‘ಬ್ರಾಹ್ಮಿನ್ ಕೆಫೆ’ ಲೇಖಕ ವಿ.ಆರ್.ಕಾರ್ಪೆಂಟರ್ ಅವರ ಕತಾಸಂಕಲನ. ತಮ್ಮ ಕವನಗಳ ಮೂಲಕ ಗಮನ ಸೆಳೆದ ಕಾರ್ಪೆಂಟರ್, ತಮ್ಮ ವಿಭಿನ್ನ ಶೈಲಿಯ ಕಥನಗಾರಿಕೆಯಿಂದ ಗುರುತಿಸಿಕೊಂಡವರು. ‘ಬ್ರಾಹ್ಮಿನ್ ಕೆಫೆ’ ಕಥಾಸಂಕಲನ ಈ ಕಾಲದ ತಲ್ಲಣಗಳನ್ನು ಸಶಕ್ತವಾಗಿ ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ವಿ.ಆರ್. ಕಾರ್ಪೆಂಟರ್ ಅವರ ಬ್ರಾಹ್ಮಿನ್ ಕೆಫೆಯಲ್ಲಿ- ಬುಕ್ ಬ್ರಹ್ಮ
ಇದು ಹೋಟೆಲ್‌ನ ಕತೆ-ವ್ಯಥೆ ಮಾತ್ರವಲ್ಲ!
ಐಷಾರಾಮಿ ಸಮುದಾಯದ ಹೊರಗೆ ಇಣುಕಿಯೂ ನೋಡದ ಸ್ಥಿತಿಗೆ ನಾನು ತಲುಪಿಬಿಟ್ಟಿದ್ದೆ - ಇದು ವಿ.ಆರ್.ಕಾರ್ಪೆಂಟರ್ ಅವರ 'ಕೀ ಚೈನ್' ಕತೆಯಲ್ಲಿ ಬರುವ ರಾಜಿ ಎನ್ನುವ ವಿಲಾಸಿ ಹೆಣ್ಣಿನ ಸ್ವಗತ. 'ರಾಜಿ' ಪಾತ್ರದ ಹೆಸರಿನ ಬದಲು, ಬೇರೆ ಯಾವ ಹೆಸರು ಬರೆದರೂ ನಡೆಯುತ್ತದೆ. ಅವನಂತೆ ಆವರಿಸಿಕೊಳ್ಳುವ ತೋಳುಗಳನ್ನು ಅವಳು ಹುಡುಕುತ್ತಿದ್ದಳು. ಕೊನೆಗೆ ಅವನೇ ಸಿಕ್ಕಿದರೂ, ಅವನು ಅವನಾಗಿ ಇದ್ದನೇ ಎನ್ನುವುದನ್ನು ರಾಜಿ ಸ್ಪಷ್ಟವಾಗಿ ಹೇಳುವುದಿಲ್ಲ, ನರಸಿಂಹಮೂರ್ತಿ ವಿ.ಆರ್. ಅವರು ವೃತ್ತಿ ಸೂಚಕ 'ಕಾರ್ಪೆಂಟರ್' ಹೆಸರಿನಲ್ಲಿ ಬರೆಯುವ ಕತೆಗಳು ಬರೀ ಕತೆಗಳಾಗಿ ಉಳಿಯುವುದಿಲ್ಲ ಇವರ ಕತೆಗಳಿಗೆ ಯಾರದೇ ನೆರಳುಗಳೂ ಇಲ್ಲ. ಇವರು ಬರೆಯುವ
ಕತೆ, ಕವಿತೆ, ಕಾದಂಬರಿ ಏನೇ ಆಗಲಿ, ಅವೆಲ್ಲವನ್ನೂ ಅವರಷ್ಟೇ `ವಿ. ಅರ್. ಕಾರ್ಪೆಂಟರ್’ ಬರೆಯಬಲ್ಲರು ಅನ್ನಿಸುವಂತೆ ಪ್ರತ್ಯೇಕ ಚಹರೆಯನ್ನು ಹೊಂದಿವೆ. ಹೀಗಾಗಿಯೇ, ಕನ್ನಡದ ಅಕ್ಷರ ಲೋಕದಲ್ಲಿ ಕಾರ್ಪೆಂಟರ್ ಬಗ್ಗೆ ಭರವಸೆ ಇದೆ. 'ಬ್ರಾಹ್ಮಿನ್ ಕೆಫೆ' ಎನ್ನುವ ಚೊಚ್ಚಲ ಕಥಾ ಸಂಕಲನದಲ್ಲಿ ಕಾರ್ಪೆಂಟರ್ ಫ್ರೆಷ್ ಎನ್ನಿಸುವಂಥ ಕತೆಗಳನ್ನು ಬರೆದಿದ್ದಾರೆ. ಮೆತ್ತನೆಯ ಹಾಸಿಗೆ ಮೇಲೆ ಬೆಚ್ಚಗೆ ಮಲಗಿರುವವರ ಮತ್ತನ್ನು ಕರಗಿಸುವಂಥ ಕತೆಗಳನ್ನು ಹೆಣೆದಿದ್ದಾರೆ. - ಶೀರ್ಷಿಕೆಯಿಂದಲೇ ’ಬ್ರಾಹ್ಮೀನ್ ಕೆಫೆ' ಓದುಗರನ್ನು ತನ್ನತ್ತ ಸೆಳೆಯುತ್ತದೆ. ಪುಸ್ತಕದ ಪುಟ ಬಿಡಿಸಿ ಆ ಕತೆಯನ್ನು ಓದಿ ಮುಗಿಸಿದರಷ್ಟೇ ಸಮಾಧಾನ ಎನ್ನುವಂಥ ಒತ್ತಡವನ್ನು ಹಾಕುತ್ತದೆ. ಕತೆಯಲ್ಲೊಂದು ವಿಚಿತ್ರವಾದ ಹೋಟೆಲ್ ಉಂಟು. ಅಲ್ಲಿಗೆ ಯಾರು ಬೇಕಾದರೂ ಹೋಗಬಹುದು. ಆದರೆ, ಅಲ್ಲಿ ಯಾವ ತಿಂಡಿ ತಿನಿಸನ್ನೂ ಮಾರುವುದಿಲ್ಲ. ಗ್ರಾಹಕರೇ ತಮಗೆ ಬೇಕಾದ್ದನ್ನು ಮಾಡಿಕೊಂಡು ತಿನ್ನಬಹುದು. ಗ್ರಾಹಕರ ಅಭಿರುಚಿಯನ್ನು ಕಡೆಗಣಿಸುವ ಕಟ್ಟುಪಾಡುಗಳಿಲ್ಲ, ಆಹಾರ ತಯಾರಿಸಲು ಬೇಕಾದ ಎಲ್ಲವನ್ನೂ ಅಲ್ಲಿನ ಈರಣ್ಣ ಮತ್ತು ಅವನ ಮಗ ಹರೀಶ ತಂದುಕೊಡುತ್ತಾರೆ. ಇಂಥ ಹೋಟೆಲಿಗೆ ಒಂದು ಹೆಸರಿಲ್ಲ ಬೋರ್ಡ್ ಇಲ್ಲ, ಕತೆಗಾರ ಹೇಳುವಂತೆ - 'ಯಾವುದೇ ನಾಮ ಫಲಕ ಇಲ್ಲದಿದ್ದರೂ ಹಸಿದ ಕಂದನು ಹಾಲು ತುಂಬಿದ ತಾಯಿಯ ಮೊಲೆಯನ್ನು ತಡಕುವಂತೆ, ಹೆದ್ದಾರಿಗುಂಟ ಸಾಗುವ ಬಹಳಷ್ಟು ಜೀವಗಳಿಗೆ ಚಿರಪರಿಚಿತ'. ತಮ್ಮ ಹೋಟೆಲಿಗೊಂದು ನಾಮಫಲಕ ಇರಲಿ ಎನ್ನುವುದು ಹರೀಶನ ಆಸೆ. ಅದರಿಂದ ಆಗಿದ್ದೇನು ಅನ್ನುವುದನ್ನು ಅರಿಯಲು ಕತೆ ಓದಬೇಕು. ನಿಜಕ್ಕೂ ಇದೊಂದು ಉತ್ತಮ ಕತೆ. ಆದರೆ, ಕತೆಯು ಓದುಗರ ನಿರೀಕ್ಷೆಯ ಹಳಿಯಲ್ಲೇ ಸಾಗಿ ಅಂತ್ಯವನ್ನು ಕಂಡಿದೆ. ಕಾರ್ಪೆಂಟರ್ ಕತೆಗಳ ನೆಲೆ ಮತ್ತು ಉದ್ದೇಶವೇನು ಎನ್ನುವುದಕ್ಕೆ - ಕನಿಷ್ಠ ಪ್ರತಿರೋಧ ತೋರದ ಪ್ರಸಿದ್ದ ತಟಸ್ಥಲೇಖಕರ ಮೇಲಿನ ಸಣ್ಣ ಕೋಪದಿಂದ ಇವುಗಳನ್ನು ಬರೆದಿದ್ದೇನೆ. ಬರವಣಿಗೆಯಲ್ಲಿ ಶೀಲ- ಅಶ್ಲೀಲತೆಗಳನ್ನು ಕೂದಲು ಸೀಳಿದಂತೆ ಸೀಳಿ ನೋಡುವ ಪಾವಿತ್ರತೆಯ ವ್ಯಸನದಲ್ಲಿ ಬಳಲುತ್ತಿರುವ ರೋಗಿಷ್ಠರನ್ನು ಕೆಣಕುವುದಕ್ಕಾಗಿ ಬರೆದಿದ್ದೇನೆ' ಎಂದಿದ್ದಾರೆ.
ಕೃಪೆ : ವಿಜಯ ಕರ್ನಾಟಕ (2020 ಫೆಬ್ರವರಿ 09)
ಸಂಬಂಧ-ಸಿದ್ಧಾಂತವನ್ನು ನಿಕಷಕ್ಕೊಡ್ಡುವ ಬ್ರಾಹ್ಮಿನ್ ಕೆಫೆ-ಗುರುಪ್ರಸಾದ್ ಕಂಟಲಗೆರೆ-ವಾರ್ತಾ ಭಾರತಿ
ವಿ.ಆರ್. ಕಾರ್ಪೆಂಟರ್ ಬರೆದ ಕಥೆಗಳ ಸಂಕಲನ ‘ಬ್ರಾಹ್ಮಿನ್ ಕೆಫೆ’. ‘ಲಂಕೇಶರ ಆ್ಯಬ್ಸ್ಟ್ರಾಕ್ಟ್ ಪೊಯೆಟ್ರಿಯಂತೆ ಕಾಣುವ ಕಾರ್ಪೆಂಟರ್ ಈ ಕಾಲಘಟ್ಟದ ಅಪರೂಪದ ಪ್ರತಿಭೆ...’ ಎಂದು ಪುಸ್ತಕದ ಬೆನ್ನುಡಿಯಲ್ಲಿ ಡಾ.ಸಿ.ಎಸ್. ದ್ವಾರಕಾನಾಥ್ ಅವರು ಬರೆದಿರುವುದು ಕಾರ್ಪೆಂಟರ್ ಅವರ ಪುಸ್ತಕವನ್ನು ಎತ್ತಿಕೊಳ್ಳಲು ತೋರುಬೆರಳಿನಂತೆ ಕೆಲಸ ಮಾಡುತ್ತದೆ. ‘ಸಂವಿಧಾನ ಕೊಟ್ಟಿರುವ ಬರವಣಿಗೆ ಅಸ್ತ್ರವನ್ನು ಉಳಿಸಲು ಬರೆಯುತ್ತಿದ್ದೇನೆ...ಕನಿಷ್ಟ ಪ್ರತಿರೋಧ ತೋರದ ತಟಸ್ಥ ಲೇಖಕರ ಮೇಲಿನ ಸಣ್ಣ ಕೋಪದಿಂದ ಇವುಗಳನ್ನು ಬರೆಯುತ್ತಿದ್ದೇನೆ... ಸಮಾಜದ ಹುಸಿ ಸ್ವಾಸ್ಥ್ಯವನ್ನು ಹಾಳುಮಾಡುವ ಮೂಲೋದ್ದೇಶದಿಂದ ಬರೆದಿದ್ದೇನೆ’ ಎಂದು ಕಾರ್ಪೆಂಟರ್ ಅವರು ತಾವು ಇಲ್ಲಿನ ಕಥೆಗಳನ್ನು ಬರೆದಿರುವ ಕಾರಣ ಹೇಳಿಕೊಂಡಿದ್ದಾರೆ. ಇವರು ‘ತಮ್ಮ ಕತೆಗಳ ವಸ್ತುವಿನ ಆಯ್ಕೆಯಲ್ಲಿ ಬಹಳ ವಿಭಿನ್ನವಾಗಿ ನಿಲ್ಲುತ್ತಾರೆ. ಭೂತ ಮತ್ತು ವರ್ತಮಾನ ಕಾಲದ ಸಂಗತಿಗಳನ್ನು, ತನ್ನ ಸಮುದಾಯ ಸಾಕ್ಷೀಕರಿಸಿಕೊಂಡ ಹಲವು ಚಿತ್ರಣಗಳನ್ನು ಕತೆಗಳಲ್ಲಿ ನಿರೂಪಿಸಿದ್ದಾರೆ’ ಎಂದು ಇಲ್ಲಿನ ಬರಹಗಳ ಕುರಿತು ಅಪ್ಪಗೆರೆ ಡಿ.ಟಿ. ಲಂಕೇಶ್ ಮೆಚ್ಚುಗೆಯ ಮಾತು ಆಡಿದ್ದಾರೆ.
ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 16)
©2023 Book Brahma Private Limited.