ಬ್ರಹ್ಮಯಾನ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 700

₹ 700.00




Year of Publication: 2021
Published by: ಉದಯ ಪ್ರಕಾಶನ
Address: ನಂ 984, 11ನೇ ‘ಎ’ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು – 560010
Phone: 08023389143

Synopsys

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಮಹಲಿಂಗರಂಗನ ಅನುಭವಾಮೃತ ಬ್ರಹ್ಮಯಾನ’ವು ಆಧ್ಯಾತ್ಮದ ಆಧಾರ ರಚಿಸಲ್ಪಟ್ಟ ಕೃತಿ. ಅಧಿಕಾರ ಲಕ್ಷಣ ,ವೈರಾಗ್ಯ ಪ್ರಕರಣ , ತ್ವಂಪದಾರ್ಥ ಶೋಧನೆ, ತತ್ಪದಾರ್ಥ ಶೋಧನೆ, ಅಸಿಪದಾರ್ಥ ನಿರ್ಣಯ, ಸಪ್ತಭೂಮಿಕೆಗಳ ಅಭ್ಯಾಸ, ಪರಮಾತ್ಮದ ನಿರೂಪಣ,ಮಾಯೆಯ ಮಿಥ್ಯಾಸ್ವರೂಪ, ಜೀವತ್ರಯ ವಿಚಾರ, ನಿರ್ಗುಣಾರಾಧನೆಯ ನಿರ್ಣಯ, ಜೀವನ್ಮುಕ್ತಿ ನಿರೂಪಣ ಎಂಬ 11 ಅಧ್ಯಾಯಗಳಿದ್ದು, ಅವುಗಳ ಉಪವಿಭಾಗಗಳಿವೆ.

ಕೃತಿಕಾರ ಮಲ್ಲೇಪುರಂ ಜಿ. ವೆಂಕಟೇಶ ಹೇಳುವಂತೆ `ಬ್ರಹ್ಮಯಾನ’ ಮಹಾಸಂಪುಟವು ಭೌತಿಕಚರ್ಯೆಯನ್ನು ವಿಮುಕ್ತಗೊಳಿಸಿ ಪಾರಮಾರ್ಥಿಕ ನೆಲೆಗೆ ನಮ್ಮನ್ನು ಒಯ್ಯುವ ವಿಶಿಷ್ಟ ಬೆಳಗು. ಕಳೆದ ಐದು ವರ್ಷಗಳಿಂದ ನಾನು ಈ ಅರಿವಿನ ಬೆಳಗಿನಲ್ಲಿ ತೋಯ್ದು ಹೋಗಿದ್ದೇನೆ. ಈ ಮಹಾಸಂಪುಟದ ಓದು, ಅಧ್ಯಯನ, ಅನುಸಂಧಾನ, ಸಂವಾದಗಳು ಅರಿವಿನ ಬೆಳಗನ್ನು ತಂದುಕೊಟ್ಟು ಪಾರಮಾರ್ಥಿಕ ಪ್ರಪಂಚದ ಕಡೆ ನಿಮ್ಮನ್ನೂ ನನ್ನನ್ನೂ ಕರೆದೊಯ್ಯುತ್ತಿವೆ ಎಂದಿದ್ದಾರೆ.

ಮಹಲಿಂಗರಂಗನ `ಅನುಭವಾಮೃತ’ ವೇದಾಂತ ಕಾವ್ಯವು ಕನ್ನಡದಲ್ಲಿ ಮೂಡಿದೆ. ಈ ಸಂಗತಿಯನ್ನು ನಾವು ಚೆನ್ನಾಗಿ ಮನಗಾಣಬೇಕು. ನಾನು ಪ್ರಾಚೀನ ಪದ್ಧತಿಯ ಟೀಕು-ತಾತ್ಪರ್ಯಗಳನ್ನು ಅನುಸರಿಸಿಲ್ಲ; ಅಥವಾ ಆಧುನಿಕ ರೀತಿಯ ವಿಮರ್ಶಾ ಕ್ರಮವನ್ನೂ ಅನುಸರಿಸಿಲ್ಲ. ಇವೆರಡು ಪ್ರತ್ಯೇಕ ಪ್ರತ್ಯೇಕವಾಗಿ ಉತ್ತಮ ಕ್ರಮಗಳೇನೋ ಸರಿ. ಆದರೆ, ಪ್ರತಿಯೊಂದು ಅಧ್ಯಾಯದ ಒಂದೊಂದು ಘಟ್ಟವನ್ನು ವೈಚಾರಿಕ ಆಕೃತಿಯ ನೆಲೆಯಲ್ಲಿ ಮಾತ್ರ ನೋಡಿದ್ದೇನೆ. ಸೂಕ್ತವಾದ ಪದ್ಯಗಳನ್ನು ಆಯ್ದು ಅನುವಾದಿಸಿ, ವಿವರಿಸಿದ್ದೇನೆ. ಇನ್ನೂ ಕೆಲವು ಕಡೆ ಪದ್ಯದ ಸಾರಾಂಶಗಳನ್ನು ಕೊಟ್ಟು ವಿಚಾರದ ಕಂಡಿಕೆಗೆ ಕುತ್ತು ಬರದಂತೆ ಮುಂದುವರೆಸಿದ್ದೇನೆ.

ನಾನು ಅಂಕಣದಲ್ಲಿ `ಆಧ್ಯಾತ್ಮಿಕಾನುಸಂಧಾನ’ವನ್ನೇ ಪ್ರಧಾನವಾಗಿ ಹಮ್ಮಿಕೊಂಡಿದ್ದೇನೆ. ಅದು ಸರಿಯಾದ ದಾರಿಯಲ್ಲಿ ನಡೆಯಿತೆಂದು ತಿಳಿದುಕೊಂಡಿದ್ದೇನೆ. ಆ ಗ್ರಂಥಗಳ ತಾತ್ತ್ವಿಕ ಭಾವವನ್ನು ಗ್ರಹಿಸಿ ನನ್ನ ಮಾತಿನಲ್ಲಿ ಅವನ್ನು ಪುನಾರೂಪಿಸಿರುವುದುಂಟು. ನಾನು ಆಧುನಿಕ ವೇದಾಂತಜ್ಞರ ಹತ್ತಾರು ಕೃತಿಗಳನ್ನು ಅನುಸಂಧಾನಿಸಿದ್ದೇನೆ. ಸಾಧನೆಯ ದೃಷ್ಟಿಯಿಂದಲೂ ಸಾಧಕರ ಮನೋಕಲ್ಪ ನೆಲೆಯಿಂದಲೂ ಹತ್ತಾರು ವಿಚಾರಗಳನ್ನು ಜೋಡಿಸಿ ವಿವರಿಸಿದ್ದೇನೆ. ನನ್ನದು ಪ್ರಧಾನವಾಗಿ ವಿಶ್ಲೇಷಣಾ ಪ್ರವೃತ್ತಿ. ಇವೆರಡು ಪ್ರವೃತ್ತಿಗಳು ಒಂದಕ್ಕೊಂದು ಪೂರಕವೇ ಹೊರತು; ಮಾರಕವಲ್ಲ! ಇದರ ಜತೆಗೆ, ವಿಚಾರಗಳ ಸ್ಪಷ್ಟತೆಗಾಗಿ ಪ್ರತಿ ವಿಷಯ ವಿಭಾಗದ ಕಡೆಯಲ್ಲಿ `ಕೊನೆಟಿಪ್ಪಣಿ’ಗಳನ್ನು ನೀಡಿದ್ದೇನೆ. ನನ್ನ ವ್ಯಾಖ್ಯಾನಕ್ಕೆ ‘ಅಧ್ಯಾತ್ಮ ಸಂಜೀವಿನಿ’ ಎಂದು ಹೆಸರು ಕೊಟ್ಟಿದ್ದೇನೆ' ಎಂಬುದಾಗಿ ಮಲ್ಲೇಪುರಂ ಹೇಳಿದ್ದಾರೆ.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Reviews

ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಬ್ರಹ್ಮಯಾನ’

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ, ಸಂಸ್ಕೃತದೊಳಿನ್ನೇನು?” ಎಂದು ತನ್ನ ಕನ್ನಡಾಭಿಮಾನವನ್ನು ಮೆರೆದವನು ಕವಿ ಮಹಲಿಂಗರಂಗ, 17ನೆಯ ಶತಮಾನದಲ್ಲಿದ್ದ ಈ ಕವಿಯ ಮಹಶೃತಿ 'ಅನುಭವಾಮೃತ' ಆಧ್ಯಾತ್ಮದ ಅನುಪಮ ಕೋಶವಾದ ಈ ಕೃತಿಯ ಆಧ್ಯಾತ್ಮಿಕ ಅನುಸಂಧಾನವೇ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ 'ಬ್ರಹ್ಮಯಾನ'.

ಅಧಿಕಾರ ಲಕ್ಷಣ, ವೈರಾಗ್ಯ ಪ್ರಕರಣ, ತಂಪದಾರ್ಥ ಶೋಧನೆ, ತತ್ಪದಾರ್ಥ ಶೋಧನೆ, ಅಸಿಪದಾರ್ಥ ನಿರ್ಣಯ, ಸಪ್ತಭೂಮಿಕೆಗಳ ಅಭ್ಯಾಸ, ಪರಮಾತೃಪದ ನಿರೂಪಣ, ಮಾಯೆಯ ಮಿಥಾಸರೂಪ, ಜೀವತ್ರಯವಿಚಾರ, ಜೀವನ್ಮುಕ್ತಿ ನಿರೂಪಣ, ನಿರ್ಗುಣಾರಾದನೆಯ ನಿರ್ಣಯ - ಎಂಬ ಹನ್ನೊಂದು ಅಧ್ಯಾಯಗಳು 'ಅನುಭವಾಮೃತ'ದಲ್ಲಿವೆ. ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಮೊದಲ ಕೃತಿ ಎನ್ನಲಾದ ಮಹಲಿಂಗರಂಗನ ಈ ಕೃತಿಯಲ್ಲಿ ಭಾಮಿನಿ ಷಟ್ಟದಿಯ ಸೊಗಸಿದೆ, ದೃಷ್ಟಾಂತಗಳ ಗಡಣವಿದೆ. ವೇದಾಂತದ ಸಾರವಿದೆ. ವೇದವ್ಯಾಸರು ಶುಕಮುನಿಗೆ ಹೇಳುವಂತಿರುವ ನಿರೂಪಣಾ ವೈಶಿಷ್ಟ್ಯವಿದೆ, ಆಧ್ಯಾತ್ಮದ ಸಾರ ಹರಳುಗಟ್ಟಿದೆ. ಇಂತಹ ಕೃತಿಯ ಜೊತೆಗಿನ ಐದು ವರ್ಷಗಳ ಅನುಸಂಧಾನದ ಫಲವಾಗಿ ಮೂಡಿದ ಕೃತಿ ಬ್ರಹ್ಮಯಾನ.

ಈ ಕೃತಿಯುದ್ದಕ್ಕೂ ಪ್ರತಿಯೊಂದು ಅಧ್ಯಾಯದ ಪ್ರಮುಖ ಭಾಮಿನಿ ಷಟ್ಟದಿಗಳನ್ನು ಆರಿಸುತ್ತ ವ್ಯಾಖ್ಯಾನಿಸುತ್ತ ಮುಂದುವರಿಯುವ ಅವರ ರೀತಿಯೇ ಅನನ್ಯ ಬರಿಯ ಮಹಲಿಂಗರಂಗನ ಭಾಮಿನಿಯ ಪದ್ಯಗಳನ್ನು ಉದ್ಧರಿಸುವುದು, ಅವುಗಳ ಅರ್ಥ ವಿವರಣೆ ಮಾಡುವುದಷ್ಟೇ ಲೇಖಕರ ಅನುಸಂಧಾನದ ದಾರಿಯಲ್ಲ. ಪ್ರತಿ ಪದ್ಯಕ್ಕೂ ಮುಂಚಿತವಾಗಿ ವಿವರಣೆ ನೀಡಿ ಆ ಪದ್ಯಕ್ಕೆ ಓದುಗರ ಮನದಲ್ಲಿ ಒಂದು ಭೂಮಿಕೆಯನ್ನು ಸಿದ್ಧಪಡಿಸಿ ಬಳಿಕ ಅದರ ವಿವರಣೆ, ವ್ಯಾಖ್ಯಾನಗಳತ್ತ ಮಲ್ಲೇಪುರಂ ತೆರಳುತ್ತಾರೆ. ಈ ಪೂರ್ವವಿವರಣೆ ತಮ್ಮೊಳಗೆ ಅವರು ನಡೆಸುವ ಅರಿವಿನ ಸಂವಾದದಂತಿರುತ್ತದೆ. ಇದನ್ನು ಓದುವ ಓದುಗನೂ ಅದೇ ಜಾಡಿನಲ್ಲಿ ಮುಂದುವರಿಯುತ್ತ ತನಗೆ ತಿಳಿಯದಂತೆಯೇ ಅಧ್ಯಾತ್ಮದ ಪದದಲ್ಲಿ ನಡೆಯುವಂತಾಗುವಷ್ಟು ಸಲೀಸಿನ ಓದಾಗುತ್ತದೆ. ಮೊದಲ ಅಧ್ಯಾಯ ಅಧಿಕಾರ ಲಕ್ಷಣ'ದಲ್ಲಿ, 'ಬಲ್ಲವರ ಬೆಸಗೊಂಬ ಶಾಸ್ತ್ರದೊಳುಳ್ಳ ಸಾರವ ತಿಳಿವ/ ಸಾಧುಗಳಲ್ಲಿ ಸಂಗ ಪಡೆವ/ ಅವರ ಆಚರಣೆಯಲ್ಲಿ ನಡೆವ ಸಲ್ಲಲಿತ ಸದ್ವಾಸನೆಗಳನ್ನು ಮೆಲ್ಲನೆ/ ಅಭ್ಯಾಸ ಮಾಡುವನು: / ಒಳ್ಳತಹ ಮಾರ್ಗದಲ್ಲಿ ನಡೆದು ಮುಮುಕ್ತವೆನಿಸುವನು' ಎಂಬ ಭಾಮಿನಿಯ ಒಳಹೊಗುವುದಕ್ಕೂ ಮುನ್ನ ಮಲ್ಲೇಪುರಂ ಬರೆಯುತ್ತಾರೆ: “ಭಾರತ ಸ್ವಾತಂತ್ರ್ಯ ಪಡೆಯುವ ಮೊದಲು ಮತ್ತು ನಂತರ ಗ್ರಾಮ-ಗ್ರಾಮಗಳಲ್ಲೂ ಮಂಟಪಗಳಿರುತ್ತಿದ್ದುವು. ಊರಿನ ನಡುವೆಯೊ ಊರ ಬಾಗಿಲಿನ ಸಮೀಪದಲ್ಲಿಯೊ ತತ್ತ್ವ ಕೇಳಲು ಜನ ಬಂದು ಅಲ್ಲಿ ನೆರೆಯುತ್ತಿದ್ದರು.... ಹರಿಕಥೆ ಮತ್ತು ಶಿವಕಥೆಗಳು ಊರೂರಲ್ಲೂ ನಡೆಯುತ್ತಿದ್ದವು. ಜನರು ಸದ್ವಾಸನೆಯ ಕಡೆ ಹೊರಡುವ ಬಗೆಗೆ ಮಾತಾಡುತ್ತಿದ್ದರು. ಇದು ಊರಿನ ನೈತಿಕತೆ ಮತ್ತು ಧಾರ್ಮಿಕತೆಯನ್ನು ಕಾಪಿಡುವ ಶಕ್ತಿಯಾಗಿರುತ್ತಿತ್ತು". ಇಂತಹ ಹೇಳಿಕೆಗಳ ಮೂಲಕ ಮಹಲಿಂಗ ಆವರಿಲ್ಲಿ ನೀಡುತ್ತಾರೆ.

ಪ್ರತಿ ಪದ್ಯದ ಒಳ ಪ್ರವೇಶಿಸುವಾಗಲೂ ಅಲ್ಲಿ ಬರಿಯ ಮಹಲಿಂಗರಂಗನಷ್ಟೇ ಇರುವುದಿಲ್ಲ. ಸರ್ವಜ್ಞನ ತ್ರಿಪದಿಯೊಂದನ್ನು ಉದ್ಧರಿಸುತ್ತಾರೆ. ಹರಿಹರನ ರಗಳೆಗಳ ದೃಷ್ಟಾಂತವನ್ನು ಕೊಡುತ್ತಾರೆ, ಬಸವಣ್ಣನವರ ವಚನವೊಂದನ್ನು ಹೇಳುತ್ತಾರೆ.... 'ಅನುಭವಾಮೃತ' ಕೃತಿಯ ನೆಪದಲ್ಲಿ ಇಂದಿನ ಲೌಕಿಕದ ಬದುಕಿನ ರೀತಿನೀತಿಯನ್ನೆಲ್ಲ ನಿಕಷಕ್ಕೆ ಒಡ್ಡುತ್ತಾ ಹೋಗುವುದೂ ಇಲ್ಲಿ ಗಮನಾರ್ಹ. “ಹೆಂಡತಿ ಮಕ್ಕಳಿಗಾಗಿ ಉತ್ತಮ ವಸ್ತುಗಳನ್ನು ತಂದುಕೊಡುವ ವ್ಯಕ್ತಿ ಏನೇ ತಂದುಕೊಟ್ಟರೂ ಹೆ೦ಡತಿ-ಮಕ್ಕಳು ಅದರಲ್ಲಿ ದೋಷ ಕಾಣುತ್ತಾರೆ. ಎಲ್ಲರಿಗೂ ಎಷ್ಟೇ ತಂದುಕೊಟ್ಟರೂ ತೃಪ್ತಿಯಿಲ್ಲ" ಎಂಬ ಸಾಲುಗಳಲ್ಲಿ ಇಂದಿನ ಕೊಳ್ಳುಬಾಕತನವನ್ನೂ ಅದರಲ್ಲಿನ ನಿಸ್ಸಾರತೆಯನ್ನೂ ಬಿಚ್ಚಿಡುತ್ತಾರೆ. (ಬಂದ ಭ್ರಮಯ ಬಳಲಿಕೆ)

“ಮಹಲಿಂಗರಂಗನ ಸುಲಿದ ಬಾಳೆಯ ಹಣ್ಣಿನಂದದ ಅನುಭವಾಮೃತವನ್ನು ಆಸ್ವಾದಿಸಲು ತುಸು ಕಷ್ಟ ಎನಿಸಿದರೆ ಮಲ್ಲೇಪುರಂ ಜಿ. ವೆಂಕಟೇಶ ಅವರ ವಿಸ್ತರ ವ್ಯಾಖ್ಯಾನದ ಭೂತಗನ್ನಡಿಯಲ್ಲಿ ಬ್ರಹ್ಮಯಾನ ಸಂಪುಟವನ್ನು ಓದಿನೋಡಿ" ಎಂದಿದ್ದಾರೆ ವಿದ್ವಾಂಸರಾದ ಡಾ. ಶ್ರೀರಾಮಭಟ್ಟರು, ನಿಜವದು, ಈ ಕೃತಿ ಮೂಡಿಬಂದಿರುವುದು ಮಲ್ಲೇಪುರಂ ಜಿ. ವೆಂಕಟೇಶ ಅವರ ವಿಶಿಷ್ಟ ಜೊತಗನ್ನಡಿಯಲ್ಲಿ, ಕನ್ನಡ, ಸಂಸ್ಕೃತ ಎರಡೂ ಭಾಷೆಗಳಲ್ಲಿ ಆಳವಾದ ಜ್ಞಾನವಿರುವ ವೇದೋಪನಿಷತ್ತುಗಳಿಂದ ತೊಡಗಿ ಇಂದಿನ ನವ್ಯ ಸಾಹಿತ್ಯದ ವರೆಗೆ ಎಲ್ಲವನ್ನೂ ಅಧ್ಯಯನ ಮಾಡಿರುವ, ಸಾಮಾಜಿಕವಾದ ಎಲ್ಲ ಪಲ್ಲಟಗಳನ್ನೂ ಬಲ್ಲ, ಯೋಗ-ತಂತ್ರಗಳ ಸಾಧಕರನ್ನು ಕಂಡ ಮಲ್ಲೇಪುರಂ ಅವರ ಈ 'ಬ್ರಹ್ಮಯಾನ'ವೆಂಬ ಕನ್ನಡಿ ಅಂತಿಂಥದಲ್ಲ. ಹೀಗಾಗಿಯೇ ಇಲ್ಲಿ ಮಹಲಿಂಗರಂಗನ ವೇದಾಂತ ಜ್ಞಾನಕ್ಕೆ ವಿಶಿಷ್ಟ ವಿಸ್ತರಣೆಯೊಂದು ಸಿಗುತ್ತದೆ. ಹಾಗಂತ ಅವರ ವಿವರಣೆ ಕ್ಲಿಷ್ಟವೇನಲ್ಲ. ಸಾಮಾನ್ಯರಿಗೂ ಸುಲಿದ ಬಾಳೆಯಹಣ್ಣಿನಷ್ಟೇ ಈ ಓದು ಸುಲಲಿತ.

ಅಧ್ಯಾತ್ಮದ ಅರಿವಿಗೆ ಗುರುವಿನ ಮಾರ್ಗದರ್ಶನವಿದ್ದರೆ ಆದು ಸುಲಭಸಾಧ್ಯ. 'ಅನುಭವಾಮೃತ' 'ತಿಯ ಒಳಹೊಕ್ಕು ನಮ್ಮದಾಗಿಸಿಕೊಳ್ಳುವುದಕ್ಕೂ ಮಲ್ಲೇಪುರಂ ಜಿ. ವೆಂಕಟೇಶ ಅವರು ಇಲ್ಲಿ ಸೂಕ್ತ ರೀತಿಯಲ್ಲಿ ನಮಗೆ ಮಾರ್ಗದರ್ಶನ ಮಾಡುತ್ತಾರೆ.

 (ಕೃಪೆ : ಪುಸ್ತಕಲೋಕ, ಬರಹ : ವಿದ್ಯಾರಶ್ಮಿ ಪೆಲತ್ತಡ್ಕ)

Related Books