‘ಬಿದಿಗೆ ಚಂದ್ರಮನ ಬಿಕ್ಕು’ ಶುಭಶ್ರೀ ಭಟ್ಟ ಅವರ ಕಥಾಸಂಕಲನವಾಗಿದೆ. ಅನುಭವದ ಹಗೇವಿನಲ್ಲಿ ಕಾಲ್ಪನಿಕತೆಯ ಲೇಪವನ್ನು ಹೊತ್ತು ಹುಟ್ಟುವ ಬರಹಗಳೇ ಕಥೆಗಳು. ಹಾಗೇ ಹುಟ್ಟಬೇಕು ಕಥೆಗಳು, ಅನುಭವಿಸಿ ಬರೆಯದ ಹೊರತು, ಅಸ್ವಾದಿಸಿಕೊಂಡು ಓದಲಾಗುವುದಿಲ್ಲ. ಈ ಇಡೀ ಪುಸ್ತಕದಲ್ಲಿ ಓದುಗನಿಗೊಂದು ಅಂತಹ ಆಸ್ವಾದ ದೊರೆಯುವುದು ಖಂಡಿತ. ಇಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳಿಲ್ಲ. ಇಲ್ಲಿರುವುದೆಲ್ಲ ನಮ್ಮ-ನಿಮ್ಮ ಕಥೆಗಳೇ. ನಾವುಗಳು ಹಿಂದೆಂದೋ ನೋಡಿದ್ದೋ, ಕೇಳಿದ್ದೋ, ಅನುಭವಿಸಿದ ಅನುಭವಗಳೋ ಕಥೆಗಳಾಗಿ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಮಲೆನಾಡ ಸೊಗಡಿರುವ ಕಥೆಗಳು, ಬಯಲು ಸೀಮೆಗೂ ಸಲ್ಲುತ್ತವೆ. ಇಲ್ಲಿರುವ ಹೆಂಗಳೆಯರ ನೋವುಗಳು, ಗಂಡಸರನ್ನೂ ಕಾಡುತ್ತವೆ. ಕೆಲವೊಂದು ಕಥೆಗಳು ತರ್ಕಕ್ಕೆ ದೂಡಿದರೆ, ಇನ್ನಷ್ಟು ಕಥೆಗಳು ಮನಸ್ಸನ್ನು ಆದ್ರ್ರಗೊಳಿಸುತ್ತವೆ. ನನ್ನ ಪ್ರಕಾರ ಈ ಪುಸ್ತಕವನ್ನ ಒಂದೇ ಗುಕ್ಕಿನಲ್ಲಿ ಓದಲಾಗುವುದಿಲ್ಲ. ಅದಕ್ಕೆ ಕಾರಣ ಇಲ್ಲಿ ಪ್ರಸ್ತಾಪವಾಗಿರುವ ವಿಷಯಗಳು. ಒಂದು ಕಥೆಯ ವಿಷಯವನ್ನ ಅರಗಿಸಿಕೊಂಡು ಮುಂದಿನ ವಿಷಯಕ್ಕೆ ತಮ್ಮನ್ನ ತಾವು ತೆರೆದುಕೊಳ್ಳಲು ಖಂಡಿತ ಓದುಗನಿಗೆ ಸಮಯಬೇಕು. ಅಷ್ಟು ಗಾಢವಾಗಿವೆ ವಿಷಯಗಳು.
ಶುಭಶ್ರೀ ಭಟ್ಟ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿದ್ದಾರೆ.ಅಜ್ಜಿ-ಅಪ್ಪನಿಂದ ಬಂದ ಓದು ಬರಹದ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ರಾಜ್ಯದ ಅನೇಕ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯಲ್ಲಿ ಇವರ ಲೇಖನಗಳು, ಕಥೆಗಳು ಪ್ರಕಟಗೊಂಡಿವೆ. ಕೃಷ್ಣನ ಬಗ್ಗೆ ಅಪಾರ ಒಲವು ಹೊಂದಿದ್ದು,ಇತ್ತೀಚಿಗೆ ಗೋಕುಲ ದಿನಗಳನ್ನು ಮರುಸೃಷ್ಟಿಸುವ ಉದ್ದೇಶದಿಂದ ಕೃಷ್ಣ-ರಾಧೆಯ ಕುರಿತಾದ ಕನ್ನಡದ ಹಲವು ಭಾವಗೀತೆಗಳಿಗೆ ದೃಶ್ಯಕಾವ್ಯವನ್ನು ಕಟ್ಟಿಕೊಡುವ ಹೊಸ ಪ್ರಯತ್ನವಾಗಿ Tale Of Parijatha ಎಂಬ ತಮ್ಮದೇ ಯೂಟ್ಯೂಬ್ ಚಾನೆಲ್ ಕಟ್ಟಿಕೊಂಡು ಸಕ್ರಿಯರಾಗಿದ್ದಾರೆ. ಕೃತಿ : ಹಿಂದಿನ ನಿಲ್ದಾಣ ...
READ MORE