ಬರ್ತೀಯಾ ಎಷ್ಟು

Author : ಸುಕನ್ಯಾ ಕನಾರಳ್ಳಿ

Pages 304

₹ 240.00




Year of Publication: 2019
Published by: ವಸಂತ ಪ್ರಕಾಶನ
Address: ನಂ-360, 10ನೇ ಮುಖ್ಯರಸ್ತೆ, ಜಯನಗರ 3ನೇ ಹಂತ, ಬೆಂಗಳೂರು- 560011

Synopsys

‘ಬರ್ತಿಯಾ?..ಎಷ್ಟು?- ಭಾರತೀಯ ಸೂಳೆಲೋಕದ ಕಥೆಗಳು’- ಸಂಕಲನದ ಇಪ್ಪತ್ತೊಂದು ಕಥೆಗಳು ಲೈಂಗಿಕ ಕಳ್ಳಸಾಗಣೆಗೆ ಮತ್ತು ಸೂಳೆಗಾರಿಕೆಗೆ ತುತ್ತಾದ ಹೆಂಗಸರ ಕತೆಗಳನ್ನು ನಿರೂಪಿಸುತ್ತವೆ. ಅಮೃತಾ ಪ್ರೀತಂ, ನಿರಂಜನ, ವಿಭೂತಿಭೂಷಣ್ ಬಂದ್ಯೋಪಾಧ್ಯಾಯ್, ಇಂದಿರಾ ಗೋಸ್ವಾಮಿ, ಇಸ್ಮತ್ ಚುಗ್ತಾಯಿ, ಜೆ.ಪಿ.ದಾಸ್, ಕಮಲಾದಾಸ್, ಕಮಲೇಶ್ವರ್, ಕ್ರಿಶನ್ ಚಂದರ್, ಪ್ರೇಮ್ ಚಂದ್, ನಬೇಂದು ಘೋಷ್, ಖುರಾತುಲೇನ್ ಹೈದರ್, ಸಾದತ್ ಹಸನ್ ಮಂಟೋ, ಸಿದ್ದೀಕ್ ಆಲಂ ಮತ್ತಿತರ ಭಾರತೀಯ ಸುಪ್ರಸಿದ್ಧ ಲೇಖಕರ ಕಥೆಗಳನ್ನು ಸುಕನ್ಯಾ ಕನಾರಳ್ಳಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕಮಲೇಶ್ವರರ ‘ಮಾಂಸದ ನದಿ’ ಕತೆಯ ಜುಗನೂ ವಯಸ್ಸಿನ ಜೊತೆಗೆ ರೋಗವೂ ಏರುತ್ತಿರುವಾಗ ಬದುಕಿಡೀ ಅನುಭವಿಸಿದ ಹೀನಾಯ ದಾಸ್ಯವನ್ನು ಹತಾಶೆಯಿಂದ ದಿಟ್ಟಿಸಿ ನೋಡುತ್ತಾಳೆ. ‘ಮನೆಯಾಕೆ’ಯಲ್ಲಿ ಇಸ್ಮತ್ ಚುಗ್ತಾಯಿ ಸೃಷ್ಟಿಸಿದ ಲವಲವಿಕೆಯ ಹುಡುಗಿ ಲಾಜೋ ಶಿಷ್ಟತೆ ಎಂಬ ಸಮಾಜದ ಪರಿಕಲ್ಪನೆಗೆ ಹೇಗಾದರೂ ಮಾಡಿ ಒಗ್ಗಿಕೊಳ್ಳಬೇಕು, ತಪ್ಪಿದಲ್ಲಿ ‘ಸೂಳೆ’ ಎಂಬ ಪಟ್ಟವನ್ನು ಹೊತ್ತುಕೊಳ್ಳಬೇಕು. ವಿಭೂತಿ ಭೂಷಣ್ ಬಂದ್ಯೋಪಾಧ್ಯಾಯರ ‘ಹೀಂಗ್-ಕೊಚೂರಿ’ಯ ಕೆಂಪುದೀಪ ಪ್ರದೇಶದ ಹತ್ತಿರದಲ್ಲಿ ಬೆಳೆಯುತ್ತಿರುವ ಪುಟ್ಟ ಹುಡುಗ ರಸಿಕರ ಮತ್ತು ಗಿರಾಕಿಗಳ ವಯಸ್ಕ ಲೋಕಕ್ಕೆ ಎದುರಾಗುತ್ತಾನೆ. ಅಲ್ಲಿ ನಾಲಿಗೆಯಲ್ಲಿ ನೀರು ಬರಿಸುವ ತಿನಿಸುಗಳ ಸೆಳೆತವೂ ಇರುತ್ತದೆ. ಮನೀಶ್ ಕುಲಶ್ರೇಷ್ಠ ಅವರ ‘ಕಾಳಿಂದ’ ಕಥೆಯಲ್ಲಿ ಇಣುಕಿ ಕಾಣಬಾರದ್ದನ್ನು ಕಂಡ ಹುಡುಗನ ಬದುಕು ಧೊಪ್ಪನೆ ಕುಸಿಯುತ್ತದೆ. ನಮ್ಮ ನಿರಂಜನರ ‘ಕೊನೆಯ ಗಿರಾಕಿ’ ಕಥೆಯಂತೂ ಅದು ಪ್ರಕಟವಾದಾಗಿನಿಂದಲೂ ಪ್ರಜ್ಞಾವಂತಪನ್ನು ತೀವ್ರವಾಗಿ ಸಂಕಟಕ್ಕೆ ಈಡು ಮಾಡುವ ಮತ್ತು ಕಾಡುವ ಕಥೆಯಾಗಿ ಉಳಿದುಕೊಂಡು ಬಂದಿದೆ. 

ಆರಿಸಿಕೊಂಡಿರು ವಿಷಯದಲ್ಲಿ ಮತ್ತು ಕಥೆಗಳ ಆಯ್ಕೆಯಲ್ಲಿ ಇದೊಂದು ಅಪೂರ್ವ ಕಥಾಸಂಕಲನ. ‘ಅನಾದಿಕಾಲದಿಂದಲೂ ಇರುವ ವೃತ್ತಿ’ ಎಂದು ಸಮರ್ಥಿಸಲ್ಪಡುವ ಸೂಳೆಗಾರಿಕೆ ಮನುಷ್ಯ ಬದುಕಿನ ಅತೀ ಘೋರವಾದ ದಾಸ್ಯ. ಅದರ ವಿರುದ್ಧ ಕಟು ವಿಮರ್ಶೆಯ ದನಿ ಎತ್ತುವ ಈ ಸಂಕಲನ ಎಲ್ಲಾ ಪ್ರಜ್ಞಾವಂತರೂ ಓದಲೇಬೇಕಾದ ಕೃತಿ.

About the Author

ಸುಕನ್ಯಾ ಕನಾರಳ್ಳಿ

ಕೊಡಗಿನಲ್ಲಿ ಜನಿಸಿದ ಸುಕನ್ಯಾ ಅವರು ವಿಜ್ಞಾನದಲ್ಲಿ ಪದವಿ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದಿದ್ದಾರೆ. ಅನುವಾದ, ಮಹಿಳಾ ಸಾಹಿತ್ಯ, ಸಂಶೋಧನೆಯಲ್ಲಿ ಆಸಕ್ತಿ. ’ಅಲ್ಲಿಂದ ಇಲ್ಲಿಗೇ ಅವಳ ಕಥೆಗಳು’, ಅರುಂಧತಿ ರಾಯ್ ಅವರ ’ಡಿಸೆಂಬರ್‍ 13’, ಮಿಡತೆಗಳ ಬರವಿಗೆ ಕಿವಿಗೊಡುತ್ತಾ’ ಜೊತೆಗೆ ಮಿಲನ್ ಕುಂದೇರಾನ ಕಾದಂಬರಿ ’ಹೊರಲಾರದ ಗಾಳಿ ಭಾರ’ ಕನಾರಳ್ಳಿ ಅವರು ಅನುವಾದಿಸಿದ ಕೃತಿಗಳು. ವೈದೇಹಿ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕನಾರಳ್ಳಿಯವರ ಹಲವು ಕಥೆ, ಅನುವಾದ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ನ್ಯೂಜಿಲೆಂಡ್ ನಲ್ಲಿ ಇಂಗ್ಲಿಷ್ ಅಧ್ಯಾಪಿಕೆಯಾಗಿದ್ದಾರೆ. ...

READ MORE

Related Books