About the Author

ಕಥೆಗಾರ, ಕಾದಂಬರಿಕಾರ ಎಂ. ಎಸ್‌. ಪುಟ್ಟಣ್ಣನವರ ಗದ್ಯಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನಚರಿತ್ರೆಗಳು, ರೂಪಾಂತರ ಭಾಷಾಂತರಗಳು, ಸಂಶೋಧನೆ, ಪಠ್ಯ ರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಅವರ ಚಲನಶೀಲ ಸಾಹಿತ್ಯ ಕೃಷಿಗೆ ಸಾಕ್ಷಿ.  ಹೊಸಗನ್ನಡ ಗದ್ಯವನ್ನು ಮುನ್ನೆಲೆಗೆ ಯಶಸ್ವಿಯಾಗಿ ಶ್ರಮಿಸಿದವರಲ್ಲಿ ಪುಟ್ಟಣ್ಣನವರು ಮುಂಚೂಣಿಯಲ್ಲಿದ್ದಾರೆ. 

ಕನ್ನಡದ ನುಡಿಗಟ್ಟಿನಿಂದ ಶ್ರೀಮಂತವಾದ ಶೈಲಿಯಲ್ಲಿ ಮೂಡಿದ ಅವರ ಕಾದಂಬರಿಗಳಾದ ‘ಮಾಡಿದ್ದುಣ್ಣೋ ಮಹಾರಾಯ’, ‘ಮುಸುಗ ತೆಗೆಯೇ ಮಾಯಾಂಗನೆ’ ಹಾಗೂ ‘ಅವರಿಲ್ಲದೂಟ’ ಕಾದಂಬರಿಗಳು ಪುಟ್ಟಣ್ಣನವರ ಸಾಹಿತ್ಯಕ ಸಿದ್ಧಿಯ ಅತ್ಯುತ್ತಮ ಉದಾಹರಣೆಗಳು. ಆ ಕಾಲದ ಸಾಮಾಜಿಕ ಹಾಗೂ ಜನಪದ ವಿಚಾರಗಳು ಬೆರಗುಗೊಳಿಸುವಂತೆ ಚಿತ್ರಿಸಿದ್ದಾರೆ ಪುಟ್ಟಣ್ಣ. ಅಂದಿನ ಸಾಂಸ್ಕೃತಿಕ ನೆಲೆಬೆಲೆಗಳೇನು ಎಂಬುದನ್ನು ಪುಟ್ಟಣ್ಣನವರ ಕಾದಂಬರಿಗಳಿಂದ ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ಅವರ ಕಾದಂಬರಿಗಳಷ್ಟು ಸಮರ್ಥವಾಗಿ ಕನ್ನಡದ ಬೇರೆ ಯಾವುದೇ ಕಾದಂಬರಿ ಮೈಸೂರಿನ ರಾಜಾಸ್ಥಾನವನ್ನು ಚಿತ್ರಿಸಿಲ್ಲ. 

ಪುರಾಣ ಇತಿಹಾಸ, ಕಾವ್ಯ, ಶಾಸ್ತ್ರ ಗ್ರಂಥಗಳು ಮತ್ತು ಇತರ ಹಲವು ಮೂಲಗಳಿಂದ ಆರಿಸಿದ ಸುಮಾರು ನೂರೈವತ್ತು ಕಥೆಗಳ ಸಂಕಲನವೇ ‘ನೀತಿಚಿಂತಾಮಣಿ’. ‘ಪುಟ್ಟಣ್ಣ ಹೇಳಿದ ಕಥೆಗಳು’,‘ಪೇಟೆ ಮಾತಿನಜ್ಜಿ’, ‘ಕಲಾವತೀ ಪರಿಣಯ’ ಚೀನಾ ದೇಶದ ತತ್ವಜ್ಞಾನಿ ಕನಫ್ಯೂಷಿಯಸ್ಸನನ್ನು ಕುರಿತ ‘ಕಾಂಪೂಷನ ಚರಿತ್ರೆ’  ಇವು ಪುಟ್ಟಣ್ಣನವರ ಕೃತಿಗಳು. ಅಲ್ಲದೆ ಷೇಕ್ಸ್ ಪಿಯರ್ ಕವಿಯ ಮೂರು ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. 1912ರಂದು ಶೃಂಗೇರಿಯಲ್ಲಿ ಮಠದಿಂದ ಸನ್ಮಾನಿಸಿ ಅವರಿಗೆ ಗೌರವಿಸಲಾಯಿತು. ಅವರು 1930 ಏಪ್ರಿಲ್ 11 ರಂದು ಬೆಳಗಿನ ವಾಯು ವಿಹಾರದ ಸಮಯದಲ್ಲಿ ಬೀದಿ ಬದಿಯ ಕಲ್ಲುಬೆಂಚಿನ ಮೇಲೆ ಕುಳಿತಿದ್ದಂತೆ ಲಘು ಪಾರ್ಶ್ವವಾಯುವಿಗೆ ತುತ್ತಾಗಿ ನಿಧನರಾದರು. 

ಎಂ.ಎಸ್. ಪುಟ್ಟಣ್ಣ

(21 Nov 1854-11 Apr 1930)