About the Author

ಕಾಸರಗೋಡಿನ ಪೈವಳಿಕೆ ಸಮೀಪದ ಕಳ್ಳಿಗೆ ಗ್ರಾಮದವರು. (ಜನನ: 1927ರ ಜೂನ್ 16). ತಂದೆ ಸಂಕಪ್ಪ ಭಂಡಾರಿ, ತಾಯಿ ಶಂಕರಿ. ಬಾಲ್ಯದಲ್ಲೇ ತಂದೆ ತೀರಿಕೊಂಡರು. ಪ್ರಾಥಮಿಕ ವಿದ್ಯಾಭ್ಯಾಸ ಪೈವಳಿಕೆಯಲ್ಲಿ, ನೀಲೇಶ್ವರದ ರಾಜಾಸ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ, ದೇಶದಲ್ಲಿ ಸ್ವಾತಂತ್ರ‍್ಯ ಚಳವಳಿಯು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ‘ಮಾಡು ಇಲ್ಲವೇ ಮಡಿ’ ಚಳವಳಿಯಲ್ಲಿ ಧುಮುಕಿದರು. ನಂತರ ಎಸ್.ಎಸ್.ಎಲ್.ಸಿ. ಮುಗಿಸಿ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದರು.

ಮಂಗಳೂರಿನಲ್ಲಿ ವಾಸ, ಎಲೋಶೀಯಸ್ ಕಾಲೇಜಿನಲ್ಲಿ ಶಿಕ್ಷಣ, ನಂತರ ಭಂಡಾರಿಗಳು ಬೆಳಗಾವಿಯಲ್ಲಿ ಕಾನೂನು ಪದವಿಗಾಗಿ ಓದಿದರು. ಎಂ.ಎ. ಸಹ ಪೂರ್ಣಗೊಳಿಸಿದರು. 1951 ರಿಂದ ಕಾಸರಗೋಡಿಗೆ ಬಂದು ಕ್ರಿಮಿನಲ್ ವಕೀಲರಾಗಿ ಪ್ರಸಿದ್ಧಿ ಪಡೆದರು. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡನ್ನುಅನ್ಯಾಯವಾಗಿ ಕೇರಳಕ್ಕೆ ಸೇರಿಸಿದ್ದು ವಿರೋಧಿಸಿ ಹೋರಾಟಕ್ಕೆ ಚಾಲನೆ ನೀಡಿದರು. ಕೇರಳ ರಾಜ್ಯ ವಿಧಾನಸಭೆಗೆ (1960) ನಡೆದ ಚುನಾವಣೆಯಲ್ಲಿ ಕರ್ನಾಟಕ ಸಮಿತಿ ಉಮೇದ್ವಾರರಾಗಿ ಮಂಜೇಶ್ವರ ಮತದಾರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1965 ಹಾಗೂ 1967 ರ ಚುನಾವಣೆಯಲ್ಲೂ ಗೆಲುವು ಸಾಧಿಸಿದರು.

ವಿದ್ಯಾರ್ಥಿ ಇದ್ದಾಗಲೇ ಅವರು ‘ಸಮಾಗಮ’ ಎಂಬ ಕಾದಂಬರಿ ಬರೆದಿದ್ದರು. ಮುಂದೆ ಅವರು ವೃತ್ತಿ ಪ್ರಭಾವದಿಂದ ‘ಮೇಲಿನ ಕೋರ್ಟು, ‘ದೇವರು ಮಾಡಿದ ಕೊಲೆ’ ಹೀಗೆ ಎರಡು ಕಾದಂಬರಿ ರಚಿಸಿದರು. ‘ಅಸ್ತಿಪಂಜರದೊಡನೆ ಮಾತುಕತೆ’ ಇವರು ಬರೆದ ಲೇಖನಗಳ ಸಂಕಲನ. 1978ರ ಜನೆವರಿ 7 ರಂದು ನಿಧನರಾದರು. 

ಕಳ್ಳಿಗೆ ಮಹಾಬಲ ಭಂಡಾರಿ

(16 Jun 1927-07 Jan 1978)