ಅಂತರಂಗ-ಬಹಿರಂಗ

Author : ಹಸನ್ ನಯೀಂ ಸುರಕೋಡ

Pages 248

₹ 150.00




Year of Publication: 2018
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560171
Phone: 195 - 23183311, 23183312

Synopsys

ಸಮಾಜವಾದಿ, ಚಿಂತಕ, ಹೋರಾಟಗಾರ ಕಿಷನ್ ಪಟ್ನಾಯಕ್ ಅವರ ಜೀವನ ಚಿತ್ರವನ್ನು ಅಶೋಕ ಸೆಕಸರಿಯಾ ಮತ್ತು ಸಂಜಯ ಭಾರತಿ ಅವರು ಸಂಪಾದಿಸಿದ್ದಾರೆ. ಇದನ್ನು ಕನ್ನಡಕ್ಕೆ ’ಅಂತರಂಗ ಬಹಿರಂಗ’ ಎಂಬ ಶೀರ್ಷಿಕೆಯಡಿ ಲೇಖಕ ಹಸನ್ ನಯೀಂ ಸುರಕೋಡ ತಂದಿದ್ದಾರೆ.

ಕಿಷನ್ ಅವರ ಶೈಕ್ಷಣಿಕ ಹಿನ್ನೆಲೆ, ಸಮಾಜವಾದಿ ವ್ಯಕ್ತಿತ್ವ, ರಾಜಕೀಯತೆಯ ಒಲವು, ಲೋಹಿಯಾ ಅವರ ಮಾರ್ಗದರ್ಶನ , ಸಾಹಿತ್ಯಾಸಕ್ತಿ, ಬದುಕು ಬರಹಗಳ ಕುರಿತಾದ ವಿವರಣೆಯನ್ನು ’ಅಂತರಂಗ ಬಹಿರಂಗ’ ಕೃತಿ ಒಳಗೊಂಡಿದೆ. ಮತ್ತು ಕಿಷನ್ ಅವರ ಮೂರು ಕವಿತೆಗಳ ಅನುವಾದವನ್ನೂ ಈ ಪುಸ್ತಕದಲ್ಲಿ ಸೇರಿಸಲಾಗಿದೆ.

ಕಿಷನ್ ಪಟ್ನಾಯಕ್ ಅವರ ಸಮಾಜವಾದಿ ಪರಿಕಲ್ಪನೆಗಳು, ಕಾರ್ಯ ಚಟುವಟಿಕೆಗಳು, ಬದುಕು ಹೋರಾಟಗಳ ಚಿತ್ರಣವನ್ನು ಓದುಗರಿಗೆ ಈ ಕೃತಿಯ ಮೂಲಕ ಲೇಖಕರು ಪರಿಚಯಿಸಿದ್ಧಾರೆ.

About the Author

ಹಸನ್ ನಯೀಂ ಸುರಕೋಡ

ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...

READ MORE

Reviews

ಅಪರೂಪದ ಸಮಾಜವಾದಿಯೊಬ್ಬರ ಸ್ಥೂಲ ಜೀವನ ಚಿತ್ರ

ಕರ್ನಾಟಕದಲ್ಲಿನ ಸಮಾಜವಾದಿ ಚಳುವಳಿಯ ಪರಿಚಯವಿರುವವರಿಗೆ ಕಿಷನ್ ಪಟ್ನಾಯಕ್ ಅಪರಿಚಿತರೇನಲ್ಲ. ಲೋಹಿಯಾ ಸಾವಿನ ನಂತರ ಸಮಾಜವಾದಿ ಪಕ್ಷದ ಗುಂಪುಗಾರಿಕೆಯಿಂದ ಬೇಸತ್ತು 'ಲೋಹಿಯಾ ವಿಚಾರ ಮಂಚ್' ಸ್ಥಾಪನೆಯ ಮೂಲಕ ಸಮಾಜವಾದಿ ವಿಚಾರಗಳನ್ನು ರಾಷ್ಟ್ರಾದ್ಯಂತ ಯುವಜನರ ಮಧ್ಯೆ ಹರಡಲು ಪ್ರಯತ್ನ ಮಾಡಿದ ನಾಯಕರಿವರು. ಈ ಪ್ರಯತ್ನದ ಭಾಗವಾಗಿಯೇ ಅವರು ಕರ್ನಾಟಕದ ಪಕೇತರ ಸಮಾಜವಾದಿಗಳೊಂದಿಗೆ, ವಿಶೇಷವಾಗಿ ಲಂಕೇಶ್, ತೇಜಸ್ವಿ, ಮಹಾದೇವ ಚರಿತ್ರೆ ಮಾಲೆ ಮುಂತಾದ ಲೇಖಕ-ಕಲಾವಿದರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಇಲ್ಲಿ `ಸಮಾಜವಾದಿ ಯುವಜನ ಸಭಾ'ದ ಚಟುವಟಿಕೆಗಳಿಗೆ ಸ್ಫೂರ್ತಿಯೂ ಆಗಿದ್ದವರು. ನಂತರದಲ್ಲಿ ಅವರು ಕರ್ನಾಟಕ ರೈತ ಮತ್ತು ದಲಿತ ಚಳುವಳಿಗಳಲ್ಲದೆ ರಾಷ್ಟ್ರಾದ್ಯಂತ ನಡೆದಿದ್ದ ಇತರ ಹಲವು ಜನಪರ ಚಳುವಳಿಗಳನ್ನು ಒಂದು ಸಮಾಜವಾದಿ ಕೇಂದ್ರಕ್ಕೆ ತರಲು ಯತ್ನಿಸಿದವರು.  ಆ ಪ್ರಯತ್ನದ ಮಧ್ಯೆಯೇ ಅಸು ನೀಗಿದವರು.

ಮೂಲತಃ ಒರಿಸ್ಸಾದವರಾದ ಕಿಷನ್ ಪ್ರಾಧ್ಯಾಪಕ ಮತ್ತು ಕವಿ ಆಗುವ ಎಂ.ಎ. ಓದಲು ಹೋಗಿ, ಆಕಸ್ಮಿಕವೆಂಬಂತೆ ಸಮಾಜವಾದಿ ರಾಜಕಾರಣಕ್ಕೆ ಒಲಿದು, ಅಲ್ಲದೆ ಪಿ. ಮೊದಲ ಪ್ರಯತ್ನದಲ್ಲೇ (೧೯೬೨) ಲೋಕಸಭಾ ಸದಸ್ಯರಾದದ್ದು ಒಂದು ಕುತೂಹಲಕಾರಿ ಕಥನವೇ ಆಗಿದೆ. ಮೂರನೇ ಲೋಕಸಭೆಯ ಅತ್ಯಂತ ಚಿಕ್ಕವಯಸ್ಸಿನ ಸದಸ್ಯರಾದ ಇವರು ತಮ್ಮ ನಾಯಕ ಲೋಹಿಯಾ ಅವರ ಮಾರ್ಗದರ್ಶನದಲ್ಲಿ  ಸೂಕ್ಷ್ಮ ಅಧ್ಯಯನ ಶೀಲತೆಯ ಮೂಲಕ ಹಲವು ವಿಷಯಗಳಲ್ಲಿ ಸರ್ಕಾರವನ್ನು, ನಿರ್ದಿಷ್ಟವಾಗಿ ಪ್ರಧಾನ ಮಂತ್ರಿ ನೆಹರೂ ಅವರನ್ನು ಅವರು ತಮ್ಮ ಜನಪ್ರಿಯತೆಯ  ಉತ್ತುಂಗದಲ್ಲಿದ್ದ ಆ ಕಾಲದಲ್ಲಿ-ಮುಖಾಮುಖಿಯಾದ ಬಗೆ ಬೆರಗು ಹುಟ್ಟಿಸುವಂತಿದೆ. ಈ ಸಂಬಂಧದ ಕಿಷನ್ ಅವರ ನೆನಪುಗಳು ಮತ್ತು ದಾಖಲೆಗಳು, ಅವರ ಕೆಲವು ಪತ್ರಗಳು ಹಾಗೂ ಅವರನ್ನು ಕುರಿತು ಪತ್ನಿ ವಾಣಿ ಮತ್ತು ಆತ್ಮೀಯ ಶಿಷ್ಯ ಅರವಿಂದ ಮೋಹನ್ ಬರೆದ ಲೇಖನಗಳಲ್ಲಿದೆ. ಕಿಷನ್ ಅವರ ಆಯ್ದ ಮೂರು ಕವಿತೆಗಳ ರಾಜಕ ಅನುವಾದವೂ ಈ ಪುಸ್ತಕದಲ್ಲಿ ಸಂಗ್ರಹಿತವಾಗಿವೆ.

ಇವುಗಳಲ್ಲಿ ಕಿಷನ್ ಅವರ ವ್ಯಕ್ತಿತ್ವವನ್ನು ಬಹು ಪರಿಣಾಮಕಾರಿಯಾಗಿ ಅರವಿಂದ ಮೋಹನ್ ಅವರ ಪುಟ್ಟ ಬರಹವೇ ಹೊರತು ಅವರ ನೆನಪುಗಳ ದಾಖಲೆಯಲ್ಲ.  ಕಾರಣ, ಈ ನೆನಪುಗಳು ಯಾವುದೇ ಕಾಲಾನುಕ್ರಮಣಿಕೆಯಿಲ್ಲದೆ ಅಸ್ತವ್ಯಸ್ತವಾಗಿರುವುದರ ಜೊತೆಗೆ ಅವರ ಆಕಸ್ಮಿಕ ಸಾವಿನಿಂದಾಗಿ ಅಪೂರ್ಣವಾಗಿ ಉಳಿದಿರುವುದು. ಅಲ್ಲದೆ ಇವುಗಳ ಕನ್ನಡಾನುವಾದ ಕೂಡ ಹಲವೆಡೆ ಪದಶಃ ಮತ್ತು ಕೆಲವೆಡೆ ಅಸಂಬಂದ್ಧವಾಗಿದ್ದು ಓದುಗರನ್ನು ಕಂಗೆಡಿಸುವಂತಿದೆ. ಇದೇ ಮಾತನ್ನು ಕಿಷನ್ ಕವಿತೆಗಳ ಅನುವಾದದ ಬಗ್ಗೆ ಸಹ ಹೇಳಬಹುದು. ಅನುವಾದಕರಿಗೆ ಯಾವುದೇ ವಾಕ್ಯ ಅಥವಾ ವಾಕ್ಯ ಸಂದರ್ಭ ಅರ್ಥವಾಗದಿದ್ದರೆ ಅದನ್ನು ಮಕ್ಕಿಕಾಮಕ್ಕಿ ಅನುವಾದಿಸಲು ಹೋಗದೆ ಆ  ಭಾಗವನ್ನು ಕೈ ಬಿಡುವುದೇ ಒಳ್ಳೆಯದೇನೋ. ಆದರೆ ಅರವಿಂದ ಮೋಹನ್ ಅವರ ಲೇಖನ ಅಚ್ಚುಕಟ್ಟಾಗಿ ಅನುವಾದಿತವಾಗಿದ್ದು, ಕಿಷನ್ ಅವರ ಪೂರ್ಣ ಜೀವತಾವಧಿಯ ಸಾಧನೆಗಳನ್ನು ಸಮಗ್ರವಾಗಿ ನಿರೂಪಿಸುತ್ತಾ, ಕಿಷನ್ ನೆನಪು ಇಂದು ಏಕೆ ನಮಗೆ ಮುಖ್ಯ ಎಂಬುದನ್ನು ಮನಗಾಣಿಸುವಂತಿದೆ.

ಈ ದೌರ್ಬಲ್ಯಗಳ ಮಧ್ಯೆಯೂ ಈ ಪುಸ್ತಕ ಭಾರತದ ಸಮಾಜವಾದಿ ಚಳುವಳಿ ತನ್ನೆಲ್ಲ ತಾತ್ವಿಕ ಶಕ್ತಿ-ಸೌಂದರ್ಯಗಳ ಹೊರತಾಗಿಯೂ ಏಕೆ ಒಂದು ರಾಜಕೀಯ ಶಕ್ತಿಯಾಗಿ ಉಳಿಯಲಾರದೇ ಹೋಯಿತು ಎಂಬ ಪ್ರಶ್ನೆಗೆ ಸೂಚ್ಯವಾಗಿಯಾದರೂ ಉತ್ತರಗಳನ್ನು ನೀಡುತ್ತದೆ. ಹಾಗೇ ಪರೋಕ್ಷವಾಗಿ, ಮುಂದೆ ಸಮಾಜವಾದಿ ರಾಜಕಾರಣವನ್ನು ಕಟ್ಟಬಯಸುವವರಿಗೆ ಕೆಲವು ಎಚ್ಚರಿಕೆಗಳನ್ನೂ ನೀಡುತ್ತದೆ.

-ಡಿಎಸ್ಸೆನ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮಾರ್ಚ್ 2019)

Related Books