About the Author

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು.

ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.  ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.  ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿರುವರು.

ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ನಾಟಕಗಳು.  ಆಡಾಡತ ಆಯುಷ್ಯ’ ಗಿರೀಶರ ಆತ್ಮಕಥೆ

ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು.  ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ  ಸಿನಿಮಾಗಳು; ಸೂಫಿ ಪಂಥ,  ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ.  ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಅರವತ್ತರ ದಶಕದಲ್ಲಿ ಅವರು ಚಿತ್ರಕತೆ ರಚಿಸಿ ಅಭಿನಯಿಸಿದ ‘ಸಂಸ್ಕಾರ’  ರಾಷ್ಟ್ರಪಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ಬಿ. ವಿ. ಕಾರಂತರೊಡನೆ ಅವರು ನಿರ್ದೇಶಿಸಿದ ಚಿತ್ರಗಳು ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ. ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳು ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ. ನಟರಾಗಿ ಶ್ಯಾಂ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕಾ; ಶಂಕರ ನಾಗರ ಮಾಲ್ಗುಡಿ ಡೇಸ್, ಕನ್ನಡ ಮತ್ತು ತೆಲುಗಿನ ಆನಂದ ಭೈರವಿ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ್ ಹೀಗೆ ಹಲವಾರು ನೆನಪುಗಳು ಮರುಕಳಿಸುತ್ತವೆ. 

ಅನಾರೋಗ್ಯದಿಂದ ಕಾರ್ನಾಡ್ ಅವರು 2019ರ ಜೂನ್ 10ರಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾದರು.

 

ಗಿರೀಶ ಕಾರ್ನಾಡ

(19 May 1934-10 Jun 2019)

Awards

ABOUT THE AUTHOR