About the Author

ಲೇಖಕ ವಿಶುಕುಮಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. (15-06-1935) ಮಂಗಳೂರಿನ ಹಿಂದುಳಿದ ಪಂಗಡದಲ್ಲಿ ಜನಿಸಿದ್ದು, ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣ ಹಾಗೂ ಪ್ರೌಢಶಿಕ್ಷಣ ಪೂರೈಸಿ, ನಂತರ ಮುಜರಾಯಿ ಇಲಾಖೆ ಸೇರಿದಂತೆ ಹಲವಾರು ಸರಕಾರಿ ಉದ್ಯೋಗದಲ್ಲಿ ಕಾರ‍್ಯನಿರ್ವಹಿಸಿದ್ದಾರೆ. ಸ್ವಯಂ ನಿವೃತ್ತಿ ಪಡೆದಿದ್ದಾರೆ. ಶಾಲಾದಿನಗಳಿಂದಲೇ ಕತೆ, ಕವನ, ನಾಟಕಗಳನ್ನು ರಚಿಸುತ್ತಿದ್ದರು. ವಿದ್ಯಾರ್ಥಿದಿನಗಳಲ್ಲೇ ಅವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹಿಂದು – ಮುಸ್ಲಿಂ ಪ್ರೇಮದ ವಿಚಾರವನ್ನು ಹಿನ್ನಲೆಯಾಗಿಟ್ಟು ರಚಿಸಿದ ಅವರ ಕಾದಂಬರಿ -ಕರಾವಳಿ, ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗತೊಡಗಿದಾಗ ವಿವಾದಕ್ಕೆಡೆ ಮಾಡಿಕೊಟ್ಟು ಪ್ರತಿಭಟನೆ ಪ್ರಾರಂಭವಾಗಿದ್ದರಿಂದ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ಛಲ ಬಿಡದ ವಿಶುಕುಮಾರ್, ಅದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಲ್ಲದೆ ತಮ್ಮದೇ ನಿರ್ದೇಶನದಲ್ಲಿ ಚಲನಚಿತ್ರವನ್ನು ನಿರ್ಮಿಸಿದರು.

ಪುನ: ಪ್ರತಿಭಟನೆಗಳು ನಡೆದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಟ್ಟು ಕರ್ನಾಟಕದ ಇತರೆಡೆ ಪ್ರದರ್ಶನಗೊಂಡಿತು. ಚಲನಚಿತ್ರ ರಂಗದಲ್ಲಿ ಆಸಕ್ತರಾಗಿದ್ದ ವಿಶುಕುಮಾರ್, ಚಲನಚಿತ್ರ ನಿಯತ ಕಾಲಿಕ ಚಿತ್ರದೀಪ ಹಾಗೂ ಸಂಜೆವಾಣಿ ದಿನಪತ್ರಿಕೆಯ ಸಂಪಾದಕರಾಗಿಯೂ ಕೆಲಕಾಲ ಕಾರ‍್ಯ ನಿರ್ವಹಿಸಿದರು. ಸಮಕಾಲೀನ ರಾಜಕೀಯವನ್ನು ವಸ್ತುವಾಗಿಸಿಕೊಂಡು ವಿಡಂಬನೆಯ ಮೂಲಕ ರಚಿಸಿದ ನಾಟಕ ‘ಡೊಂಕು ಬಾಲದ ನಾಯಕರು’ ಇದರ ಮೊನಚು ಭಾಷೆಯನ್ನು ಅರಗಿಸಿಕೊಳ್ಳಲಾಗದ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದಾಗ, ಪೊಲೀಸರ ಆದೇಶದಂತೆ ಕೆಲ ಸಂಭಾಷಣೆಗಳಿಗೆ ಕತ್ತರಿ ಹಾಕಬೇಕಾಯಿತು. ಆದರೂ ಬಹು ಯಶಸ್ವಿ ಎನಿಸಿದ ಈ ನಾಟಕವು ಬೆಂಗಳೂರು ಅಲ್ಲದೇ, ಮಂಗಳೂರು, ಕಾಸರಗೋಡು, ಮೈಸೂರು, ಬಳ್ಳಾರಿ, ಕಲ್ಬುರ್ಗಿ ಮುಂತಾದಡೆಗಳಲ್ಲಿ ಸುಮಾರು 25 ಪ್ರದರ್ಶನಗಳನ್ನು ಕಂಡಿತು. ಕರಾವಳಿ, ಮದರ್, ವಿಪ್ಲವ, ಕಾಮುಕರು, ಕಪ್ಪು ಸಮುದ್ರ, ಹಂಸಕ್ಷೀರ, ಕರ್ಮ, ಭೂಮಿ, ಈ ಪರಿಯ ಬದುಕು, ಭಟ್ಕಳ ದಿಂದ ಬೆಂಗಳೂರಿಗೆ, ಮಿಯಾಂವ್ ಕಾಮತ್, ಪ್ರಜೆಗಳು – ಪ್ರಭುಗಳು, ನೆತ್ತರ ಗಾನ, ಭಗವಂತನ ಆತ್ಮ ಕಥೆ, ಗಗನಗಾಮಿಗಳು ಸೇರಿದಂತೆ 25ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕರಾವಳಿ, ಅಖಂಡ ಬ್ರಹ್ಮಚಾರಿಗಳು, ಮದರ್ ಮತ್ತು ಕೋಟಿ ಚನ್ನಯ್ಯ ಚಲನ ಚಿತ್ರಗಳಾಗಿವೆ. ತುಳು ಭಾಷೆಯ ಕೋಟಿ ಚನ್ನಯ್ಯ ಚಲನ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಅಲ್ಲದೇ, ಡೊಂಕುಬಾಲದ ನಾಯಕರು, ಪ್ರಜೆಗಳು – ಪ್ರಭುಗಳು, ಹೆಗಲಿಗೆ ಹೆಗಲು, ಕೋಟಿ ಚನ್ನಯ್ಯ, ತರಂಗರಂಗ, ಅಂತರಂಗ, ಈ ಗಂಡಸರು ಮುಂತಾದ ನಾಟಕಗಳನ್ನೂ ರಚಿಸಿದ್ದಾರೆ. ಬರೆದ ಹಲವಾರು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲ ಕಥೆಗಳು ‘ಕುಸುಮ ಕೀರ್ತನ’ಎಂಬ ಸಂಕಲನದಲ್ಲಿ ಸೇರಿದೆ. ತಮ್ಮ ಸೃಜನ ಶೀಲ ಸಾಹಿತ್ಯ ಚಟುವಟಿಕೆಯಿಂದ ಸದಾ ಯಾವುದಾದರೊಂದು ಸಾಹಿತ್ಯಕವಾಗಿ ತೊಡಗಿಸಿಕೊಂಡಿದ್ದ ವಿಶುಕುಮಾರರು ಕ್ಯಾನ್ಸರ್‌ನಿಂದಾಗಿ 1986ರ ಅಕ್ಟೋಬರ್ 4ರಂದು ಕೊನೆ ಉಸಿರೆಳೆದರು.

ವಿಶು ಕುಮಾರ್

(15 Jun 1935-04 Oct 1986)

Books by Author