About the Author

ವಿ. ಆರ್. ಕಾರ್ಪೆಂಟರ್ ಯಲಹಂಕ ಸಮೀಪದ ವೆಂಕಟಾಲದಲ್ಲಿ 1981ರಲ್ಲಿ ಜನಿಸಿದರು. ಅವರ ಮೂಲ ಹೆಸರು- ನರಸಿಂಹಮೂರ್ತಿ ವಿ.ಆರ್. ತಂದೆ ರಾಮಯ್ಯ, ತಾಯಿ-ಸಿದ್ದಗಂಗಮ್ಮ. 9ನೇ ತರಗತಿಯವರೆಗೆ ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಸುಮಾರು ಹದಿನೈದು ವರ್ಷಗಳ ಕಾಲ ಬಡಗಿ ವೃತ್ತಿ. ಅದರ ನಡುವೆಯೇ ಲಂಕೇಶ್ ಪತ್ರಿಕೆಯ ಪ್ರಭಾವದಿಂದ ಸಾಹಿತ್ಯ ಲೋಕಕ್ಕೆ ಬಂದ ಅವರು ಒಂದಷ್ಟು ಕಾಲ ಕನ್ನಡ ಟೈಮ್ಸ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಸಿಗ್ನಲ್ ಟವರ್, ಐದನೇ ಗೋಡೆಯ ಚಿತ್ರಗಳು, ಕಾರ್ಪೆಂಟರ್ ಪದ್ಯಗಳು (ಕವನ ಸಂಕಲನ), ಅಪ್ಪನ ಪ್ರೇಯಸಿ ಮತ್ತು ನೀಲಿಗ್ರಾಮ (ಕಾದಂಬರಿಗಳು) ಪ್ರಕಟವಾಗಿವೆ. ಕಾರ್ಪೆಂಟರ್ ಅವರ ಅಪ್ಪನ ಪ್ರೇಯಸಿ ಕಾದಂಬರಿ ಇಂಗ್ಲಿಷ್ ಮತ್ತು ತಮಿಳಿಗೆ ಅನುವಾದಗೊಂಡಿದೆ. ಕೆಲವು ಕವನಗಳು ಇಂಗ್ಲಿಷ್, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ. ಕೆಲಕಾಲ ಗ್ರಾಫಿಕ್ ಮತ್ತು ಇಂಟರಿಯರ್ ವಿನ್ಯಾಸಕರಾಗಿ ಕೆಲಸ ಮಾಡಿ ಆನಂತರ ಕೆಲ ಕಾಲ ನವಿಲು ಮಾಸಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜಾಗತೀಕರಣದ ಹಿನ್ನೆಲೆಯಲ್ಲಿ ‘ಕರ್ನಾಟಕದ ಕುಶಲಕರ್ಮಿಗಳು’  ಎಂಬ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಯನದ ಒಂದು ಲಕ್ಷ ರೂಪಾಯಿ ಫೆಲೋಶಿಪ್ ಪಡೆದಿದೆ. 2017 ಕನ್ನಡ ಮಣ್ಣಿನ ಅಸ್ಮಿತೆ: ಗೌರಿ ಲಂಕೇಶ್ ಕೃತಿ ಕಾರ್ಪೆಂಟರ್ ಅವರ ಸಹಸಂಪಾದನಾ ಕೃತಿ. ಜೊತೆಗೆ ಅವರ ಅನೇಕ ಕತೆಗಳು ಮತ್ತು ಕವಿತೆಗಳು ಮಯೂರ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ, ಗೌರಿ ಲಂಕೇಶ್ ಮತ್ತು ಸುಧಾ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅಲ್ಲದೆ ವಿಜಯ ಕರ್ನಾಟಕದ ಅಂಗ ಪತ್ರಿಕೆ ವಿಜಯ ನೆಕ್ಷ್ಟ್‌ನಲ್ಲಿ ’ನೀಲಿಗ್ರಾಮ’ ಕಾದಂಬರಿ ಧಾರಾವಾಹಿಯ ರೂಪದಲ್ಲಿ ಪ್ರಕಟವಾಗಿದೆ. ಸದ್ಯ ಅವರ ‘ಬ್ರಾಹ್ಮಿನ್ ಕೆಫೆ’ ಎಂಬ ಕಥಾಸಂಕಲನ ಪ್ರಕಟಣೆಯ ಹಂತದಲ್ಲಿದೆ.

ವಿ.ಆರ್. ಕಾರ್ಪೆಂಟರ್

(28 May 1981)