ಭಾನುಮತಿ

Author : ಸಿ.ಎಂ.ಗೋವಿಂದರೆಡ್ಡಿ

Pages 132

₹ 130.00




Year of Publication: 2022
Published by: ಮಹಿಮಾ ಪ್ರಕಾಶನ, ಮೈಸೂರು
Address: No.1393/2, CH-31, 6th cross, Krishnamurthypuram, Mysuru- 570004
Phone: 9448759815

Synopsys

ಭರ್ತಿಯಾದ ಖಾಲಿ ಜಾಗ ಭಾನುಮತಿ ಯಾರು? ಎಂಬ ಪ್ರಶ್ನೆ ಹಾಕಿದರೆ ಎಷ್ಟು ಜನರು ಉತ್ತರಿಸುವರೋ ಗೊತ್ತಿಲ್ಲ ! ಸುಯೋಧನ ಸಾರ್ವಭೌಮನ ಸತಿಯಾಗಿ ನೇಪಥ್ಯಕ್ಕೆ ಸರಿದಿದ್ದ ವರಸತಿ ಭಾನುಮತಿಯನ್ನು ಕುರಿತು ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ಮತ್ತು ಗೆಳೆಯ ಸಿ.ಎಂ.ಗೋವಿಂದರೆಡ್ಡಿ ಖಂಡಕಾವ್ಯ ರಚಿಸಿ ಸ್ನೇಹದ ಸಲುಗೆಯಿಂದ ನನ್ನ ಕೈಯಲ್ಲಿಟ್ಟು ನಾಲ್ಕು ಮಾತು ಬರೆಯಲು ಕೇಳಿದರು. ಈ ವಿರಳಾತಿ ವಿರಳ ಕಾವ್ಯರಚನೆ ನನಗೂ ಆಪ್ತವೆನಿಸಿ, ನನ್ನ ಅನಿಸಿಕೆಗಳನ್ನಿಲ್ಲಿ ಬರೆಯುತ್ತಿದ್ದೇನೆ. ಕಾವ್ಯದ ಅನಾದರ “ಕಾವ್ಯದ ಅನಾದರ” ಎಂಬ ಐತಿಹಾಸಿಕ ನಿರೂಪಣೆಯ ಲೇಖನದಲ್ಲಿ ಗುರುವರ್ಯ ರವೀಂದ್ರನಾಥ ಟ್ಯಾಗೋರ್ ಅವರು (ಅನುವಾದ : ಟಿ.ಎಸ್. ವೆಂಕಣ್ಣಯ್ಯ) ನಮ್ಮ ದೇಶದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಾದಿಗಳಲ್ಲಿ ಮುಖ್ಯಪಾತ್ರಗಳ ಜೀವನಾಡಿಯಾಗಿ ಮಿಡಿದು ಮರೆಯಾದ ಅಥವಾ ನೇಪಥ್ಯಕ್ಕೆ ಸರಿದ ಕಿರುಪಾತ್ರಗಳನ್ನು ಕುರಿತು ಚರ್ಚೆ ಮಾಡುತ್ತಾ “ಕಾವ್ಯದ ಅನಾದರ” ಎಂಬ ಲೇಖನವನ್ನೇ ಬರೆದಿದ್ದಾರೆ. ಊರ್ಮಿಳೆ, ಮಂಥರೆ, ಅಹಲ್ಯೆ, ಶಕುಂತಲೆ, ಶಬರಿ, ಗುಹ, ವಾಲಿ, ಕುಂಭಕರ್ಣ, ಮೇಘನಾದ, ಏಕಲವ್ಯ, ಚಂದ್ರಹಾಸ, ಹರಿಶ್ಚಂದ್ರ, ಯುಯುತ್ಸು, ವಿಕರ್ಣ, ಕೀಚಕ, ಶಕುನಿ, ಸಹದೇವ-ಇನ್ನೂ ಮುಂತಾದವರ ಬದುಕನ್ನು ಗಮನಿಸಿದರೆ ಇವರೆಲ್ಲರೂ ವಿಶಿಷ್ಟವಾದ ನಾಟಕ/ಖಂಡಕಾವ್ಯದ ಕೇಂದ್ರಪಾತ್ರಕ್ಕೆ ಅರ್ಹರಾದವರೆಂದು ಅನಿಸುತ್ತದೆ. ಇಂಥ ಪ್ರಯತ್ನಗಳನ್ನು ದೇಶಭಾಷೆಗಳಲ್ಲಿ ಎಷ್ಟೋ ಮಂದಿ ಕವಿಗಳು ಪುನರ್ರಚಿಸಿದ್ದಾರೆ ಕೂಡಾ. ಈ ದೃಷ್ಟಿಯಿಂದ ಟ್ಯಾಗೋರ್ ಅವರ ಲೇಖನಕ್ಕೆ ಐತಿಹಾಸಿಕ ನಿರೂಪಣೆ ಇದೆ. ಪ್ರಸ್ತುತ ಸಿ.ಎಂ.ಗೋವಿಂದರೆಡ್ಡಿ ಅವರು ದುರ್ಯೋಧನನ ಪತ್ನಿ ಭಾನುಮತಿ ಮತ್ತು ಕರ್ಣನ ಪತ್ನಿ ವೃಷಾಲಿ ಕಡೆಗೆ ಮನಸ್ಸು ಕೊಟ್ಟಿದ್ದಾರೆ. ಕರ್ಣ ಸುಯೋಧನರನ್ನು ಆದಿಕವಿ ಪಂಪನು “ಒಡಲೆರಡುಂ ಜೀವಂ ಒಂದೇ” ಎಂಬಂತೆ ನಿರೂಪಿಸಿದ್ದನು. ಇದನ್ನೇ ರನ್ನನು ಕೂಡಾ ಅನುಸರಿಸಿ “ಗದಾಯುದ್ಧ” ಮಹಾಕಾವ್ಯ ರಚಿಸಿದನು. ಇಪ್ಪತ್ತನೇ ಶತಮಾನದಲ್ಲಿ ಕತೆ+ಸ್ಕ್ರೀನ್ಪ್ಲೇ+ನಿರ್ದೇಶನ+ತ್ರಿಪಾತ್ರಾಭಿನಯದ ಸ್ವಂತ ನಿರ್ಮಾಣದ ಸಿನಿಮಾದಲ್ಲಿ ಓಖಿಖ ಕರ್ಣ+ದುರ್ಯೋಧನ ಪಾತ್ರದೊಂದಿಗೆ ವಿಶೇಷವಾಗಿ ಭಾನುಮತಿ ಮತ್ತು ವೃಷಾಲಿ ಪಾತ್ರಗಳನ್ನು ಪರಿಚಯಿಸಿದ್ದಾರೆ. ಆದರೂ ಈ ಮಹಾಸತಿಯರ ಬದುಕು ಅಜ್ಞಾತವಾಗಿ ಮತ್ತು ಮುಂಬರುವ ಕವಿಗಳಿಗಾಗಿ ಖಾಲಿ ಖಾಲಿಯಾಗಿ ಉಳಿದಿದೆ. ಖಾಲಿ ಇರುವ ಜಾಗವನ್ನು ಭರ್ತಿ ಮಾಡಿರಿ ಕರ್ಣ+ದುರ್ಯೋಧನರ ಸ್ನೇಹಧರ್ಮಕ್ಕೆ ಚ್ಯುತಿಯಾಗದಂತೆ, ವೃಷಾಲಿ+ ಭಾನುಮತಿ ಇಬ್ಬರೂ ಖಡ್ಗದ ಜೋಡುಗಳಂತೆ ಒದಗಿ ಬಂದಿದ್ದರೆಂಬುದು ಸತ್ಯ! ಆದರೆ ಕಥನ ಖಾಲಿ ಖಾಲಿ! ಇವರಿಬ್ಬರ ಜನನ, ಬಾಲ್ಯ, ಯೌವನ, ದಾಂಪತ್ಯ ಜೀವನ ನಿರೂಪಣೆ ಮಹಾಕಾವ್ಯದ ವೇಗ ಓಘಗಳಲ್ಲಿ ಅನುಕ್ತ! ಇದನ್ನು ಕಲ್ಪನಾರಮ್ಯತೆ, ಭಾವನಾಬಲ, ವಿನೂತನ ಕಥನಕಲೆಯ ಮೂಲಕ ಕತೆಯ “ಮೇಯ್ ಕೆಡದಂತೆ” ಪುನರ್ರಚಿಸುವ ಸವಾಲನ್ನು ಗೋವಿಂದರೆಡ್ಡಿ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಭಾನುಮತಿ ಹೆಸರಿನ ಜಾಡು ಹಿಡಿದು ಇವಳನ್ನು ಸೂರ್ಯಾಂಶ ಸಂಜಾತೆಯಾಗಿ ಮಾಡಿರುವುದು ಯಥೋಚಿತವಾಗಿದೆ. ಇದರಿಂದ, ಮಹಾಭಾರತದ ಸುಪ್ರಸಿದ್ಧ ಅಣ್ಣತಂಗಿಯರಾದ ಕೃಷ್ಣ+ಕೃಷ್ಣೆಯರಂತೆ, ವರಭಾನುವಂಶಲಲಾಮನಾದ ಕರ್ಣ+ಭಾನುಮತಿಯರು ಕೂಡಾ ಜನ್ಮಜಾತ ಅಣ್ಣತಂಗಿಯರಾದದ್ದು ಈ ಖಂಡಕಾವ್ಯದ ಪ್ಲಸ್ಪಾಯಿಂಟಾಗಿದೆ. ಅರ್ಜುನನ ಅಸೂಯಾಯಜ್ಞಕ್ಕೆ ಬೆರಳನ್ನೇ ಬೇಳುವೆ ಮಾಡಿದ ಬೇಡರಹಟ್ಟಿಯ ಏಕಲವ್ಯನ ಮನೆಮಗಳಂತೆಯೂ ವೃಷಾಲಿಯನ್ನು ನಿರೂಪಣೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ. ದುರ್ಯೋಧನನಿಗೆ ಭಾನುಮತಿಯನ್ನು ಬಾಳಸಂಗಾತಿಯನ್ನಾಗಿ ಮಾಡುವುದರಲ್ಲಿ ಕರ್ಣ+ವೃಷಾಲಿಯರು ಮಾರುವೇಷದಲ್ಲಿ ವಹಿಸುವ ಪಾತ್ರಚಿತ್ರಣ ಮನೋಜ್ಞವಾಗಿದೆ. ಒಟ್ಟಿನಲ್ಲಿ ಸ್ವಂತಕಲ್ಪನೆ ಮತ್ತು ವಿವಿಧ ಮೂಲಗಳಿಂದ ಸ್ವೋಪಜ್ಞವಾಗಿ ಮತ್ತು ಸಹೃದಯರ ಮನಸ್ಸು ಮೆಚ್ಚಿ ಹೌದು! ಹೌದು! ಎಂಬಂತೆ ಗೋವಿಂದರೆಡ್ಡಿಯವರು ಘಟನಾಪರಂಪರೆಯನ್ನು ಹೆಣೆದು ಈ ಖಂಡಕಾವ್ಯವನ್ನು ರಚಿಸಿರುವುದು ಮೆಚ್ಚಬೇಕಾದ ಸಂಗತಿಯಾಗಿದೆ. ಕೌರವನ ಬದುಕಿನ ಕಳಂಕಗಳಲ್ಲಿ ಒಂದಾದ ಘೋಷಯಾತ್ರೆಯ ಪ್ರಸಂಗವನ್ನು ಗೋವಿಂದರೆಡ್ಡಿ ಕರ್ಣ+ದುರ್ಯೋಧನರ ದಾಂಪತ್ಯದ ವನವಿಹಾರವನ್ನಾಗಿ ಪರಿವರ್ತನೆ ಮಾಡಿರುವುದು ಸಮರ್ಪಕ ಎನಿಸುತ್ತದೆ. ಕರ್ಣನ ಜನ್ಮರಹಸ್ಯದ ಸಂಗತಿಯನ್ನು ಭೀಷ್ಮ, ವೃಷಾಲಿ, ಭಾನುಮತಿವರೆಗೂ ವಿಸ್ತರಣೆ ಮಾಡಿರುವುದು ಕೂಡಾ ಸಹಜವಾಗಿದೆ. ಕರ್ಣ+ದುರ್ಯೋಧನರ ಮರಣದ ನಂತರ ವೃಷಾಲಿ+ಭಾನುಮತಿಯರು ರಣರಂಗದಲ್ಲಿ ಸಹಮರಣ ಪಡೆಯುವುದು ಸಿನಿಮೀಯವೆನಿಸಿದರೂ ಅದೇ ತಾರ್ಕಿಕ ಅಂತ್ಯವೆನಿಸುತ್ತದೆ. ಕರ್ಣ ದುರ್ಯೋಧನರೆಂಬ ಹರಿತವಾದ ಖಡ್ಗದ್ವಯಕ್ಕೆ ಎರಡು ಜೀವಂತ ಜೋಡುಗಳಾಗಿ ಬಾಳಿದ ಹೆಣ್ಣುಜೀವಗಳ ಕಥನವಾಗಿಯೂ ‘ಭಾನುಮತಿ’ ಖಂಡಕಾವ್ಯ ಮನಸೆಳೆಯಿತು. ಇದಕ್ಕಾಗಿ ಗೋವಿಂದರೆಡ್ಡಿ ಅವರನ್ನು ಅಭಿನಂದಿಸುತ್ತಾ ಶುಭ ಹಾರೈಸುತ್ತೇನೆ. ೨೬.೧೨.೨೦೨೧ -ಡಾ.ವಿ.ಚಂದ್ರಶೇಖರ ನಂಗಲಿ ಬೆನ್ನುಡಿ ಬರವಣಿಗೆಯ ವಿಚಾರದಲ್ಲಿ ಎಂದೂ ಸೋಮಾರಿಯಲ್ಲದ, ಸದಾ ಹೊಸ ಪ್ರಯೋಗಗಳಿಗೆ ತುಡಿಯುವ ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯ ಕೃಷಿಯ ವಿರಾಮದಲ್ಲಿ ಹದಿನೆಂಟು ಅಧ್ಯಾಯಗಳ ‘ಭಾನುಮತಿ’ ಖಂಡಕಾವ್ಯವನ್ನು ಬರೆದಿರುವುದು ನನಗೊಂದು ಅಚ್ಚರಿ! ಮಹಾಭಾರತದ ಗಂಭೀರ ಓದುಗರಿಗೆ, ಸಾವಿರಾರು ಹೆಮ್ಮರಗಳ ದಟ್ಟ ಕಾನನದಂತೆ ನೂರಾರು ಪಾತ್ರಗಳ ನಡುವೆ ಭಾನುಮತಿ ದುರ್ಯೋಧನನ ಮಡದಿ ಎಂದಷ್ಟೇ ತಿಳಿದಿರುತ್ತದೆ. ಪಂಪಭಾರತದಲ್ಲಿ ಬರುವ ‘ನೆತ್ತಮನಾಡಿ ಭಾನುಮತಿ ಸೋಲ್ತೊಡೆ...’ ಪ್ರಸಂಗ ನೆನಪಾಗಬಹುದು. ಅಂಥ ಭಾನುಮತಿ ಗೋವಿಂದರೆಡ್ಡಿಯವರನ್ನು ಕಾಡಿ, ಹಲವು ಆಕರಗಳಿಗೆ ಕರೆದೊಯ್ದು, ಖಂಡಕಾವ್ಯವೊಂದರ ಸೃಷ್ಟಿಗೆ ಕಾರಣವಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಕ್ಷಣಹೊತ್ತು ಕಾಣಿಸಿಕೊಂಡು ಮರೆಯಾಗುವ ಮಂಥರೆ, ಶಬರಿ, ಊರ್ಮಿಳೆ, ಅನಲೆ, ಮಂಡೋದರಿಯಂಥ ಪಾತ್ರಗಳಿಗೆ ಶ್ರೀಕುವೆಂಪುರವರ ‘ರಾಮಾಯಣ ದರ್ಶನಂ’ದಲ್ಲಿ ಅಸ್ಮಿತೆಯನ್ನೂ, ಮಹತ್ವವನ್ನೂ ತಂದುಕೊಡಲು ಪ್ರೇರಣೆಯಾದ ‘ಕಾಣ್ಕೆ’ಯ ಶಕ್ತಿಯನ್ನು ಮೈದುಂಬಿಕೊಂಡ ಗೋವಿಂದರೆಡ್ಡಿಯವರು ಭಾನುಮತಿಯನ್ನು ಖಂಡಕಾವ್ಯದ ಕೇಂದ್ರಪಾತ್ರವಾಗಿಸಿಕೊಂಡು ರಸಿಕಜನಮನೋಹಾರಿ ಎನ್ನುವಂತೆ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ. ಕಾವ್ಯವನ್ನು ಪ್ರೀತಿಸಿ ಮತ್ತೆ ಮತ್ತೆ ಕಾವ್ಯ ಬರೆಯುತ್ತ ಕೈ ಪಳಗಿಸಿಕೊಂಡ ಅನಿಯತ ಪ್ರಾಸ, ಲಯ ವಿನ್ಯಾಸದ ಭಾಷಾಪ್ರಯೋಗ ಸುಲಲಿತ ಓದಿಗೆ ಸಹಕಾರಿಯಾಗುವಂತಿದೆ. ಕನ್ನಡ ಕಾವ್ಯಲೋಕದಲ್ಲಿ ಭಾನುಮತಿಯನ್ನು ಅಮರವಾಗಿಸುತ್ತಿರುವ ಈ ಖಂಡಕಾವ್ಯ ಮುಂದೆ ರೆಡ್ಡಿಯವರನ್ನು ಮಹಾಕಾವ್ಯ ರಚನೆಯ ಸಾಹಸಕ್ಕೆ ಸಜ್ಜುಗೊಳಿಸಲೆಂದು ಪ್ರೀತಿಯಿಂದ ಹಾರೈಸುತ್ತೇನೆ. -ಡಾ.ಬೈರಮಂಗಲ ರಾಮೇಗೌಡ

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books