About the Author

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು.

ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ಆಕರ್ಷಕ ಗದ್ಯಶೈಲಿಯಲ್ಲಿನ ಅವರ ಲೇಖನಗಳು, ಸಂಪಾದಕೀಯಗಳು ಜನಪ್ರಿಯವಾಗಿದ್ದವು. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಿಗೂ ಅಂಕಣಕಾರ ಆಗಿದ್ದ ಅವರ ಭಾಷೆ ಆಕರ್ಷಣೀಯ ಆಗಿತ್ತು. ಮಾತಿನ ಮಂಟಪ, ಚಿಂತನ-ಮಂಥನ ಎಂಬ ಅಂಕಣಗಳು ಅತ್ಯಂತ ಜನಪ್ರಿಯವಾಗಿದ್ದವು. ವಾಹಿನಿ, ಜಯಕರ್ನಾಟಕ, ನವೋದಯ, ಭೂದಾನ, ಕನ್ನಡನುಡಿ ಪತ್ರಿಕೆಗಳ ಸಂಪಾದಕರಾಗಿ ಅವರು ಕೆಲಸಮಾಡಿದ್ದಾರೆ. ಸಾಹಿತ್ಯ, ಭೂಗೋಳ, ಚರಿತ್ರೆ, ಧರ್ಮ, ಸಹಕಾರ, ಶಿಕ್ಷಣ, ಗಾಂಧೀವಾದ, ಭೂದಾನ, ರಾಜಕೀಯ ಮುಂತಾದ ವಿಷಯಗಳ ಬಗ್ಗೆ ಅನೇಕ ಲೇಖನ, ಪುಸ್ತಕ ಪ್ರಕಟಿಸಿದ್ದಾರೆ.

ಧಾರವಾಡದ ಗೆಳೆಯರ ಗುಂಪಿನ ಪ್ರಕಟಣೆಯಾದ ’ಯತಿರಾಜ ರಾಮಾನುಜ’ ಎಂಬುದು ಇವರ ಪ್ರಥಮ ಕೃತಿ. ವಾರ್ಧಾದಲ್ಲಿದ್ದಾಗ ಅಲ್ಲಿನ ಪರಿಸರದಿಂದ ಪ್ರಭಾವಿತರಾಗಿ ಪರ್ಣಕುಟಿ, ವಾರ್ಧಾಯಾತ್ರೆ ಎಂಬ ಪುಸ್ತಕಗಳನ್ನು ಬರೆದರು. ವಿನೋಬಾ ಅವರಿಂದ ಪ್ರೇರಿತರಾಗಿ ನವೋದಯ ಯಾತ್ರೆ, ರಾಮನಾಮ, ಆಶ್ರಮಜೀವನ, ಬೆಂಗಳೂರಿನಲ್ಲಿ ವಿನೋಬಾ, ಭೂದಾನ ಮುಂತಾದ ಕಿರುಹೊತ್ತಗೆಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಕಿಡಿಗಳು, ದೀಪಮಾಲೆ, ಕುಲದೀಪಕರು ಇವು ಇವರು ಪ್ರಕಟಿಸಿರುವ ವ್ಯಕ್ತಿಚಿತ್ರ ಸಂಕಲನಗಳು. ರಾಜೇಂದ್ರ ಪ್ರಸಾದ್, ಮೋತಿ ಲಾಲ್, ಜವಾಹರಲಾಲ್ ನೆಹರೂ, ಕಸ್ತೂರಬಾ-ಇವು ಇವರು ಬರೆದಿರುವ ಜೀವನಚರಿತ್ರೆಗಳು. ಭಾಷಾಂತರದಲ್ಲಿ ನುರಿತಿದ್ದ ಇವರು ಗಾಂಧೀಜಿಯವರ ಹಿಂದ್ ಸ್ವರಾಜ್ಯ, ಆರೋಗ್ಯರಹಸ್ಯ, ಸಂವಾದ ಮಾಲೆ, ಆತ್ಮಕಥೆ, ಗೀತಾಮಾತೆ, ಮೀನೂಮಸಾನಿಯವರ ನಮ್ಮ ಹಿಂದೂಸ್ತಾನ, ನೆಹರೂರವರ ಗಾಂಧಿ, ಕೃಪಲಾನಿಯವರ ಮೂಲಶಿಕ್ಷಣ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆ.ಎಂ. ಮುನ್ಷಿಯವರ ಕೃಷ್ಣಾವತಾರ ಎಂಬ ಗ್ರಂಥವನ್ನು ಕನ್ನಡದಲ್ಲಿ ಅರ್ಥವತ್ತಾಗಿ ಮೂಡಿಸಿದ್ದಾರೆ. ರಾಮಾವತಾರ ಎಂಬುದು ಇವರ ಸ್ವತಂತ್ರಕೃತಿ. ಸಮಾಜಶಿಕ್ಷಣ, ಗಾಂಧಿ ಮತ್ತು ಕರ್ನಾಟಕ ಎಂಬ ಎರಡು ಗ್ರಂಥಗಳನ್ನು ಇವರು ಸಂಪಾದಿಸಿದ್ದಾರೆ. ಅವರಿಗೆ 1973ರಲ್ಲಿ ಸಿದ್ಧಹಸ್ತ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಲಾಯಿತು. ಅದೇ ವರ್ಷ ಅವರು ನಿಧನರಾದರು.

ಸಿದ್ದವನಹಳ್ಳಿ ಕೃಷ್ಣಶರ್ಮ

(31 Jul 1904-02 Oct 1973)