ಅರಿವಿನತ್ತ......ಎನ್ನ ಚಿತ್ತ

Author : ಸುನಿತಾ ಮೂರಶಿಳ್ಳಿ

Pages 116

₹ 100.00




Year of Publication: 2019
Published by: ಮೂರಶಿಳ್ಳಿ ಪ್ರತಿಷ್ಠಾನ
Address: ಶಿವಶಕ್ತಿ, ,ಮಂಜುನಾಥ ನಗರ, ಮಾಳಮಡ್ಡಿ, ಧಾರವಾಡ-580007
Phone: 9448468168

Synopsys

ಲೇಖಕಿ ಸುನೀತಾ ಮೂರಶಿಳ್ಳಿ ಅವರು 12ನೇ ಶತಮಾನದ ವಚನಗಳನ್ನು ವಿಶ್ಲೇಷಿಸಿದ ಬರಹಗಳ ಸಂಗ್ರಹ-ಅರಿವಿನತ್ತ ಎನ್ನ ಚಿತ್ತ. ಶಿಷ್ಟ ಸಂಪ್ರದಾಯಗಳಾಚೆ ಇಣುಕಿ ನೋಡುವ ಅಲ್ಲಮರ ವಚನಗಳ ವಿವಿಧ ಮಗ್ಗಲುಗಳು ಲೇಖಕಿಯನ್ನು ಬಹುವಾಗಿ ಸೆಳೆದಿದ್ದು, ವಿಶ್ಲೇಷಿಸಿದ ಬರಹಗಳು ಇಲ್ಲಿವೆ. ವಚನ ಸಾಹಿತ್ಯದ ಸಂಪೂರ್ಣ ಆಶಯಗಳನ್ನು ಶೋಧಿಸುವುದು, ಅವುಗಳತ್ತ ಓದುಗರನ್ನು ಸೆಳೆಯುವುದು ಬರಹಗಳ ಉದ್ದೇಶವಾಗಿದೆ. ಸರಳ ಭಾಷೆಯೊಂದಿಗೆ ವಿಚಾರಗಳ ಪ್ರತಿಪಾದನೆಯ ಶೈಲಿಯು ಆಕರ್ಷಕವಾಗಿದೆ.

About the Author

ಸುನಿತಾ ಮೂರಶಿಳ್ಳಿ

ಲೇಖಕಿ ಸುನಿತಾ ಮೂರಶಿಳ್ಳಿ ಅವರು ಉತ್ತಮ ಗಾಯಕಿಯೂ ಹೌದು. ಸಂಗೀತ ಹಾಗೂ ಶರಣ ಸಾಹಿತ್ಯದಲ್ಲೂ ಆಸಕ್ತರು. ಬಸವ ಅಧ್ಯಯನದಲ್ಲಿ ಡಿಪ್ಲೊಮಾ ಪದವೀಧರರು. ಸಾಮಾಜಿಕ, ಸಾಹಿತ್ಯಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ಮೂರಶಿಳ್ಳಿ ಫೌಂಡೇಶನ್ ನಿಂದ ಚಿದ್ಬಯಲು-1 ಹಾಗೂ ಚಿದ್ಬಯಲು-2 ಹೀಗೆ ಎರಡು  ಧ್ವನಿಸುರುಳಿ ತಂದಿದ್ದು, ಶರಣರ ವಚನಗಳಿಗೂ ಧ್ವನಿ ನೀಡಿದ್ದಾರೆ. ಕೃತಿಗಳು:  ‘ಅರಿವಿನತ್ತ ಎನ್ನ ಚಿತ್ತ’ (ಶರಣ ಸಾಹಿತ್ಯದ ಲೇಖನಗಳ ಸಂಗ್ರಹ ಕೃತಿ-2019)  ಈ ಪುಸ್ತಕಕ್ಕೆ ಇಳಕಲ್ ನ ವಿಜಯ ಮಹಾಂತೇಶ್ವರ ಮಠದಿಂದ 'ಬಸವ ಗುರು ಕಾರುಣ್ಯ'   ಪ್ರಶಸ್ತಿ ಲಭಿಸಿದೆ   ...

READ MORE

Reviews

ಪುಸ್ತಕ ವಿಮರ್ಶೆ

ಅರಿವಿನತ್ತ ....ಎನ್ನ ಚಿತ್ತ....!

ಶೀರ್ಷಿಕೆಯಲ್ಲಿಯೇ ಓದುಗರನ್ನು ಸೆರೆ ಹಿಡಿಯುವ ಸುನಿತಾ ಮೂರಶಿಳ್ಳಿಯವರ ಪುಸ್ತಕ ಒಮ್ಮೆ ಓದಿ ಎತ್ತಿಡುವ ಪುಸ್ತಕವಂತು ಖಂಡಿತ ಅಲ್ಲ.  ಬಿ.ಕಾಮ್. ಪದವೀಧರೆಯಾದರೂ ಸಾಹಿತ್ಯದ ವಿದ್ಯಾರ್ಥಿಗಳ ಹಾಗೆ, ಅಭಿರುಚಿಯನ್ನು ಹೊಂದಿದ್ದು ಬಹಳ ವಿಶೇಷವೆನಿಸುತ್ತದೆ. ಅದರಲ್ಲಿಯೂ ಶರಣ ಸಾಹಿತ್ಯದ ಬಗ್ಗೆ ಅವರ ಒಲವು, ಗೌರವಗಳ ಜೊತೆ ಆಳವಾದ ಚಿಂತನೆ, ಗ್ರಹಿಕೆ, ನಿರೂಪಣೆ ಇವೆಲ್ಲವುಗಳ ಸಮ್ಮಿಲನಗಳಿಂದ ಒಂದು ರೀತಿಯಲ್ಲಿ ಇದು ಅವರ ಚೊಚ್ಚಲ ಕೃತಿಯೇ ಎಂದು ಸೋಜಿಗವಾಗುತ್ತದೆ.

ಅಲ್ಲಮಪ್ರಭುವಿನ ವಚನಗಳೆಂದರೆ ಸಾಮಾನ್ಯವಾದವುಗಳಲ್ಲ.  ಒಂದು ರೀತಿಯಲ್ಲಿ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ ದಾರಿಹೋಕರಂತೆ ಎನ್ನಿಸುತ್ತದೆ. ಅಲ್ಲಮಪ್ರಭುವಿನ ಅಳವಾದ ಚಿಂತನೆ, ನಿಗೂಢತೆಯ ಅರ್ಥಗಳು, ಅನುಭಾವಿಕ ವಿಚಾರಗಳ ಹೂರಣವನ್ನು ಬಲ್ಲವರೇ ಬಲ್ಲರು. ಅವನ ಅಧ್ಯಾತ್ಮಿಕ ಮಟ್ಟವನ್ನು ಮುಟ್ಟುವ ಎದೆಗಾರಿಕೆ ಮತ್ತು ಸಹೃದಯತೆಗಳೆರಡೂ  ಓದುಗನಿಗಿರಬೇಕು. ಅಂತಹ ಜ್ಞಾನದ ಹಸಿವನ್ನು ಹೊಂದಿರುವರಿಗೆ ಅಲ್ಲಮ ಮೃಷ್ಟಾನ್ನ ಭೋಜನ ನೀಡುತ್ತಾನೆ. ಅದರ ರುಚಿಯನ್ನು ಸವಿಯಲು ಬಿಡುತ್ತಾನೆ.  ಸವಿದ ಮೇಲೆ ಅದರ ಅನುಭವವನ್ನು ಓದುಗ ಸಹಜವಾಗಿ ವ್ಯಕ್ತಪಡಿಸಬೇಕು, ಈ ಹಿನ್ನೆಲೆಯಲ್ಲಿ ಸುನಿತಾ ಅಲ್ಲಮನ ಅಗಾಧ ವ್ಯಕ್ತಿತ್ವವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.

ಈ ಕೃತಿಯಲ್ಲಿ ಎರಡು ಭಾಗಗಳನ್ನು ಮಾಡಿದ್ದಾರೆ. ಒಂದರಲ್ಲಿ 15 ಲೇಖನಗಳು ಇನ್ನೊಂದರಲ್ಲಿ 30 ವಿವಿಧ ವಚನಕಾರರ ವಿಶ್ಲೇಷಣೆಗಳು ಇವೆ. ಈ ಲೇಖನಗಳು ಸಾಮಾನ್ಯ ಲೇಖನಗಳಿರದಂತೆ ಹೊಸ ವಿಚಾರಗಳನ್ನು ಹೇಳುವ ಹೊಸ ಜಿಜ್ಞಾಸೆಗಳನ್ನು ಹುಟ್ಟು ಹಾಕುವ ಚಿಂತನಾಪರ ಲೇಖನಗಳಾಗಿವೆ.

' ನಿರುಪಾಧಿಕ ಅಲ್ಲಮ' ಲೇಖನ ಅಲ್ಲಮಪ್ರಭುವಿನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಆಗಿದೆ. ವ್ರತ, ನಿಯಮ, ಪೂಜೆ ವಿಚಾರಗಳ ಬಗ್ಗೆ ಅಲ್ಲಮನ ಅಭಿಪ್ರಾಯಗಳೇನು? ಎಂಬುದನ್ನು ಅವರ ವಚನಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ. ನೀಲಾಂಬಿಕೆಯ ಅಂತರಂಗ' ದಲ್ಲಿ ಇಡೀ ಮಹಿಳಾ ಪ್ರತಿನಿಧಿಯಾಗಿ ನೀಲಾಂಬಿಕೆ ನಿಲ್ಲುತ್ತಾಳೆ.   ಬಸವ ನೀಡಿದ ಸ್ತ್ರೀ ಸ್ವಾತಂತ್ರ್ಯವನ್ನು ಒಪ್ಪಿ ಅದನ್ನು ಸದ್ಬಳಕೆ ಮಾಡಿಕೊಂಡ ನೀಲಾಂಬಿಕೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತಾಳೆ.  ಮುಂದುವರೆದು ಬಸವಣ್ಣನಿಗೆ 'ಅಲ್ಲಿರುವ ಸಂಗ, ಇಲ್ಲಿರಲಾರನೆ' ಎಂದು ಪ್ರಶ್ನಿಸಿ ಬಹುದೊಡ್ಡ ಶಕ್ತಿಯಾಗಿ ನಿಂತ ನೀಲಾಂಬಿಕೆಯ ಅಗಾಧ ವ್ಯಕ್ತಿತ್ವವನ್ನು ಪುಟ್ಟ ಲೇಖನದಲ್ಲಿ ಹಿಡಿದಿಟ್ಟಿದ್ದಾರೆ ಸುನಿತಾ.

'ಲೋಕದೊಳಿದ್ದು ಲೋಕಾತೀತಳಾದ ಅಕ್ಕ ' ಲೇಖನವಂತೂ ಅದ್ಭುತ. ಆಧ್ಯಾತ್ಮದ ಮೂಸೆಯಲ್ಲಿ ಬೆಳಗಿದ ಅಕ್ಕ ಈ ಲೋಕವನ್ನು ತ್ಯಜಿಸದೇ ಇರುವ ಸತ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಅಸಾಮಾನ್ಯಳಾದ ಪರಿಯನ್ನು ಅವಳ ವಚನಗಳನ್ನು ಇಟ್ಟುಕೊಂಡು ಚರ್ಚಿಸುತ್ತಾ ನಡೆಯುತ್ತಾರೆ ಸುನಿತಾ .

'ಬೆಲೆ ಕಟ್ಟದ ಬದುಕಿನ ಮೌಲ್ಯಗಳ ಮೊತ್ತ ಬಸವಣ್ಣ' , ಲೇಖನ ಬಸವಣ್ಣ ವ್ಯಕ್ತಿಯಲ್ಲ, ಶಕ್ತಿ ಎಂಬುದನ್ನು ಶರಣರ ವಚನಗಳ ಮೂಲಕ ಚಿತ್ರಿಸಿದ್ದಾರೆ. ಕಾಲ, ಧರ್ಮ, ದೇಶ, ಭಾಷೆ, ಸೀಮೆ ಎಲ್ಲವನ್ನೂ ಮೀರಿ ಬೆಲೆ ಕಟ್ಟಲಾಗದ ಬದುಕಿನ ಮೌಲ್ಯಗಳ ಮೊತ್ತ ಬಸವಣ್ಣ ಎಂಬುದನ್ನು ಈ ಲೇಖನದಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಗೆಯೇ ಇನ್ನುಳಿದ ಲೇಖನಗಳು ಸಹ ಮನಸೂರೆಗೊಳ್ಳುತ್ತವೆ.

ಎರಡನೆಯ ಭಾಗದಲ್ಲಿರುವ ವಚನ, ವಿಶ್ಲೇಷಣೆಗಳು ಸಹ ತುಂಬಾ ಅದ್ಭುತವಾಗಿವೆ. ವಿವಿಧ ವಚನಕಾರರ - ವಚನಗಳನ್ನು ಇಟ್ಟುಕೊಂಡು ಬರೆದ ವಚನ ವಿಶ್ಲೇಷಣೆಗಳಿಗೆ  ಸುನಿತಾಜಿಯವರು ಒಂದು ನ್ಯಾಯ ಒದಗಿಸಿದ್ದಾರೆ.   ವಚನಗಳನ್ನು ಒಬ್ಬ ಸಹೃದಯ, ಒಬ್ಬ ವೈಚಾರಿಕ, ಒಬ್ಬ ವಿಮರ್ಶಕ ಗ್ರಹಿಸಿ ಅದಕ್ಕೊಂದು ರೂಪ ಕೊಡುವ ಕಲಾವಿದರಂತೆ ವಚನ ವಿಶ್ಲೇಷಣೆ ಮಾಡಿದ್ದಾರೆ. ಪುಟ್ಟ ವಾಕ್ಯಗಳು, ಗಟ್ಟಿ ನಿಲುವುಗಳು, ಸುಂದರ ನಿರೂಪಣೆ, ಇವೆಲ್ಲವುಗಳಿಂದ ವಚನ ವಿಶ್ಲೇಷಣೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಇವೆಲ್ಲವುಗಳಿಗಿಂತ ಈ ಪುಸ್ತಕದ ಶೀರ್ಷಿಕೆಗೆ ಬೆಲೆ ಬರುವ ಹಾಗೆ ಮಾಡಿದ್ದು ಈ ಪುಸ್ತಕದ ಆಕರ್ಷಕ ಮುಖಪುಟ.  'ಅರಿವಿನತ್ತ ಎನ್ನ ಚಿತ್ತ' ಶೀರ್ಷಿಕೆಗೆ ನೈಜವಾದ ಮಿಂಚಿನ ಛಾಯಾಚಿತ್ರವನ್ನು ಬಳಸಿದ್ದು ಸೂಕ್ತವಾಗಿದೆ.

ಈ ಕೃತಿಗೆ ಚಿತ್ತರಗಿ-ಇಲಕಲ್ಲ ಸಂಸ್ಥಾನ ಮಠದಿಂದ ಕೊಡಮಾಡಲ್ಪಡುವ 2019 ನೇ ವರ್ಷದ 'ಬಸವ ಕಾರುಣ್ಯ ಪ್ರಶಸ್ತಿ' ದೊರಕಿರುವುದು ಸಂತಸದ ಸಂಗತಿಯಾಗಿದೆ. ಸುನಿತಾಜಿ ಅವರು ಸಾಹಿತಿಗಳು ಮಾತ್ರವಲ್ಲದೇ, ಶರಣ ಸಿದ್ಧಾಂತಕ್ಕೆ ಬದ್ಧರಾದವರು. ಅವರ ನರನಾಡಿಗಳಲ್ಲಿ ಶರಣರ ಚಿಂತನೆ ಬಿಟ್ಟು ಇನ್ನೊಂದಿಲ್ಲ. ಶರಣ ಸಿದ್ಧಾಂತದಂತೆ ನಡೆ-ನುಡಿಗಳು ಒಂದಾದ ಕಾರಣ ಈ ಕೃತಿಗೆ ಬೆಲೆ ಬಂದಿದೆ. ಇವರು ಸಂಗೀತದ ಆರಾಧಕರೂ ಆಗಿದ್ದಾರೆ. ಹೀಗಾಗಿ ಸಾಹಿತ್ಯಕ್ಕೆ ಸಂಗೀತವೂ ಸೇರಿ ಮಧುರ ಗಾನ ಹೊರಹೊಮ್ಮಿ ಪ್ರೇಕ್ಷಕರ ಮನಸೂರೆಗೊಂಡು ಜಗವೆಲ್ಲ ಪಸರಿಸುವಂತೆ ಇವರ ಇನ್ನಷ್ಟು ಸಾಹಿತ್ತಿಕ ಪ್ರಜ್ಞೆ, ಸಂಗೀತದ ನಾದ ಈ ನಾಡಿಗೆ ಕಡಲಾಚೆಗೆ ಹರಡಲಿ ಎಂದು ಮನಸಾರೆ ಹಾರೈಸುವೆ.

-ಡಾ. ಉಮಾ ಅಕ್ಕಿ,
ಸಹಾಯಕ ಪ್ರಾಧ್ಯಾಪಕರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ-587104 

Related Books