About the Author

ಮೇಘನಾ ಕಾನೇಟ್ಕರ್ ಹುಟ್ಟಿದ್ದು ಮಲೆನಾಡಿನ ರಮ್ಯ ಪರಿಸರದಲ್ಲಿಯಾದರೂ ಬೆಳೆದಿದ್ದು ಬಯಲುಸೀಮೆಯಲ್ಲಿ. ಹುಬ್ಬಳ್ಳಿಯಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ವಾಣಿಜ್ಯ ವಿಷಯದಲ್ಲಿ ಪದವಿ ಮತ್ತು ಕಾನೂನು ವ್ಯಾಸಂಗವನ್ನು ಮಾಡಿದ್ದಾರೆ.ಕೆಲ ವರ್ಷಗಳು ನೆಚ್ಚಿನ ವೃತ್ತಿಯಾದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ ಇವರು ಇದೀಗ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾಹಿತ್ಯದ ಓದು, ಬರಹದಲ್ಲಿ ಅಪಾರ ಒಲವನ್ನು ಹೊಂದಿದ್ದ ಇವರು ತಮ್ಮ ಶಾಲಾ ಹಾಗೂ ಕಾಲೇಜು‌ ದಿನಗಳಲ್ಲಿ ಹನಿಗವಿತೆ, ಪ್ರಬಂಧ ಲೇಖನ, ಸಣ್ಣ ಕತೆಗಳನ್ನು ರಚಿಸುವ ಮೂಲಕ ಗುರುತಿಸಿಕೊಂಡವರು.ಮೇಘನಾ ಕಾನೇಟ್ಕರ್ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿದ್ದು ಹಲವು ವಚನ ಕಮ್ಮಟ, ಕಾವ್ಯ ವಾಚನ ಸ್ಪರ್ಧೆ, ಪ್ರಬಂಧ, ಸಣ್ಣಕಥೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಫಲಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2020 ರಲ್ಲಿ ಇವರ ಚೊಚ್ಚಲ ಕೃತಿ "ಕಾಡುವ ಹುಡುಗ (ಕಲ್ಪನೆಯ ಪ್ರತಿರೂಪ)" ಕವನ ಸಂಕಲನ ತಮ್ಮದೇ ಸ್ವಂತ ಪ್ರಕಾಶನ ಸಂಸ್ಥೆಯಾದ "ಚಿದಂಬರ ಪ್ರಕಾಶನ, ಹುಬ್ಬಳ್ಳಿ" ವತಿಯಿಂದ ಪ್ರಕಟವಾಗಿದೆ. ಮೇಘನಾ ಕಾನೇಟ್ಕರ್ 2021ನೇ ಸಾಲಿನ "ರುದ್ರಗೌಡ ಪಾಟೀಲ್ ಸಿಂಧನೂರು ಇವರ ಪುಣ್ಯ ಸ್ಮರಣಾರ್ಥ" ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮುಕ್ತ ಕಥಾಸ್ಪರ್ಧೆ ಯಲ್ಲಿ ಭಾಗವಹಿಸಿ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ಕಾದಂಬರಿಕಾರ್ತಿ ಶೈಲಜಾ ಸುರೇಶ್ ಸಾರಥ್ಯದ "ಲೇಖಿಕಾ ಸಾಹಿತ್ಯ ವೇದಿಕೆ" ನಡೆಸುತ್ತಿರುವ ಮಹಿಳಾ ಸಾಹಿತ್ಯದ ಹಿರಿಯ ಚೇತನಗಳು ಸರಣಿ ಪ್ರಬಂಧ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ "ಸರಸ್ವತಿಬಾಯಿ ರಾಜವಾಡೆ" ಕುರಿತು ಪ್ರಬಂಧವನ್ನು ಮಂಡಿಸಿದ್ದಾರೆ.

ಇದಲ್ಲದೆ ಮೇಘನಾ ತಮ್ಮ ಮೆಲುದನಿಯ ಮೂಲಕ ಸ್ಪಷ್ಟ, ನಿರರ್ಗಳ ಮಾತಿನಿಂದ ಹಲವಾರು ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವರ್ ಕೋಟ್ ತಂತ್ರಾಂಶದಲ್ಲಿ ರಚಿಸಿ ಪ್ರಕಟಿಸುವ ಹೃದಯಸ್ಪರ್ಶಿ ಮತ್ತು ಸಂವೇದನಾಶೀಲ ಉಲ್ಲೇಖ/ನುಡಿಗಟ್ಟುಗಳಿಗಾಗಿ ತಮ್ಮ ಓದುಗರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಮೇಘನಾ ಕಾನೇಟ್ಕರ್