ಅಂಗೈ ಅಗಲದ ಆಕಾಶ

Author : ಎಲ್.ಸಿ. ಸುಮಿತ್ರಾ

Pages 148

₹ 150.00




Year of Publication: 2021
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401
Phone: 9019529494

Synopsys

‘ಅಂಗೈ ಅಗಲದ ಆಕಾಶ’ ಸ್ಮೃತಿ ಚಿತ್ರಗಳು ಲೇಖಕಿ ಎಲ್.ಸಿ. ಸುಮಿತ್ರಾ ಅವರ ಪ್ರಬಂಧ ಸಂಕಲನ. ಈ ಕೃತಿಗೆ ಉಷಾ ಪಿ.ರೈ ಅವರ ಬೆನ್ನುಡಿ ಬರಹವಿದೆ. ಬಾಲ್ಯದ ಅನುಭವಗಳು, ಕಣ್ಣಿಗೆ ಕಟ್ಟುವಂತೆ ಚಿತ್ರೀಸಿದ್ದೀರಿ, ಸುಮಿತ್ರಾ, ನಿಮ್ಮ ಹಳ್ಳಿಯ ಕೃಷಿಯ ಬದುಕಿನ ಪರಿಸರ, ಹೆಣ್ಣಿನ ಕಣ್ಣಿನ ಮೂಲಕ ಚಿತ್ರಿತವಾಗಿದೆ ಎಂದು ಮೆಚ್ಚುಗೆ ಸೂಚಿಸಿದೆ. ಜೊತೆಗೆ ಬಾವಿಯ ಆಳದಿಂದ ನನ್ನದೇ ಅನುಭವ ಅನಿಸಿತು. ಆಗಿನ ಕಾಲದಲ್ಲಿ ಬಾವಿಕಟ್ಟೆ ಅಲ್ಲಿದ್ದ ಒಗೆಯುವ ಕಲ್ಲು, ನೀರು ತುಂಬಿಸಿಡುತ್ತಿದ್ದ ತೊಟ್ಟಿ, ಪಾತ್ರೆ ತೊಳೆಯುತ್ತಿದ್ದ ಜಾಗ, ಅದರ ನೀರು ಹೋಗುವಲ್ಲಿ ಹೂವಿನ ಗಿಡಗಳು, ಬಾವಿ ಕ್ಲೀನ್ ಮಾಡುವಾಗ ಸಿಗುತ್ತಿದ್ದ ಕಳೆದು ಹೋದ ವಸ್ತುಗಳು, ಬಾವಿಕಟ್ಟೆಯ ಎರಡೂ ಬದಿಗಳಲ್ಲಿ ಎರಡು ಮನೆಗಾಗಿ ಹಾಕಿದ್ದ ರಾಟೆಗಳು ನಾನು ನಮ್ಮ ಮನೆಯ ಬಾವಿಗೊಂದು ಸುತ್ತುಹಾಕಿ ಬಂದಂತಾಯಿತು.

ಒಂದು ಕಾಲದ ಜೀವನಶೈಲಿಯ ಜೀವಂತ ಚಿತ್ರಣ ಎಂದಿದ್ದಾರೆ. ಗಾಡಿಯ ಪ್ರಯಾಣ ಓದುತ್ತಾ ನಾವೂ ಅಜ್ಜಿಮನೆಗೆ ಬೆಳ್ತಂಗಡಿಯಿಂದ ನಾವೂರಿಗೆ 7-8 ಮೈಲು ಎತ್ತಿನ ಗಾಡಿ ಪ್ರಯಾಣ ಮಾಡಿದ್ದು, ನೆನಪಾಯಿತು. ಸುಮಿತ್ರಾ ನಿಮ್ಮ ಹತ್ತಿರ ಹಲವಾರು ಹಳೆಯ ಸುಂದರ ನೆನಪುಗಳಿವೆ. ಓದುತ್ತಿದ್ದರೆ ಆ ಕಾಲಕ್ಕೆ ಹೋದ ಹಾಗೆ ಅನ್ನಿಸುತ್ತದೆ. ಅಂಗೈ ಅಗಲದ ಜಾಗ ಲೇಖನ ನಿಮ್ಮ ಜೀವನದೃಷ್ಟಿಯನ್ನು ತಿಳಿಸುತ್ತದೆ ಎಂದು ಕೃತಿಯ ಪ್ರಬಂಧಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

About the Author

ಎಲ್.ಸಿ. ಸುಮಿತ್ರಾ

ಜನಪ್ರಿಯ ಲೇಖಕಿ ಸುಮಿತ್ರ ಎಲ್.ಸಿ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಹಾಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರ ಅವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ನೀಲಗಂಗಾದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ನೀಡಿ ಗೌರಿವಿಸಲಾಗಿದೆ. ...

READ MORE

Reviews

‘ಅಂಗೈ ಅಗಲ ಆಕಾಶ’ ಕೃತಿಯ ವಿಮರ್ಶೆ

ಕವಿ ಕಥೆಗಾರ್ತಿ ವಿಮರ್ಶಕಿ ಡಾ. ಎಲ್. ಸಿ. ಸುಮಿತ್ರಾ ಅವರ ಆತ್ಮಕತೆಯ ಪುಟಗಳಂತಿರುವ ‘ಅಂಗೈ ಅಗಲ ಆಕಾಶ’ ಕೃತಿಯ ಬರಹಗಳಿಗೆ ವೈಯಕ್ತಿಕತೆಯ ಗಂಧವಿದ್ದೂ ಅವು ಸಾರ್ವತ್ರಿಕವಾದ ಪರಿಮಳವನ್ನು ಹೊಂದುವ ಬಗೆ ವಿಶೇಷವಾಗಿದೆ. ಇವರ ಈ ಹಿಂದಿನ ‘ಗದ್ದೆಯಂಚಿನ ದಾರಿ’ಯಲ್ಲಿ ಕೂಡ ಇದೇ ರೀತಿಯ ಗಂಧವನ್ನು ಸೂಸುವಂಥ ಹಲವು ಪ್ರಬಂಧಗಳಿದ್ದವು. ಇವು ಮುಖ್ಯವಾಗಿ ಅನುಭವ ಪ್ರಧಾನ ಬರೆವಣಿಗೆಗಳು. ನೆನಪುಗಳು ಈ ಬರಹಗಳ ಸ್ಥಾಯೀಭಾವಗಳಾಗಿವೆ. ಅವು ನೋವಿನದಾಗಲೀ ನಲಿವಿನದಾಗಲೀ ಒಟ್ಟಾರೆ ನೆನಪುಗಳನ್ನು ಚಿತ್ತಭಿತ್ತಿಯಲ್ಲಿ ತಂದುಕೊಳ್ಳುತ್ತಲೇ ಅವುಗಳಿಗೆ ಹೊಸದೇ ಆದೊಂದು ಆಯಾಮವನ್ನು ದೊರಕಿಸಿಕೊಡುವ ಬರಹಗಳಿವು. ಈ ಕೃತಿಯಲ್ಲಿ ಇಡಿಯಾಗಿ ನಡೆಯುವುದು ಅನುಭವಗಳನ್ನು ಅರಸುತ್ತ ಸಾಗುವ ಪ್ರಕ್ರಿಯೆ, ಹಾಗಾಗಿ ಈ ಬರಹಗಳಿಗೆ ಒಂದು ರೀತಿಯ ಸರಳ ಸುಲಭ ನಿರರ್ಗಳತೆ ಲಭಿಸಿದೆ.

ಓದಿ ಮುಗಿಸಿದ ನಂತರ ಕುವೆಂಪುರವರ ಮಲೆನಾಡಿನಲ್ಲಿ ಒಂದು ಸುತ್ತು ಹೋಗಿ ಬಂದ ವಿಶಿಷ್ಟ ಅನುಭವ ದಕ್ಕುತ್ತದೆ. ಇಲ್ಲಿ ಲೇಖಕಿ ತಮಗೆದುರಾದ ಹಿತವಾದ ಕ್ಷಣಗಳನ್ನಲ್ಲದೇ, ಕಸಿವಿಸಿಗೊಳಗಾಗುವಂತೆ ಮಾಡಿದ ಅನೇಕ ಸಂದರ್ಭವನ್ನೂ ಹಿಡಿಯುತ್ತ ಸಾಗಿದ್ದಾರೆ. ಈ ತರಹದ ಬರೆಹಗಳಲ್ಲಿ ನೆನಪುಗಳು ಬಾಲ್ಯದ ಮನಸ್ಸಿಗೆ ಪ್ರಾಮಾಣಿಕವೂ ಸತ್ಯವೂ ಆಗಿರಬಲ್ಲವು ಆದರೆ ಕಥೆ ಕಾದಂಬರಿಗಳಲ್ಲಿ ಈ ತರಹದ ನೆನಪುಗಳು ಸುಣ್ಣ ಬಣ್ಣ ಬಳಿದುಕೊಂಡು ಬೇರೆಯದೇ ಆಕಾರ ಪಡೆದುಕೊಂಡಿರುತ್ತವೆ. ಇಂಥ ಸ್ಮೃತಿಚಿತ್ರಗಳಲ್ಲಿ ಸತ್ಯದ ಪರಿಧಿಯಿಂದ ಹೊರಹೋಗಲು ಸಾಧ್ಯವಿಲ್ಲ, ಅಂದರೆ ಶುದ್ಧ ನೆನಪುಗಳು ಯಾವಾಗಲೂ ವಾಸ್ತವದಲ್ಲಿ ಜೀವಿಸಿರುತ್ತವೆ ಹಾಗಾಗಿ ಬರೆಯುವಾಗ ನಿರೂಪಕಿಯೂ ವಾಸ್ತವದಲ್ಲೇ ಜೀವಿಸಿರಬೇಕಾಗುತ್ತದೆ, ಕಲ್ಪನೆ ಇಲ್ಲಿ ಕೆಲಸ ಮಾಡದು. ಆಗ ಎಲ್ಲ ಕೋನದಿಂದ ನಿಂತು ನೋಡುವ ಆಯಾಮಗಳು ಕಳೆದುಹೋಗುತ್ತವೆ. ಆದರೆ ಸುಮಿತ್ರಾ ಅವರು ಕೆಲವು ಘಟನೆಗಳನ್ನು ಇಂದಿನ ಸಂದರ್ಭದಲ್ಲಿಟ್ಟು ತೂಗಿ ನೋಡುತ್ತಾರೆ. ಹಾಗಾಗಿ ಸನ್ನಿವೇಶಗಳಿಗೊಂದು ಬೇರೆಯದೇ ಆದ ತೂಕ ಪ್ರಾಪ್ತವಾಗುತ್ತದೆ. ಹೀಗೆ ನೆನಪುಗಳ ಮೆರವಣಿಗೆ ಹೊರಟಾಗ ಕೆಲವೇ ಕೆಲವು ಮಹತ್ವವಾದವುಗಳನ್ನು ಹಿಡಿದು ಜೋಡಿಸುತ್ತ ಆ ಮೆರವಣಿಗೆಗೊಂದು ಅರ್ಥ ತುಂಬುವಂತೆ ಬರೆಯುತ್ತಾರೆ ಲೇಖಕಿ.

ಇಲ್ಲಿ ಹಲವೆಡೆ ಸುಮಿತ್ರಾ ಅವರ ಬಾಲ್ಯ ಕೇವಲ ಅವರದಷ್ಟೇ ಆಗಿ ಉಳಿಯುವುದಿಲ್ಲ, ಲಂಗದ ಕುರಿತಾದ ಬರೆಹವಂತೂ ನಮ್ಮೆಲ್ಲರದೂ ಹೌದು. ‘ಕೇವಲ ಹೆಣ್ಣು ಮಾತ್ರ ಬರೆಯಬಹುದಾದಂತಹ ಬರೆಹ’ ಎಂದ ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಅದನ್ನು ತುಂಬ ಚೆನ್ನಾಗಿ ಹೇಳಿದ್ದಾರೆ. ತೀರ್ಥಹಳ್ಳಿಯ ಹಾಗೂ ಸುತ್ತಲಿನ ಗ್ರಾಮೀಣ ಭಾಗದ ನೆಲದ ಅನೇಕ ಗುಟ್ಟುಗಳನ್ನು ಈ ಕೃತಿ ತೆರೆದಿಡುತ್ತದೆ. ಗ್ರಾಮವು ತನ್ನ ದೇಸೀಯತೆಯ ಸ್ವಭಾವದಿಂದ ಆಚೆ ಬಂದು ನಿಂತಿರುವ ಚಿತ್ರಗಳೂ ಇಲ್ಲಿ ಕಾಣುತ್ತವೆ. ಮತ್ತು ನಾವು ನಮ್ಮ ಕಾಲದ ಹಲವು ಪ್ರಶ್ನೆಗಳಿಗೆ ಹೇಗೆ ಸ್ಪಂದಿಸುತ್ತಿದ್ದೆವು ಎಂಬುದನ್ನು ಕೂಡ ಅಲ್ಲಲ್ಲಿ ಈ ಬರಹಗಳು ಹೇಳುತ್ತವೆ.

ಲಂಗದ ಕಥೆ ಬರಹದಲ್ಲಿ ಲೇಖಕಿ ‘ಲಂಗ ಸ್ವಲ್ಪ ಹಳತಾದಾಗ ನಾನು ಅದನ್ನು ಕಚ್ಚಿ ಕಚ್ಚಿ ತೂತು ಮಾಡಿದ್ದೆ, ಯಾಕೆ ಅಂತ ಗೊತ್ತಿಲ್ಲ, ಚೈಲ್ಡ್ ಸೈಕಾಲಜಿಯಲ್ಲಿ ಉತ್ತರವಿರಬಹುದು’ ಅಂತ ಬರೆಯುತ್ತಾರೆ. ಇದು ತುಂಬ ಮಹತ್ವದ್ದು ಅಂತ ನನಗನಿಸಿತು. ಇದು ಒಂದೊಳ್ಳೆಯ ಕತೆಯ ಎಳೆಗೆ ಜಿಜ್ಞಾಸೆ ಹುಟ್ಟಿಸುವಂಥ ವಿಷಯ. ಅಂತೆಯೇ ಐದನೇ ತರಗತಿಯಲ್ಲಿ ತೊಟ್ಟ ಗಿಡ್ಡಲಂಗವನ್ನು ನೋಡಿದ ಒಬ್ಬ ಸನಾತನವಾದಿಗಳಾದ ಹೆಡ್ಮಾಸ್ಟ್ರು ‘ನೀನು ಕಿರಿಸ್ತಾನಾ?’ ಅಂತ ಕೇಳಿದ ವಿವರಗಳು ನಮ್ಮ ಸಂಸ್ಕೃತಿಯ ಸೂಕ್ಷ್ಮಗಳನ್ನು ದೌರ್ಬಲ್ಯಗಳನ್ನು ಸಹಜ ಭಾಷೆಯಲ್ಲಿ ಅನಾವರಣಗೊಳಿಸಿದೆ. ಅಂಡದೊಳಗೆ ಬ್ರಹ್ಮಾಂಡ ಲೇಖನದಲ್ಲಿ ಕೋಳಿಮರಿಗಳನ್ನು ತನ್ನದೆಂದು ಹೇಳುತ್ತ ಲೇಖಕಿಯೂ ಲೇಖಕಿಯ ತಮ್ಮನೂ ಕೋಳಿಮರಿಗೆ ನುಚ್ಚು ಹಾಕುವಾಗ, ನಮಗಿಷ್ಟದ ಮರಿಗೆ ಸ್ವಲ್ಪ ಹೆಚ್ಚು ನುಚ್ಚು ಹಾಕುತ್ತಿದ್ದರು. ಆದರೆ ಅದು ಬೇಕಷ್ಟೇ ತಿನ್ನುತ್ತಿತ್ತು, ಆಗ ‘ಅದೇನು ಮನುಷ್ಯನೇ, ಅಗತ್ಯಕ್ಕಿಂತ ಜಾಸ್ತಿ ತಿನ್ನಲು?’ ಅಂತ ಲೇಖಕಿ ಕೇಳುತ್ತಾರೆ. ಇಂಥ ಸಾಂದರ್ಭಿಕ ಕಿಡಿಗಳು ಇಲ್ಲಿ ತುಂಬ ಮಹತ್ವದ್ದು ಅಂತ ನನಗನ್ನಿಸಿದೆ,

ತೀರ್ಥಹಳ್ಳಿ, ತುಂಗಾನದಿ ಬಸವಾನಿ ಜೂಶೆಟ್ಟರ ಅಂಗಡಿ, ನಾಲ್ಕೇ ಮನೆಗಳಿರುವ ತವರೂರು ಲಕ್ಷ್ಮೀಪುರ, ಅಜ್ಜಿಯ ಊರು ಬಾಣಂಕಿ, ಸೂಯಾಸ್ತ ನೋಡಲು ಹೋಗುವ ಶೆಟ್ಟಿಗುಡ್ಡದಿಂದ ಹಿಡಿದು, ಇಂದಿನ ಕವಿಶೈಲವಾದ ಅಂದಿನ ಕುಪ್ಪಳ್ಳಿ ಗುಡ್ಡ. ಕುವೆಂಪು ಪದ್ಯ ಬರೆದು ಪ್ರಸಿದ್ಧಿಗೆ ತಂದ ನವಿಲುಕಲ್ಲು ಗುಡ್ಡದ ತನಕ ಹಬ್ಬಿರುವ ಸುಮಿತ್ರಾ ಅವರ ಬರಹಗಳು ಜೀವನೋತ್ಸಾಹ ಮತ್ತು ಅಲ್ಲಲ್ಲಿ ಮಂಡಿಸುವ ಆರೋಗ್ಯಪೂರ್ಣ ಚರ್ಚೆ ಹಿಡಿದು ನಿಲ್ಲಿಸುವಂತಿವೆ. ಕೆಂಡದಲ್ಲಿ ಸುಟ್ಟ ಕಡುಬನ್ನು ಆಡಿಕೊಳ್ಳುವ ಮಂಜಯ್ಯ ಮಾಸ್ಟರ್ ಕುರಿತು ಹೇಳುತ್ತ, ಊಟ-ತಿಂಡಿಯಲ್ಲೂ ಮೇಲು-ಕೀಳು ಬಗೆಯುವ ಮನಸ್ಸಿನ ವಿರುದ್ಧ ತಣ್ಣಗೆ ಸಿಡಿದಿದ್ದಾರೆ. ಆಸಕ್ತಿಯುಳ್ಳವರಿಗೆ ಕಡುಬಿನ ರೆಸಿಪಿಯೂ ಇಲ್ಲಿ ಸವಿವರವಾಗಿ ಸಿಗುತ್ತದೆ.ಲೇಖಕಿಯ ತಂದೆ ಕೆಂಗಲ್ ಜಾತ್ರೆಗೆ ಹೋಗಿ ಎತ್ತುಗಳ ತರುವ ಸಂಗತಿಗಳು, ಎತ್ತಿನ ಗಾಡಿಯಲ್ಲಿ ಅಜ್ಜಿಯ ಮನೆಗೆ ಹೋಗುವ ಸಂಭ್ರಮ, ಅಜ್ಜಿಯ ಜೊತೆ ಸಂಬಂಧಿಗಳ ಮದುವೆಗೆಂದು ತುಂಗಾನದಿ ದಂಡೆಗುಂಟ ನಡೆಸಿದ ಪ್ರಯಾಣ, ಸೀಮೆಯೆಣ್ಣೆ ದೀಪದ ಬೆಳಕಿನಲ್ಲಿ ಭೂತಗಳಂತೆ ಕಾಣಿಸಿ ಭಯಹುಟ್ಟಿಸುವ ನೆರಳು, ಇನ್ನೂ ಹೊಳೆಯುವ ಹಳೆಯ ಕಾಲದ ಬಂಗಾರ ಬಣ್ಣದ ಬೇಗಡೆಯ ಹಳೆಯ ಬಾಸಿಂಗ, ಗೋಡೆಗೆ ಅಂಟಿಸಿದ್ದ ತರಕಾರಿ ಬೀಜಗಳು, ನಿಬ್ ಮೊಂಡಾದರೆ ಹೊಸ ನಿಬ್ ಹಾಕಿಸಿ ಬಳಸುವ ಫೌಂಟನ್ ಪೆನ್ನುಗಳು, ಸಂಕ್ರಮಣದ ಹೊತ್ತಿಗೆ ಎಳೆಯುವ ಸಣ್ಣ ತೇರು, ನೊರೆಬೆಲ್ಲಕ್ಕಾಗಿ ಭೇಟಿಕೊಡುವ ಆಲೆಮನೆ, ಆ ಕಾಲದ ನಮ್ಮ ಗುಡ್ ಗರ್ಲ್‌ ಸಿಂಡ್ರೋಮ್ ಇಂಥವುಗಳೆಲ್ಲವೂ ನಮ್ಮ ವರ್ತಮಾನದೊಂದಿಗೆ ಎಲ್ಲೋ ಒಂದು ಕಡೆ ಸೂಕ್ಷ್ಮ ಭಾವನಾತ್ಮಕ ಸಂಬಂಧವನ್ನು ಸಾಧಿಸುವಂಥದ್ದು.

ಅಂತೆಯೇ ಯುದ್ಧಕ್ಕೆ ಹೊರಡುವಂತಿರುವ ಬಾಲ್ಯದ ಪರೀಕ್ಷೆಗಳ ತಯಾರಿ, ಐದನೇ ತರಗತಿಯಲ್ಲಿ ಬಾಯಿಪಾಠ ಮಾಡಿದ ‘ನಾನು ಪಂಜರದ ಪಕ್ಷಿ ಇನ್ನು ನನಗಾರು ಗತಿ?’ ಹಾಡು, ಪ್ರಾರ್ಥನೆಗೆ ನಿಂತಾಗ ತಲೆ ತಿರುಗಿ ಬೀಳುವ ಶಾಲೆ ಮಕ್ಕಳು, ಬೇಸಿಗೆಯಲ್ಲಿ ಬರುವ ಸೋಮೇಶ್ವರ ದೇವಾಲಯದ ರಥೋತ್ಸವ, ಸ್ವತಂತ್ರ ದಿನಾಚರಣೆಗೆ ಭಾಷಣ ಮಾಡಲು ಬರುವ ಸ್ಥಳೀಯ ರಾಜಕಾರಣಿಗಳು, ಔಷಧಿಯೋ ಇನ್ನೇನೋ ಅಗತ್ಯ ವಸ್ತುಗಳ ತಂದು ಕೊಡುವ ಶಿವಮೊಗ್ಗ ಬಸ್ ಡ್ರೈವರ್, ಇಡೀ ಊರಲ್ಲಿ ಒಂದೇ ಇದ್ದ ಅನಂತಮೂರ್ತಿ ಅಣ್ಣ ಎಂಬುವವರ ಏಕಮಾತ್ರ ಜೀಪು, ಒಂದನೇ ತರಗತಿಯಲ್ಲಿ ನೋಡಿದ ರಾಜಾ ವಿಕ್ರಮಾದಿತ್ಯ ನಾಟಕ, ವೀಕ್ಷಿಸಿದ ರಾಜಕುಮಾರ ಭಾರತಿ ಸಿನೆಮಾಗಳು, ದುರ್ವಾಸರಂಥ ಮೇಷ್ಟ್ರ ಬೈಗುಳಗಳು, ಹೂವಿನ ಚವನ್ ಜೊತೆಗಿದ್ದ ಬಾಲ್ಯದ ಕ್ಷಣಗಳ ಸ್ಮೃತಿಗಳು ಭಾಷೆಯಾಗಿ ಮೈಮನ ಹೊದ್ದು ಬರಹವಾಗಿ ಒಡಮೂಡಿವೆ.

ಅಂಗೈ ಅಗಲದ ಜಾಗೆಯಲ್ಲಿ ಹಚ್ಚಿಕೊಂಡ ಸಸ್ಯ ಸಂಪತ್ತುಗಳಲ್ಲೇ ಗೂಡು ಕಟ್ಟುವ ಸೂರಕ್ಕಿಗಳು, ಭತ್ತದ ಗದ್ದೆಗಳು ಅಡಿಕೆ ತೋಟಗಳಾದ ಬದಲಾದ ಸ್ಥಿತಿಗಳು, ಇಂದಿನ ಮಕ್ಕಳು ಚಿತ್ರದಲ್ಲಿ ನೋಡಬೇಕಾದ ಬುಲ್ಲೋಕ್ ಕಾರ್ಟ್‌, ಮರದ ರಾಟೆ ಇದ್ದ ಬಾವಿ ನೀರಿನ ಸಿಹಿಯಾದ ರುಚಿ, ರಾಟೆಗೆ ಎಣ್ಣೆ ಹಾಕದಿದ್ದರೆ ಅದು ಕೂಗುವ ಕಿರ್ರೋ ಸದ್ದು, ಬಾವಿಯ ಮೇಲೆ ಹೊದಿಸಿದ ಹೆಂಚಿನ ಚಾವಣಿಯ ಚಿತ್ರಗಳು ಹೀಗೆ ಓದಿನುದ್ದಕ್ಕೂ ಕಣ್ಣು ತುಂಬುತ್ತ ಸಾಗುತ್ತವೆ. ಯಾವುದೇ ದೊಡ್ಡ ಊರುಗಳ ಪ್ರವೇಶಕ್ಕೆ ಮುನ್ನವೇ ಸ್ವಾಗತಿಸುವ ಕಸದ ರಾಶಿ ಮತ್ತು ಇಂದು ಕೆಸರಲ್ಲಿ ಹೂತು ಹೋದ ಕಾಫಿ ತೋಟದ ಮಲೆನಾಡಿನಲ್ಲಿ ಒಂದು ಅಪ್ಪಟ ದೇಸೀತನವನ್ನು ಹೊದ್ದುಕೊಂಡ ಊರು ಆಧುನಿಕ ಪ್ರಪಂಚದತ್ತ ಪಲ್ಲಟಗೊಂಡ ಸ್ಥಿತಿಯನ್ನು ಹೇಳುತ್ತದೆ. ಬದಲಾವಣೆಯೆಂಬುದು ಕಾಲಕ್ಕೆ ಬಿಟ್ಟ ಸಂಗತಿ. ಇದು ಇಡೀ ಭಾರತದ ಪಲ್ಲಟವನ್ನು ಪ್ರತಿನಿಧಿಸುವಂಥದ್ದು. ಕೆಲವು ಬರೆಹಗಳಲ್ಲಿ ಅಲ್ಲಲ್ಲಿ ಬಂಡವಾಳಶಾಹಿ, ಮೂಲಭೂತವಾದ ಮತ್ತು ಯಥಾಸ್ಥಿತಿವಾದಿಗಳ ಕುರಿತಾಗಿ ಕಾಣುವ ಅಸಹನೆ ಅಂಥದೇ ಒಂದು ಆರೋಗ್ಯಪೂರ್ಣ ಚಿಂತನೆಗೆ ಮುಕ್ತವಾಗಿ ತೆರೆದುಕೊಳ್ಳುತ್ತದೆ.

ಬಿಸಿನೀರಿನ ಹಂಡೆ ಖಾಲಿ ಮಾಡುವ ತಮ್ಮಂದಿರು, ಟೈಗರ್ ನಾಯಿಗೆ ಹುಚ್ಚು ಕೆರಳಿದಾಗ ಅಜ್ಜ ಅದನ್ನು ಗುಂಡು ಹೊಡೆದು ಸಾಯಿಸಿದ ಸದ್ದು, ಬಾಲ್ಯದಲ್ಲಿ ನರ್ತಿಸಿದ ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಈ ಎಲ್ಲ ಹರಿತ ನೆನಪುಗಳು, ಇಂದು ಪಾಠ ಮಾಡಲು ಸಹಾಯವಾದ ಯಾರೋ ಮಾಡಿದ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಟಿಪ್ಪಣಿ, ರಿಟೈರ್ ಆದವರು ಫ್ರೀ ಆಗಿ ಸಿಗುತ್ತಾರೆ ಎಂಬ ಜನಮಾನಸದ ಭಾವಗಳು, ಬಾಲ್ಯವನ್ನು ಧುತ್ತನೆ ಎದುರು ತಂದು ನಿಲ್ಲಿಸುವ ಗ್ರಿಮ್ ಸಹೋದರರ ಕತೆಗಳು, ಮೈಸೂರಿನ ಮಾನಸಗಂಗೋತ್ರಿಯ ಆಕರ್ಷಕ ಗ್ರಂಥಾಲಯ, ನಾಲ್ಕು ಪುಸ್ತಕಗಳು ಇದ್ದರೆ ಮನುಷ್ಯರ್ಯಾರೂ ಇಲ್ಲದೇ ಕಾಡಿನಲ್ಲಿ ಬೇಕಾದರೂ ಇರಬಹುದು ಎಂಬ ಮನಸ್ಥಿತಿ, ಬಿಸಿಲಿಲ್ಲದೇ ಸೋಲಾರ್ ನೀರು ತಣ್ಣಗಾಗಿಸಿದ ಮಳೆಗಾಲ, ಗೊಬ್ಬರದ ಗುಂಡಿಗಳಲ್ಲಿ ಸುಮ್ಮನೆ ಕೊಳೆಯುವ ಅಂದಿನ ಕಸಗಳು, ಪರಿಸರಕ್ಕೆ ಹನಿಯಾಗಿಸಿವ ಪ್ಲಾಸ್ಟಿಕ್‌ಮಯವಾದ ಇಂದಿನ ಕಸಗಳು, ಫೋನ್ ಪುರಾಣದಲ್ಲಿ ಪಟ್ಟಿ ಮಾಡಿದ ಪುರುಷ ಪ್ರಧಾನ ವ್ಯವಸ್ಥೆಯ ವ್ಯಂಗ್ಯಗಳು, ಪಯಣದ ಹಾದಿಯ ಬಸ್ಸಿನಲ್ಲಿ ಮರೆತ ನಂಜನಗೂಡು ರಸಬಾಳೆ ಹಣ್ಣು, ಹೀಗೆ ತೆರೆದುಕೊಳ್ಳುವ ಭಾವಪೂರ್ಣ ನುಡಿಚಿತ್ರಗಳು ಬದುಕಿನ ಹಲವಾರು ಮಗ್ಗಲುಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿವೆ.

ಹಾಗೆಯೇ ದನಗಳಿಗೆ ಪ್ರಿಯವಾದ ಅತ್ತಿಹಣ್ಣುಗಳು, ಪ್ಲಾಸ್ಟಿಕ್ ಹೂವಿನಂತೆ ಕಾಣುವ ಹೂಗಳ ಬಿಡುತ್ತಿದ್ದ ಅಣ್ಣೆಸೊಪ್ಪಿನ ಗಿಡಗಳು, ಆಮ್ರದ ಗಿಡದ ಸನಿಹವಿದ್ದ ಕೂರುಕಲ್ ಕಟ್ಟನೆಯ ಮೇಲೆ ಕೂತು ಆಡಿದ ಆಟ ಮತ್ತು ಜಗಳಗಳು, ಅವರ ಜಾಗ ಇವರ ಜಾಗ ಎಂಬ ವ್ಯತ್ಯಾಸ ಗೊತ್ತಾಗದ ಬಾಲ್ಯದ ಆ ಪರಿಶುದ್ಧ ಮನಸ್ಥಿತಿ, ಕಣದ ಉಣುಗೋಲನ್ನು ಸಿಕ್ಕಿಸಲು ಸಹಾಯವಾಗುವ ಅಮಟೆ ಮರ ಹಳೆಯ ರಂಜೆ ಮರದ ಪೊಟರೆ, ಪ್ರಾಥಮಿಕ ಶಾಲೆಯ ಬಳಿಯಿದ್ದ ಬೃಹತ್ ಸುರಗಿ ಹೂವಿನ ಮರಗಳು, ದಟ್ಟವಾದ ನೆರಳನ್ನು ಕೊಡದ ತಾರೆಮರ, ಆಕರ್ಷಕ ನೆನಪುಗಳನ್ನು ಕೊಡುವ ಶಾಲೆಯ ಕೊಠಡಿಯ ಮುಂದೆ ಇರುವ ಅಂಜೂರದ ಮರ, ಕೊಟ್ಟಿಗೆ ಪಕ್ಕದಲ್ಲಿದ್ದ ಬಾಳೆಗೂಡು ಹೀಗೆ ಬಾಲ್ಯದ ಸಖಿಯರಂತೆ ಇರುವ ಈ ಎಲ್ಲ ಮರಗಳ ಜಗತ್ತಿನ ನೆನಪುಗಳು ಸುಮಿತ್ರಾ ಅವರ ಎಂದಿನ ಪರಿಸರ ಪ್ರೇಮವನ್ನು ಹಿಡಿದಿಡುತ್ತದೆ.

ಗ್ರಾಮೀಣ ಭಾಗದ ನಂಬಿಕೆ, ಆಚರಣೆಗಳ ಮೂಲಕ ಅಂದಿನ ಜನಜೀವನವನ್ನೂ ಸುಮಿತ್ರ ಕಟ್ಟಿಕೊಡುತ್ತಾರೆ, ಹೀಗೆ ಇಲ್ಲಿ ಎಲ್ಲ ಬಗೆಯ ಬರಹಗಳ ಮಾದರಿಗಳೂ ನಮಗೆ ಓದಲು ಸಿಗುತ್ತವೆ, ಈ ಕೃತಿಯನ್ನು ಓದುತ್ತ ಹೋದಂತೆ ಲೇಖಕಿಯ ಆಸಕ್ತಿಗಳೇನು ಎಂಬುದು ಅರಿವಿಗೆ ಬರುತ್ತ ಹೋಗುತ್ತದೆ, ಇಂಥ ಸ್ಮೃತಿಚಿತ್ರಗಳು ಆಸಕ್ತಿದಾಯಕವಾಗಿದ್ದು ಸರಳ ಬರಹಗಳ ರೂಪದಲ್ಲಿ ಓದಿನ ಪ್ರೀತಿಯನ್ನು ಹೆಚ್ಚಿಸುವಂಥವು. ಲೇಖಕರಲ್ಲಿ ಸೃಜನಶೀಲತೆ ಹೇಗೆ ಕಾಣಿಸಿಕೊಳ್ಳುತ್ತವೆ ಎನ್ನುವ ಕುರಿತು ರೈಡ್ ಎಂಬ ವಿಮರ್ಶಕ ‘ಮೊದಲು ಅನುಭವ, ನಂತರ ಅದರ ನೆನಪು, ಆನಂತರ ನೆನಪಿನಿಂದ ಉಂಟಾಗುವ ಪುನರ್ ಅನುಭವ’ ಅನ್ನುತ್ತಾನೆ. ನೆನಪಿನಿಂದ ಉಂಟಾಗುವ ಪುನರ್ ಅನುಭವಗಳ ಸಂಯೋಜನೆಯಲ್ಲಿ ಲೇಖಕರ ಓದು ಮತ್ತು ವಾದಗಳು ಹೆಚ್ಚಿನ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಸುಮಿತ್ರಾ ಬರಹಗಳು ಹಾಗೊಂದು ಮುಕ್ತ ಅನುಭವಲೋಕದಲ್ಲಿ ಉಂಟಾಗುವ ಪುನರ್ ಅನುಭವದ ಸೃಷ್ಟಿಯಾಗಿದೆ. ಹಾಗಾಗಿ ಈ ಬರಹಗಳನ್ನು ನಾವು ಎಲ್ಲಿಂದ ಬೇಕಾದರೂ ಓದಲು ಆರಂಭಿಸಬಹುದು.

ಬಾಲ್ಯದ ನೆನಪುಗಳ ಜಗತ್ತೆಂದರೆ ಅದು ಸಹಜ ಬಣ್ಣಗಳ ಲೋಕ, ಎಷ್ಟು ಕಾಲ ಸವೆದರೂ ಅದರ ಬಣ್ಣಗಳು ಮಾತ್ರ ಮಾಸಲಾರವು. ಮತ್ತವು ಅಷ್ಟೇ ನಿಷ್ಕಲ್ಮಶ ಬಣ್ಣಗಳು. ನಮ್ಮ ವರ್ತನೆಗಳು ಮಾತುಗಳು ಸಂದರ್ಭಗಳು ಘಟನೆಗಳು ತುಂಬ ಜಟಿಲವಾಗಿಲ್ಲದಿದ್ದರೂ ಅವು ಹಲವಾರು ಕತೆಗಳನ್ನು ಖಂಡಿತ ಹೇಳುತ್ತಿರುತ್ತವೆ. ಅಂಥ ಕತೆಯಲ್ಲದ ಕತೆಗಳನ್ನು ಮಲೆನಾಡಿನ ಕಾಡಿನಲ್ಲಿ ಹಸಿರುಕ್ಕಿದ ಹಾಗೆ ಬರೆಯುತ್ತಾರೆ ಸುಮಿತ್ರಾ. ಹಾಗೆ ಬಾಲ್ಯದಲ್ಲಿ ಸಂದು ಹೋದ ಸ್ಮೃತಿಗಳು ಎಂದೂ ಮುಗಿದು ಹೋಗುವಂಥದ್ದಲ್ಲ. ಕನ್ನಡ ಸ್ಮೃತಿಚಿತ್ರಗಳ ಲೋಕಕ್ಕೆ ಇದೊಂದು ಹೊಸ ಸೇರ್ಪಡೆ. ಒಟ್ಟಾರೆಯಾಗಿ ನಮ್ಮ ಕಾಲದ ಗ್ರಾಮೀಣ ಬದುಕಿನ ವಾತಾವರಣವನ್ನು ಕಟ್ಟಿಕೊಟ್ಟ ಲೇಖಕಿಗೆ ಒಂದು ಪ್ರೀತಿಯ ನಮಸ್ಕಾರ. ಇದೊಂದು ವಿಶಿಷ್ಟ ಅನುಭವಗಳ ಮೊತ್ತ. ಇದು ಹೇಗಿದೆಯೆಂದರೆ ಪದಾರ್ಥ ಕುದಿಯುವಾಗ ಅದರ ರುಚಿಯನ್ನು ಒಂದೆರಡೇ ಹನಿ ಅಂಗೈಯಲ್ಲಿ ಹಾಕಿಕೊಂಡು ಸವಿದಂತೆ, ಪೂರ್ತಿ ಪದಾರ್ಥದ ರುಚಿಯನ್ನು ಸುಮಿತ್ರಾ ಆದಷ್ಟು ಬೇಗ ಉಣಬಡಿಸಲಿ ಎಂದು ಹಾರೈಸುವೆ.

(ಕೃಪೆ : ಕೆಂಡಸಂಪಿಗೆ, ಬರಹ : ಸುನಂದಾ ಪ್ರಕಾಶ ಕಡಮೆ)

‘ಅಂಗೈ ಅಗಲದ ಆಕಾಶ’ ಕೆಂಡಸಂಪಿಗೆ

Related Books