About the Author

ಮಲ್ಲಿಕಾರ್ಜುನ ಕಲಮರಹಳ್ಳಿಯವರು ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ 1958 ಮೇ 05 ರಂದು ಜನಿಸಿದರು. ಕನ್ನಡದ ನೆಲಮೂಲ ಸಂಸ್ಕೃತಿಯ ಪ್ರತೀಕವಾದ ಕಾಡುಗೊಲ್ಲ ಸಮುದಾಯದಲ್ಲಿ ಜನಿಸಿದ ಅವರು ಬಾಲ್ಯದಿಂದಲು ಜನಪದ ಸೊಗಡನ್ನು ಮೈಗೂಡಿಸಿಕೊಂಡವರು. ಹೀಗಾಗಿ ಇವರಿಗೆ ಜನಪದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದೊಂದಿಗೆ ಕರುಳು ಬಳ್ಳಿಯ ನಂಟಿದೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜಾನಪದ ವಿದ್ವಾಂಸರಾದ ಜಿ. ಶಂ. ಪರಮಶಿವಯ್ಯ ಅವರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡ ಸಂಪ್ರಬಂಧವು ‘ಕಲಮರಹಳ್ಳಿಯ ಕಥೆಗಳು’ ಎಂಬ ಪುಸ್ತಕ ರೂಪವನ್ನು ಪಡೆದುಕೊಂಡಿತು. 1986 ರಲ್ಲಿ ಈ ಕೃತಿಗೆ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ಯು ಪ್ರಶಸ್ತಿಯನ್ನು ನೀಡಿ ಗೌರವಿಸಿತು. 

 

‘ಕಾಡುಗೊಲ್ಲ ಕಾವ್ಯಗಳಲ್ಲಿ ಸಾಂಸ್ಕೃತಿಕ ಸಂಘರ್ಷ’ ಎಂಬ ಮಹಾಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಷರೇಟ್ ಪದವಿಯನ್ನು ಪಡೆದಿದ್ದಾರೆ. ಅವರ ‘ಕಾಡು ಹಕ್ಕಿಯ ಹಾಡು’ ಕವನ ಸಂಕಲನವು ಇವರೊಳಗಿನ ಕವಿ ಗುಣವನ್ನು ಅನಾವರಣಗೊಳಿಸುತ್ತದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ (1986). ಸಂಕ್ರಮಣ ಕಾವ್ಯ ಬಹುಮಾನ (1988). ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (2008) ಇತ್ಯಾದಿಯಾಗಿ ಹಲವಾರು ಸನ್ಮಾನಗಳು ಅವರಿಗೆ ಸಂದಿವೆ.

 

ಮಲ್ಲಿಕಾರ್ಜುನ ಕಲಮರಹಳ್ಳಿ

(05 May 1958)