About the Author

ಕೊಡಗು ಜಿಲ್ಲೆಯ ಕಿಗ್ಗಾಲು ಗ್ರಾಮದ ನಿವಾಸಿ ಕಿಗ್ಗಾಲು ಗಿರೀಶ್ ರವರು 1951ರ ಡಿಸೆಂಬರ್ 24 ರಂದು ಶ್ರೀನಿವಾಸ ರಾಜಲಕ್ಷ್ಮಿ ಹವ್ಯಕದಂಪತಿಗಳ ದ್ವಿತೀಯ ಪುತ್ರನಾಗಿ ಕಿಗ್ಗಾಲುವಿನಲ್ಲಿ ಜನಿಸಿದರು. ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಪಡೆದ ಇವರು ಮಡಿಕೇರಿಯ ಅಂದಿನ ಸರಕಾರೀ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಗಳಿಸಿದರು.ಅನಂತರ,ಭಾರತೀಯ ವಾಯುಪಡೆಗೆ ಆಯ್ಕೆಯಾಗಿ,ಗುಜರಾತಿನ ಭುಜ್ ಪಟ್ಟಣದಲ್ಲಿ ವಾಯುಸೇನಾ ಕರ್ತವ್ಯಕ್ಕಿಳಿದರು.

ವಿದ್ಯಾರ್ಥಿಯಾಗಿರುವಾಗಲೇ ಸುಧಾ,ಪ್ರಜಾವಾಣಿ ಮುಂತಾದ ನಿಯತಕಾಲಿಕಗಳಿಗೆ ಬರೆಹಗಳನ್ನು ನೀಡುತ್ತಿದ್ದ ಇವರು ವಾಯುಪಡೆಯಲ್ಲಿಯೂ ಲೇಖನಗಳನ್ನು ಬರೆಯುತ್ತಿದ್ದರು.ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆಯಲ್ಲಿ ಎಮ್ ಏ ಪದವಿ ಗಳಿಸಿ,ಹದಿನೇಳು ವರ್ಷ ಸೇವೆಮಾಡಿ ಅನಂತರ ಸೇನೆಯಿಂದ ನಿವೃತರಾದರು. ಮಡಿಕೇರಿ ಆಕಾಶವಾಣಿಯಲ್ಲಿ ರಸಪ್ರಶ್ನೆ,ಚೇಟ್ ಶೋಗಳಲ್ಲದೆ ಹದಿಮೂರು ವಾರಗಳ " ಕನ್ನಡದ ಕವಿಗಳು" ಎಂಬ ಮಾಲಿಕೆಯಲ್ಲಿ ಕವಿಪರಿಚಯದ ಭಾವಯಾನ ಕಾರ್ಯಕ್ರಮ, ಕೃಷಿವಲಯದಲ್ಲಿ ತಮ್ಮ ಅನುಭವಗಳು,ಹಳ್ಳಿಗಳಲ್ಲಿ ಕೋವಿಡ್ ನ ಪ್ರಭಾವ,ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅರಮೇರಿ ಕಳಂಚೇರಿ ಮಠದ ನೂರನೆಯ ಮಾಸಿನಚಿಂತನದ ಅಂಗವಾಗಿ ಹೊರಬಂದ ಹೊಂಬೆಳಕು ಸಂಕಲನಕ್ಕೆ ಮತ್ತು ಕೊಡಗು ಜಿಲ್ಲಾ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಸಂಚಿಕೆ "ನೆನಪು" ವಿಗೆ ಪ್ರಧಾನಸಂಪಾದಕರಾಗಿಯೂ ಕಾರ್ಯವನ್ನು ನಿರ್ವಹಿಸಿದ್ದಲ್ಲದೆ ಎಂಬತ್ತನೆಯ ಅಭಾಕಸಾಸ ದ ಸ್ಮರಣ ಸಂಚಿಕೆಗೆ ಸಹಸಂಪಾದಕರಾಗಿಯೂ ತೊಡಗಿಸಿಕೊಂಡಿದ್ದಾರೆ.

ಕೃತಿಗಳು: ನಗೆಹೋಳಿಗೆ ( ಹಾಸ್ಯಲೇಖನ ಸಂಕಲನ), ಕಾವ್ಯೋದ್ಯಾನದ ಕವಿಕುಸುಮಗಳು ( ಕನ್ನಡದ ಪ್ರಮುಖ ಸಾಹಿತಿಗಳ ಪರಿಚಯ), ಹವಾಲ್ದಾರ್ ನಂಜಪ್ಪ ಮತ್ತಿತರ ಕಥೆಗಳು ( ಕಥಾಸಂಕಲನ), ಕೇಳುಮಿತ್ರ (ಚೌಪದಿಗಳು), ವಿದ್ಯಾರ್ಥಿಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯ (ಪ್ರಬಂಧ ಸಂಕಲನ), ರಂಗರಾಯರ ಹನಿಮೂನ್ ಪ್ರಸಂಗ (ಹಾಸ್ಯ ಸಂಕಲನ), ತಾಯಿ ಕಾವೇರಿಗೆ ನಮನ( ಭಾಮಿನೀ ಷಟ್ಪದಿಯಲ್ಲಿ ಕಾವೇರಿನದಿಗೆ ವಂದನೆ), ಆಡಂಬರದ ಮದುವೆಗಳು( ಪ್ರಬಂಧ ಸಂಕಲನ), ಒಂದು ಹಳ್ಳಿಯ ಸುತ್ತ( ಸಾಮಾಜಿಕ ಕಾದಂಬರಿ), ಜಾಲಕ್ಕೆ ಸಿಲುಕಿದ ಜಾಹ್ನವಿ (ಪತ್ತೇದಾರಿ ಕಾದಂಬರಿ), ಇರುವುದೆಲ್ಲವ ಬಿಟ್ಟು ಸಾಮಾಜಿಕ ಕಾದಂಬರಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ .

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಂಟುವರ್ಷ ನಿರ್ದೇಶಕರಾಗಿಯೂ,ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಹೋಬಳಿ ಘಟಕದಲ್ಲಿ ಕಾರ್ಯದರ್ಶಿಯಾಗಿ ನಾಲ್ಕು ವರ್ಷ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ . ಈ ವರ್ಷ ಇವರನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೊಡಗು ಶಾಖೆಯ ಅಧ್ಯಕ್ಷರಾಗಿದ್ದಾರೆ. 

ಕಿಗ್ಗಾಲು. ಎಸ್. ಗಿರೀಶ್

(24 Dec 1951)