About the Author

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ 1960ರಲ್ಲಿ ನಿವೃತ್ತರಾದರು. ಇವರ ತಾಯಿ ಮತ್ತು ಅತ್ತಿಗೆಯವರು ಹೇಳುತ್ತಿದ್ದ ತ್ರಿಪದಿಗಳನ್ನು ಬಾಲ್ಯದಿಂದಲೇ ಕೇಳುತ್ತಾ ಲಿಂಗಣ್ಣನವರಲ್ಲಿ ಜನಪದ ಸಾಹಿತ್ಯದತ್ತ ಒಲವು ಬೆಳೆಯ ತೊಡಗಿತು. ನಂತರ ಇವರು ಸಂಗ್ರಹಿಸಿದ ಜನಪದ ಹಾಡುಗಳನ್ನು ‘ಗರತಿಯ ಹಾಡು’ ಮತ್ತು ‘ಜೀವನ ಸಂಗೀತ’ ಎಂಬ ಸಂಕಲನಗಳಲ್ಲಿ ಪ್ರಕಟಿಸಿದರು. ನಂತರ ಹೊರತಂದ ಪುಸ್ತಕ ‘ಉತ್ತರ ಕರ್ನಾಟಕದ ಜನಪದ ಕಥೆಗಳು’. ಶಾಸ್ತ್ರೀಯವಾಗಿ ಒಂಬತ್ತು ಭಾಗಗಳಾಗಿ ವಿಭಜಿಸಿ ಪ್ರಕಟಿಸಿದ ಈ ಕೃತಿಯು ಎಂ.ಎ. ತರಗತಿಗಳಿಗೆ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು.

ಜಾನಪದ ವಿಮರ್ಶೆಯ ಕೃತಿ ‘ಜನಾಂಗದ ಜೀವಾಳ’ ಪುಸ್ತಕವನ್ನೂ ಮಿಂಚಿನ ಬಳ್ಳಿ ಪ್ರಕಾಶನವು 1957ರಲ್ಲಿ ಪ್ರಕಟಿಸಿತು. ಇದರಲ್ಲಿ ಜನಪದ ಕಥೆಗಳು, ಗಾದೆಗಳು, ಒಗಟುಗಳು, ಬಯಲಾಟದ ಹಾಡುಗಳು, ವಾಕ್ ಸಂಪ್ರದಾಯಗಳು, ಪಡೆನುಡಿಗಳು- ಇವೆಲ್ಲದರ ರಸಭರಿತ ವಿಶ್ಲೇಷಣೆಯ ವಿಶಿಷ್ಟ ಕೃತಿ. ಜಾನಪದ ಕ್ಷೇತ್ರದಷ್ಟೇ ಇವರಿಗೆ ಪ್ರಿಯವಾಗಿದ್ದ ಮತ್ತೊಂದು ಕ್ಷೇತ್ರವೆಂದರೆ ಕಾವ್ಯಪ್ರಕಾರ. 1936ರಲ್ಲಿಯೇ ರಾಮನರೇಶ್‌ ತ್ರಿಪಾಠಿಯವರು ಹಿಂದಿಯಲ್ಲಿ ಬರೆದ ‘ಮಿಲನ’ ಖಂಡ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ನಂತರ ಇವರು ಹೊರತಂದ ಕವನ ಸಂಕಲನಗಳೆಂದರೆ ಮುಗಿಲಜೇನು, ಪೂಜಾ, ಮಾತೃವಾಣಿ, ನಮಸ್ಕಾರ, ಶ್ರುತಾಶ್ರುತ, ಸಾಯ್‌ಕೊಲ್‌ ಮುಂತಾದವುಗಳು. ಜಾನಪದ, ಕಾವ್ಯದಷ್ಟೇ ಉತ್ಕೃಷ್ಟ ಕೃತಿಗಳನ್ನು ನೀಡಿದ ಮತ್ತೊಂದು ಕ್ಷೇತ್ರವೆಂದರೆ ಪ್ರಬಂಧಪ್ರಕಾರ. ಭಾರತದ ಇತಿಹಾಸ, ಸಂಸ್ಕೃತಿಯ ಚಿತ್ರಣ, ವೈಚಾರಿಕತೆ ಜೀವನದೃಷ್ಟಿ, ಇವುಗಳನ್ನೊಳಗೊಂಡಂತೆ ಪ್ರಕಟಿಸಿದ ಪ್ರಬಂಧ ಸಂಕಲನಗಳೆಂದರೆ ‘ಸ್ವರ್ಗದೋಲೆಗಳು’. ‘ಭಾರತಕ್ಕೆ ಸ್ವರಾಜ್ಯ ದೊರೆತುದೇಕೆ?’, ‘ಬಾಳಬಟ್ಟೆ’, ‘ತಲೆಮಾರಿನ ಹಿಂದೆ’, ‘ಬದುಕಿನ ನೆಲೆ’, ‘ನೂರುಗಡಿಗೆ ಒಂದು ಬಡಿಗೆ’ ಮುಂತಾದ 15 ಪ್ರಬಂಧ ಕೃತಿಗಳು.

ಭಾರತೀಯ ಮಹಾಪುರುಷರು, ದೇಶಭಕ್ತಿಯ ಕಥೆಗಳು, ಕನ್ನಡಿಗರ ಕುಲಗುರು, ದತ್ತ ಸಾಹಿತ್ಯ, ಶ್ರೀ ಅರವಿಂದರು, ಮಧುರ ಚೆನ್ನರ ಜೀವನ ಹಾಗೂ ಕಾರ್ಯ, ಗಾಂಧಿ ಶತದಲ, ಹಳ್ಳಿಯ ಮಹಾತ್ಮ ಮುಂತಾದ 18 ಜೀವನ ಚರಿತ್ರೆಯ ಕೃತಿಗಳು; ಜನಜೀವನ, ಭಕ್ತಿ ರಹಸ್ಯ, ಭಗವಾನ್‌ ಬುದ್ಧದೇವ, ಮೊದಲನೇ ದೇಶದ್ರೋಹಿ, ಸಪ್ತಪದಿ ಮೊದಲಾದ 8 ನಾಟಕಗಳು; ‘ಬೆಟ್ಟದ ಹೊಳೆ’-ಒಂದು ಕಾದಂಬರಿ; ಪವಿತ್ರ ಜೀವನ, ಸುಂದರ ಕಥೆಗಳು, ದೀಪವರ್ತಿ, ದೃಷ್ಟಾಂತ ಕಥೆಗಳು ಮೊದಲಾದ ನಾಲ್ಕು ಕಥಾ ಸಂಕಲನಗಳು; ವಿಶ್ವಾಮಿತ್ರನ ಸಾಹಸ, ಲೊಬೊಲೊಬೊ, ಕಿರುಗನ್ನಡಿ, ಅಂದ ಚೆಂದ, ನಾಮದೇವ, ಗುಡ್ಡಾಪುರದ ದಾನಮ್ಮ ಮೊದಲಾದ 16 ಮಕ್ಕಳ ಸಾಹಿತ್ಯ ಕೃತಿಗಳು, ರಾಮತೀರ್ಥರ ಬಗ್ಗೆ 5 ಕೃತಿಗಳು; ಶ್ರೀ ಅರವಿಂದರ ಬಗ್ಗೆ ಬರೆದ 12 ಕೃತಿಗಳೂ ಸೇರಿ ಒಟ್ಟು ಒಂದು ನೂರಕ್ಕೂ ಹೆಚ್ಚು ಕೃತಿ ಪ್ರಕಟಿತ. ಇವರ ಎಲ್ಲಾ ಸಾಹಿತ್ಯ ಕೃತಿಗಳ ಹಿಂದಿನ ಪ್ರೇರಕ ಶಕ್ತಿಗಳೆಂದರೆ ಹಲಸಂಗಿ ಮಧುರ ಚೆನ್ನ, ಕಾಪಸೆ ರೇವಪ್ಪ ಮತ್ತು ಧೂಲಾಸಾಹೇಬ ಮೊದಲಾದ ಸ್ನೇಹಿತರುಗಳು. ಸಿಂಪಿ ಲಿಂಗಣ್ಣನವರನ್ನು ಕುರಿತು ಡಾ.ಎಂ.ಎನ್‌. ವಾಲಿಯವರು “ಸಿಂಪಿ ಲಿಂಗಣ್ಣನವರ ಜೀವನ ಸಾಧನೆ” ಕುರಿತ ಮಹಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಇವರಿಗೆ ಸಂದ ಪ್ರಶಸ್ತಿ, ಗೌರವಗಳೆಂದರೆ –1944ರಲ್ಲಿ ರಬ ಕವಿಯಲ್ಲಿ ನಡೆದ 28 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷತೆ, (ಸಮ್ಮೇಳನದ ಅಧ್ಯಕ್ಷರು – ಎಸ್‌.ಎಸ್‌. ಬಸವನಾಳರು). 1969ರಲ್ಲಿ ನಡೆದ ಅಖಿಲ ಕರ್ನಾಟಕ 2 ನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, 1972ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1979ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇಳಕಲ್ಲಿನಲ್ಲಿ ಆಯೋಜಿಸಿದ್ದ ಆರನೆಯ ಜಾನಪದ ಸಮ್ಮೇಳನದ ಅಧ್ಯಕ್ಷತೆ, 1980ರಲ್ಲಿ ಜಮಖಂಡಿಯಲ್ಲಿ ನಡೆದ ವಿಜಾಪುರ ಜಿಲ್ಲಾ ಎರಡನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,1989ರಲ್ಲಿ ಹೊಸಪೇಟೆಯಲ್ಲಿ ನಡೆದ ಕನ್ನಡ ಶಕ್ತಿ ಕೇಂದ್ರದ ಪ್ರಥಮ ವಾರ್ಷಿಕ ಸಭೆಯ ಅಧ್ಯಕ್ಷತೆ, 1992ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗಳಲ್ಲದೆ 1956ರಲ್ಲಿ ‘ಸ್ವರ್ಗದೋಲೆಗಳು’ ಕೃತಿಗೆ ಮುಂಬೈ ಸರಕಾರದ ಬಹುಮಾನ, 1959ರಲ್ಲಿ ‘ಗರತಿಯ ಬಾಳು’ ಕೃತಿಗೆ ಮೈಸೂರು ಸರಕಾರದ ಬಹುಮಾನ, 1950ರಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರಿಂದ ‘ಆದರ್ಶ ಶಿಕ್ಷಕ’ ಪ್ರಶಸ್ತಿ, ಜನಾಂಗದ ಜೀವಾಳ’ ಕೃತಿಗೆ ಕರ್ನಾಟಕ ರಾಜ್ಯ ಸರಕಾರದ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮತ್ತು ಬಹುಮಾನ, 1977ರಲ್ಲಿ ‘ನಾಟ್ಯಸಾಧನೆ’ (ಪ್ರಬಂಧ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಜಾನಪದ ಟ್ರಸ್ಟ್‌ನಿಂದ ಸನ್ಮಾನ, ಮತ್ತು ‘ನೂರು ಗಡಿಗೆ ಒಂದು ಬಡಿಗೆ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ಜಾನಪದ ಅಕಾಡಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ ಮತ್ತು ರಾಜ್ಯ ಸರಕಾರದ ಜಾನಪದ ಸೇವೆಗಾಗಿ ರಾಜ್ಯ ಪ್ರಶಸ್ತಿಗಳ ಜೊತೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ದೊರೆತವು.

ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ಸಿಂಪಿ ಲಿಂಗಣ್ಣನವರು ನಿಧನರಾದದ್ದು 1993 ರ ಮೇ 5 ರಂದು. ಸಿಂಪಿ ಲಿಂಗಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಲು ಕುಟುಂಬದ ಸದಸ್ಯರು ಪ್ರಾರಂಭಿಸಿರುವ ‘ಜಾನಪದ ಅಧ್ಯಯನ ವೇದಿಕೆ’ಯಿಂದ ಪ್ರತಿವರ್ಷ ನೀಡುತ್ತಿರುವ ‘ಸಿಂಪಿ ಲಿಂಗಣ್ಣ ಪ್ರಶಸ್ತಿ’.

ಸಿಂಪಿ ಲಿಂಗಣ್ಣ

(11 Feb 1905-05 May 1993)

ABOUT THE AUTHOR