ಬೇರು ತೇರು

Author : ರವಿಶಂಕರ್ ಎ.ಕೆ (ಅಂಕುರ)

Pages 230

₹ 220.00




Year of Publication: 2019
Published by: ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ
Address: 102#, ಎಸ್.ಎಲ್.ವಿ ಶೃತಿ, 7ನೇ ಅಡ್ಡ ರಸ್ತೆ, ವ್ಯಾಸರಾಯ ರೋಡ್, ಯಲೇನಹಳ್ಳಿ ಮೇನ್ ರೋಡ್, ಡಿ.ಎಲ್ . ಎಫ್., ಅಕ್ಷಯ ನಗರ, ಬೆಂಗಳೂರು 560068
Phone: 8792693438

Synopsys

ಬೇರು-ತೇರು: ಬೇಂದ್ರೆ, ಕುವೆಂಪು ಅವರ ಗದ್ಯ ಸಾಹಿತ್ಯದ ವಿಮರ್ಶಾತ್ಮಕ ಲೇಖನಗಳ ಸಂಕಲನವಿದು. ಮಂಜುನಾಥ ಡಿ. ಎಸ್., ರವಿಶಂಕರ ಎ.ಕೆ., ಅನಿತ ಕೆ.ವಿ ಸಂಪಾದಿಸಿದ್ದಾರೆ. ಕನ್ನಡ ಸಾಹಿತ್ಯದ ಪ್ರಾರಂಭದ ಗದ್ಯ ಬರಹಗಾರರಲ್ಲಿ ಕುವೆಂಪು ಹಾಗೂ ಬೇಂದ್ರೆ ಪ್ರಮುಖರು. ಇವರ ಗದ್ಯ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧನಾ ಲೇಖನಗಳನ್ನು ಕರ್ನಾಟಕ ಹಾಗೂ ಹೊರರಾಜ್ಯಗಳ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು ರಚಿಸಿದ್ದಾರೆ. ಕುವೆಂಪು ಬೇಂದ್ರೆ ಅವರು ರಚಿಸಿದ ನಾಟಕ, ಕಥೆ, ಭಾಷಣ, ಲೇಖನ, ಕಾದಂಬರಿ, ಮೀಮಾಂಸೆ, ವಿಮರ್ಶಾತ್ಮಕ ಕೃತಿಗಳನ್ನು ಲೇಖಕರು ಅನುಲಕ್ಷಿಸಿದ್ದಾರೆ.

2019ರ ಮೇ 11 ಹಾಗೂ 12 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿತವಾದ ವಿಚಾರಗಳ ಸಂಗ್ರಹವೇ ಕೃತಿ. ಕುವೆಂಪು ಹಾಗೂ ಬೇಂದ್ರೆ ಅವರ ಗದ್ಯ ಸಾಹಿತ್ಯಕ್ಕೆ ಸಂಬಂಧಿಸಿ ನಡೆಸುವ ಸಂಶೋಧನೆಗಳಿಗೆ ಈ ಕೃತಿ ಉಪಯುಕ್ತವಾದ ಆಕರ ಗ್ರಂಥವಾಗಲಿದೆ. 

About the Author

ರವಿಶಂಕರ್ ಎ.ಕೆ (ಅಂಕುರ)

ರವಿಶಂಕರ ಎ.ಕೆ. ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಗ್ರಾಮದವರು. ಅರವಿಂದ ಆಶ್ರಮದಿಂದ ಪ್ರಭಾವಿತರು. ಕನ್ನಡ ಸಾಹಿತ್ಯದಲ್ಲಿ ಶಿಕ್ಷಣ ಪದವಿ, ಸ್ನಾತಕೋತ್ತರ ಪದವಿ ಹಾಗೂ ‘ಬೇಂದ್ರೆ ಸಾಹಿತ್ಯ : ವಿಮರ್ಶೆಯ ಸ್ವರೂಪ ಮತ್ತು ತಾತ್ವಿಕತೆ’ ವಿಷಯದ ಮೇಲೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಶಿಕ್ಷಣ ಸಂಸ್ಥೆ, ಕೃಪಾನಿಧಿ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸದ್ಯ ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಂಕುರ-ಎಂಬುದು ಇವರ ಕಾವ್ಯನಾಮ.  ಕೃತಿಗಳು: ಖಾನ್ ಅಬ್ದುಲ್ ಗಫಾರ್ ಖಾನ್(ಜೀವನ ಚರಿತ್ರೆ 2013), ಎತ್ತಿಕೊಂಡವರ ಕೂಸು (ಕವನ ಸಂಕಲನ -2017), ...

READ MORE

Excerpt / E-Books

ಬೇಂದ್ರೆ ಹಾಗೂ ಕುವೆಂಪು ಆಧುನಿಕ ಕನ್ನಡ ಸಾಹಿತ್ಯವನ್ನು ನಿರ್ಮಿಸಿದ ಸತ್ವಶಾಲಿ ಪ್ರತಿಭೆಗಳು; ಪ್ರಾಚೀನ ಮತ್ತು ಸಮಕಾಲೀನ ಸಾಹಿತ್ಯದ ಸತ್ವ ಹೀರಿ ಭವಿಷ್ಯವನ್ನು ಅನಂತ ನೆಲೆಯಲ್ಲಿ ನಿರ್ಮಿಸಿದ ಬೇರಿನಂತಹ ಸಾಕ್ಷಿ ಪ್ರಜ್ಞೆಗಳು. ಎಲ್ಲ ಸಾಹಿತ್ಯಾಸಕ್ತರು ಈ ಮೇರುಸಾಹಿತಿಗಳ ಕೃತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಾದದ್ದು ಅಗತ್ಯ ಎನಿಸುತ್ತದೆ.

ಬೇಂದ್ರೆ ಹಾಗೂ ಕುವೆಂಪು ಅವರ ಸಾಹಿತ್ಯಾಧ್ಯಯನವೆಂಬುದು ಕೇವಲ ತೌಲನಿಕ ಅಧ್ಯಯನವಲ್ಲ; ಇಬ್ಬರ ಸಾಹಿತ್ಯವನ್ನೂ ಸಮಗ್ರವಾಗಿ ಅಧ್ಯಯನ ಮಾಡುವ ಮಹತ್ಕಾರ್ಯ. ಸಂಶೋಧನೆ, ವಿಮರ್ಶೆ, ಲೇಖಗಳನ್ನೊಳಗೊಂಡ ಇಂತಹ ಅಧ್ಯಯನಗಳು ಕಾವ್ಯದ ಅಧ್ಯಯನಗಳಾಗಿ ಕಂಡುಬರುತ್ತವೆ. ಎಚ್. ಎಸ್. ರಾಘವೇಂದ್ರರಾವ್ ಅವರ ‘ಹಾಡೆ ಹಾದಿಯ ತೋರಿತು’; ಕೆ. ಸಿ. ಶಿವಾರೆಡ್ಡಿ ಅವರ ‘ಹಾಡು ಪಾಡು’, ‘ಸ್ಥಿತ್ಯಂತರ’, ‘ಬೇಂದ್ರೆ ಕುವೆಂಪು ವಿರಾಟ್‌ದರ್ಶನ’; ಎನ್. ಜಗದೀಶ್ ಕೊಪ್ಪ ಅವರ ‘ಉತ್ತರ ದಕ್ಷಿಣ’; ಭಾಗ್ಯವತಿ ಎಂ. ಅವರ ‘ಬೇಂದ್ರೆ ಮತ್ತು ಕುವೆಂಪು ಕಾವ್ಯ; ತೌಲನಿಕ ಅಧ್ಯಯನ’ ಇತ್ಯಾದಿ ಗಮನಿಸಬಹುದು.

ಬೇಂದ್ರೆ ಕುವೆಂಪು ಇವರ ಕಾವ್ಯಗಳಂತೆ ಈ ಕವಿದ್ವಯರ ಗದ್ಯ ಸಾಹಿತ್ಯವೂ ಕೂಡ ಸಮಾಜದ ಮೇಲೆ ಪರಿಣಾಮ ಬೀರಬಲ್ಲದು ಎನಿಸಿತು. ಕಾವ್ಯದ ನೆಲೆಯಲ್ಲಿಯೇ ಇವರನ್ನು ಗ್ರಹಿಸುತ್ತಾ ಬಂದಿರುವ ಅಧ್ಯಯನಗಳೇ ಅಧಿಕವಾಗಿರುವಾಗ ಇವರ ಗದ್ಯ ಸಾಹಿತ್ಯದ ಅಧ್ಯಯನವೂ ಅಗತ್ಯವೆನಿಸಿತು. ಇದನ್ನು ಸಾಕಾರಗೊಳಿಸಲು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಮುಂದಾಯಿತು.

Reviews

ಮುನ್ನುಡಿ

     ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿಯಾದ ನಂದಳಿಕೆ ಲಕ್ಷ್ಮೀನಾರಣಪ್ಪನು ೧೯ನೇ ಶತಮಾನದ ಕೊನೆಯ ದಶಕದಲ್ಲಿ ರಚಿಸಿದ ಗ್ರಂಥ ‘ರಾಮಾಶ್ವಮೇಧಂ’. ಅದರಲ್ಲಿ ಮುದ್ದಣ ಮನೋರಮೆಯರ ಕಾವ್ಯಸಲ್ಲಾಪ ಒಂದು ಮಧುರ ಭಾವಲಹರಿ. ಮುದ್ದಣನು ಕಥೆಯನ್ನು ‘ಯಾವ ಧಾಟಿಯಲ್ಲಿ ಹೇಳಲಿ? ಪದ್ಯದಲ್ಲೋ? ಗದ್ಯದಲ್ಲೋ?’ಎಂದು ಕೇಳುವನು. ಆಗ ಮನೋರಮೆಯು ‘ಪದ್ಯ ವಧ್ಯಂ; ಗದ್ಯಂ ಹೃದ್ಯಮದರಿಂ ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು’ ಎಂದು ಉತ್ತರಿಸುವಳು.
ಆ ಮಾತಿನಲ್ಲಿ ಗದ್ಯವು ಸುಲಭವಾಗಿ ಜನಮಾನಸದ ಅರಿವಿಗೆ ಒಳಗಾಗುತ್ತದೆ; ಅದು ಅವರಿಗೆ ಮನೋಹರವೂ ಪ್ರಿಯವೂ ಆಗಿ ಒಳಿತನ್ನುಂಟು ಮಾಡುತ್ತದೆ ಎಂಬ ಸ್ಪಷ್ಟತೆಯಿದೆ. ಹೀಗಾಗಿ ಮನೋರಮೆ ಆಧುನಿಕ ಕನ್ನಡ ಸಾಹಿತ್ಯದ ಮೊದಲ ವಿಮರ್ಶಕಿಯಾಗಿ ಕಂಡುಬರುತ್ತಾಳೆ. ಅವಳ ಮಾತು ಮುಂದಿನ ಕನ್ನಡ ಸಾಹಿತ್ಯದ ದಿಕ್‌ಸೂಚಿಯೂ ಆಗಿದೆ.
ಗದ್ಯ ಸಾಹಿತ್ಯವು ಕಥೆ, ಕಾದಂಬರಿ, ನಾಟಕ, ಪ್ರಬಂಧ, ಪ್ರವಾಸ ಸಾಹಿತ್ಯ, ಆತ್ಮಕಥೆ, ಜೀವನಚರಿತ್ರೆ, ವಿಮರ್ಶೆ, ಅನುವಾದ ಮುಂತಾದ ಹಲವು ಪ್ರಕಾರಗಳಲ್ಲಿ ಬೃಹತ್ತಾಗಿ ಬೆಳೆದು ಜನಮನದ ಭಾಗವಾಯಿತು. ಗದ್ಯಬರಹವು ಒಂದು ಪ್ರಮುಖ ಸಂವಹನ ಮಾಧ್ಯಮವಾಗಿ ಬೆಳೆದು ಜನಮನದ ಭಾಗವಾಯಿತು. ಕನ್ನಡದ ಎಲ್ಲ ಭಾಗದ ಕವಿ, ಸಾಹಿತಿಗಳು ಗದ್ಯ ಬರಹವನ್ನು ಒಂದು ಪ್ರಮುಖ ಸಂವಹನ ಮಾಧ್ಯಮವಾಗಿಸಿಕೊಂಡರು. ಗಳಗನಾಥ, ಡಿ.ವಿ.ಜಿ., ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ. ಆರ್. ಕೃಷ್ಣಶಾಸ್ತ್ರೀ,  ಕುವೆಂಪು, ದ. ರಾ. ಬೇಂದ್ರೆ, ರಾವ್‌ಬಹದ್ದೂರ್, ದೇಜಗೌ, ಮಿರ್ಜಿ ಅಣ್ಣಾರಾಯ, ಪಿ. ಲಂಕೇಶ್, ಯು. ಆರ್. ಅನಂತಮೂರ್ತಿ, ಎಸ್. ಎಲ್. ಭೈರಪ್ಪ, ದೇವನೂರು ಮಹಾದೇವ, ಪೂರ್ಣಚಂದ್ರ ತೇಜಸ್ವಿ, ವೈದೇಹಿ, ಚಂದ್ರಶೇಖರ ಕಂಬಾರ, ಮೊಗಳ್ಳಿ ಗಣೇಶ್, ಕುಂ. ವೀರಭದ್ರಪ್ಪ, ಎಂ. ಎಂ. ಕಲಬುರ್ಗಿ, ಓ. ಎಲ್. ನಾಗಭೂಷಣಸ್ವಾಮಿ, ಬಿ. ಎಸ್. ಜಯಪ್ರಕಾಶ ನಾರಾಯಣ ಮುಂತಾದವರು ಗದ್ಯ ಬರಹವನ್ನು ಒಂದು ಕಲೆಯಾಗಿ ಸಹೃದಯರಿಗೆ ಉಣಬಡಿಸಿದರು.
    ಈ ಎಲ್ಲ ಹಿನ್ನೆಲೆಯಲ್ಲಿ ‘ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ.)’ ಕನ್ನಡ ಬೋಧಕರನ್ನು, ಪಿ.ಎಚ್.ಡಿ., ವಿದ್ಯಾರ್ಥಿಗಳನ್ನು ಹಾಗೂ ಇತರ ಕ್ಷೇತ್ರದ ಸಹೃದಯರನ್ನು ಬೇಂದ್ರೆ ಕುವೆಂಪು ಗದ್ಯ ಸಾಹಿತ್ಯ ಅಧ್ಯಯನಕ್ಕೆ ಅಣಿಗೊಳಿಸಿದೆ. ಕನ್ನಡ ನಾಡಿನ ಮೇರು ಕವಿಗಳಾದ ಬೇಂದ್ರೆ, ಕುವೆಂಪು ಅವರ ಕಾವ್ಯದ ವಿಮರ್ಶೆ, ಚರ್ಚೆ, ಚಿಂತನೆಗಳು ಸಾಕಷ್ಟು ನಡೆದಿವೆ. ಅವರ ಗದ್ಯ ಬರಹಗಳ ಹಿನ್ನೆಲೆಯ ಅಧ್ಯಯನ, ವಿವiರ್ಶೆ, ಸಂವಾದ ಅಷ್ಟು ನಡೆದಿಲ್ಲ. ಆ ಕೊರತೆಯನ್ನು ಅರಿತ ಈ ಪ್ರತಿಷ್ಠಾನದವರು ಕೈಕೊಂಡ ಈ ಕಾರ್ಯ ಇಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಶ್ಲಾಘನೀಯವಾಗಿದೆ. ಈ ಮಹತ್ವಪೂರ್ಣ ಕೃತಿಯ ಸಂಪಾದಕರಾದ ಮಂಜುನಾಥ ಡಿ.ಎಸ್., ರವಿಶಂಕರ್ ಎ.ಕೆ., ಅನಿತ ಕೆ.ವಿ., ಇವರ ಕಾರ್ಯವು ಸ್ತುತ್ಯರ್ಹ. 
ಬೇಂದ್ರೆ ಕನ್ನಡ ಕಾವ್ಯಲೋಕದ ವರಕವಿಗಳಾದರೂ, ಇತರ ಸಾಹಿತ್ಯ ಪ್ರಕಾರಗಳಲ್ಲಿ ಅವರು ಆ ಎತ್ತರದ ಸಿದ್ಧಿ ಪಡೆಯಲಿಲ್ಲ. ಕುವೆಂಪು ಮಹಾಕವಿಗಳಾಗಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಸಿದ್ಧಹಸ್ತರಾಗಿ ಮಹಾಕಾದಂಬರಿಕಾರರೂ ಆಗಿದ್ದಾರೆ. ಕುವೆಂಪು ಅವರನ್ನು ವೈಚಾರಿಕ, ವೈಜ್ಞಾನಿಕ, ಗಂಭೀರ ವಿಚಾರ ವಿಮರ್ಶಕರನ್ನಾಗಿ ಜನ ಗುರುತಿಸಿದಂತೆ ಬೇಂದ್ರೆಯವರನ್ನು ಗುರುತಿಸುತ್ತಿಲ್ಲ. ಆದರೆ ಬೇಂದ್ರೆ ಅವರ ‘ಸಾಹಿತ್ಯದ ವಿರಾಟ್ ಸ್ವರೂಪ’ ಗದ್ಯಕೃತಿ ಅವರು ಸತ್ವಶಾಲಿ ಗದ್ಯ ಬರಹಗಾರರೆಂಬುದನ್ನು ಸ್ಪಷ್ಟಪಡಿಸುತ್ತ್ತಿದೆ.
ಈ ಹಿನ್ನೆಲೆಯಲ್ಲಿ ಕುವೆಂಪು ಮತ್ತು ಬೇಂದ್ರೆ ಅವರ ಗದ್ಯಬರಹಗಳನ್ನು ಆಸಕ್ತಿಯಿಂದ ಗಂಭೀರವಾಗಿ ಓದಿ ತೌಲನಿಕವಾಗಿ ವಿಮರ್ಶೆ ಮಾಡುವುದು ಅವಶ್ಯಕ. ಈ ಬಗೆಯ ಅಧ್ಯಯನದಿಂದ ಕನ್ನಡದ ಇಬ್ಬರು ಮಹಾ ಪ್ರತಿಭಾವಂತರ ಆಲೋಚನಾ ಸರಣಿಯನ್ನು ಸೂಕ್ಷö್ಮವಾಗಿ ತಿಳಿಯಲು ಸಹಾಯವಾಗುತ್ತದೆ. ಅದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸುತ್ತದೆ.
* * *

ಕುವೆಂಪು ಅವರು ತಮ್ಮ ಪ್ರತಿಭಾ ಅಭಿವ್ಯಕ್ತಿಯನ್ನು ಕಾವ್ಯಕ್ಕಷ್ಟೆ ಸೀಮಿತಗೊಳಿಸಿಕೊಳ್ಳಲಿಲ್ಲ. ಅದು ಕಥೆ, ಕಾದಂಬರಿ, ವಿಮರ್ಶೆ, ಆತ್ಮಚರಿತ್ರೆ, ಜೀವನಚರಿತ್ರೆ, ಭಾಷಾಂತರ, ನಾಟಕ ಮುಂತಾದವುಗಳಲ್ಲಿ ವಿಸ್ತಾರಗೊಂಡಿತು. ಬೇಂದ್ರೆ ಅವರು ತಮ್ಮ ಪ್ರತಿಭಾ ಅಭಿವ್ಯಕ್ತಿಯನ್ನು ‘ಭಾವಗೀತ’ ರಚನೆಗಷ್ಟೆ ಸೀಮಿತಗೊಳಿಸಿಕೊಂಡರು. ಜೊತೆಗೆ ವಿಮರ್ಶೆ, ನಾಟಕ, ಕಥೆಗಳನ್ನು ಬರೆದರು. ಯಾವುದೇ ಕಾದಂಬರಿ ರಚಿಸಿಲ್ಲ.
ಮೌನ, ಗಹನ, ಗಂಭೀರ ಆಕಾಶಮುಖಿ ವೃಕ್ಷಸಂಕುಲದ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು ಗಂಭೀರ ವ್ಯಕ್ತಿತ್ವದವರು. ಅವರಿಗೆ ಮೈಸೂರಿನ ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸದ ವೇಳೆ ಶಿಕ್ಷಕರಾದವರು ಸಂಸ್ಕೃತ ಭಾಷಾವಲಯದ ವಿದ್ವಾಂಸರು. ಹೀಗೆ ಅವರ ಅರಣ್ಯ ಪ್ರಕೃತಿ ಮತ್ತು ವಿದ್ಯಾಸಂಸ್ಕಾರದ ಫಲ ಅವರನ್ನು ಸಂಸ್ಕೃತ ಭೂಯಿಷ್ಠ ಕಾವ್ಯರಚನೆಯತ್ತ ಕೊಂಡೊಯ್ದಿತು ಎಂದು ಹೇಳಬಹುದು. ಅವರು ತಮ್ಮ ಅಧ್ಯಯನದ ಶಿಸ್ತಿನಿಂದ ಸಂಸ್ಕೃತ ಭಾಷೆಯನ್ನು ಆತ್ಮಗತ ಮಾಡಿಕೊಂಡಿದ್ದರು. ಅವರ ಸಾಹಿತ್ಯ ಹೆಚ್ಚು ಸಂಸ್ಕೃತ ನುಡಿಗಳಿಂದ ಕೂಡಿದ್ದರೂ ತನ್ನದೇ ಆದ ಭಾಷಾಶೈಲಿಯನ್ನು ರೂಪಿಸಿಕೊಂಡಿತು. ಅದು ಜನರಿಗೆ ಪ್ರಿಯವೂ ಅಪ್ಯಾಯಮಾನವೂ ಆಯಿತು.
ಬೇಂದ್ರೆಯವರು ಧಾರವಾಡದ ಕಾಮನಕಟ್ಟೆಯಲ್ಲಿ ಸಾಧಾರಣ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ, ಸಮುದಾಯದ ಬಾಲಕನಾಗಿ ಬೆಳೆದವರು. ಅವರು ‘ಆತ್ಮಕಥನ’ದಲ್ಲಿ ಹೇಳಿಕೊಂಡಿರುವಂತೆ ‘ಪಗಡೆಯಾಟದ ಪಟ್ಟದಂತೆ ನಾಲ್ಕೂ ದಿಕ್ಕಿಗೆ ಚಾಚಿಕೊಂಡ ಕಾಮನಕಟ್ಟೆಯ ಆ ಕೂಟು ಅಲ್ಲಿಯ ಎಲ್ಲದಕ್ಕೂ ಆಶ್ರಯಸ್ಥಾನವಾಗಿತ್ತು. ವರ್ಷಕ್ಕೆ ನಾಲ್ಕು ಸಲವಾದರೂ ಆಗುವ ದೊಡ್ಡಾಟ, ಬಯಲಾಟ, ಕಾಮನಹಬ್ಬ, ಅಲಾಬಿಯ ಮೆರವಣಿಗೆ, ಶ್ರಾವಣ ಮಾಸದೊಳಗಿನ ಅತಿ ವಿಜೃಂಭಣೆಯ ಸೋಗಿನ ಪರಂಪರೆ ಜಂಗು, ಹೆಜ್ಜೆಮೇಳ, ಸನಾದಿಯವರ ಉತ್ಸಾಹದ ವಿಲಾಸ, ಹಬ್ಬಹರಿದಿನಗಳಲ್ಲಿ ಕಂಡುಬರುವ ಉತ್ಸಾಹದ ಉಬ್ಬು, ಹುತ್ತಪ್ಪನ ಕೆಸರಾಟ, ಕಾಮನ ಓಕಳಿ, ಸಂಕ್ರಾಂತಿಯ ಕುಸುರೆಳ್ಳು, ದಸರೆಯ ಬಂಗಾರ, ದೀವಳಿಗೆಯ ಆರತಿ ಎಲ್ಲವನ್ನೂ ಸಾಕ್ಷಿಯಾಗಿ ನೋಡುತ್ತಿತ್ತು’. ಹೀಗಾಗಿ ಅವರ ಕಾವ್ಯ ಜಾನಪದ ನುಡಿ ಬೆಡಗಿನಲ್ಲಿ ಅರಳಿತು.
    ಕುವೆಂಪು ಅವರು ಮೊದಲು ಪ್ರಕಟಿಸಿದ್ದು ನಾಟಕಗಳನ್ನು. ೧೯೨೮ರಲ್ಲಿ ಅವರ ‘ಜಲಗಾರ’ ಮತ್ತು ‘ಯಮನ ಸೋಲು’ ನಾಟಕಗಳು ಪ್ರಕಟವಾದವು. ಅವರ ಕವನ ಸಂಕಲನ ‘ಕೊಳಲು’ ಪ್ರಕಟವಾದುದು ೧೯೩೦ರಲ್ಲಿ. ಕುವೆಂಪು ವೈಜ್ಞಾನಿಕ ಮನೋಧರ್ಮದಲ್ಲಿ ವೈಚಾರಿಕ ಜಾಗೃತಿಯಿಂದ ನಾಟಕಗಳನ್ನು ರಚಿಸಿದ್ದಾರೆ. ಅವರ ನಾಟಕಗಳು ಕಾವ್ಯಮಯವಾಗಿವೆ. ಪೂರ್ತಿ ಗದ್ಯದಲ್ಲಿ ರಚಿತವಾದ ನಾಟಕ: ‘ಮೋಡಣ್ಣನ ತಮ್ಮ’ (೧೯೨೬). ಅದು ಪರಿಸರ ಕಾಳಜಿ ಹೊಂದಿದೆ. ಅವರು ಒಟ್ಟು ೧೪ ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ‘ಬಿರುಗಾಳಿ’ ಮತ್ತು ‘ರಕ್ತಾಕ್ಷಿ’ ಷೇಕ್ಸ್ಪಿಯರನ ‘ಟೆಂಪೆಸ್ಟ್’ ಮತ್ತು ‘ಹ್ಯಾಮ್ಲೆಟ್’ ನಾಟಕದಿಂದ ಸ್ಪೂರ್ತಿ ಪಡೆದಿವೆ.
    ಕುವೆಂಪು ಅವರು ಹಿಂದೂ ಧರ್ಮದಲ್ಲಿರುವ – ತನ್ನ ನೆಲದ ಜನರನ್ನೆ ಅಸ್ಪೃಶ್ಯರನ್ನಾಗಿಸಿ ಪ್ರತ್ಯೇಕವಾಗಿ ಕಾಣುವ ಹೀನ ಮನೋಧರ್ಮವನ್ನು – ಕನ್ನಡ ಸಾಹಿತ್ಯದಲ್ಲಿ ಮೊದಲಿಗೆ ‘ಜಲಗಾರ’ ನಾಟಕದ ಮೂಲಕ ಅನಾವರಣಗೊಳಿಸಿದರು.  ಸ್ಥಳ, ಸಮಾಜ, ಹಕ್ಕುಬಾಧ್ಯತೆಗಳಿಂದ ಹೊರಹಾಕಿ ಅಸ್ಪೃಶ್ಯರನ್ನಾಗಿಸಿದ ಮನೋಭಾವದಲ್ಲಿ ಆರ್ಥಿಕ ಅಸಮಾನತೆಗೆ ಒಳಗುಮಾಡಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಲಾಭವನ್ನು ದೇವರ ಹೆಸರಿನಲ್ಲಿ ತನ್ನದಾಗಿಸಿಕೊಂಡಿರುವ ಪುರೋಹಿತ ಶಾಹಿಯ ಒಳಹುನ್ನಾರವನ್ನು ಛೇಡಿಸಿದರು. ಶಿವನು ದೇವಾಲಯದಲ್ಲಿಲ್ಲ ಅವನು ಕಾಯಕಜೀವಿಗಳಲ್ಲಿದ್ದಾನೆ ಎಂಬುದನ್ನು ಶಿವನ ಮಾತಿನಲ್ಲಿ ‘ಊರ ತೋಟಿಯು ನೀನು, ಜಗದ ತೋಟಿಯು ನಾನು’ ಎಂದು ಪ್ರಕಟಪಡಿಸಿದರು.
    ಭವಭೂತಿಯ ಉತ್ತರರಾಮ ಚರಿತೆ ನಾಟಕದಲ್ಲಿ ಬರುವ ಶಂಭೂಕವಧ ಪ್ರಸಂಗ ವೈದಿಕರ ಶ್ರೇಣಿಕೃತ ಸಮಾಜ ಪೋಷಣೆಯ ತಂತ್ರದ್ದು. ಅದರಲ್ಲಿ ‘ಅಸಹ್ಯ ವರ್ಣಭ್ರಾಂತಿ ಅಡಗಿದೆ’ ಎಂದು ತಿಳಿದ ಕುವೆಂಪು ಅದರ ದೋಷವನ್ನು ನಿವಾರಿಸಿ ಹೊಸ ಪಠ್ಯವನ್ನು ‘ಶೂದ್ರ ತಪಸ್ವಿ’ ನಾಟಕದಲ್ಲಿ ಸೃಷ್ಟಿಸಿದರು. ಅದರ ಕೊನೆಯಲ್ಲಿ ಬ್ರಾಹ್ಮಣನು ಶೂದ್ರ ತಪಸ್ವಿಗೆ ಮಣಿಯುತ್ತಾನೆ. ಆ ನಾಟಕ ರಚನೆಯಾದಾಗ ಅದನ್ನು ವಿರೋಧಿಸಿ ಸಾಹಿತ್ಯವಲಯದಲ್ಲಿ ತುಂಬಾ ಚರ್ಚೆಯಾಗಿದೆ. ಅದಕ್ಕೆ ಉತ್ತರವಾಗಿ ಕುವೆಂಪು ‘ಶೂದ್ರ ತಪಸ್ವಿ-ಮಾರ್ನುಡಿ’ ಬರೆದಿದ್ದಾರೆ.  ಯುವ ಸಾಹಿತ್ಯಮಿತ್ರರು ಅದರತ್ತ ಗಮನಕೊಡಬೇಕು:
    ‘ಅವಿವೇಕ ‘ತೀವ್ರವಾದ ಶ್ರದ್ಧೆ’ಯಾದರೂ ಅವಿವೇಕವಾಗಿಯೆ ನಿಲ್ಲುತ್ತದೆ. ಆದ್ದರಿಂದ ತನ್ನ ಶ್ರದ್ಧಾಂಶದಲ್ಲಿ ಅಲ್ಲದಿದ್ದರೂ ಅವಿವೇಕಾಂಶದಲ್ಲಿ ತಿದ್ದುಪಡೆಯ ಬೇಕಾದುದೇ ಅತ್ಯಂತ ಅಗತ್ಯ’.
    ಅವರ ‘ಸ್ಮಶಾನ ಕುರುಕ್ಷೇತ್ರಂ’ ನಾಟಕ ಯುದ್ಧದ ಭೀಕರ ಅನಾಹುತಗಳನ್ನು ಚಿತ್ರಿಸುತ್ತ, ಮಾನವೀಯ ಮೌಲ್ಯಗಳನ್ನು ಮನಕ್ಕೆ ಮುಟ್ಟಿಸುತ್ತದೆ. ‘ಬೆರಳ್‌ಗೆ ಕೊರಳ್’ ನಾಟಕ ಗುರುತತ್ವ, ಕರ್ಮತತ್ವ, ಯಜ್ಞತತ್ವದ ಮೇಲೆ ರಚಿತವಾಗಿದೆ. ‘ಮಹಾರಾತ್ರಿ’ ಚಾರಿತ್ರಿಕ ನಾಟಕವಾಗಿದೆ.
    ಅವರ ನಾಟಕಗಳಲ್ಲಿ ವರ್ಗ, ವರ್ಣ ಸಮಸ್ಯೆಗಳ ಮೂಲವನ್ನು ಕೆದಕಿ, ಸಾಂಪ್ರದಾಯಿಕ ಅನಿಷ್ಟಗಳನ್ನು ಕಿತ್ತೊಗೆಯುವ ಮನೋಭಾವವಿದೆ. ಅದು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರಗಳನ್ನು ಬಯಲು ಮಾಡುತ್ತದೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವ ಬಂಡಾಯ ಮನೋಧರ್ಮವನ್ನು ಓದುಗ/ಪ್ರೇಕ್ಷಕರಲ್ಲುಂಟು ಮಾಡುತ್ತದೆ.  ಹೀಗಾಗಿ ಮನುಜವಿರೋಧಿ ಪದ್ಧತಿಗಳ ವಿರುದ್ಧ ಜನ ಜಾಗೃತವಾಗುವಂತೆ ನಾಟಕ ಕ್ರಿಯಾಶಕ್ತಿಯನ್ನು ಬಳಸಿದ ಮೊದಲಿಗರು ಕುವೆಂಪು ಆಗಿದ್ದಾರೆ.
    ‘ಸಾಮಾಜಿಕರನ್ನು ಸಾಹಿತ್ಯದ ಸೂತ್ರದಲ್ಲಿ ಸೇರಿಸಿಕೊಳ್ಳಬೇಕಾದರೆ ‘ಹುಚ್ಚಾಟ’ವು ಒಂದು ಹಾದಿ’ (ಸಾಹಿತ್ಯದ ವಿರಾಟ್ ಸ್ವರೂಪ, ಪುಟ-೨೯೫) ಎಂದು ತಿಳಿದ ಬೇಂದ್ರೆಯವರು ೬ ಹುಚ್ಚಾಟ (ಹಾಸ್ಯ ನಾಟಕ; ಪ್ರಹಸನ) ಗಳನ್ನು ಬರೆದಿದ್ದಾರೆ.  ಅವುಗಳು: ‘ಗೋಲ್’ (೧೯೨೦), ‘ತಿರುಕನ ಪಿಡುಗು’, ‘ಸಾಯೋಆಟ’ (೧೯೨೫), ‘ದೆವ್ವದ ಮನೆ’, ‘ಹಳೆಯ ಗೆಣೆಯರು’, ‘ಜಾತ್ರೆ’ (೧೯೩೪). 
    ‘ಸಾಯೋಆಟ’ ಮತ್ತು ‘ಜಾತ್ರೆ’ ಕನ್ನಡದಲ್ಲಿ ರಚಿತವಾದ ಮೊದಲ ಅಸಂಗತ ನಾಟಕಗಳಾಗಿವೆ. ಗತಕಾಲದ ರಾಜರ ನಾಟಕವಾಗಿರುವ ಅಲ್ಲಿಯ ರಾಜ ದಿರಿಸು ತೆಗೆದು ವೇಷಭೂಷಣ ಬದಲಾಯಿಸಿದರೆ ಇಂದಿನ ಜನನಾಯಕರ, ಇಂದಿನ ಸಾಮಾಜಿಕ ವ್ವವಸ್ಥೆಗೆ ಹಿಡಿದ ಕನ್ನಡಿಯಾಗಿ ಸದಾ ಹಸಿರಾಗಿರುವ ಸಾರ್ವಕಾಲಿಕ ತತ್ವವನ್ನು ಅವು ಒಳಗೊಂಡಿವೆ.
    ಅವರು ರಚಿಸಿರುವ ಆವಿದ್ಧ (ದುಃಖಾಂತ ಅಥವಾ ದುರಂತ ನಾಟಕ) ಗಳು  ೧.‘ನಗೆಯ ಹೊಗೆ’ ೨.‘ಉದ್ಧಾರ’.   ಅವರ ಸುಕುಮಾರ (ಲಘು ಮತ್ತು ವಿನೋದಕರವಾದ ಸುಖಾಂತವಾದ ಪ್ರಹಸನ) ನಾಟಕಗಳು: ೧.‘ಮಂದೀ ಮದಿವಿ’ ೨.‘ಮಂದೀ ಮಕ್ಕಳು’ ೩.‘ಮಂದೀ ಮನಿ’ (ಹೊಸ ಸಂಸಾರ), ೪.‘ಶೋಭನಾ’, ೫.‘ಆಥರಾ ಈಥರಾ’, ೬.‘ಮಕ್ಕಳು ಅಡಿಗಿ ಮನಿ ಹೊಕ್ಕರೆ’.
    ಬೇಂದ್ರೆಯವರು ಮನೋರಂಜನಾ ನೆಲೆಯಲ್ಲಿ ನಾಟಕಗಳನ್ನು ರಚಿಸಿದ್ದರೂ ಅವುಗಳಲ್ಲಿ ಸಾಮಾಜಿಕ ಕಾಳಜಿ, ಸಮಾಜೋದ್ಧಾರದ ಚಿಂತನೆಗಳಿವೆ.
* * *

    ಕುವೆಂಪು ಅವರ ಪ್ರಕಟಿತ ಎರಡು ಕಥಾ ಸಂಕಲನಗಳು: ‘ಸಂನ್ಯಾಸಿ ಮತ್ತು ಇತರ ಕಥೆಗಳು’, ‘ನನ್ನ ದೇವರು ಮತ್ತು ಇತರ ಕಥೆಗಳು’. ಅವುಗಳಲ್ಲಿ ಒಟ್ಟು ೧೭ ಕಥೆಗಳಿವೆ. ‘ಸಂನ್ಯಾಸಿ’ ಕಥೆಯಲ್ಲಿ ಸಂಸಾರದಿAದ ಪಲಾಯನ ಮಾಡಿದ ಯುವಕನನ್ನು ಮತ್ತೆ ಸಂಸಾರಕ್ಕೆ ಎಳೆದು ತರುವ ಯುವತಿಯ ಪ್ರೀತಿಯ ಜಾಣ್ಮೆ ಚಿತ್ರಿತವಾಗಿದೆ. ‘ಕ್ರಿಸ್ತನಲ್ಲ, ಪಾದ್ರಿಯ ಮಗಳು’ ನಾಯಕ ಯೋಗಿನ್‌ನ ದುರಂತ ಕಥೆಯಾಗಿದೆ. ‘ಯಾರೂ ಅರಿಯದ ವೀರ’ ಕನ್ನಡದ ಉತ್ತಮ ಕಥೆಯಾಗಿದೆ. ಆಳು ಲಿಂಗ ಓದುಗರ ಮನದಲ್ಲಿ ಸ್ವಾರ್ಥತ್ಯಾಗಿ, ಧರ್ಮಪ್ರಾಜ್ಞನಾಗಿ ಉಳಿಯುತ್ತಾನೆ. ವೈದ್ಯರ ಹಣದ ದಾಹ ತಿಳಿಸುವ ಕಥೆ ‘ಮಾಯದ ಮನೆ’ಯಾಗಿದ್ದರೆ ‘ಶ್ರೀಮನ್ಮೂಕವಾಗಿತ್ತು!’ ಮೂಕ ಪ್ರಾಣಿಯ ಜೊತೆಗಿನ ರೈತನ ಬಾಂಧವ್ಯದ ಮಧುರ ಕಥೆಯಾಗಿದೆ. ಮನೋವೈಜ್ಞಾನಿಕ ವಿಶ್ಲೇಷಣೆಯ ಕಥೆ ‘ನನ್ನ ದೇವರು’ ಆಗಿದ್ದರೆ, ಇಂದಿನ ಯುವಕರಿಗೆ ಮಾರ್ಗದರ್ಶಿಯಾಗಿ ವಿಶೇಷ ಅನುಭವವನ್ನುಂಟುಮಾಡುವ ಕಥೆ ‘ಮೀನಾಕ್ಷಿಯ ಮನೇ ಮೇಷ್ಟರು’ ಆಗಿದೆ. ‘ಧನ್ವಂತರಿಯ ಚಿಕಿತ್ಸೆ’ ಕಥೆಯು ಒಂದು ‘ಫ್ಯಾಂಟಸಿ’.
    ಬೇಂದ್ರೆಯವರ ‘ನಿರಾಭರಣ ಸುಂದರಿ’ ಕಥಾಸಂಕಲನದಲ್ಲಿ ಒಟ್ಟು ೮ ಕಥೆಗಳಿವೆ. ಕವಿಯಾದ ಬೇಂದ್ರೆಯವರು ‘ನಿರಾಭರಣ ಸುಂದರಿ’ ಕಥೆಯನ್ನು ಧ್ವನ್ಯಾರ್ಥದಲ್ಲಿ ರಚಿಸಿದ್ದಾರೆ. ‘ನಿರಾಭರಣ ಸುಂದರಿ’ಯ ಚಿತ್ರಗಾರ ಪದ್ಮ. ಆತನ ಹೆಂಡತಿ ಕವಯಿತ್ರಿಯಾದ ನಾಗಶ್ರೀ. ಅವಳ ಚಿತ್ತಕ್ಕೆ ಆ ಚಿತ್ರವು ‘ತನ್ನ ಜೀವಜೀವಾಳದ ನಿರಂಜನ ಪ್ರಕೃತಿಯೆ ಆಕಾರ ತಾಳಿದಂತೆ ಹೊಳೆಯುವುದು.’ ಜಿನಯೋಗಿಯ ಆತ್ಮಬಿಂಬದ ‘ನಿರಾಭರಣ ಸುಂದರಿ’ಗೆ ಪದ್ಮನು ‘ಮಲ್ಲಿ’ ಎಂದು ಕರೆಯುವನು.  
    ನಾಗಚಂದ್ರನ ಮಲ್ಲಿನಾಥ ಪುರಾಣವನ್ನು ಅಭ್ಯಾಸಮಾಡಿ ಸವಿದ ಬೇಂದ್ರೆಯವರು ಮಲ್ಲಿನಾಥನನ್ನು ಜೈನರ ಒಂದು ಪಂಗಡದವರು ಹೆಣ್ಣೆಂದೂ; ಇನ್ನೊಂದು ಪಂಗಡದವರು ಗಂಡೆಂದೂ ಆರಾಧಿಸುವ ಹಿನ್ನೆಲೆಯಲ್ಲಿ ತಮ್ಮ ಭಾವಲೋಕದ ಕಥೆಯಾಗಿ ‘ನಿರಾಭರಣ ಸುಂದರಿ’ಯನ್ನು ಹೆಣೆದಿದ್ದಾರೆ. ಹೆಣ್ಣೆಂದು ಕರೆದ ಜೈನ ಸಂಪ್ರದಾಯದವರ ‘ಮಲ್ಲಿ’ಯೇ ಬೇಂದ್ರೆಯವರ ಕಥಾರೂಪ ಧರಿಸಿರುವ ‘ನಿರಾಭರಣ ಸುಂದರಿ’ ಎಂಬುದು ನನ್ನ ಶೋಧ. ಇದು ಕನ್ನಡ ಕಥಾಸಾಹಿತ್ಯದಲ್ಲಿಯೇ ವಿಶಿಷ್ಟವಾದ ಕಥೆ.
‘ಹಿರಿದ ಕತ್ತಿ’, ‘ಏಕಾಕಿನೀ’ ಕಥೆಗಳಲ್ಲಿ ಬೇಂದ್ರೆಯವರು ಸ್ತ್ರೀಯ ಅಸಹಾಯಕತೆ, ನೋವು, ಸಮಾಜ ಅವಳನ್ನು ಕಾಣುವ ದೃಷ್ಟಿ ಮತ್ತು ಪುರುಷಪರವಾದ ಸಾಮಾಜಿಕ ವ್ಯವಸ್ಥೆ, ಸ್ತ್ರೀಯನ್ನು ಶೋಷಿಸುವ ರೀತಿಯನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ‘ಮಗುವಿನ ಕರೆ’ ಕಥೆಯಲ್ಲಿ ಅವರು ಸ್ತ್ರೀಯು ತಾಳ್ಮೆ, ಸಹನೆ, ವಾತ್ಸಲ್ಯದಿಂದ ಜೀವನವನ್ನು ಎದುರಿಸಬೇಕು; ಸಾವು ಹೆಚ್ಚಲ್ಲ ಬದುಕು ಹೆಚ್ಚು ಎಂಬುದನ್ನು ಧ್ವನಿಸಿದ್ದಾರೆ.
    ಕುವೆಂಪು ಮತ್ತು ಬೇಂದ್ರೆಯವರ ಕಥೆಗಳಲ್ಲಿ ನವೋದಯ ಕಾಲದ ಆದರ್ಶ, ಜೀವನ ಪ್ರೀತಿಯ ಜೊತೆಗೆ ಜೀವನ ವಾತ್ಸಲ್ಯ ಮತ್ತು ವೈಚಾರಿಕ ಪ್ರಜ್ಞೆ ಹಾಸುಹೊಕ್ಕಾಗಿವೆ. ಅವರ ಕಥೆಗಳಲ್ಲಿ ಸಮಾಜದ ವಿವಿಧ ವ್ಯಕ್ತಿ ವಿಷಯಗಳ ಅಂತರಂಗ ಬಹಿರಂಗಗಳ ಸೂಕ್ಷ್ಮ ಅನಾವರಣವನ್ನು ಕಾಣುತ್ತೇವೆ.
* * *

    ಬೇಂದ್ರೆ ಮತ್ತು ಕುವೆಂಪು ಒಬ್ಬರನ್ನೊಬ್ಬರು ಗೌರವಿಸುತ್ತಿದ್ದು ಕನ್ನಡ ಕಾವ್ಯ ಪರಂಪರೆಯ ಪ್ರತೀಕವಾಗಿದ್ದರು. ಕುವೆಂಪು ಅವರು ಬೇಂದ್ರೆಯವರ ಕಾವ್ಯ ಕುರಿತು ವಿಮರ್ಶೆ ಬರೆದಿಲ್ಲ. ಆದರೆ ಅವರು ‘ಬೇಂದ್ರೆಯವರ ಆ ಹೆಸರಿಗೆ ಯಾವ ವಿಶ್ಲೇಷಣೆಗಳನ್ನೂ ಅಂಟಿಸದೆ, ಬರಿ ‘ಬೇಂದ್ರೆ’ ಎನ್ನುತ್ತೇನೆ. ಏಕೆಂದರೆ, ಎಲ್ಲಕ್ಕಿಂತಲೂ ದೊಡ್ಡ ವಿಶೇಷಣ ಆ ಹೆಸರು’ ಎಂದು ಮನತುಂಬಿ ಹೇಳಿದ್ದಾರೆ.
    ಬೇಂದ್ರೆ ಅವರು ಕುವೆಂಪು ಬಗ್ಗೆ ‘ಯುಗದ ಕವಿಗೆ’ ಎಂಬ ಕವನ ರಚಿಸಿ ಗೌರವಿಸಿದ್ದಾರೆ. ಕುವೆಂಪು ಅವರ ರೂಪು ಮತ್ತು ವ್ಯಕ್ತಿತ್ವವನ್ನು ನಾಲ್ಕು ಪದಗಳಲ್ಲಿ ಹೀಗೆ ಅನನ್ಯವಾಗಿ ಚಿತ್ರಿಸಿದ್ದಾರೆ :
     ‘ಚಾರುತ್ವದ ಕುಂದಣದಲ್ಲಿ 
         ಚಾರಿತ್ರ್ಯದ ರತ್ನ’
    ಬೇಂದ್ರೆ ಅವರು ‘ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು’ ಕೃತಿಯಲ್ಲಿ ರತ್ನಾಕರನ ಭರತ, ಚಾಮರಸನ ಅಲ್ಲಮಪ್ರಭು, ಲಕ್ಷ್ಮೀಶನ ಶ್ರೀಕೃಷ್ಣ, ಕುವೆಂಪು ಅವರ ರಾವಣ ಪಾತ್ರಗಳನ್ನು ವಿಮರ್ಶಿಸಿದ್ದಾರೆ. ಅದು ಕನ್ನಡ ಸಾಹಿತ್ಯದ ಪೂರ್ಣದೃಷ್ಟಿಯ ವರಕವಿಗಳ ವಿಮರ್ಶೆಯಾಗಿದೆ.
    ಬೇಂದ್ರೆಯವರು ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣ ‘ಸಾಹಿತ್ಯದ ವಿರಾಟ್ ಸ್ವರೂಪ’ ಅದೇ ಹೆಸರಿನಲ್ಲಿ ೧೨೮ ಲೇಖನಗಳ ಬೃಹತ್ ಗದ್ಯ ಕೃತಿಯಾಗಿ ಪ್ರಕಟವಾಗಿದೆ.  ಅದನ್ನು ದೃಷ್ಟಿ-ದರ್ಶನ, ಕವಿ-ಕೃತಿ, ಕರ್ನಾಟಕ-ಮಹಾರಾಷ್ಟ್ರ ಮತ್ತು ವಿಚಾರ-ವಿವೇಕ ಎಂಬ ನಾಲ್ಕು ಭಾಗಗಳನ್ನಾಗಿ ಮಾಡಿದ್ದಾರೆ.  ಪ್ರತಿ ಲೇಖನವನ್ನು ಓದಿ ಸವಿದಾಗ ಬೇಂದ್ರೆಯವರ ವಿಮರ್ಶಕ, ಸಂಶೋಧಕ ಗುಣ ಅರಿವಾಗುತ್ತದೆ.
    ಕುವೆಂಪು ಅವರ ಗದ್ಯ ಬರಹ ತುಂಬಾ ವಿಶಾಲವಾದುದು. ಗದ್ಯದ ವಿವಿಧ ಪ್ರಕಾರಗಳಾದ ಪ್ರಬಂಧ, ವಿಮರ್ಶೆ, ಭಾಷಣ-ಲೇಖನ, ಆತ್ಮಚರಿತ್ರೆ, ಜೀವನಚರಿತ್ರೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದಗಳ ಬೃಹತ್ ಸಾಹಿತ್ಯ ಸಹೃದಯರನ್ನು ಕೈಬೀಸಿ ಕರೆಯುತ್ತಿದೆ. ಇಷ್ಟು ವಿಫುಲವಾಗಿ ಕಾವ್ಯ, ಸಾಹಿತ್ಯ ರಚನೆ ಮಾಡಿದ ಇನ್ನೊಬ್ಬ ಸಾಹಿತಿ ಭಾರತದಲ್ಲಿಲ್ಲ ಎಂದು ಹೇಳಬಹುದು. ಅವರ ಪಂಚಮAತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಅವರ ಎಲ್ಲ ಕೃತಿಗಳಲ್ಲಿ ಉಸಿರಾಡಿವೆ. ಈ ಈರ್ವರು ಮಹಾಕವಿಗಳ ಸಾಹಿತ್ಯ ಅಧ್ಯಯನದಿಂದ ಇಂದಿನ ಯುವ ಮನಸ್ಸು ಹಿಗ್ಗಲಿ ಎಂದು ಆಶಿಸುತ್ತೇನೆ.
* * *

    ಕುವೆಂಪು ಮತ್ತು ಬೇಂದ್ರೆ ಅವರ ಗದ್ಯ ಸಾಹಿತ್ಯ ಅಧ್ಯಯನ ಲೇಖನಗಳ ಈ ಸಂಗ್ರಹ ‘ಬೇರು ತೇರು’ ಎಂಬ ಅರ್ಥಪೂರ್ಣ ಶೀರ್ಷಿಕೆ ಹೊಂದಿದೆ. ಕುವೆಂಪು ಮತ್ತು ಬೇಂದ್ರೆ ಅವರ ಸಾಹಿತ್ಯ ಕನ್ನಡದ ಬೇರು ಆಗಿದ್ದು, ಅವರ ಸಾಹಿತ್ಯವನ್ನು ಕುರಿತ ಲೇಖನಗಳು ತೇರು ಆಗಿವೆ. ಈ ತೇರು ಹೂ ತೋರಣಗಳಿಂದ, ಬಣ್ಣ ಬೆಡಗಿನಿಂದ ಕಂಗೊಳಿಸುತ್ತಿದೆ. ಅದಕ್ಕೆ ದವನ ಹಚ್ಚಿದ ಬಾಳೆಹಣ್ಣನ್ನು ತೂರಿ ನಾನು ಆನಂದಿಸಿದ್ದೇನೆ.
    ‘ಬೇರು ತೇರು’ವಿನಲ್ಲಿ ಕುವೆಂಪು ಅವರ ಕಥೆಗಳು, ಮಲೆನಾಡಿನ ಚಿತ್ರಗಳು, ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ಜಲಗಾರ, ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ವಿಚಾರ ಸಾಹಿತ್ಯ, ವಿಮರ್ಶೆ, ಮುನ್ನುಡಿ ಮುಂತಾದ ಅವರ ಎಲ್ಲ ಪ್ರಕಾರದ ಗದ್ಯ ಸಾಹಿತ್ಯಗಳ ಅಧ್ಯಯನ ಲೇಖನಗಳಿವೆ. ಬೇಂದ್ರೆಯವರ ಕಥೆಗಳು, ನಾಟಕಗಳು, ಹರಟೆಗಳು (ಪ್ರಬಂಧ), ‘ಸಾಹಿತ್ಯದ ವಿರಾಟ್ ಸ್ವರೂಪ’ದಲ್ಲಿಯ ಆಯ್ದ ಲೇಖನಗಳ ವಿಶ್ಲೇಷಣೆ; ಅವರ ಕನ್ನಡ ಅಸ್ಮಿತೆ ಕುರಿತ ಲೇಖನಗಳಿವೆ. ಅವು ಅವರ ಗದ್ಯದ ಆಳ ಅಗಲಗಳ ಒಂದು ಪಕ್ಷಿನೋಟ ನೀಡುತ್ತವೆ.
    ‘ಬೇರು ತೇರು’ವಿನಲ್ಲಿ ೪೫ಜನ ಸಾಹಿತ್ಯ ಅಧ್ಯಯನಶೀಲರು ಕುವೆಂಪು ಮತ್ತು ಬೇಂದ್ರೆ ಅವರ ಈ ಮೇಲೆ ತಿಳಿಸಿರುವ ಕೃತಿಗಳನ್ನು ಅಧ್ಯಯನ ಮಾಡಿ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ೧೯ ಜನ ಕನ್ನಡ ಪ್ರಾಧ್ಯಾಪಕರು ಮೌಲಿಕ ಲೇಖನಗಳನ್ನು ಬರೆದಿದ್ದು ಅವರಲ್ಲಿ ೧೨ ಜನ ಮಹಿಳೆಯರು ಎಂಬುದು ಹೆಮ್ಮೆಯ ವಿಷಯವಾಗಿದೆ. ಅದರಲ್ಲಿ ಕುವೆಂಪು ಗದ್ಯದ ಬಗ್ಗೆ ೧೩ ಮತ್ತು ಬೇಂದ್ರೆ ಗದ್ಯದ ಬಗ್ಗೆ ೬ ಲೇಖನಗಳಿವೆ. ಸಹಾಯಕ ಪ್ರಾಧ್ಯಾಪಕರಾಗಿದ್ದು ಸಂಶೋಧನಾ ವಿದ್ಯಾರ್ಥಿಗಳಾಗಿ ಅಧ್ಯಯನಶೀಲರಾಗಿ ಲೇಖನ ಬರೆದಿರುವವರು ೪ ಜನ. ಅವರಲ್ಲಿ ಇಬ್ಬರು ಮಹಿಳೆಯರು. ಆ ಲೇಖನಗಳಲ್ಲಿ ಇಬ್ಬರು ಕುವೆಂಪು ಮತ್ತು ಒಬ್ಬರು ಬೇಂದ್ರೆ ಕುರಿತು ಬರೆದಿದ್ದಾರೆ. ಕನ್ನಡ ಉಪನ್ಯಾಸಕರು ೯ ಜನ ಲೇಖನಗಳನ್ನು ಬರೆದಿದ್ದಾರೆ. ಅವರಲ್ಲಿ ೭ ಜನ ಪುರುಷರು. ೩ ಜನ ಕುವೆಂಪು ಬಗ್ಗೆ, ೪ ಜನ ಬೇಂದ್ರೆ ಬಗ್ಗೆ, ಒಬ್ಬರು ಬೇಂದ್ರೆ ಮತ್ತು ಕುವೆಂಪು ಅವರ ಗದ್ಯಸಾಹಿತ್ಯದ ವಿಶ್ವಮಾನವತೆಯ ಜೀವನಧರ್ಮ ಕುರಿತು ಬರೆದಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಲ್ಲಿ ೭ ಜನ ಪುರುಷರು ೭ ಜನ ಮಹಿಳೆಯರು ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ೧೦ ಜನ ಕುವೆಂಪು ಗದ್ಯ, ೩ ಜನ ಬೇಂದ್ರೆ ಗದ್ಯ, ಒಬ್ಬರು ಬೇಂದ್ರೆ ಹಾಗು ಕುವೆಂಪು ಅವರ ‘ರಸ ಚಿಂತನೆ’ ಕುರಿತು ತೌಲನಿಕ ಅಧ್ಯಯನ ನಡೆಸಿ ಬರೆದಿರುವ ಲೇಖನಗಳಿವೆ. ಓರ್ವ ನಿವೃತ್ತ ಇಂಜಿನಿಯರ್ ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ – ಇಂದು ಇನ್ನೂ ಹೆಚ್ಚು ಪ್ರಸ್ತುತ’ ಎಂಬ ಲೇಖನ ಬರೆದಿದ್ದಾರೆ.
    ಅಧ್ಯಯನಶೀಲ ಮನಸ್ಸಿನ, ಚಿಂತನಶೀಲ ಉತ್ಸಾಹಿ ಮನಸ್ಸುಗಳ ಈ ಬರೆಹಗಳು ಮೌಲಿಕವಾಗಿವೆ. ಕನ್ನಡದ ಮುಂದಿನ ಉತ್ತಮ ಭವಿಷ್ಯವನ್ನು ಸೂಚಿಸುವ ಬೆಳಕಿನ ಕಿರಣಗಳಾಗಿವೆ.

 ಡಾ. ಜಿ. ಕೃಷ್ಣಪ್ಪ,  ಬೆಂಗಳೂರು
೧೮-೩-೨೦೧೯                                                                                                                                                                                                 

Related Books