ಅಪೂರ್ವ ಒಡನಾಟ

Author : ಎಚ್.ಎಸ್. ಸತ್ಯನಾರಾಯಣ

Pages 246

₹ 178.00




Year of Publication: 2020
Published by: ಕಣ್ವ ಪ್ರಕಾಶನ
Address: ‘ಕಾಲ ಕನಸು’, ನಂ-894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರಾಲೇಔಟ್, ಬೆಂಗಳೂರು- 560072
Phone: 9845052481

Synopsys

‘ಅಪೂರ್ವ ಒಡನಾಟ’ ಲೇಖಕ ಎಚ್.ಎಸ್. ಸತ್ಯನಾರಾಯಣ ಅವರ ಕವಿಸಮಯ-ಅಂಕಣ ಬರಹಗಳ ಸಂಕಲನ. ಕನ್ನಡದ ಪ್ರಾತಃಸ್ಮರಣೀಯರ ಬಗ್ಗೆ ಪ್ರಾಸಂಗಿಕವಾಗಿ ಹಾಗೂ ಅಷ್ಟೇ ಅಧಿಕೃತವಾಗಿ ಮಾತನಾಡುವವರಲ್ಲಿ ಸತ್ಯ ನಾರಾಯಣ ಅವರದು ಎತ್ತಿದ ಕೈ. ಕುವೆಂಪು, ತೇಜಸ್ವಿ, ರಾಜರತ್ನಂ, ಕೈಲಾಸಂ ಬಗ್ಗೆ ಹೀಗೆ ಹಿರಿಯರೆಲ್ಲರ ಬರೆಹ ಮತ್ತು ಬದುಕಿನ ಬಗ್ಗೆ ಅತ್ಯಂತ ನಿಖರವಾಗಿ ಹಾಗೂ ಆಪ್ತವಾಗಿ ಮಾತನಾಡಬಲ್ಲ ಸತ್ಯನಾರಾಯಣ ಅವರು ಗಂಟೆಗಳ ಕಾಲದ ಹತ್ತಾರು ಭಾಷಣಗಳನ್ನೂ ಫೇಸ್ ಬುಕ್ ಲೈವ್ ನಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅಷ್ಟಾದರೂ ಎಲ್ಲಿಯೂ ವಿಷಯದ ಕೇಂದ್ರದಿಂದ ಒಂದಿಂಚೂ ಆಚೀಚೆ ಹೋಗದಷ್ಟು ನಿಖರತೆ ಸಾಧಿಸಿದ್ದಾರೆ. ಇದೇ ಹಿನ್ನೆಯಲ್ಲಿ ಕವಿಸಮಯ ಎಂಬ ಮಾಲೆಯಲ್ಲಿ ತಮ್ಮ ಹಾಗೂ ಸಾಹಿತಿಗಳ ಒಡನಾಟದ ಬಗ್ಗೆ ಅವರು ಬರೆದ ಲೇಖನಗಳನ್ನು ಸಂಕಲನ ಮಾಡಿ ಈ ಕೃತಿಯಲ್ಲಿ ನೀಡಲಾಗಿದೆ.

About the Author

ಎಚ್.ಎಸ್. ಸತ್ಯನಾರಾಯಣ

ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಅನೇಕ ಸಾಹಿತಿಗಳೊಂದಿಗೆ ಒಡನಾಡಿದ್ದಾರೆ. ಆ ಬಗ್ಗೆ ಅತ್ಯಂತ ಆಕರ್ಷಕವಾಗಿ ಮಾತನಾಡುವ ಅವರು ಅಷ್ಟೇ ಆಕರ್ಷಕವಾಗಿ ಬರೆಯುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ...

READ MORE

Reviews

ಅಪೂರ್ವ ಒಟನಾಟ ಕೃತಿಯ ವಿಮರ್ಶೆ- ಹೊಸ ಮನುಷ್ಯ

ಈ ಪುಸ್ತಕ ಬೇಂದ್ರೆ-ಕುವೆಂಪು ಅವರಿಂದ ಹಿಡಿದು ಅಪೂರ್ವ ಕುಂವೀ-ಡುಂಡಿರಾಜರ ವರೆಗೆ 15 ಜನ ಸಾಹಿತಿಗಳೊಂದಿಗೆ ಲೇಖಕರು ಒಡನಾಡಿದ ಅನುಭವದ ನಿರೂಪಣೆಗಳನ್ನೊಳಗೊಂಡಿದೆ. ಇವೆಲ್ಲವು “ಕವಿಸಮಯ” ಎಂಬ ಫೇಸ್ ಬುಕ್ ಅಂಕಣದಲ್ಲಿ ಪ್ರಕಟವಾದವುಗಳಂತೆ. ಸಾಹಿತಿಗಳ ಜೊತೆಗಿನ ಸತ್ಯನಾರಾಯಣರ ಒಡನಾಟ ಅವರ ಬಾಲ್ಯದಿಂದಲೇ ಶುರುವಾಗುತ್ತದೆ. ಇಂದಿನ ತಲೆಮಾರಿನ ಅದೆಷ್ಟೋ ಜನ ಬೇಂದ್ರೆ ಅವರನ್ನು ನೋಡೇ ಇಲ್ಲದಿರುವಾಗ ಇವರಿಗೆ ಅವರನ್ನು ಕಾಣುವ ಭಾಗ್ಯ ಬಾಲ್ಯದಲ್ಲೊಮ್ಮೆ ದೊರೆಯುತ್ತದೆ. ಅದಾಗಲೇ ಮುಪ್ಪು ಆವರಿಸಿದ್ದ ಬೇಂದ್ರೆ ಅವರು ಸ್ನಾನ ಪೂಜಾದಿಗಳನ್ನು ಮುಗಿಸಿ ಬಂದು ಮಂಚದ ಮೇಲೆ ಒರಗಿ ದಣಿವಾರಿಸಿಕೊಂಡ ಬಳಿಕ ಇವರನ್ನು ಮಾತಾಡಿಸಿದ್ದು, ಹಸ್ತಾಕ್ಷರ ಕೊಟ್ಟದ್ದು ಇಲ್ಲಿ ಒಂದು ಅಪೂರ್ವ ಅನುಭವವಾಗಿ ದಾಖಲಾಗಿದೆ. ಹಸ್ತಾಕ್ಷರ ಪಡೆಯಲು ಕೊಟ್ಟ ಪೆನ್ನು ಬೇಂದ್ರೆಯವರ ಕೈಯಲ್ಲಿ ಬರೆಯದೆ ಹೋದಾಗ “ತಮ್ಮಾ, ನಿನ್ನ ಪೆನ್ನು ಬಹಳ ಪತಿವ್ರತೆ ಅಂತ ಕಾಣ್ತದ” ಎಂದು ಚಟಾಕಿ ಹಾರಿಸಿದ್ದು, ಸಂದರ್ಶಕರ ಪುಸ್ತಕ ತೋರಿಸಿ “ನೀನೂ ಏನಾದರೂ ಬರಿ. ನಿನ್ನ ಹಸ್ತಾಕ್ಷರವೂ ನನಗೆ ಬೇಕು " ಎಂದು ಅವರು ತೋರುವ ದೊಡ್ಡತನ ಲೇಖಕರಿಗೆ 'ಕನಸಿನ ಪಯಣ'ವಾಗಿ ಇಲ್ಲಿ ಕಂಡಿದೆ.

ಸಾಹಿತಿಗಳ ಸಂಪರ್ಕವನ್ನು ಎಲ್ಲರೂ ಬಯಸುತ್ತಾರಾದರೂ ಹಾಗೆ ಅದು ಎಲ್ಲರಿಗು ಸಿಕ್ಕುವುದಿಲ್ಲ. ಎಷ್ಟೋ ಜನರಿಗೆ ಅವರೊಂದಿಗೆ ಏನು ಮಾತಾಡಬೇಕೆಂದೇ ತೋಚುವುದಿಲ್ಲ. ಕನಿಷ್ಠ ಪಕ್ಷ ಅವರ ಬರಹಗಳನ್ನಾದರೂ ಓದಿರಬೇಕಾಗುತ್ತದೆ. ತಮ್ಮ ಓದುಗರೊಂದಿಗೆ ಮಾತನಾಡುವ, ಅವರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಬಯಕೆ ಸಾಹಿತಿಗಳಿಗೂ ಇರುತ್ತದೆ ಎಂಬ ವಿಚಾರ ಇಲ್ಲಿಯ ಅನುಭವಗಳಿಂದ ತಿಳಿಯಬಹುದು. ಇದಕ್ಕೆ ಅಪವಾದ ಎಂಬಂತೆ ಕಿರಿಕಿರಿ ಮಾಡುವ ಓದುಗ ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವ ಸದಾ ಏಕಾಂತ ಬಯಸುವ ಸಾಹಿತಿಗಳೂ ಇಲ್ಲದಿಲ್ಲ. ಉದಾ: ಎಸ್.ಎಲ್.ಭೈರಪ್ಪನವರನ್ನು ಬೆಂಗಳೂರಿನಲ್ಲಿ ಮೊದಲಸಲ ಕಂಡು “ನೀವು ಭೈರಪ್ಪನವರಲ್ಲವೆ “ ಎಂದಾಗ ಅವರು ಸಿಡುಕಿನಿಂದ “ಅಲ್ಲ” ಎಂದು ಹೊರಟುಹೋದ ಪ್ರಸಂಗವು ಇಲ್ಲಿದೆ.

ಸತ್ಯನಾರಾಯಣ ಅವರ ಸಾಹಿತಿಗಳ ಭೇಟಿ ಇಲ್ಲಿ ಸಂದರ್ಶನಕಾರರಂತೆ ಉದ್ದೇಶಪೂರ್ವಕವಾಗಿರದೆ ಸಮಯಾವಕಾಶ ಒದಗಿದಂತೆ ಸಹಜವಾಗಿ ನಡೆದಿವೆ. ಆದರೆ ಅವು ತೀರಾ ಲೋಕಾಭಿರಾಮವಾಗಿ ಇರದೆ, ಚರ್ಚೆ, ಸಂವಾದ, ಕಾಲೆಳೆಯುವಿಕೆಗಳನ್ನೂ ಪಳಗೊಂಡಿವೆ, ನಿಸಾರ್ ಅಹಮದ್ ಅವರೊಂದಿಗೆ ಮಾತಾಡುತ್ತ “ಸರ್ ಚಂಪಾ ಅವರು ನೀವ್ ಬರ್ದಿರೋದು ನಾಲ್ಲೋ ಐದೋ ಒಳ್ಳೆಯ ಪದ್ಯಗಳು ಮಾತ್ರ ಅಂತ ತಮಾಷೆ ಮಾಡಿದ್ದಾರಲ್ಲ” ಎಂದದ್ದಕ್ಕೆ ನಿಸಾರ್ ಅವರು ಸಿಟ್ಟಾಗದೆ “ಅವನು ಹೇಳ್ತಾನೆ, ನಾವೆಲ್ಲ ವಾಪಾಸ್ ಹೇಳಲ್ಲ ಅಷ್ಟೇ!” ಎಂದು ಸುಮ್ಮನಾಗುತ್ತಾರೆ.

ಸಾಹಿತಿಗಳ ಒಡನಾಟದ ಅನುಭವ ಅವರ ವ್ಯಕ್ತಿತ್ವದ ಪರಿಚಯವನ್ನು ಯಥಾವತ್ತಾಗಿ ಮಾಡುತ್ತವೆ. ಗಂಭೀರತೆಯ ಸಾಕಾರಮೂರ್ತಿಯಂತಿದ್ದ ಕುವೆಂಪು ಅವರನ್ನು ಕಾಣಲು ಹೋದಾಗ ಹಣ್ಣು ಹಣ್ಣು ಮುದುಕರಾಗಿದ್ದ ಕುವೆಂಪು ಅವರನ್ನು ಇನ್ನೂ ಕಾಲೇಜು ಯುವಕರಾಗಿದ್ದ ಸತ್ಯನಾರಾಯಣ ಈಗ ನೀವೇನು ಬರೆಯುತ್ತಿರುವಿರಿ ಎಂದು ಕೇಳುತ್ತಾರೆ. ಕುವೆಂಪು ಅವರತ್ತ ದೃಷ್ಟಿಬೀರುತ್ತ “ನಾನೀಗ ಕಾವ್ಯವನ್ನು ಬರೆಯುತ್ತಿಲ್ಲ, ಬದುಕುತ್ತಿದ್ದೇನೆ” ಎನ್ನುತ್ತಾರೆ. ಅಲ್ಲದೆ “ನೀವೆಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲೇ ದೇವರನ್ನು ಕಾಣಬೇಕು” ಎನ್ನುತ್ತಾರೆ. ಇನ್ನು ಶಿವರಾಮ ಕಾರಂತರು, ಚಿಕ್ಕಮಗಳೂರಿಗೆ ಕಾರ್ಯಕ್ರಮಕ್ಕೆ ಬಂದ ಸಂದರ್ಭ: ಭಾಷಣ ಮುಗಿಸಿ ವಿಶ್ರಾಂತಿ ಪಡೆಯಲು ರೂಮಿಗೆ ಹಿಂದಿರುಗಿದಾಗ ಜೊತೆಗಿದ್ದ ಹಿರೇಮಗಳೂರು ಕಣ್ಣನ್ “ನೀವೀಗ ಆಸರೆಗೆ ತಣ್ಣಗೆ ಏನು ತೆಗೆದುಕೊಳ್ಳುತ್ತೀರಿ?” ಎಂದು ಕೇಳಿದಾಗ ಕಾರಂತರು “ಸದ್ಯ, ಕಚ್ಚೆ ಬಿಚ್ಚಿ ಉಚ್ಚೆ ಹೊಯ್ದರೆ ಸಾಕಾಗಿದೆ” ಎಂದುದೂ ಒಂದು ರಸ-ಕ್ಷಣವಾಗಿ ಇಲ್ಲಿ ನಿರೂಪಿತವಾಗಿದೆ. 

ತೇಜಸ್ವಿ, ಕಡಿದಾಳ್ ಶಾಮಣ್ಣ , ವೈದೇಹಿ, ಕೆ.ಎಸ್.ನ. ಕುರಿತ ಬರಹಗಳು ಆಪ್ತವೆನಿಸುತ್ತವೆ ಇಲ್ಲಿ ವೈಯನ್ನೆ , ಅ.ರಾ.ಮಿತ್ರ, ಪಾ.ವೆಂ.ಕುರಿತ ಲೇಖನಗಳಿದ್ದೂ ಮಾಸ್ತಿ, ಲಂಕೇಶ್, ಅನಂತಮೂರ್ತಿ, ಮಹಾದೇವರಂತಹ ಪ್ರಮುಖ ಲೇಖಕರ ಗೈರುಹಾಜರಿ ಎದ್ದು ಕಾಣುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಎಲ್ಲ ಲೇಖಕರ ಪರಿಚಯವಿರಬೇಕೆಂದಿಲ್ಲವಲ್ಲ?ಸತ್ಯನಾರಾಯಣ ಅವರಿಗೆ ಇಷ್ಟೆಲ್ಲ ಸಾಹಿತಿಗಳ ಸಂಪರ್ಕ ಸಾಧ್ಯವಾಗಿರುವದಕ್ಕೆ ಅವರು ಯಾವುದೇ ಗುಂಪಿಗೆ ಸೇರದಿರುವುದು ಕಾರಣವಾಗಿರಬಹುದು ಆದರೆ ಈ ಪುಸ್ತಕದ ಮುಖಪುಟಕ್ಕೆ ಇವರು ಅದರ ತುಂಬಾ ತಮ್ಮದೇ ಒಂದು ದೊಡ್ಡ ಫೋಟೋವನ್ನು ಹಾಕಿಕೊಂಡಿರುವುದು ಬೇರೆ ಏನೋ ಸಂದೇಶ ನೀಡುವಂತಿದೆ.

(ಕೃಪೆ: ಪುಸ್ತಕಾವಲೋಕನ, ಬರಹ: ಎನ್.‌ ಎಮ್‌ ಕುಲಕರ್ಣಿ)

Related Books