ಬೆಳ್ಳಿತೊರೆ

Author : ರಘುನಾಥ ಚ ಹ

Pages 192

₹ 195.00




Year of Publication: 2019
Published by: ಅಂಕಿತ ಪುಸ್ತಕ
Address: #53 ಶ್ಯಾಮ್‌ ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿಬಜಾರ್‌ ಮುಖ್ಯರಸ್ತೆ, ಅನಿಕರ್‌ ಟೆಕ್ಸ್‌ಟೈಲ್ಸ್‌ ಹತ್ತಿರ, ಬಸವನಗುಡಿ, ಬೆಂಗಳೂರು-560004
Phone: 08026617100

Synopsys

ರಘುನಾಥ ಚ.ಹ ಅವರ ಸಿನಿಮಾ ಪ್ರಬಂಧಗಳ ಸಂಕಲನ ಬೆಳ್ಳಿತೊರೆ. ಬೆಳ್ಳಿತೊರೆಯ ಕುರಿತ ವಿಷಯಗಳನ್ನು ಆಸ್ಥೆಯಿಂದ ಬರೆದಿರುವ ರಘುನಾಥರ ಈ ಪುಸ್ತಕದ ಕುರಿತು ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಬರಗೂರರ ಮಾತುಗಳಲ್ಲಿಯೇ ಈ ಕೃತಿಯ ಬಗ್ಗೆ ತಿಳಿಯುವುದಾದರೆ ’ಈ ಸಂಕಲನದ ಮೊದಲ ಲೇಖನದಲ್ಲಿ ಪ್ರಸ್ತಾಪಿತವಾಗುವ ‘ಊಟ’ದ ಸಂಗತಿಯು ಯಾವ ಸಿನಿಮಾ ಮಂದಿಯೂ ಲೆಕ್ಕಿಸದ ಸಣ್ಣ ಸಂಗತಿ. ಆದರೆ ರಘುನಾಥ್ ಬರಹವು ನಮ್ಮ ಸಿನಿಮಾಗಳಲ್ಲಿರುವ ಊಟದ ಪ್ರಸಂಗಗಳ ಸಣ್ಣ ಸಂಗತಿಯನ್ನು ‘ಎಂದೂ ಮುಗಿಯದ ಊಟ’ವೆಂಬ ಶೀರ್ಷಿಕೆಯಲ್ಲೇ ದೊಡ್ಡದಾಗಿ ಬಿಂಬಿಸುತ್ತದೆ. ಅದು ಶೀರ್ಷಿಕೆಯಲ್ಲಷ್ಟೇ ದೊಡ್ಡದಾಗದೆ ಲೇಖನದ ಪ್ರತಿ ಪ್ರಸಂಗಗಳ ಮೂಲಕ ದೊಡ್ಡದಾಗಿ ಬೆಳೆಯುತ್ತದೆ. ‘ಮಾಯಾಬಜಾರ್’ ಚಿತ್ರದ ಘಟೋತ್ಕಚನ ‘ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು’ ಎಂಬ ಹಾಡಿನಿಂದ ಆರಂಭಿಸಿ, ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಶ್ರಾದ್ಧದೂಟ ಸುಮ್ಮನೆ, ನೆನಸಿಕೊಂಡ್ರೆ ಜುಮ್ಮನೆ’ ಹಾಡನ್ನು ಹಾದು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಹೋಟೆಲ್ ಪ್ರಸಂಗವನ್ನು ದಾಖಲಿಸುತ್ತದೆ. ವಿಶೇಷವಾಗಿ ‘ಬೇಡರ ಕಣ್ಣಪ್ಪ’ ಚಿತ್ರದ ‘ಶಿವಪ್ಪ ಕಾಯೊ ತಂದೆ ಮೂರು ಲೋಕ ಸ್ವಾಮಿ ದೇವಾ | ಹಸಿವೆಯನ್ನು ತಾಳಲಾರೆ ಕಾಪಾಡೆಯಾ’ ಎಂಬ ಹಾಡಿನ ಸಂದರ್ಭವನ್ನು ರಘುನಾಥ್ ವಿಶ್ಲೇಷಿಸುವ ರೀತಿಯು ಒಳನೋಟದ ಅನನ್ಯ ಮಾದರಿಯಾಗಿದೆ. ಇದು ‘ಹಸಿದ ದೀನರ ಪಾಲಿಗೆ ಪ್ರಾರ್ಥನಾಗೀತೆ’ ಎಂಬ ಅವರ ವ್ಯಾಖ್ಯಾನ ಮತ್ತು ಅದನ್ನು ಸಮಕಾಲೀನ ಸಂದರ್ಭಕ್ಕೆ ತಂದು ತೋರುವ ಕಾಣ್ಕೆ, ಕಳಕಳಿಯ ಕಣ್ಣೋಟವಾಗಿದೆ. ಈ ಲೇಖನವು ಇಡೀ ಕೃತಿಯ ವಸ್ತು ನಿರ್ವಹಣಾ ವಿಧಾನದ ದಿಕ್ಸೂಚಿಯಂತಿದೆ.

‘ಕನಕಮಂತ್ರವ ಜಪಿಸಿರೋ’ ಎಂಬ ಲೇಖನವು ರಘುನಾಥ್ ಅವರ ಪ್ರಬುದ್ಧ ನೋಟಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಕನ್ನಡದ ನೂರಾ ಒಂದನೇ ಸಿನಿಮಾವಾದ ‘ಭಕ್ತ ಕನಕದಾಸ’ದ ಪ್ರಸ್ತಾಪದಿಂದ ಪ್ರಾರಂಭಿಸಿ, ‘ಸತ್ಯ ಹರಿಶ್ಚಂದ್ರ’ ಚಿತ್ರದ ‘ಕುಲದಲ್ಲಿ ಕೀಳ್ಯಾವುದೋ’ ಎಂದು ಹಾಡನ್ನು ಹಾದು ‘ಸನಾದಿ ಅಪ್ಪಣ್ಣ’ನನ್ನು ಒಳಗೊಂಡು ‘ಚೋಮನ ದುಡಿ’ಗೆ ಬಂದು, ಅಂದಿನಿಂದ ಇಂದಿನವರೆಗಿನ ಅನೇಕ ಕನ್ನಡ ಚಿತ್ರಗಳ ವಸ್ತು ಮತ್ತು ಹಾಡುಗಳ ವಿವರಣೆ, ವಿಶ್ಲೇಷಣೆಗಳ ಮೂಲಕ ಕೊಳಕು ಜಾತಿಪದ್ಧತಿಗೆ ಪ್ರತಿರೋಧ ಒಡ್ಡುವ ಒಳಹರಿವಿನಿಂದ ಈ ಲೇಖನ ವಿಶಿಷ್ಟವೆನ್ನಿಸುತ್ತದೆ. ತಾವು ಹೇಳುವ ಎಲ್ಲ ಮಾತುಗಳನ್ನೂ ಚಿತ್ರಗಳ ವಸ್ತುವಿವರಗಳ ಮೂಲಕವೇ ಸರಳವಾಗಿ ಕಟ್ಟಿಕೊಡುವ ಸಮರ್ಥ ಶೈಲಿಯನ್ನು ಈ ಲೇಖನ ಒಳಗೊಂಡಿದ್ದು, ಸಿನಿಮಾ ಮತ್ತು ಸಮಾಜವನ್ನು ಒಟ್ಟಿಗೇ ಪರಿಶೀಲಿಸಲಾಗಿದೆ.

‘ರಾಜಕಾರಣ: ಅಲ್ಲೊಂದು ಮಿಂಚು, ಇಲ್ಲೊಂದು ಮುಗುಳು’ ಎಂಬ ಲೇಖನವು ರಘುನಾಥ್ ಅವರ ಗಂಭೀರ ನೋಟ, ನಿರೂಪಣೆಗಳ ಮತ್ತೊಂದು ಮಾದರಿ. ೧೯೪೭ರಲ್ಲಿ ಬಂದ ‘ಮಹಾತ್ಮ ಕಬೀರ’ ಚಿತ್ರದ ಹುಟ್ಟಿನ ವಿವರಗಳಿಂದ ಆರಂಭವಾಗುವ ಲೇಖನವು ‘ಕೋಮುದಳ್ಳುರಿಗೆ ಸಿನಿಮಾ ಮೂಲಕ ಉತ್ತರವನ್ನು ಯಾಕೆ ಹುಡುಕಬಾರದು?’ ಎಂದು ಆರ್. ನಾಗೇಂದ್ರರಾಯರ ಮನದಲ್ಲಿ ಮೂಡಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತದೆ. ಕನ್ನಡ ಸಿನಿಮಾವೊಂದು ಅಂದು ಕೋಮುದಳ್ಳುರಿಗೆ ಉತ್ತರವಾಗಿ ಸೌಹಾರ್ದ ಸಂಕೇತವಾದ ಮಹಾತ್ಮ ಕಬೀರರನ್ನು ಎದುರಾಗಿಸಿದ್ದು ದೊಡ್ಡ ಸಾಂಸ್ಕೃತಿಕ ಸಂಗತಿಯೇ ಸರಿ. ಅದು ಅಂದಿನದಷ್ಟೇ ಅಲ್ಲ, ಇಂದಿನ ಸನ್ನಿವೇಶವನ್ನೂ ಎದುರಿಗಿಡುತ್ತದೆ. ಕನ್ನಡದಲ್ಲಿ ಬಂದಿರುವ ರಾಜಕಾರಣ ಕೇಂದ್ರಿತ ಸಿನಿಮಾಗಳನ್ನು ರಘುನಾಥ್ ವಸ್ತುನಿಷ್ಠವಾಗಿ ವಿಶ್ಲೇಷಿಸುವ ವಿಧಾನದಲ್ಲೇ ‘ನೈಜ ರಾಜಕೀಯ ಸಿನಿಮಾ’ದ ಸ್ವರೂಪವನ್ನು ಸಾದರಪಡಿಸುತ್ತಾರೆ. ವ್ಯಾಪಾರಿ ಮಾದರಿ ಮತ್ತು ಪರ್ಯಾಯ ಮಾದರಿಗಳ ಮುಖ್ಯ ಚಿತ್ರಗಳನ್ನು ವಿಶ್ಲೇಷಣೆಗೆ ಒಡ್ಡುವ ಮೂಲಕ ರಾಜಕೀಯ ವಸ್ತುವಿನ ವ್ಯಾಪ್ತಿ ಮತ್ತು ಮಿತಿಗಳನ್ನು ಮುಂದಿಡುತ್ತಾರೆ.

‘ಜನಪ್ರಿಯತೆ-ಜನಪರತೆ: ಕೆಲವು ಟಿಪ್ಪಣಿಗಳು’ ಎಂಬ ಲೇಖನವು ಸಮಕಾಲೀನ ಪ್ರಜ್ಞಾ ಪರಂಪರೆಗೆ ಸೇರಿದ ವ್ಯಾಖ್ಯಾನವನ್ನು ಒಳಗೊಂಡಿದೆ. ಜನಪ್ರಿಯ ಮತ್ತು ಜನಪರ – ಎರಡೂ ಒಂದಾಗುವುದು ಕಷ್ಟಸಾಧ್ಯದ ಕ್ರಿಯೆ. ನನ್ನ ದೃಷ್ಟಿಯಲ್ಲಿ ಕಲಾತ್ಮಕವೆಂದು ಕರೆಸಿಕೊಂಡ ಚಿತ್ರಗಳಿಗಿಂತ ‘ಜನಪ್ರಿಯ’ವೆಂಬ ಚಿತ್ರಗಳು ಹೆಚ್ಚು ಜನಪರ ವಸ್ತುಗಳನ್ನು ಒಳಗೊಂಡಿವೆ. ನಿರೂಪಣೆಯಲ್ಲಿ ನಿರೀಕ್ಷಿತ ಆಳಕ್ಕಿಂತ ಅಗಲವೇ ಹೆಚ್ಚಾಗಿ ಕಾಣುವ ಜನಪ್ರಿಯ ಚಿತ್ರಗಳು ಜನಮಾನಸದ ‘ಸಮೂಹ ಒಪ್ಪಿತ’ ಸಂಗತಿಗಳತ್ತ ಗಮನಹರಿಸಿದರೆ ಕಲಾತ್ಮಕವೆಂಬ ಚಿತ್ರವಲಯದಲ್ಲಿ ಕೆಲವು ಸಾಮಾಜಿಕ ಜನಪರ ವಸ್ತುವನ್ನು ಒಳಗೊಂಡಿದ್ದರೂ ನವ್ಯಸಾಹಿತ್ಯದಂತೆ ವ್ಯಕ್ತಿನಿಷ್ಠ ನೋಟದ ಚಿತ್ರಗಳೇ ಮಾಧ್ಯಮ ಮತ್ತು ಪ್ರಶಸ್ತಿ ವಲಯದಲ್ಲಿ ‘ಜನಪ್ರಿಯ’ವಾದವು. ಅದೇನೇ ಇರಲಿ, ರಘುನಾಥ್ ತಮ್ಮ ವಿಶ್ಲೇಷಣೆಯ ಕಕ್ಷೆಗೆ ಎಲ್ಲ ಮಾದರಿಯ ಚಿತ್ರಗಳನ್ನೂ ಪರಿಗಣಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ‘ಚೌಕಟ್ಟುಗಳನ್ನು ಮೀರುವುದೇ ಎಲ್ಲ ಕಾಲದ ಒಳ್ಳೆಯ ಕಲೆಯ ಪ್ರಮುಖ ಲಕ್ಷಣ’ ಎಂದು ಪ್ರತಿಪಾದಿಸುವ ರಘುನಾಥ್, ‘ಒಳ್ಳೆಯ ಸಿನಿಮಾ ಕುರಿತು ನಿರ್ದಿಷ್ಟ ಚೌಕಟ್ಟೊಂದನ್ನು ಕಲ್ಪಿಸಿಕೊಳ್ಳಲು ಹೊರಡುವುದು ವ್ಯರ್ಥ ಕಸರತ್ತೂ ಆಗಬಹುದು’ ಎಂದು ಭಾವಿಸಿದರೂ ‘ಒಳ್ಳೆಯ ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳ ಹುಡುಕಾಟ ಅನಿವಾರ್ಯ’ ಎಂದು ತೀರ್ಮಾನಿಸುತ್ತಾರೆ. ಇನ್ನೊಮ್ಮೆ ‘ನೋಡುಗನನ್ನು ಯಾವ ಚಿತ್ರ ಹಿಡಿದಿಟ್ಟುಕೊಳ್ಳುವುದೋ ಅದು ಒಂದು ಒಳ್ಳೆಯ ಸಿನಿಮಾ ಎಂದು ಸರಳವಾಗಿ ಹೇಳಬಹುದು’ ಎನ್ನುತ್ತಾರೆ. ಇಲ್ಲಿ ‘ಸರಳವಾಗಿ’ ಎಂಬ ಪದಪ್ರಯೋಗವನ್ನು ಗಮನಿಸಬೇಕು. ನೋಡುಗನನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾಗಳೆಲ್ಲವೂ ಪರಿಪೂರ್ಣ ಒಳ್ಳೆಯ ಸಿನಿಮಾಗಳೆಂದು ತೀರ್ಮಾನಿಸಲಾಗದೆಂಬ ಸೂಚನೆಯನ್ನು ‘ಸರಳವಾಗಿ ಹೇಳಬಹುದು’ ಎಂಬ ಮಾತು ಕೊಡುತ್ತದೆಯೆಂಬುದು ನನ್ನ ಗ್ರಹಿಕೆ. ಕಡೆಗೆ ಇವರು ಹೇಳುವ ಮಾತು ಎಲ್ಲರ ಮನಸ್ಸಿಗೂ ಬರಬೇಕು. ಆ ಮಾತು ಹೀಗಿದೆ: ‘ಜನಪ್ರಿಯತೆ ಮತ್ತು ಜನಪರತೆ ಒಟ್ಟೊಟ್ಟಿಗೆ ಸಾಗಬೇಕಾಗಿದೆ. ಇನ್ನೂ ಕೆಲವೊಮ್ಮೆ ಆಶಯಗಳು ಅತ್ಯುತ್ತಮವಾಗಿರುತ್ತವೆ. ಕಥೆ ಮಾತ್ರ ದುರ್ಬಲವಾಗಿರುತ್ತದೆ. ಹೀಗಾದಾಗ ಕೂಡ ಸಿನಿಮಾ ಸೊರಗುತ್ತದೆ.’ ಎಂದಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. 

About the Author

ರಘುನಾಥ ಚ ಹ
(01 October 1974)

ರಘುನಾಥ ಚ.ಹ. ಅವರು ಜನಿಸಿದ್ದು 1974 ನವೆಂಬರ್ 1ರಂದು. ಇವರ ಪೂರ್ಣ ಹೆಸರು ರಘುನಾಥ ಚನ್ನಿಗರಾಯಪ್ಪ ಹರಳಾಪುರ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹರಳಾಪುರದವರಾದ ಇವರು ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಸುಧಾ ವಾರ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.  ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ, (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ), ಆರ್. ನಾಗೇಂದ್ರರಾವ್, ಡಾ.ದೇವಿ ಶೆಟ್ಟಿ, ಬಿಲ್‌ಗೇಟ್ಸ್, ...

READ MORE

Awards & Recognitions

Reviews

ರಘುನಾಥ್ ಅವರ ಚಿತ್ರಭೂಮಿಯ ಬರಹ ಬೆಳೆಯುತ್ತಲೇ ಇರಲಿ: ಬೆಳ್ಳಿತೊರೆ ಪುಸ್ತಕಕ್ಕೆ ಬರೆದ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿ ಪೂರ್ಣಪಾಠ

ಚಿತ್ರಪ್ರಿಯರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಹಿತ್ಯದ ಆಸ್ವಾದಕರ ಪಾಲಿಗೂ “ಬೆಳ್ಳಿತೊರೆ' ಸಿನಿಮಾ ಪ್ರಬಂಧಗಳ ಪುಸ್ತಕ, ಮತ್ತೆ ಮತ್ತೆ ಸವಿಯಬೇಕೆನಿಸುವ ಹದಿನಾರು ಪೆಪ್ಪರ್‌ಮೆಂಟುಗಳಿರುವ ಪೊಟ್ಟಣ. ಈ ಪೊಟ್ಟಣಕ್ಕೆ ಬರಗೂರು ರಾಮಚಂದ್ರಪ್ಪ ಅವರ ಮುನ್ನುಡಿಯೆಂಬ ಆಕರ್ಷಕ ರಾಪರ್ ಕೂಡ ಇದೆ. ಕನ್ನಡ ಚಿತ್ರರಂಗದ ಕುರಿತು ಬಂದಿರುವ ಸಾಹಿತ್ಯವೇ ಕಮ್ಮಿ ಅವುಗಳಲ್ಲಿಯೂ ಇತಿಹಾಸ, ವ್ಯಕ್ತಿಚಿತ್ರಗಳ ಕುರಿತ ಕೃತಿಗಳೇ ಬಹುಪಾಲು. ಸಿನಿಮಾ ಚಿಂತನೆಯನ್ನು, ಅಭಿರುಚಿಯನ್ನು ಉದ್ದೀಪಿಸುವ ಕೃತಿಗಳು ವಿರಳ. 'ಬೆಳ್ಳಿತೊರೆ' ಸಾಹಿತ್ಯದ ದೋಣಿಯಲ್ಲಿ ಕುಳಿತು ಸಿನಿಮಾ ಎಂಬ ನದಿಯಲ್ಲಿವಿಹಾರ ಮಾಡುತ್ತದೆ. ಸಾಹಿತ್ಯ ಮತ್ತು ಸಿನಿಮಾ ಧಾರೆಗಳ ಸಂಗಮಸ್ಥಳದಲ್ಲಿ ಈ ಬರಹಗಳು ಹುಟ್ಟಿಕೊಂಡಿವೆ. 'ಕನ್ನಡ ಸಾಂಸ್ಕೃತಿಕ ಮನಸ್ಸ’ನ್ನು ರೂಪಿಸುವಲ್ಲಿ ಕನ್ನಡ ಸಿನಿಮಾಗಳು ಹೇಗೆ ಕೆಲಸ ಮಾಡಿವೆ ಎಂಬುದರ ಶೋಧನೆಯೇ ಈ ಎಲ್ಲ ಪ್ರಬಂಧಗಳ ಹಿಂದಿರುವ ಆಶಯ. ಇಲ್ಲಿನ ಎಲ್ಲ ಪ್ರಬಂಧಗಳು ಇತಿಹಾಸದ ತುದಿಯಿಂದ ವರ್ತಮಾನದ ಬದಿಯವರೆಗೆ ನಿರರ್ಗಳವಾಗಿ ಓಡಾಡುತ್ತವೆ. ಇಲ್ಲಿ ಬೀಸು ಹೇಳಿಕೆಗಳಾಗಲಿ, ಓಲೈಕೆಯ ಮಾತುಗಳಾಗಲಿ ಸಿಗುವುದಿಲ್ಲ.

01 ಡಿಸೆಂಬರ್‌ 2019 

ಕೃಪೆ : ಪ್ರಜಾವಾಣಿ

Related Books