಿ ಹೊಳೆದಂಡೆ ದಿಡ್ಡಿಬಾಗಿಲ ಪ್ರದೇಶದಲ್ಲಿ ‘ಮದುವೆ ಹೆಣ್ಣು’, ‘ಮ್ಯಾಕ್ಬೆತ್’, ‘ಮಾರನಾಯಕನ ದೃಷ್ಟಾಂತ’, ‘ಕಾಡನವಿಲೆ ಹಾಡೆ’, ‘ಚಂಪಾ ನಾಟಕಚಕ್ರ’ ಕಥಾನಾಟಕ ಮುಂತಾದ ನಾಟಕಗಳ ಪ್ರದರ್ಶನ ಏರ್ಪಡಿಸಿದ್ದಾರೆ. ಅಲ್ಲದೇ ಅನಿಮಿಷ ಪ್ರಕಾಶನದ ಮೂಲಕ ಬತ್ತೀಸರಾಗ(ಎಚ್.ಎಸ್.ಶಿವಪ್ರಕಾಶ್), ಉತ್ತರಾಖಂಡ(ಲಿಂಗರಾಜು), ಕಿರಾಣಾದ ಹಾಡುಹಕ್ಕಿ(ವಿಜಯವಾಮನ್), ಭಾವಕ್ಷೀರ (ಸ್ವಂತಕೃತಿ), ಕನ್ನಡ ಶ್ರೀರಾಘವೇಂದ್ರಸ್ತೋತ್ರ ಮತ್ತಿತರ ಹಾಡುಗಳು(ಕಲ್ಲಾಪುರ ಗುರುರಾಜಾಚಾರ್ಯರು), ಜಾಂಬವತಿ ಕಲ್ಯಾಣ(ಹೊನ್ನಾಳಿಸೀಮೆ ಯಕ್ಷಗಾನ) ಪುಸ್ತಕಗಳ ಪ್ರಕಟಿಸಿದ್ದು, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. 

ಬಿದರಹಳ್ಳಿ ನರಸಿಂಹಮೂರ್ತಿ

(05 Feb 1950)