ಆಸೆಗಳು ಕನಸಾಗಿ ಬದಲಾಗಲಿ

Author : ಮಧುಕರ್‌ ಬಳ್ಕೂರ್‌

Pages 164

₹ 150.00




Year of Publication: 2021
Published by: ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ
Address: ಆರುಡೋ, ಕೋಡೂರು - ಅಂಚೆ, 577 418, ಹೊಸನಗರ-ತಾಲ್ಲೂಕು, ಶಿವಮೊಗ್ಗ -ಜಿಲ್ಲೆ
Phone: 97315549555

Synopsys

ಆಸೆಗಳು ಕನಸಾಗಿ ಬದಲಾಗಲಿ- ಲೇಖನಗಳ ಸಂಗ್ರಹದ ಈ ಕೃತಿಯನ್ನು ಮಧುಕರ್ ಬಳ್ಕೂರ್ ರಚಿಸಿದ್ದು, ಇದು ಅವರ ಮೊದಲ ಕೃತಿಯಾಗಿದೆ. ಬದುಕಿನ ವಿವಿಧ ವಿಷಯಗಳನ್ನು ಆಧರಿಸಿದ ಬರಹಗಳಿವೆ. ಇಲ್ಲಿಯ ಬಹುತೇಕ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬದುಕಿನ ಸಾಧನೆಯೆಡೆಗೆ ಸಾಗಬೇಕಾದ ದಾರಿಯನ್ನು ಪರಿಚಯಿಸುವ ಸುಮಾರು 20ಕ್ಕೂ ಅಧಿಕ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. 

About the Author

ಮಧುಕರ್‌ ಬಳ್ಕೂರ್‌

ಮಧುಕರ್ ಬಳ್ಕೂರ್ ಅವರು ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ವೃತ್ತಿಗಾಗಿ ಸಧ್ಯ ಧಾರವಾಡದ ವಾಡಿಯಲ್ಲಿ ವಾಸವಿದ್ದಾರೆ. ವ್ಯಕ್ತಿತ್ವ ವಿಕಸನ ಕುರಿತು ಹೆಚ್ಚಿನ ಲೇಖನಗಳನ್ನು ಬರೆದಿದ್ದು,ಇ-ಮ್ಯಾಗ್ಝಿನ್ ಸೇರಿದಂತೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕೃತಿಗಳು: ’ಆಸೆಗಳು ಕನಸಾಗಿ ಬದಲಾಗಲಿ (ಲೇಖನಹಳ ಸಂಗ್ರಹ).  ...

READ MORE

Excerpt / E-Books

ಆಸೆಗಳು ಕನಸಾಗಿ ಬದಲಾಗಲಿ (ಲೇಖನ ) ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಹಾಗೆಂದು ಆಸೆ ಇಲ್ಲದ ಮನುಷ್ಯನನ್ನು ತೋರಿಸಿ ನೋಡೋಣ. ಈ ಜಗತ್ತಿನಲ್ಲಿ ಒಂದಲ್ಲ ಒಂದು ವಸ್ತುವಿಗೆ, ಸಂಗತಿಗೆ ಆಸೆ ಪಡದ ವ್ಯಕ್ತಿಯೊಬ್ಬ ಇರಲಿಕ್ಕೆ ಸಾಧ್ಯವಾ? ಆಸೆಯೇ ದುಃಖಕ್ಕೆ ಕಾರಣವೆಂದರೂ ಮನುಷ್ಯ ಆಸೆ ಪಡದೇ ಇರಲಾರ. ಅದು ಅವನ ಸಹಜ ಗುಣ. ಇಂತಹ ಆಸೆಗೆ ಮಹತ್ವಾಕಾಂಕ್ಷೆ ಸೇರಿದರೆ ಸಾಧನೆಯ ಹಸಿವಾಗುತ್ತದೆ. ಹೀಗಾಗದೆ ಇದರ ಜೊತೆಗೆ ಮೋಹ, ಲೋಭ ಸೇರಿದರೆ ಆಸೆ ಎನ್ನುವುದು ದುರಾಸೆಯಾಗುತ್ತದೆ. ದುರಾಸೆ ಒಂದು ಕ್ಷಣ ಹೆಚ್ಚಿಗೆ ಮನಸ್ಸಿನಲ್ಲಿ ಕೂತುಬಿಟ್ಟರೆ ಸ್ವಾರ್ಥವಾಗಿ ಬದಲಾಗುತ್ತದೆ. ಸ್ವಾರ್ಥಕ್ಕೆ ಬಿದ್ದ ಮನುಷ್ಯ ಹೇಗೆಲ್ಲಾ ಆಡುತ್ತಾನೆನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಒಂದು ಆಸೆ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಲೂ ಬಹುದು. ಹಾಗೆಂದು ಆಸೆ ತೊರೆದ ಮನುಷ್ಯ ಈ ಜಗತ್ತಿನಲ್ಲಿ ಮನುಷ್ಯನೆಂದು ಕರೆಸಿಕೊಳ್ಳುವುದಿಲ್ಲ. ಮನುಷ್ಯನೆಂದ ಮೇಲೆ ಆಸೆ ಇರಲೇಬೇಕು. ಆ ಆಸೆ ಸಾತ್ವಿಕವಾಗಿದ್ದು, ನೈತಿಕತೆಯ ದಾರಿಯಲ್ಲಿ ಇರಬೇಕು. ನಮ್ಮ ಈ ಆಸೆಗಳು ಸರಿಯಾದ ದಿಕ್ಕಿನಲ್ಲೇ ಇದ್ದರೂ ಅದು ಕೈಗೂಡದೇ ನಿರಾಶೆ ತರಬಹುದು, ಬೇಸರ ಮೂಡಿಸಬಹುದು. ಬದುಕಿನ ಚಿಕ್ಕ ಚಿಕ್ಕ ಆಸೆಗಳು ಬೇಗನೇ ನೆರವೇರಿಬಿಡುತ್ತವೆ. ಅದೇ ದೊಡ್ಡದಕ್ಕೆ ಆಸೆ ಪಟ್ಟರೆ? ಅದು ನಮ್ಮ ಸಾಮರ್ಥ್ಯಕ್ಕೆ ಮೀರಿದ್ದು ಎಂದೆನ್ನಿಸಿದರೂ ಕೈಗೆಟುಕದೆ ಇರುವಷ್ಟು ದೂರವೇನಲ್ಲ. ಎಟುಕಿಸಿಕೊಳ್ಳಲೇಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೆ, ಶ್ರಮ ಪಟ್ಟರೆ ಸಿಕ್ಕಬಹುದು. ಹಾಗಿದ್ದೂ ನಿರೀಕ್ಷೆಗೆ ತಕ್ಕಂತೆ ಯಾವುದೂ ನಡೆಯುವುದಿಲ್ಲ. ಇಂತಹ ಸೋಲು, ನಿರಾಶೆ ನಮ್ಮನ್ನು ಕಾಡುತ್ತಲೇ ಇರುತ್ತದೆ. ಬದುಕಿನುದ್ದಕ್ಕೂ ನಮ್ಮ ಹಣೆಯಲ್ಲಿ ಬರೆದಿದ್ದೇ ಇಷ್ಟು ಎಂದು ಹಳಹಳಿಸುತ್ತಲೇ ಇರುತ್ತೇವೆ. ಹಾಗಾದರೆ ಆಸೆ ಪಡಲೇಬಾರದಾ? ಬಡ ಮಧ್ಯಮವರ್ಗದ ಅದೆಷ್ಟೋ ಮಂದಿಗೆ ಈ ಪ್ರಶ್ನೆ ಬೆನ್ನು ಬಿಡದೆ ಕಾಡುತ್ತಲೇ ಇರುತ್ತದೆ. ಬಡ ಮಧ್ಯಮವರ್ಗದಲ್ಲಿ ಬೆಳೆದ ಆಕೆಗೆ ತಾನೊಬ್ಬ ಡಾಕ್ಟರೋ, ಎಂಜಿನಿಯರೋ ಆಗಬೇಕೆಂಬ ಆಸೆಯಿರುತ್ತದೆ. ಆದರೆ ಆಕೆಯ ಆಸೆ ಪೂರೈಸುವ ಪೂರಕವಾದ ಪ್ರೋತ್ಸಾಹಕರ ವಾತಾವರಣ ಕುಟುಂಬದಲ್ಲಿ ಇರುವುದಿಲ್ಲ. ಹೀಗಿದ್ದಾಗ ಎಷ್ಟೋ ಬಾರಿ ಅವರು ತಮ್ಮ ಆಸೆಯನ್ನು ಯಾರಲ್ಲಿಯೂ ಹೇಳಿಕೊಳ್ಳದೆ ತಮ್ಮಲ್ಲಿಯೇ ಉಳಿಸಿಕೊಂಡು ಬಿಡುತ್ತಾರೆ. ಹಳ್ಳಿಯಲ್ಲಿ ಹುಟ್ಟಿದ ಅವನಿಗೆ ತಾನೊಬ್ಬ ಇಂಟರ್ನ್ಯಾಶನಲ್ ಮಟ್ಟದ ಕ್ರಿಕೆಟ್ ಪ್ಲೇಯರ್ ಆಗಿ ದೇಶವನ್ನು ಪ್ರತಿನಿಧಿಸಬೇಕೆನ್ನುವ ಆಸೆ ಇರುತ್ತದೆ. ಅವನ ಆಸೆ ಈಡೇರುವುದಿರಲಿ, ಅವನು ಕ್ರಿಕೆಟ್ ಆಡುವುದಕ್ಕೇ ಮನೆಯವರ ವಿರೋಧವಿರುತ್ತದೆ. ಇಲ್ಲಿ ಮನೆಯವರ ತಪ್ಪು ಎಂದು ನೇರವಾಗಿ ಹೇಳಲಿಕ್ಕಾಗದೇ ಇದ್ದರೂ ಅವರ ಮನೆಯ ಸ್ಥಿತಿ ಮತ್ತು ವಾತಾವರಣವೇ ಹಾಗಿರುತ್ತದೆ. ಆದ್ದರಿಂದಲೇ ಇಂತಹ ಕಡೆ ಆಸೆ ಎನ್ನುವುದು ಆಸೆಯಾಗಿಯೇ ಉಳಿದುಬಿಡುತ್ತದೆ. ಆಸೆ ನಿರಾಸೆಯಾಗುವುದು ಒಂದು ರೀತಿಯಾದರೆ, ಆಸೆ ಆಸೆಯಾಗಿಯೇ ಉಳಿದುಬಿಡುವುದಿದೆಯಲ್ಲ ಅದು ಜೀವನದಲ್ಲಿ ಮತ್ತೆ ಮತ್ತೆ ಕಾಡುವ ಸಂಗತಿಯಾಗಿಬಿಡುತ್ತದೆ. ಇದನ್ನೆಲ್ಲ ನೋಡಿದರೆ ಆಸೆ ಇಟ್ಟುಕೊಳ್ಳುವುದೇ ತಪ್ಪು ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಗಮನಿಸಿ, ನಮ್ಮಲ್ಲಿ ಆಸೆ ಇರುವುದರಿಂದಲೇ ನಾವು ಚಟುವಟಿಕೆಯಿಂದಿದ್ದೇವೆ. ಹೆಚ್ಚೆಚ್ಚು ಉತ್ಸಾಹಿಗಳಾಗಿರುತ್ತೇವೆ. ಇಷ್ಟಕ್ಕೂ ಜೀವನದಲ್ಲಿ ಆಸೆ ಎನ್ನುವುದೇ ಇಲ್ಲದೇ ಇದ್ದಿದ್ದರೆ ಈ ಬದುಕಿನಲ್ಲಿ ಏನು ಸ್ವಾರಸ್ಯವಿರುತ್ತಿತ್ತು? ಸರಿ, ಆದರೆ ನಾವು ಆಸೆ ಪಟ್ಟಿದ್ದನ್ನು ನಮ್ಮದಾಗಿಸಿಕೊಳ್ಳಲಿಕ್ಕಾಗುವುದಿಲ್ಲವಲ್ಲ, ಹೆಚ್ಚೆಚ್ಚು ಆಸೆ ಪಟ್ಟಷ್ಟೂ ನಿರಾಶೆ ಹೆಗಲೇರುತ್ತದಲ್ಲ, ಇದಕ್ಕೇನು ಮಾಡಬೇಕು? ಎಂದು ನಮ್ಮನ್ನು ನಾವೇ ಕೇಳಿಕೊಳ್ಳುತ್ತಾ ಹೋದರೆ ನಮ್ಮಲ್ಲೊಂದು ಚಿಕ್ಕ ಬದಲಾವಣೆಯ ಅಗತ್ಯವಿದೆ ಎನ್ನುವುದು ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ. ಒಮ್ಮೆ ಹೀಗೆ ಯೋಚಿಸಿ. ನಮ್ಮ ಪ್ರತಿಯೊಂದು ಆಸೆಯೂ ಕನಸಾಗಿ ಬದಲಾದರೆ ಹೇಗೆ ಎಂದು ಚಿಂತಿಸಿ. ಆಸೆ ಪಡುವುದಕ್ಕೂ ಕನಸು ಕಾಣುವುದಕ್ಕೂ ಬಹಳ ವ್ಯತ್ಯಾಸವಿದೆ. ಆಸೆ ನಿರಾಸೆಯಾಗಬಹುದು ಆದರೆ ಕನಸು ಅಷ್ಟು ಸುಲಭವಾಗಿ ನಮ್ಮನ್ನು ನಿರಾಸೆಗೊಳಿಸುವುದಿಲ್ಲ. ಅದು ನಮ್ಮನ್ನು ಮತ್ತೆ ಮತ್ತೆ ಪ್ರಯತ್ನಿಸುವಂತೆ ಮಾಡುತ್ತದೆ. ಆಸೆಗೆ ಬಿದ್ದ ಮನುಷ್ಯ ಸುಲಭದ ದಾರಿಯನ್ನು ನೋಡಬಹುದು. ಆದರೆ ಕನಸು ಕಂಡವನು ತನ್ನ ದಾರಿಯನ್ನು ಸುಲಭ ಮಾಡಿಕೊಳ್ಳುವುದರ ಬಗ್ಗೆಯಷ್ಟೇ ಯೋಚಿಸುತ್ತಾನೆ. ಅದಕ್ಕೋಸ್ಕರ ಎಷ್ಟು ಕಷ್ಟ ಪಡುವುದಕ್ಕೂ ತಯಾರಾಗಿರುತ್ತಾನೆ. ಆಸೆಯನ್ನು ಈಡೇರಿಸಿಕೊಳ್ಳುವವನಿಗೆ ನೂರೆಂಟು ದಾರಿಗಳು ಕಾಣಬಹುದು. ಅದಕ್ಕೋಸ್ಕರ ಅಡ್ಡ ದಾರಿಯನ್ನೇ ಹಿಡಿಯಬಹುದು. ಆದರೆ ಕನಸನ್ನು ನನಸು ಮಾಡಿಕೊಳ್ಳಲು ಜ್ಞಾನ, ಪರಿಶ್ರಮ, ಪ್ರಯತ್ನಗಳ ದಾರಿಯಷ್ಟೇ ಇರುತ್ತದೆ. ಆಸೆಯಲ್ಲಿ ಲೆಕ್ಕಾಚಾರಗಳಿರುತ್ತವೆ. ಅದಕ್ಕೊಂದು ಮಿತಿ ಇದೆ. ಆಸೆಗಳು ಹೆಚ್ಚಾಗಿ ನಮ್ಮ ಆರ್ಥಿಕ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತವೆ. ಆದರೆ ಕನಸಿಗೆ ಯಾವ ಬೇಲಿಯೂ ಇಲ್ಲ, ಮಿತಿಯಂತೂ ಇಲ್ಲವೇ ಇಲ್ಲ. ಅದು ನಮ್ಮ ಆರ್ಥಿಕ ಸಾಮರ್ಥ್ಯದ ಮೇಲೆ ಅವಲಂಬಿತವಾದರೂ ಅದಕ್ಕಾಗಿ ನಾವು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುತ್ತೇವೆ. ಇಲ್ಲವೇ ಕನಸಿಗಾಗಿ ನಮ್ಮ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಯೋಚನೆ ಮಾಡುತ್ತೇವೆ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಗಾದೆ ಆಸೆಗಳಿಗೆ ಅನ್ವಯವಾಗಬಹುದು. ಯಾಕೆಂದರೆ ನಮ್ಮ ಬಹುತೇಕ ಆಸೆಗಳಲ್ಲಿ ಸ್ವಾರ್ಥ, ಮೋಹಗಳಿರಬಹುದು. ಆದರೆ ಕನಸು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹಾಸಿಗೆಯನ್ನು ರೂಪಿಸಿಕೋ ಎನ್ನುತ್ತದೆ. ಹಾಗೆಯೇ ನಮ್ಮ ಕನಸಿನ ಹಿಂದಿರುವುದು ನಿಸ್ವಾರ್ಥ ಪ್ರೀತಿ, ಪ್ರಾಮಾಣಿಕ ಪ್ರಯತ್ನ, ಸಾಧನೆಯ ಹಸಿವಷ್ಟೇ ಆಗಿರುತ್ತದೆ. ಆಸೆಯನ್ನು ಪೂರೈಸಿಕೊಂಡವನಿಗೊಂದು ಖುಷಿ ಇರುತ್ತದೆ ಹಾಗೂ ಆ ಖುಷಿ ಕ್ಷಣಿಕ ಮಾತ್ರವೇ ಆಗಿರುತ್ತದೆ. ಆದರೆ ಕನಸನ್ನು ನನಸಾಗಿಸಿಕೊಂಡವನಲ್ಲಿ ಖುಷಿಯ ಜೊತೆಗೊಂದು ಸಂತೃಪ್ತಿಯ ಭಾವವನ್ನೂ ಕಾಣಬಹುದು. ಆಸೆ ಪೂರೈಸಿಕೊಂಡ ಮೇಲಷ್ಟೇ ಖುಷಿ ಕೊಟ್ಟರೆ, ಕನಸು ನನಸಾಗಿಸಿಕೊಳ್ಳುವ ಮಾರ್ಗವೇ ಖುಷಿ ಕೊಡುತ್ತದೆ. ನಮ್ಮ ಕನಸಿನಲ್ಲಿ ಗುರಿಯಿದೆ, ಆದರೆ ಆಸೆಗೆ ಯಾವ ಗುರಿಗಳಿಲ್ಲ. ಆಸೆ ಆಸೆಯಷ್ಟೇ ಆಗಿರುತ್ತದೆ. ನಮ್ಮ ಆಸೆಗಳಿಗೆ ಹಲವು ಮುಖಗಳಿರುತ್ತವೆ. ಆದರೆ ಕನಸಿಗೆ ಒಂದೇ ಮುಖ. ಆಸೆಯನ್ನು ದುಡ್ಡು ಕೊಟ್ಟು ಕೊಳ್ಳಬಹುದು ಹಾಗೆಯೇ ಮಾರಿಕೊಳ್ಳಲೂಬಹುದು. ಆದರೆ ಯಾವ ಕನಸನ್ನೂ ದುಡ್ಡು ಕೊಟ್ಟು ಕೊಳ್ಳಲಾಗದು, ಹಾಗೆಯೇ ಮಾರಿಕೊಳ್ಳಲಾಗದು. ಹಾಗೇನಾದರೂ ಆದಲ್ಲಿ ಅದನ್ನು ಕನಸು ಎಂದು ಹೇಳಲು ಸಾಧ್ಯವಿಲ್ಲ. ಆಸೆಗಳನ್ನಿಟ್ಟುಕೊಂಡವನು ಶೋಕಿಯ ಹಿಂದೆ ಬೀಳಬಹುದು. ಆ ಶೋಕಿಯೇ ಅವನನ್ನು ದಾರಿ ತಪ್ಪಿಸಬಹುದು. ಆದರೆ ಕನಸು ಕಂಡವನು ಪ್ಯಾಶನ್ ಹಿಂದೆ ಬೀಳುತ್ತಾನೆ. ಹಾಗೂ ಆ ಪ್ಯಾಶನ್ ಅವನನ್ನು ಕ್ರಿಯಾಶೀಲನನ್ನಾಗಿಸುತ್ತದೆ. ಆಸೆ ಇಟ್ಟುಕೊಂಡವನು ಬೇರೆಯವರನ್ನು ಅವಲಂಬಿಸಬೇಕಾಗಬಹುದು. ಆದರೆ ಕನಸು ಕಂಡವನು ತನ್ನ ಮೇಲೆ ತಾನು ಹೆಚ್ಚಿನ ನಂಬಿಕೆ ಇರಿಸಿಕೊಳ್ಳುತ್ತಾನೆ. ಬೇರೆಯವರನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವುದರ ಬಗ್ಗೆ ಯೋಚಿಸುತ್ತಾನೆ. ಆಸೆಯ ಹಿಂದೆ ಬಿದ್ದ ಮನಸ್ಸು ಚಂಚಲವಾಗಿರುತ್ತದೆ. ಅದು ಹೆಚ್ಚಾಗಿ ಬಾಹ್ಯ ಸಂಗತಿಗಳ ಆಕರ್ಷಣೆಗೆ ಬೀಳುತ್ತದೆ. ಕನಸಿನ ಹಿಂದಿರುವ ಮನಸ್ಸು ಸ್ಥಿರವಾಗಿದ್ದು ಆಂತರಿಕ ಸಂಗತಿಗಳತ್ತಲೇ ಒಲವು ಬೆಳೆಸಿಕೊಳ್ಳುತ್ತದೆ. ಆಸೆ ಮನಸ್ಸಿನ ತಾಳಕ್ಕೆ ನಮ್ಮನ್ನು ಕುಣಿಸುತ್ತದೆ. ಆದರೆ ಕನಸು ನಮ್ಮ ಮನಸ್ಸನ್ನೇ ನಿರ್ದೇಶಿಸುವ ಕೆಲಸ ಮಾಡುತ್ತದೆ. ಆಸೆ ಬಲೂನಿನ ರೀತಿ ದಿನದಿಂದ ದಿನಕ್ಕೆ ಕಿರಿದಾಗಬಹುದು ಇಲ್ಲವೇ ಟುಸ್ ಆಗಲೂಬಹುದು. ಆದರೆ ಕನಸು ಪ್ಯಾರಾಚೂಟ್ ತರಹ, ಒಂದು ಬಾರಿ ಗಟ್ಟಿಯಾಗಿ ಕೈ ಹಿಡಿದಿದ್ದಲ್ಲಿ ಅದು ನಮ್ಮನ್ನು ಹಕ್ಕಿಯಂತೆ ಹಾರಿಸುತ್ತದೆ. ಕೊನೆಯದಾಗಿ ಆಸೆಗಳು ಹುಟ್ಟಿ ಸಾಯುತ್ತವೆ, ಕನಸು ಹುಟ್ಟುತ್ತದೆ, ಆದರೆ ಸಾಯಲಾರದು. ಹಾಗಾಗಿ ನಾವು ಕಾಣುವ ಕನಸುಗಳಿಗೆ ಕೊನೆಯೆನ್ನುವುದೇ ಇಲ್ಲ. ಅದು ಹೊಸ ಹೊಸ ಕನಸುಗಳಿಗೆ ಸ್ಫೂರ್ತಿಯಾಗಿ ಮತ್ತೆಲ್ಲೋ ತೆರೆದುಕೊಳ್ಳುತ್ತದೆ. ಹೀಗೆ ಆಸೆ ಕನಸುಗಳ ನಡುವೆ ಇಷ್ಟೊಂದು ವ್ಯತ್ಯಾಸಗಳಿದ್ದರೂ ನಮ್ಮೆಲ್ಲಾ ಆಸೆಗಳನ್ನು ಕನಸಾಗಿ ಬದಲಾಯಿಸಿಕೊಳ್ಳಲಾಗದು. ಇಷ್ಟವಾದ ತಿಂಡಿ ತಿನ್ನುವುದು, ಚೆಂದದ ಬಟ್ಟೆಯನ್ನು ಧರಿಸುವುದನ್ನು ಕನಸು ಎಂದು ಹೇಳಲಾಗದು. ಹಾಗೆಯೇ ಕನಸಾಗಿ ಬದಲಾಯಿಸಿಕೊಳ್ಳುವ ಆಸೆಗಳು ಸಾಕಷ್ಟಿವೆ. ಆಸೆಗಳನ್ನು ಕನಸನ್ನಾಗಿ ಕಾಣುವುದರಿಂದ ನಾವು ಯೋಚಿಸುವ ಧಾಟಿ ಬದಲಾಗುತ್ತದೆ. ಅಷ್ಟೇ ಯಾಕೆ ಒಂದು ಕನಸು ಗಟ್ಟಿಯಾಗಿ ನಮ್ಮ ಮನಸ್ಸಿನಲ್ಲಿ ಬೇರೂರಿದರೆ ನಾವು ಯಾವತ್ತೂ ಅದರಿಂದ ಹಿಂದೆ ಸರಿಯಲಾರೆವು. ಕನಸನ್ನು ನನಸು ಮಾಡಿಕೊಳ್ಳಬೇಕೆನ್ನುವ ನಮ್ಮ ಛಲ, ಪ್ರಯತ್ನ, ಶ್ರಮ ಎಲ್ಲವೂ ದಕ್ಷತೆಯಾಗಿ ಬದಲಾಗಿರುತ್ತದೆ. ನನಸಾಗಿಸಿಕೊಳ್ಳುವುದರ ಜೊತೆಗೆ ನಾವೂ ಸಾಕಷ್ಟು ಬೆಳೆದಿರುತ್ತೇವೆ. ಆಸೆಗಳನ್ನು ಕನಸಾಗಿ ಬದಲಾಯಿಸಿಕೊಳ್ಳದಿದ್ದರೂ ಸರಿ, ಕನಸುಗಳನ್ನು ಆಸೆಯಾಗಿಸಿಕೊಳ್ಳಬೇಡಿ. ಹಾಗೆಯೇ ಕನಸನ್ನು ಆಸೆಯಂತೆ ನೋಡಲಿಕ್ಕೂ ಹೋಗಬೇಡಿ. ಯಾಕೆಂದರೆ ನಾವು ಕಾಣುವ ಕನಸಿಗೆ ಒಂದು ತೂಕ ಇದೆ, ಅದಕ್ಕೊಂದು ಬೆಲೆ ಕಟ್ಟಲಾಗದ ಮೌಲ್ಯವಿದೆ. ಆಸೆ ಯಾವತ್ತಿದ್ದರೂ ಹಾರುವ ಚಿಟ್ಟೆಯಂತೆ ಚಂಚಲ. ಆದರೆ ಕನಸು ದೂರದಲ್ಲಿ ಕಾಣುವ ಬೇಟೆಯಿದ್ದಂತೆ. ಅದು ಸ್ಪಷ್ಟ, ನಿಖರ. ಮೇಲಿರುವ ಚಂದ್ರನನ್ನು ಮುಟ್ಟಬೇಕೆನ್ನುವುದು ಆಸೆ, ಆದರೆ ಒಂದಲ್ಲ ಒಂದು ದಿನ ಚಂದ್ರನಿರುವಲ್ಲಿಗೆ ಹೋಗುತ್ತೇನೆ ಎಂದುಕೊಳ್ಳುವುದು ಕನಸು... ಇಷ್ಟೇ ವ್ಯತ್ಯಾಸ.

Related Books