About the Author

ಅದ್ವಿತೀಯ ಕನ್ನಡ ಹೋರಾಟಗಾರ,  ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಮ. ರಾಮಮೂರ್ತಿ. 1960ರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ.  ರಾಮಮೂರ್ತಿಯವರು 1918ರ ಮಾರ್ಚ್ 11ರಂದು ನಂಜನಗೂಡಿನಲ್ಲಿ ಜನಿಸಿದರು. 

ಸಾಹಿತ್ಯ ವಾತಾವರಣದಿಂದ ಪ್ರೇರಿತರಾದ ಮ ರಾಮಮೂರ್ತಿಯವರು  ಬರೆದ ಮೊದಲ ಕಥೆ ‘ಗುರುದಕ್ಷಿಣಿ’. ಇದನ್ನು ಮಕ್ಕಳಿಗಾಗಿಯೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ಥನಾರಾಯಣ ರಾಯರು ತಮ್ಮ ‘ಮಕ್ಕಳಪುಸ್ತಕ’ದಲ್ಲಿ ಪ್ರಕಟಿಸಿದರು. ರಾಮಮೂರ್ತಿಯವರು ಅಶ್ವತ್ಥ ನಾರಾಯಣರಾಯರ ಬಳಿ ಇದ್ದ ಅನೇಕ ಪುಸ್ತಕಗಳನ್ನು ಪಡೆದು ಓದಿ ಮುಗಿಸಿದ್ದರು.

ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬೆಂಗಳೂರಿನ ಸುತ್ತಮುತ್ತ ಕನ್ನಡೇತರರ ಹಾವಳಿ ಮಿತಿಮೀರಿದಾಗ, ಜನ ಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲ ಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಚಿಂತಿಸಿದ ರಾಮಮೂರ್ತಿಯವರು, ಅನೇಕ  ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. 1950-60ರ ದಶಕದಲ್ಲಿ ಅವರು ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ, ಮರೆಯಾಗಿದ್ದ ವಜ್ರಗಳು ಮುಂತಾಗಿ ಅವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಸಂಖ್ಯೆ 150ಕ್ಕೂ ಹೆಚ್ಚು. ಈ ಪತ್ತೇದಾರಿ ಕಾದಂಬರಿಗಳ ಜೊತೆಗೆ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದು ಸಾವನದುರ್ಗದ (ಮಾಗಡಿ ಸಮೀಪ) ರಸವತ್ತಾದ ವರ್ಣನೆಯ ‘ಭಾಗ್ಯದ ಮದುವೆ’; ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯ ‘ಪ್ರೇಮಮಂದಿರ’ ಮಹತ್ವವಾದವು.   ಇವಲ್ಲದೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳು ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ ‘ರಾಜದಂಡ’ ಚಾರಿತ್ರಿಕವಾಗಿ ಅದ್ವಿತೀಯ ಕಾದಂಬರಿ ಎನಿಸಿದೆ.

ಸಾಹಸಿಯಾದ ರಾಮಮೂರ್ತಿಯವರು ಕೃಷಿಕ ಜೀವನವನ್ನು ನಡೆಸಲು ಬಯಸಿ ಬೆಂಗಳೂರು – ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದಾಗ, ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಡಿಸೆಂಬರ್ 25ರ 1967ರಲ್ಲಿ ಮೂವರೂ ದುರ್ಮರಣಕ್ಕೀಡಾದರು. 

ಮ. ರಾಮಮೂರ್ತಿ

(11 Mar 1918-25 Dec 1967)

Books by Author