About the Author

ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು.

ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿ ಸೂರ್ಯೋದಯ ಪ್ರಕಾಶಿಕಾ, ಭಾರತ ದಿನಪತ್ರಿಕೆ, ಕರ್ನಾಟಕ, ಮೈಸೂರು ಟೈಂಸ್ ಮೊದಲಾದ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡಿದರು.

16 ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಮೈಸೂರು ಪತ್ರಿಕೋದ್ಯಮ ಸಂಘದ ಸ್ಥಾಪನೆ ಮಾಡಿದರು. ಬೆಂಗಳೂರು ಪುರಸಭೆ ಸದಸ್ಯರು, ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರು, ಪ್ರಜಾಜನ ಪರಿಷತ್ತು ದೇಶೀಯ ಸಂಸ್ಥಾನಗಳ ಪರಿಷತ್ತು ಮೊದಲಾದ ಹತ್ತಾರು ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಇಂಗ್ಲಿಷ್ ಕನ್ನಡ ನಿಘಂಟಿನ ಸಂಪಾದಕ ಸಮಿತಿಯಲ್ಲಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು 1945ರಲ್ಲಿ ಸ್ಥಾಪಿಸಿದರು. 1915ರಲ್ಲಿ ಪರಿಷತ್ತಿನ ಸ್ಥಾಪಕವರ್ಗದಲ್ಲಿದ್ದವರೂ ಆಗಿದ್ದ ಇವರು 1933-37ರಲ್ಲಿ ಪರಿಷತ್ತಿನ ಉಪಾಧ್ಯಾಕ್ಷರಾಗಿದ್ದರು.

ಡಿವಿಜಿ ಅವರಿಗೆ 1961 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಿಲಿಟ್ ನೀಡಿತು. 1967 ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಮಡಿಕೇರಿಯಲ್ಲಿ ನಡೆದ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನ (1932) ಅಧ್ಯಕ್ಷಪಟ್ಟ ಸಿಕ್ಕಿತು. ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕರ್ನಾಟಕ ವೃತ್ತ ಪತ್ರಕರ್ತರ ಪ್ರಥಮ ಸಮ್ಮೇಳನ (1928_ ಅಧ್ಯಕ್ಷರಾದರು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿತು. ಬೆಂಗಳೂರು ನಾಗರಿಕರು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಿ 1 ಲಕ್ಷ ಗೌರವನಿಧಿ ನೀಡಿದರು. ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ನೀಡಿದರು.

ಕೆಲವು ಕೃತಿಗಳು: ಜೀವನ ಸೌಂದರ್ಯ ಮತ್ತು ಸಾಹಿತ್ಯ, ಮಂಕುತಿಮ್ಮನ ಕಗ್ಗ, ಬಾಳಿಗೊಂದು ನಂಬಿಕೆ, ಅಂತಃಪುರಗೀತೆ, ಸಂಸ್ಕೃತಿ. ಉಮರನ ಒಸಗೆ, ದಿವಾನ್ ರಂಗಾಚಾರ್ಲು, ಕೃಷ್ಣ ಪರೀಕ್ಷಣ, ಗೋಪಾಲಕೃಷ್ಣ  ಗೋಖಲೆ, ರಾಜ್ಯಶಾಸ್ತ್ರ, ಜ್ಞಾಪಕ ಚಿತ್ರಶಾಲೆ, ವಸಂತಕುಸುಮಾಂಜಲಿ(೮ ಸಂಪುಟಗಳು)

ಡಿ ವಿ ಗುಂಡಪ್ಪ ಅವರು 07-10-1975ರಂದು ನಿಧನರಾದರು.

ಡಿ.ವಿ. ಗುಂಡಪ್ಪ (ಡಿ.ವಿ.ಜಿ.)

(17 Mar 1887-07 Oct 1975)

Books by Author

Awards

BY THE AUTHOR

ABOUT THE AUTHOR