About the Author

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಸಾಹಿತ್ಯ ಅಕಾಡೆಮಿ ಇನ್ನೂ  ಅನೇಕ ವೇದಿಕೆಯಲ್ಲಿ ಕವನ, ಗಜಲ್ ವಾಚನ ಮಾಡಿರುತ್ತಾರೆ. ಸ್ಥಳ ಮಹಿಮೆ, ಇತಿಹಾಸ, ವಿಸ್ಮಯ, ವಿಶೇಷತೆ, ವ್ಯಕ್ತಿ ಸಾಧನೆಯ ಲೇಖನಗಳನ್ನು ಪತ್ರಿಕೆಗಳಲ್ಲಿ ನಿರಂತರವಾಗಿ ಬರೆಯುತ್ತಾರೆ.  ಅಕ್ಷರ ಮಾತ್ರವಲ್ಲದೆ ಗೆರೆಗಳಲ್ಲೂ ಬೆಂಗಾಲಿ ಅವರು ಹೆಸರು ವಾಸಿ. ವ್ಯಂಗ್ಯಚಿತ್ರಗಳನ್ನು ಕಳೆದ ಇಪ್ಪತ್ತು ವರ್ಷಗಳಿಂದ ರಚಿಸುತ್ತಾ ಇದ್ದಾರೆ. ಇದುವರೆಗೆ ಸಾವಿರಾರು ವ್ಯಂಗ್ಯಚಿತ್ರಗಳನ್ನು ಚಿತ್ರಿಸಿರುತ್ತಾರೆ. ಅವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತಿ, ವ್ಯಂಗ್ಯಚಿತ್ರಕಾರರಾಗಿ ಆಕಾಶವಾಣಿ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ಅಂದಹಾಗೆ ವನ್ಯಜೀವಿ ಫೋಟೋಗ್ರಫಿಯಲ್ಲಿ ಆಸಕ್ತಿಯನ್ನು ಈರಣ್ಣ ಬೆಂಗಾಲಿ ಅವರು ಹೊಂದಿದ್ದಾರೆ. ರಾಯಚೂರಿನ ವನ್ಯಜೀವಿ ಲೋಕವನ್ನು ವಿಶೇಷವಾಗಿ ರಾಯಚೂರು ನಗರದ ಪಕ್ಷಿಸಂಕಲಕ್ಕೆ ಒತ್ತು ನೀಡಿ, ನೂರ ಐವತ್ತಕ್ಕೂ ಅಧಿಕ ಪಕ್ಷಿ ಪ್ರಭೇದಗಳನ್ನು ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ.

ರಾಯಚೂರು ವಾಹಿನಿ ಮತ್ತು ನಮ್ಮ ರಾಯಚೂರು ವಾರಪತ್ರಿಕೆಗಳ ದೀಪಾವಳಿ ವಿಶೇಷಾಂಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ತಿನಿಂದ ಪ್ರತಿಭಾ ಶಿರೋಮಣಿ ಬಿರುದು ಇವರಿಗೆ ಸಂದಿದೆ.

ಕೃತಿಗಳು: ಏಕಲವ್ಯನ ರೇಖೆಗಳು (ವ್ಯಂಗ್ಯಚಿತ್ರ ಸಂಕಲನ) -2008, ಮುತ್ತುಗಳು (ಹನಿಗವನ ಸಂಕಲನ)-2010, ಕಮರಿದ ಕನಸು (ಹೈಕು ಸಂಕಲನ)-2013, ಚಿನ್ನದ ನಾಣ್ಯ (ನಾಣ್ಯ, ನೋಟು ಸಂಗ್ರಹಕ ವಾಸಪ್ಪರವರ ಯಶೋಗಾಥೆ)-2014, ಬಿಸಿಲೂರ ಸಾಧಕರು (ರಾಯಚೂರು ಜಿಲ್ಲೆಯ ಪ್ರತಿಭೆಗಳ ಪ್ರಾತಿನಿಧಿಕ ಸಂಕಲನ)-2015, ಚಿಮಣಿಯ ಬೆಳಕಿನಲ್ಲಿ (ಗಜಲ್ ಸಂಕಲನ)-2017, ಬೆಂಗಾಲಿ ರೇಖೆಗಳು (ವ್ಯಂಗ್ಯಚಿತ್ರ ಸಂಕಲನ)-2018, ಹಸಿರ ಯೋಗಿ (ಪರಿಸರ ಪ್ರೇಮಿ ಈರಣ್ಣ ಕೋಸಗಿಯವರ ಯಶೋಗಾಥೆ) -2019, ಅರಿವಿನ ಅಂಬರ ಅಂಬೇಡ್ಕರ್ (ಗಜಲ್ ಸಂಕಲನ)-2020, ಪಟ ಪಟ ಗಾಳಿಪಟ (ಮಕ್ಕಳ ಕವನ ಸಂಕಲನ)-2020, ಕಾಡುವ ಗುಬ್ಬಿ (ಹೈಕು ಸಂಕಲನ)-2021, ಅಪರೂಪದ ಕನ್ನಡ ಮೇಷ್ಟ್ರು-2021, ಸಾಧನಾಗಿರಿ ಅರುಣ್ ನಂದಗಿರಿ (ಜೀವನ-ವ್ಯಂಗ್ಯಚಿತ್ರಯಾನ)-2022, ಎಲ್ಲೋ ಹುಡುಕಿದೆ (ವಚನ ಸಂಪುಟ)-2022, ಮೊಸಳೆ ಮತ್ತು ಮಿಂಚುಳ್ಳಿ (ಮಕ್ಕಳ ಕಥೆಗಳು)-2023

 

 

ಈರಣ್ಣ ಬೆಂಗಾಲಿ