About the Author

ಕನ್ನಡದ ಪ್ರಮುಖ ಮಕ್ಕಳ ಸಾಹಿತಿಗಳಲ್ಲಿ ನಾಗರಾಜಶೆಟ್ಟರು ಒಬ್ಬರು. ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಜನಿಸಿದರು. ತಂದೆ ಶ್ರೀರಾಮಯ್ಯ, ತಾಯಿ ವನಲಕ್ಷಮ್ಮ. ಬಿ.ಎ. ಹಾಗೂ ಸ್ನಾತಕೋತ್ತರ ಪದವೀಧರರು. ನಂತರ ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಪಡೆದರು.

ಬರೆದ ಮೊದಲ ಕವನ ‘ಮೇಕೆ ಮರಿ’. ಇವರ ಮೊದಲ ಕಥಾ ಸಂಕಲನ 1979ರಲ್ಲಿ ಪ್ರಕಟಣೆ ಕಂಡ ನಂತರ ಬಾಲ್ಯ ಸಾಹಿತ್ಯದತ್ತ ಹೆಜ್ಜೆ ಹಾಕಿದರು. ‘ನವಿಲು ಗರಿ’, ‘ಸಕ್ಕರೆ ಬೊಂಬೆ’, ‘ಆಮೆ ಮತ್ತು ಹಂಸಗಳು’, ‘ಚಂದ್ರನ ಶಾಲೆ’, ‘ಮಕ್ಕಳನೆಹರುಸು’, ‘ಕೋತಿ ಮರಿ ಸೈಕಲ್ ಸವಾರಿ’ ಅವರ ಮಕ್ಕಳ ಕವನ ಸಂಕಲನಗಳು. ‘ಪ್ರಾಣಿಗಳ ಜಾತ್ರೆ, ಹಾವು ಕಪ್ಪೆ ಏಡಿ, ಚಿಟ್ಟೆಯ ಬಣ್ಣ, ಕರಡಿ ರಸಾಯನ’ - ಮಕ್ಕಳ ಕತಾ ಸಂಕಲನಗಳು. ಅಲ್ಲದೆ ‘ಚುಟ್ಟಿ ಪುಟ್ಟಿ, ಮಕ್ಕಳ ಯುಗಾದಿ, ಪ್ರಾಣಿಗಳ ಪರೀಕ್ಷೆ, ಪ್ರಾಣಿಗಳ ಪ್ರವಾಸ’ ಮುಂತಾದ ಮಕ್ಕಳ ಬಾನುಲಿ ರೂಪಕಗಳು. “ಆದ್ಭುತ ಗ್ರಹದ ಕತೆ ಮತ್ತಿತರ ಕಥೆಗಳು”, “ಚೆಲುವನಹಳ್ಳಿ ಚತುರರು” - ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು.

ಚುಟ್ಟಿ ಪುಟ್ಟಿ ಪುಸ್ತಕಕ್ಕೆ ಅಂದಿನ ರಾಷ್ಟ್ರಪತಿ ಡಾ. ಶಂಕರ ದಯಾಳ ಶರ್ಮರವರಿಂದ ರಾಷ್ಟ್ರೀಯ ಪುರಸ್ಕಾರ ಸಂದಿತ್ತು. ಇವರ ಹಲವಾರು ಮಕ್ಕಳ ಕತೆಗಳು ಹಿಂದಿ ಹಾಗೂ ಮರಾಠಿಗೂ ಅನುವಾದಗೊಂಡಿರುವುದು ಮತ್ತೊಂದು ವಿಶೇಷ. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಧಾರವಾಡದ ಮಕ್ಕಳ ಮನೆ ಪುರಸ್ಕಾರ, ಬನಹಟ್ಟಿಯ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಕಾವ್ಯ ಸಿಂಧು ಪುರಸ್ಕಾರ, ಸಿಸುಸಂಗಮೇಶ ದತ್ತಿ ಪ್ರಶಸ್ತಿ, ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡಮಿ ಗೌರವ ಪ್ರಶಸ್ತಿಗಳು ದೊರೆತಿವೆ.

ಟಿ. ಎಸ್. ನಾಗರಾಜಶೆಟ್ಟಿ

(16 Apr 1953)