ಚಂದಿರನ ಕುವರಿಯರು

Author : ಆರ್.ವಿಜಯರಾಘವನ್

Pages 192

₹ 200.00




Year of Publication: 2021
Published by: ಗೀತಾಂಜಲಿ ಪ್ರಕಾಶನ
Address: # ಸುಶೀಲಮ್ಮ, 60, 2-ಡಿ -ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072
Phone: 9740066842

Synopsys

ಲೇಖಕ ಆರ್. ವಿಜಯರಾಘವನ್ ಅವರ ಅನುವಾದಿತ ಕಥಾ ಸಂಕಲನ-ಚಂದಿರನ ಕುವರಿಯರು. ಕಥೆಗಳ ವಸ್ತು ನಿರ್ವಹಣೆಯು ವಿಶಿಷ್ಟವಾಗಿದೆ. ಬದುಕು-ವ್ಯಕ್ತಿತ್ವ, ಜೀವನಶೈಲಿ, ಮನುಷ್ಯ ಸಂಬಂಧ ಎಲ್ಲವೂ ಗಾಢ ಅನುಭವ ನೀಡುತ್ತವೆ. ಭಾಷೆ-ಸಂಸ್ಕೃತಿ-ತಂತ್ರಗಾರಿಕೆ, ನಿರೂಪಣಾ ಶೈಲಿಯು ಕಥೆಗಳ ಆಕರ್ಷಣೆಯಾಗಿದೆ. ಬೇರೆ ಬೇರೆ ಭಾಷೆಗಳ ವೈವಿಧ್ಯಮಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಕನ್ನಡಕ್ಕೆ ಅನುವಾದಗೊಂಡ ಇಲ್ಲಿಯ ಕಥೆಗಳು, ಮೂಲ ಭಾಷೆಯ ಸೊಗಡನ್ನು ಉಳಿಸಿಕೊಂಡಿವೆ. ಕಥೆಗಳ ಅನುವಾದ ದೃಷ್ಟಿಯಿಂದ, ಕಥೆ ರಚನಾ ಕೌಶಲ ಅಧ್ಯಯನ ದೃಷ್ಟಿಯಿಂದ ಈ ಸಂಕಲನವು ಉತ್ತಮ ಆಕರ ಗ್ರಂಥ.

ಚಂದಿರನ ಕುವರಿಯರು (ಇಟಾಲೊ ಕ್ಯಾಲ್ವಿನೊ), ಅವಳ ಸಾವಿನ ಸುದ್ದಿ (ಪೆಟಿನಾ ಗಫಾ), ಪ್ರೀತಿಯ ಬದುಕು (ಅಲಿಸ್ ಮುನ್ರೋ), ಶ್ರೀಮತಿ ಬ್ರಿಡ್ಜ್ ಅವರ ಸುಂದರ ಬದುಕು (ಇವಾನ್ ಎಸ್. ಕಾನೆಲ್), ಅದೃಶ್ಯ ಮನುಷ್ಯ (ಜೇಕ್ ಜೇಲ್ಸನ್), ಕವಲು ಹಾದಿಗಳ ಉದ್ಯಾನ (ಹೋರ್ಹೆ ಲೂಯಿ ಬೋರ್ಪೆಸ್), ಅಸಹನೀಯ ಗವುತೊ-ಅರ್ಜಿಂಟಿನಿ ವಕೀಲ ಗವುತೊ ಆಗಿದ್ದು (ರೊಬೆರ್ಟೋ ಬುಲ್ಯಾನೊ), ಹಕ್ಕಿ ಹಾಡು (ಚಿಮಮಾಂಡಾ ಗೋಜಿ ಅದೀಜಿ) -ಹೀಗೆ ವಿವಿಧ ಕಥೆಗಳನ್ನು ಅನುವಾದ್ದಗೊಂಡಿದ್ದು, ಇಲ್ಲಿ ಸಂಕಲನಗೊಂಡಿವೆ.

About the Author

ಆರ್.ವಿಜಯರಾಘವನ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನ ಹಳ್ಳಿಯವರಾದ ಆರ್. ವಿಜಯರಾಘವನ್ (1956) ಅವರು ಕವಿ. 5 ಕವನ ಸಂಕಲನ, 2 ಕತಾ ಸಂಕಲನ, 3 ಕಾದಂಬರಿ ಮತ್ತು ಹಲವು ಬಿಡಿ ಪ್ರಬಂಧಗಳಿಂದ ಚಿರಪರಿಚಿತರಾಗಿರುವಷ್ಟೇ, ಗುನ್ನಾರ್ ಏಕಲೋ, ರಿಲ್ಕ್, ಖಲೀಲ್ ಗಿಬ್ರಾನ್, ನಜೀಂ ಹಿಕ್ಮತ್, ವಾಸ್ಕೊ ಪೋಪ, ಲೋರ್ಕ, ದಾವ್ ದಿ ಜಿಂಗ್, ಮಹಾಪರಿನಿಬ್ಬಾನ ಸುತ್ತ, ಸಾಂಗ್ ಆಫ್ ಸಾಲೋಮನ್ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದು ಪ್ರಸಿದ್ದರು. ಅವರು ಈಗಾಗಲೇ 23 ಕೃತಿಗಳನ್ನು ಅವರು ಪ್ರಕಟಿಸಿದ್ದು, ಮ್ಯೂಸ್ ಇಂಡಿಯಾ, ಅವಧಿ, ಕೆಂಡ ಸಂಪಿಗೆ, ಸಂಪದ, ಸಂವಾದ ಮುಂತಾದ ಇ-ಮ್ಯಾಗಝಿನ್‌ಗಳಲ್ಲಿ ...

READ MORE

Reviews

‘ಚಂದಿರನ ಕುವರಿಯರು’ ಕೃತಿಯ ವಿಮರ್ಶೆ

ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ.ಆರ್. ವಿಜಯರಾಘವನ್ ಅನುವಾದಿತ ಕತೆಗಳ ಸಂಕಲನ ‘ಚಂದಿರನ ಕುವರಿಯರು’ ಪುಸ್ತಕಕ್ಕೆ ಎನ್. ನರಹರಿ ಬರೆದ ಮುನ್ನುಡಿ

ಒಂದುಸಾಹಿತ್ಯ ಚಟುವಟಿಕೆಯಲ್ಲಿ ಅನುವಾದ ಅಥವಾ ಭಾಷಾಂತರ ಎಂಬುದು ನಿರಂತರವಾದದ್ದು. ಶತಮಾನಗಳಿಂದ ವಿಶ್ವಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇದು ನಡೆಯುತ್ತಾ ಬಂದಿದೆ. ಪಠ್ಯವನ್ನು ಮತ್ತೊಂದು ಭಾಷೆಗೆ ಅರ್ಥವ್ಯತ್ಯಾಸವಾಗದಂತೆ ತರುವ ಒಂದು ಪಠ್ಯಾಂತರ ಪ್ರಕ್ರಿಯೆಯೇ ಅನುವಾದ. ಯಾವುದೇ ಸಾಹಿತ್ಯಚರಿತ್ರೆಯಲ್ಲಿ ಭಾಷಾಂತರವೆಂಬುದು ಸೃಷ್ಟಿಸಾಮರ್ಥ್ಯವಿರುವ ಒಂದು ಶಕ್ತಿಯಾಗಿದೆ. ಅಲ್ಲದೆ ಅದೊಂದು ಕೇವಲ ಪುನಾರಚನೆಯಾಗದೆ ಮುಖ್ಯವಾದ ಸಾಹಿತ್ಯಕ ನಿಲುವು ಹಾಗೂ ಅತ್ಯಂತ ಸಂವೇದನಾಶೀಲ ಚಟುವಟಿಕೆಯು ಆಗಿದೆ.

ಹಿಲರಿ ಬೆಲಕ್ ಹೇಳುವಂತೆ “ಭಾಷಾಂತರಕ್ಕೆ ಎಂದೂ ಮೂಲಕೃತಿಯ ಗೌರವವಿಲ್ಲ. ಅದು ಕೇವಲವಷ್ಟೇ” ಎಂಬ ಮಾತಾಗಲಿ, ಇವಾನ್ ಜೋಹರ್ ಹೇಳುವ “ಭಾಷಾಂತರವು ಎಂದಿಗೂ ಮೂಲಕ್ಕೆ ಸಮವಲ್ಲ, ಮೂಲದ ಶಕ್ತಿಯನ್ನು, ಆತ್ಮವನ್ನು ಅದು ಕಳೆದುಕೊಳ್ಳುತ್ತದೆ” ಎಂಬ ಮಾತಾಗಲಿ, “ಎರಡು ಭಾಷೆಗಳ ಸ್ವಭಾವ ಧರ್ಮಗಳು ಒಂದೇ ಆಗಿರುವುದಿಲ್ಲ ಎಂಬ ಎಜ್ರಾ ಪೌಂಡನ ಮಾತಾಗಲಿ ಸ್ವೀಕಾರಾರ್ಹವಲ್ಲ. “ಅನುವಾದ/ಭಾಷಾಂತರ ಎಂಬುದು ಚಲನಶೀಲ ಅಥವಾ ಆಕ್ರಮಣಕಾರಿ ಕ್ರಿಯೆ. ಅನ್ಯಸಂಸ್ಕೃತಿಯ ಮೌಲ್ಯಗಳ ಹೊಂದಾಣಿಕೆ” ಎಂಬ ವ್ಲಾದಿಮಿರ್ ಮಕೂರ ಅವರ ಮಾತು, “ಭಾಷಾಂತರವೆಂದರೆ ಒಂದು ಕೃತಿಯನ್ನು ಹೊಸದಾಗಿ ನಿರ್ಮಾಣ ಮಾಡುವುದು” ಎಂಬ ಮದಾಂ ದೆ ಗೋರ್ನೆ ಅವರ ಮಾತು, “ಭಾಷಾಂತರವು ಅತಿಮುಖ್ಯವಾದ ವಿಶ್ವಸಂಸ್ಕೃತಿಯ ವಿಕಾಸವನ್ನು ರೂಪಿಸುವ ಶಕ್ತಿ” ಎಂಬ ಬಾಸ್ನೆಟ್ ಮತ್ತು ಆಂದ್ರೆ ಲಿಫವೇರರ ಮಾತು, “ಭಾಷಾಂತರವೆಂದರೆ ಯುಕ್ತವಾದ ರೀತಿಯಲ್ಲಿ ಆಕರಪಠ್ಯದ ಒಳಹೋಗುವುದು” ಎಂಬ ಜಾರ್ಜ್ ಸ್ಟೀನರ್ ಅವರ ಮಾತು; “ಒಂದು ಕೃತಿಯು ಮತ್ತೊಂದು ಸನ್ನಿವೇಶದಲ್ಲಿ ಬದುಕನ್ನು ಮುಂದುವರಿಸಲು ಪಠ್ಯಕ್ಕೆ ಅವಕಾಶವನ್ನು ಭಾಷಾಂತರವು ಕಲ್ಪಿಸುತ್ತದೆ. ಹಾಗಾಗಿ ಅದೊಂದು ವಿಶೇಷ ಚಟುವಟಿಕೆಯಾಗಿದೆ” ಎಂಬ ಡೆರಿಡಾ ಮತ್ತು ಬೆಂಜಮಿನ್ ಅವರ ಮಾತು ಒಪ್ಪಲು ಯೋಗ್ಯವಾದವು.

ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ. ಒಂದು ಭಾಷೆ ಮತ್ತು ಸಂಸ್ಕೃತಿಯ ವಿಸ್ತರಣೆಗೆ ಭಾಷಾಂತರಗಳು ಅಗತ್ಯ ಮತ್ತು ಅನಿವಾರ್ಯ ಅನ್ನಿಸಿವೆ.

“ಭಾಷಾಂತರಕಾರರು ಮೂಲಲೇಖಕನ ಪ್ರತಿಭೆಯನ್ನು, ಅವನ ಸಂವೇದನೆಯನ್ನು, ಹಾಗೆಯೇ ನಿರ್ವಹಿಸುತ್ತಿರುವ ಕೃತಿಯ ವಸ್ತುವಿಷಯವನ್ನು, ಕಲಾತ್ಮಕತೆಯನ್ನು ಸಂಪೂರ್ಣವಾಗಿ ಸಮರ್ಪಕವಾಗಿ ಹಿಡಿಯಬಲ್ಲ ಸಮರ್ಥನಿರಬೇಕಾಗುತ್ತದೆ. ಮೂಲವನ್ನೇ ರಚಿಸುತ್ತಿರುವಂತೆ ಅಭಿವ್ಯಕ್ತಿಸಬೇಕು” ಎಂದಿದ್ದಾನೆ ಡ್ರೈಡನ್. ಸ್ವತಃ ಸೃಜನಶೀಲ ಕವಿಯೂ, ಕಥೆಗಾರರೂ, ಕಾದಂಬರಿಕಾರರೂ, ವಿಮರ್ಶಕರೂ ಆಗಿರುವ ವಿಜಯರಾಘವನ್ ತಮ್ಮ ಈ ಅನುವಾದಗಳಲ್ಲಿ ಡ್ರೈಡನ್ ಮಾತುಗಳನ್ನು ನಿಜವಾಗಿಸಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಭಾಷಾಂತರ ಪ್ರಕ್ರಿಯೆಯಲ್ಲಿ ಅವರದು ಪಳಗಿದ ಕೈ. ಕನ್ನಡದ ಜಾಯಮಾನಕ್ಕೆ ತಕ್ಕಂತೆ ಮೂಲಕೃತಿಗಳನ್ನು ಕಡೆದಿರುವುದು ಅವರ ಶ್ರಮ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿದೆ.

ಇಲ್ಲಿನ ಎಲ್ಲಾ ಕಥೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತರಲಾಗಿದೆ. ಆದರೆ ಇಂಗ್ಲಿಷಿಗೆ ಈ ಕಥೆಗಳು ಜಗತ್ತಿನ ಬೇರೆಬೇರೆ ಭಾಷೆಗಳಿಂದ ಬಂದಿವೆ ಎಂಬುದನ್ನು ಗಮನಿಸಬೇಕು. ಈ ಸಂಕಲನದ ಎಂಟೂ ಕಥೆಗಳನ್ನು ನಾನು ಬಿಡಿಬಿಡಿಯಾಗಿ ನೋಡಬಯಸುತ್ತೇನೆ.

ಎರಡುಇಟಲೋ ಕಲ್ವೀನೋ (1983- 1985)

ಈತ ಸಮಕಾಲೀನ ಸಣ್ಣಕಥೆಯ ನಿಪುಣ (ಮಾಸ್ಟರ್ ಆಫ್ ಕಂಟೆಂಪರರಿ ಶಾರ್ಟ್ ಸ್ಟೋರಿ). ೧೯೮೨ರಲ್ಲಿ ಜೀವಮಾನ ಪ್ರಶಸ್ತಿಯನ್ನು – ವರ್ಲ್ಡ್ ಫ್ಯಾಂಟಸಿ ಅವಾರ್ಡ್ ಅನ್ನು ಪಡೆದಾತ.

‘ಚಂದಿರನ ಕುವರಿಯರು’ ಇಟಾಲಿಯನ್ ಭಾಷೆಯ ಒಂದು ಭ್ರಾಮಕ ಕಥೆ. ಚಂದ್ರಗಳ ಸುತ್ತ ಹೆಣೆದ ಅತಿರಂಜಿತ ಕಾಲ್ಪನಿಕ ಕಥೆ. ‘ಚಂದಿರನೇತಕೆ ಓಡುವನಮ್ಮ, ಮೋಡಕೆ ಬೆದರಿಹನೇ’ ಎಂಬ ಕನ್ನಡದ ಮಕ್ಕಳ ಕವನವನ್ನಿಲ್ಲಿ ಧೇನಿಸಬಹುದು. ಹಾಗೆಯೇ ಇಲ್ಲಿಯೂ ಓಡುವ ಬಹುಚಂದ್ರಗಳಿವೆ. ಅವುಗಳನ್ನು ಹಿಡಿವ ತವಕದಲ್ಲಿ ನೆಲದ ಮೇಲೆ ಬೆತ್ತಲೆ ಚಂದ್ರಿಕೆಯರ ಸಹವಾಸ ಪ್ರಾಪ್ತಿಯಾಗುತ್ತದೆ. ಇದೆಲ್ಲ ಭ್ರಮೆಯೇ. ಮನುಷ್ಯನ ಮನಸ್ಸು ವಾಸ್ತವತೆಗೆ ವಿಮುಖವಾದರೆ ಉಂಟಾಗುವ ಚಮತ್ಕಾರ.

ಕಥೆಯ ಆರಂಭದಲ್ಲೇ ಬರುವ ಚಂದ್ರನ ವಿವರ ಹೀಗಿದೆ;ಗುರಾಣಿಯಂತೆ ರಕ್ಷಣಾತ್ಮಕ ಕಾರ್ಯನಿರ್ವಹಿಸುವ ಗಾಳಿಯ ಹೊದಿಕೆಯಿಂದ ಚಂದ್ರ ವಂಚಿತವಾಗಿತ್ತು. ಹಾಗಾಗಿ ಪ್ರಾರಂಭದಿಂದಲೇ ನಿರಂತರ ಉಲ್ಕಾಪಾತಕ್ಕೆ, ಸೂರ್ಯಕಿರಣಗಳ ವಿನಾಶಕಾರಿ ಕೊರೆವ ಕ್ರಿಯೆಗೆ ಅದು ತನ್ನನ್ನು ಒಡ್ಡಿಕೊಂಡಿತ್ತು… ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳು ಪುಡಿಯಾಗಿದ್ದು ಉಲ್ಕಾಶಿಲೆಯ ಕಣಗಳು ನಿರಂತರವಾಗಿ ಚಂದ್ರನ ಮೇಲೆ ಸುರಿದಿದ್ದರಿಂದಲೆ… ಚಂದ್ರನ ಶಿಲಾಪಾಕದಿಂದ ಅನಿಲಗಳು ಹೊರಬಿದ್ದ ಕಾರಣ ಉಪಗ್ರಹವು ಪ್ಯೂಮಿಸ್ ಕಲ್ಲಿನಂತೆ ಹಗುರವಾದ ಸರಂಧ್ರ ಸ್ಥಿತಿಯನ್ನು ಪಡೆದುಕೊಂಡಿರಬಹುದು.”

ಇದು ವಿಜ್ಞಾನದ ಚಂದ್ರ. ಆದರೆ ಕಥೆಗಾರ ಕಂಡ ಚಂದ್ರ ಬೇರೆ. ಮೈತುಂಬ ಕುಳಿಗಳೇ ತುಂಬಿದ ನವೆದ ಹಳೆಯ ಚಂದ್ರ. ಆಕಾಶದಲ್ಲಿ ಬೆತ್ತಲೆ ಉರುಳುತ್ತಿರುವ ಅದು. ಸವೆದು ಸವೆದು ಘಾಸಿಗೊಂಡ ಮೂಳೆಯಂತೆ ತನ್ನ ಮೈಮಾಂಸವನ್ನು ಕಳೆದುಕೊಳ್ಳುತ್ತಿರುವ ಚಂದ್ರ. ಪರಂಪರೆಯ ಅಥವಾ ನಂಬಿಕೆಯ ಚಂದ್ರನನ್ನು ಕಥೆಗಾರ ವೈಚಾರಿಕವಾಗಿ ನೋಡುತ್ತಾನೆ. ಒಂದು ಚಂದ್ರ ಸತ್ತರೆ ಭೂಮಿಯ ಮೇಲೆ ಏನಾಗುತ್ತದೆ ಎಂಬ ಪ್ರಶ್ನೆ. ಭೂಮಿಗೆ ಏನಾಗುತ್ತದೆಯೋ ಅದು ದೂರದ ಚಂದ್ರಾದಿಗಳಿಗೂ ಆಗುತ್ತದೆ ಎಂಬುದು ವಿಚಾರ. ನಗರೀಕರಣದ ಪರಿಣಾಮವಾಗಿ ಭೂಗ್ರಹ ಇವತ್ತು ಹಿಡಿದಿರುವ ಅವನತಿಯ ಬಗ್ಗೆ ಇಟಲೋ ಕಲ್ವೀನೋಗೆ ವಿಷಾದವಿದೆ. ಚಂದ್ರನ ಮೇಲೆ ಮನುಷ್ಯ ಸವಾರಿಗೆ ಹಪಹಪಿಸುತ್ತಿರುವಾಗ ಚಂದ್ರನು ಮುಂದೊಮ್ಮೆ ಭೂಮಿಯಂತೆಯೇ ನಾಶವಾಗಬಹುದಲ್ಲವೇ? ಎಂಬ ಚಿಂತೆ. ನಗರೀಕರಣದಿಂದಾಗಿ ಸಹಜ ನಿಸರ್ಗವು ತೀರಾ ಅಸಹಜವಾಗಿ ಬದಲಾಗುತ್ತಿದೆ. ಉದಾಹರಣೆಯಾಗಿ ನ್ಯೂಯಾರ್ಕ್ ನಗರ ಕಣ್ಣಮುಂದಿದೆ.

ಕ್ಷೀಣಿಸುತ್ತಿರುವ ಚಂದ್ರ, ನಾವು ಖರೀದಿಸಿದ ಪ್ರತಿಯೊಂದು ಉತ್ಪನ್ನವು ನವೆದು ಹಾಳಾಗಿ ಹದಗೆಟ್ಟು ಮಸುಕಾಗಬಹುದು ಎಂಬುದಕ್ಕೆ ಸಂಕೇತವಾಗುತ್ತದೆ. ಜೊತೆಗೆ ಚಂದ್ರ ಒಂದು ಅನುತ್ಪಾದಕ ಉಪಗ್ರಹ ಎಂದೂ, ಅದು ತನ್ನ ತೂಕವನ್ನು ಕಳೆದುಕೊಂಡಂತೆಲ್ಲ ಭೂಮಿಯತ್ತ ತನ್ನ ಕಕ್ಷೆಯನ್ನು ತಿರುಗಿಸಲು ಪ್ರಾರಂಭಿಸಿ ಅಪಾಯಕಾರಿಯಾಗುತ್ತದೆ ಎಂದೂ, ಅದು ಕುಸಿಯುವುದು ಎಂದೂ ಕತೆಗಾರನಿಗೆ ಅನ್ನಿಸಿದೆ. ಯಾಕೆಂದರೆ ಅಂತರಿಕ್ಷದೊಂದಿಗೆ ಮನುಷ್ಯ ಸಂಬಂಧ ಬೆಳೆಸಿದಾಗ ಹೀಗೆ ಅನ್ನಿಸುವುದು ಸಹಜವೇ. ಸುಖದ ಹುಡುಕಾಟದಲ್ಲಿ ಬ್ರಹ್ಮಾಂಡಕ್ಕೆ ನಾವು ಲಗ್ಗೆ ಹಾಕಿರುವಾಗ ಭವಿಷ್ಯ ಏನಾಗಬಹುದು? ಕಂಡಕಂಡದ್ದಕ್ಕೆ ಬೆಂಕಿ ಹಚ್ಚುವ ಹುಚ್ಚು ಹತ್ತಿದ ಮನುಷ್ಯ ಆಕಾಶಕ್ಕೆ ಕಿಚ್ಚು ಹಚ್ಚದೆ ಬಿಡುತ್ತಾನೆಯೇ?

ಕಥೆಗಾರನ ಕಣ್ಣಿಗೆ ಬಿದ್ದ ಬೆತ್ತಲೆ ಹುಡುಗಿ ಮಾತಾಡುವುದೂ ಚಂದ್ರನ ಕುರಿತೇ. ದೃಶ್ಯ-ಅದೃಶ್ಯ ಅವಳ ನಡೆಯಾಗುತ್ತದೆ. ಅವಳೊಂದಿಗೆ, ಬೀಳುವಂತೆ ಭಾಸವಾಗುತ್ತಿರುವ ಚಂದ್ರನನ್ನು ತಡೆಯಲು ಸಾಗುವ ಕತೆಗಾರನಿಗೆ ಚಂದ್ರ ಎರಡು ಗಗನಚುಂಬಿ ಕಟ್ಟಡಗಳ ನಡುವೆಯ ಕಾರಿಡಾರಿಗೆ ಜಾರಿಬಿದ್ದು ಬೀಸುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಕಾಣುತ್ತದೆ. ಇದಕ್ಕೆ ಅನುಗುಣವಾಗಿ ಜೊತೆಯಾಗಿದ್ದ ಬೆತ್ತಲೆ ಹುಡುಗಿಯೂ (ಬೆಳದಿಂಗಳು!) ಮಾಯವಾಗುತ್ತಾಳೆ. ಕವಿ ಸಮಯದಂತೆ ಇದು ಭ್ರಮೆಯಲ್ಲದೆ ಬೇರೇನೂ ಅಲ್ಲ.

ಚಂದ್ರ ಭೂ-ಉಪಗ್ರಹ. ಭೂ ವಿನಾಶದೊಂದಿಗೆ ಚಂದ್ರನೂ ನಾಶ. ಈ ಬಗ್ಗೆ ಕಥೆಗಾರನ ಮಾತು ಹೀಗಿದೆ “ಭೂಪ್ರದೇಶದ ಮೇಲೆ ಈಗ ಚಂದ್ರ ಜೋತಾಡುತ್ತಿದೆ. ಕ್ಷೀಣಿಸಿದ ಪಾಳುಚಂದ್ರ. ವೃತ್ತಾಕಾರದಲ್ಲಿ ನಿಂತು ತೋಳುಗಳನ್ನು ಮೇಲೆ ಚಾಚಿಕೊಂಡು ಮುಖ ಮತ್ತು ಸ್ತನಗಳನ್ನು ಚಂದ್ರನ ಕಡೆಗೆ ತಿರುಗಿಸಿದ ಹೆಣ್ಣುಗಳು…”

ಪ್ರಾಚೀನರು ಚಂದ್ರನಿಗೂ ಹೆಂಗಳಿಗೂ ಸಂಬಂಧ ಬೆಸೆಯುತ್ತಿದ್ದರು. ಆದರೆ ಇಟಾಲೋ ಕಲ್ವೀನೋ ಆ ಸಂಬಂಧವನ್ನು ಹೊಸ ರೀತಿಯಲ್ಲಿ ಹೇಳಿದ್ದಾನೆ: ಇಲ್ಲಿ ಗುಜರಿಯ ರಾಶಿಯಿಂದ ಚಂದ್ರನನ್ನು ಬಿಡುಗಡೆಗೊಳಿಸಿ ಕ್ರೇನ್ ಮೂಲಕ ಅವನನ್ನು ಸುಸ್ಥಾಪಿಸುವ ಪ್ರಯತ್ನ ನಡೆಯುತ್ತದೆ. ಬಂಧಿ ಚಂದ್ರ ಪ್ರಕಾಶರಹಿತವಾಗಿ ನಿರಾಕಾರ ಬಂಡೆಯಾಗಿ ಬದಲಾಗುತ್ತದೆ. ಅಂತೆಯೇ ಬೆತ್ತಲೆ ಚಂದ್ರಕುವರಿಯರು ಕೂಡಾ. ಕಥೆಗಾರ ಈ ಮೂಲಕ ಗ್ರಹಣದ ನಂಬಿಕೆ ಹಾಗೂ ಪರಿಣಾಮವನ್ನು ಪ್ರತಿಮಿಸುತ್ತಿರುವಂತಿದೆ.

ಈ ಮಧ್ಯೆ ಕಥೆಗಾರ ಯಂತ್ರನಾಗರಿಕತೆಯಲ್ಲಿ ಸಿಲುಕಿದ ಲೋಕದ ಚಿತ್ರಣ ನೀಡುತ್ತಾನೆ. “ಕಾರುಗಳ ಮೃತದೇಹಗಳು ಕವಾಯತು ಮಾಡಲು ಪ್ರಾರಂಭಿಸಿದವು” ಎಂಬ ಮಾತು ಲೋಕದ ಜನ ಜೀವಚ್ಛವಗಳೆಂದು ಧ್ವನಿಸುತ್ತದೆ. ನೆಲದ ಮೇಲಿನ ಎಲ್ಲ ಮೆರವಣಿಗೆಗಳೂ ಚಂದ್ರನ ಮೆರವಣಿಗೆಗಳೇ ಆಗಿ ಕಾಣುತ್ತವೆ. ಚಂದ್ರ ಮತ್ತು ಚಂದ್ರಕುವರಿಯರ ನಡುವಿನ ಸಂಬಂಧವನ್ನು ಐಕ್ಯಗೊಳಿಸುತ್ತಾ ಸಾಗುವ ಕಥೆಗಾರ ಸಮುದ್ರದಿಂದ ಉದಯಿಸುವ ಚಂದ್ರನ ಅದ್ಭುತ ದೃಶ್ಯವನ್ನು ಕಟ್ಟಿಕೊಡುತ್ತಾನೆ. “ಆ ಗೋಳವು ಆಕಾಶಕ್ಕೆ ವೇಗವಾಗಿ ಹಿಂದಿರುಗುವ ಮೊದಲು ನಾವು ಕಷ್ಟಪಟ್ಟು ನೋಡಲು ಸಾಧ್ಯವಾದ ಭೂದೃಶ್ಯವಿದು.” ಪ್ಲೇಟೋ ಹೇಳುವ ‘ಕವಿಗಳು ಸುಳ್ಳುಗಾರರು’ ಎಂಬ ಮಾತು ಇಲ್ಲಿ ನೆನಪಾಗುತ್ತದೆ.ಭ್ರಮೆಯಲ್ಲಿ ಮುಳುಗಿರುವ ಮನುಷ್ಯ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿರುತ್ತಾನೆ. ಭ್ರಮೆ ಎಂಬುದೇ ಹುಚ್ಚು. “ನಮ್ಮನ್ನು ಒಂದು ಬಗೆಯ ಉನ್ಮಾದ ವಶಪಡಿಸಿಕೊಂಡಿತ್ತು.” ಇದೊಂದು ರೀತಿಯ ಪರವಶತೆ. ‘ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು.’ (ಕುವೆಂಪು)

ಇಟಾಲೋ ಕಲ್ವೀನೋ ಚಂದ್ರನ ಕಥೆ ಹೇಳುತ್ತಿದ್ದರೂ ಅದು ನೆಲಮುಗಿಲುಗಳ ಸಂಬಂಧ ತಲುಪಿರುವ ಕ್ಷೀಣನೆಲೆಯನ್ನು ಸ್ಪಷ್ಟಗೊಳಿಸುತ್ತದೆ. ಬೆತ್ತಲೆ ಹುಡುಗಿಯರು ಕಾಮನೆ ಹುಟ್ಟಿಸಿದರೂ ಜೊತೆಯಲ್ಲೇ ಭೀತಿಗೂ ಕಾರಣರಾಗುತ್ತಾರೆ. ಬದುಕಿನ ವೈರುಧ್ಯವಿದು. ಕಲ್ವೀನೋ ‘ಭ್ರಮಾʼಮಾರ್ಗದ ಮೂಲಕ ಬದುಕಿನ ದಾರುಣತೆಯನ್ನು ಬಿಡಿಸಿಡುತ್ತಾ ಹೋಗುತ್ತಾನೆ. ಆತನೊಬ್ಬ ಅದ್ಭುತ ಕಥೆಗಾರ, ಕಥೆಗಾರಿಕೆ!

ಇಟಾಲೋ ಕಲ್ವೀನೋ ಚಂದ್ರನ ಕಥೆ ಹೇಳುತ್ತಿದ್ದರೂ ಅದು ನೆಲಮುಗಿಲುಗಳ ಸಂಬಂಧ ತಲುಪಿರುವ ಕ್ಷೀಣನೆಲೆಯನ್ನು ಸ್ಪಷ್ಟಗೊಳಿಸುತ್ತದೆ. ಬೆತ್ತಲೆ ಹುಡುಗಿಯರು ಕಾಮನೆ ಹುಟ್ಟಿಸಿದರೂ ಜೊತೆಯಲ್ಲೇ ಭೀತಿಗೂ ಕಾರಣರಾಗುತ್ತಾರೆ. ಬದುಕಿನ ವೈರುಧ್ಯವಿದು. ಕಲ್ವೀನೋ ‘ಭ್ರಮಾʼಮಾರ್ಗದ ಮೂಲಕ ಬದುಕಿನ ದಾರುಣತೆಯನ್ನು ಬಿಡಿಸಿಡುತ್ತಾ ಹೋಗುತ್ತಾನೆ. ಆತನೊಬ್ಬ ಅದ್ಭುತ ಕಥೆಗಾರ, ಕಥೆಗಾರಿಕೆ!

‘ಅವಳ ಸಾವಿನ ಸುದ್ದಿ’ ಪೆಟಿನಾ ಗಪ್ಪಾ

ಜಿಂಬಾಬ್ವೆಯ ಲೇಖಕಿ. ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ವೃತ್ತಿಯಲ್ಲಿ ವಕೀಲೆ. ಗಾರ್ಡಿಯನ್ ಫಸ್ಟ್ ಬುಕ್ ಅವಾರ್ಡ್ ವಿಜೇತೆ. ಈಕೆಯ ಕಥೆಗಳು “ವಿದ್ಯಾವಂತರಿಂದ ಉತ್ಕೃಷ್ಟರಿಂದ ಶುರುವಾಗಿ ಅಸಾಂಪ್ರದಾಯಿಕ ವರ್ಗದವರವರೆಗೆ, ಬೀದಿಯಲ್ಲಿ ಓಡುವ ಪೂರ್ಣಹುಚ್ಚರು ಮತ್ತು ಮಕ್ಕಳವರೆಗೆ, ಜಿಂಬಾಬ್ವೆ ಸಂಸ್ಕೃತಿಯ ಒಂದೊಂದು ಎಳೆಯನ್ನೂ ಬಿಡಿಸಿಡುತ್ತವೆ.” ಹಾಗಾಗಿ ಈಕೆ ಜಿಂಬಾಬ್ವೆಯ ಧ್ವನಿ(ವಾಯ್ಸ್ ಆಫ್ ಜಿಂಬಾಬ್ವೆ) ಯಾಗಿದ್ದಾರೆ. “ಜಿಂಬಾಬ್ವೆಯ ಸಾಮಾಜಿಕ ಚರಿತ್ರೆಗಳ ಬಗ್ಗೆ ನನಗೆ ಆಸಕ್ತಿ” ಎನ್ನುತ್ತಾರೆ ಈಕೆ. ಯಾಕೆಂದರೆ ಚರಿತ್ರೆ ಯಾವಾಗಲೂ ರಾಜಕೀಯ ಉದ್ದೇಶಗಳನ್ನು ವಿಕೃತವಾಗಿ ವಿವರಿಸಿದರೆ, ಕಥೆ-ಫಿಕ್ಷನ್-ಸಮತೋಲನವನ್ನು ಸಾಧಿಸಲು ಪ್ರಯತ್ನಿಸುತ್ತದೆ. ಪೆಟಿನಾ ಅವರ ಕಥೆಗಳು ಜೀವನದ ಗುಂಗು, ಸೂಕ್ಷ್ಮತೆ ಹಾಗೂ ಸರಳ ಸಂತೋಷಗಳನ್ನು ದಾಖಲಿಸುತ್ತವೆ.

‘ಅವಳ ಸಾವಿನ ಸುದ್ದಿ’ ಕಥೆ ಸಲೂನ್ ಒಂದರಲ್ಲಿನ ಮಹಿಳೆಯರು ಕೈಂಡ್‌ನೆಸ್ ಎಂಬುವವಳ ಸಾವಿನ ಬಗ್ಗೆ ಚರ್ಚಿಸುವುದನ್ನು ಒಳಗೊಂಡಿದೆ. ಕೈಂಡ್‌ನೆಸ್ ಒಂದು ಪರೋಕ್ಷ ಪಾತ್ರ. ಸಲೂನ್ ಸ್ತ್ರೀಯರು ಮತ್ತು ಅಲ್ಲಿಗೆ ಬಂದು ಹೋಗುವ ಮಹಿಳಾ ಗಿರಾಕಿಗಳು ಅವಳು ಹಾಗೂ ಅವಳ ಸಾವನ್ನು ತಮಗನಿಸಿದ ಹಾಗೆ ವಿಶ್ಲೇಷಿಸುತ್ತಾ ಹೋಗುವುದು ಕುತೂಹಲ ಹುಟ್ಟಿಸುತ್ತದೆ. ಕೈಂಡ್‌ನೆಸ್ ಎಂಬ ಗುಣವಾಚಕವನ್ನು ನಾಮಪದವನ್ನಾಗಿಸುವ ಔಚಿತ್ಯವನ್ನು ಇಡೀ ಕಥೆಯುದ್ದಕ್ಕೂ ಗಮನಿಸಬಹುದಾಗಿದೆ.

ಕತೆಗಾರ್ತಿ ಒಬ್ಬ ಮಹಿಳೆಯಾಗಿ ಸ್ತ್ರೀಪಾತ್ರಗಳನ್ನು ತುಂಬ ಸಹಜವಾಗಿ ನಿರೂಪಿಸಿದ್ದಾರೆ. ಸ್ಥಳೀಯ ಮಹಿಳೆಯರ ವೈವಿಧ್ಯಮಯ ಸ್ವಭಾವದ ಪ್ರಾತಿನಿಧಿಕ ಮಾದರಿಗಳು ಅವರು. ಅವರ ರೂಪ ವರ್ಣನೆಯಂತೂ ಸಾಂಪ್ರದಾಯಿಕ ಮಾದರಿಯನ್ನು ಒಡೆದಂತಹ ಮಾದರಿ.

ಒಬ್ಬಳದು ದೊಡ್ಡ ಹೊಟ್ಟೆ, ಅಂಥದೇ ಅಂಡು, ಕ್ಯಾರಮೆಲ್‌ನಂತಹ ಚರ್ಮ… ಇನ್ನೊಬ್ಬಳದು ತೆಳ್ಳಗಿನ ಹಳದಿ ಮೈ, ನೀಳ ಕೈಕಾಲು, ಗಾಢ ಕಪ್ಪು ವಸಡುಗಳು… ಮತ್ತೊಬ್ಬಳದು ಮಧ್ಯಮಗಾತ್ರದ ದೇಹ, ಎತ್ತರ, ಸ್ತನಗಳು, ಅಂಡು, ಮೈಬಣ್ಣ…. ಕೊನೆಯವಳದು ಸೂಕ್ಷ್ಮ ಕೈಗಳು, ಮೂಳೆಗಳು, ಪಾರದರ್ಶಕ ಹಳದಿ ಬಣ್ಣದ ಚರ್ಮ.”

ಕೈಂಡ್‌ನೆಸ್‌ಗಾಗಿ ಬಂದ ಹೆಂಗಸೂ ಕೂಡ ದೊಡ್ಡ ದೇಹದ, ಕ್ಯಾರಮೆಲ್ ಚರ್ಮದವಳೇ. ಇವರೆಲ್ಲ ಕಥೆಗಾರ್ತಿ ಕಂಡ ತನ್ನ ಸುತ್ತಲಿನ ಹೆಂಗಸರೇ. ಹಾಗಾಗಿ ಈ ವಿವರಗಳಲ್ಲಿ ಕವಿಸಮಯಗಳಾಗಲಿ ಉತ್ಪ್ರೇಕ್ಷೆಗಳಾಗಲಿ ಖಂಡಿತ ಇಲ್ಲ. ಎಲ್ಲವೂ ದೃಗ್ಗೋಚರ ವಾಸ್ತವಗಳು!

ಸಾವಿನ ಸ್ವರೂಪವನ್ನು ಕೈಂಡ್‌ನೆಸ್‌ಳ ಸಾವಿನ ಮೂಲಕ ಕಂಡುಕೊಳ್ಳುವ ಸೂಕ್ಷ್ಮದೃಷ್ಟಿ ಈ ಕತೆಯಲ್ಲಿ ಉದ್ದಕ್ಕೂ ಪ್ರಕಟವಾಗಿದೆ. ಜೊತೆಗೆ ಆ ಮೂಲಕ ಜೀವಂತ ಕೈಂಡ್‌ನೆಸ್ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಕೈಂಡ್‌ನೆಸ್ ಅಪರೂಪದ ಕೇಶ ವಿನ್ಯಾಸಕಿ. ಗಿರಾಕಿ ಬಯಸಿದಂತೆ ಹೆರಳು ಹಾಕುವ ಕುಶಲಿ. ಇಂಥವಳಿಗೆ ಅವಳ ಗೆಳೆಯ ಚಾಕು ಹಾಕಿದ ಎಂದು ಒಬ್ಬಳಂದರೆ, ಆಕೆಗೆ ಗುಂಡುಹಾರಿಸಿ ಕೊಲ್ಲಲಾಯಿತು ಎಂದು ಮತ್ತೊಬ್ಬಳೆನ್ನುತ್ತಾಳೆ. ಮಗದೊಬ್ಬಳು ಕೊಡಲಿಯಿಂದ ಕೊಚ್ಚಿದ್ದಾರೆ ಎನ್ನುತ್ತಾಳೆ. ಸಾಮಾನ್ಯರಿಗೆ ಸಾಮಾನ್ಯವಾಗಿ ಸಾವಿನ ಬಗ್ಗೆ ಇಂಥ ಕುತೂಹಲ ಇದ್ದೇ ಇರುತ್ತದೆ. ಸಾವಿನಂತಹ ಗಂಭೀರ ವಿಷಯದ ನಡುವೆ ಹಾಸ್ಯ-ವ್ಯಂಗ್ಯಗಳಿಗೇನು ಕೊರತೆಯಿಲ್ಲ.

“ನೀನೀಗ ಏಕೆ ದಪ್ಪ? ಗರ್ಭಿಣಿಯಾ?” ಎಂಬ ಪ್ರಶ್ನೆಗೆ “ನನ್ನ ಪತಿ ದೂರವಿದ್ದಾಗ ನಾನು ಹೇಗೆ ಗರ್ಭಿಣಿಯಾಗಬಲ್ಲೆ?” ಎಂಬ ಉತ್ತರ. “ಅದನ್ನು ಮಾಡಲು ಕೇವಲ ಗಂಡ ಮಾತ್ರವಲ್ಲ, ಹರಿದು ಕಸಿದುಕೊಳ್ಳುವವರಿದ್ದಾರೆ” ಎಂಬ ಒರಟಾದ ವ್ಯಂಗ್ಯದ ಕ್ರೂರ ನಗೆಯ ಪ್ರತಿಮಾತು. “ಸಲೂನ್ ಹುಡುಗಿಯರ ಮದುವೆ ಸಾಧ್ಯವೇ?” ಎಂಬ ಪ್ರಶ್ನೆಗೆ “ಸಲೂನ್ ಹುಡುಗಿಯರು ನಂತರವೂ ಸಲೂನ್ ಹುಡುಗಿಯಾಗಿರುತ್ತಾರೆ” ಎಂಬ ನಿರಾಶೆಯ ಉತ್ತರ. ವೃತ್ತಿಯಿಂದ ವ್ಯಕ್ತಿತ್ವ ಶೀಲಗಳನ್ನು ಅಳೆಯುವ ದೃಷ್ಟಿಕೋನ ಎಲ್ಲ ದೇಶಗಳಿಗೂ ಅಂಟಿದ ರೋಗವೇ.

ಕಡೆಗೆ ಕೈಂಡ್‌ನೆಸ್ ಹೇಗೆ ಸತ್ತಳು ಎಂಬುದಕ್ಕಿಂತ ಸತ್ತದ್ದು ಸತ್ಯ ಎಂಬ ನಿಲುವಿಗೆ ಅಂಟಿದ ಸಲೂನ್ ಸ್ತ್ರೀಯರಿಗೆ ಕೈಂಡ್‌ನೆಸ್ ವಿಶೇಷ ವ್ಯಕ್ತಿಯಾಗಿ, ತಾಯಿಯಾಗಿ, ರಕ್ಷಕಿಯಾಗಿ ಕಾಣಿಸುತ್ತಾಳೆ.

ಪುರುಷ ಲೇಖಕರು ಮಹಿಳೆಯರ ಬಗ್ಗೆ ಬರೆಯುವಾಗ ತುಂಬಾ ಸಿನಿಕತನ ತೋರುತ್ತಾರೆ. ಆದರೆ ಪೆಟಿನಾ ಹಾಗಲ್ಲ. ಹೆಣ್ಣನ್ನು ಚಿತ್ರಿಸುವಾಗ ಅದ್ಭುತವಾಗಿ ಪರಕಾಯ ಪ್ರವೇಶ ಮಾಡುತ್ತಾರೆ. ಆಡುವ ಮಾತು, ಬಳಸುವ ಸೆಂಟು, ಚರ್ಮದ ಬಣ್ಣ… ಎಲ್ಲವೂ ಮುಖ್ಯವಾಗುತ್ತವೆ. ಕೈಂಡ್‌ನೆಸ್ ಕುರಿತು ಹೀಗೆ ಬರೆಯುತ್ತಾರೆ:

“ಆ ಹೆಣ್ಣು ನಂಬಲಾಗದಷ್ಟು ಬೆಳ್ಳಗಿತ್ತು. ಅದನ್ನು ಸುಖಿಸಲಿಲ್ಲ, ಕೊಂದುಬಿಟ್ಟರು.”

ಕತೆಗಾರ್ತಿ ತನ್ನ ಪರಿಸರದಲ್ಲಿ ನಡೆದದ್ದನ್ನು ಯಥಾವತ್ತಾಗಿ ದಾಖಲಿಸುತ್ತಾರೆ. ನ್ಯಾಯಾಧೀಶೆಯಲ್ಲ ಆಕೆ. ಹಾಗಾಗಿ ಯಾವುದೇ ತೀರ್ಪು ಕೊಡುವುದಿಲ್ಲ. ಆ ಕುರಿತಂತೆ ಜನಜನಿತವಾದ ಸಂಗತಿಗಳಷ್ಟೇ ಆಕೆಗೆ ಮುಖ್ಯ. ನಾವು ನಮ್ಮ ಬಗ್ಗೆ ಯೋಚಿಸುವುದಕ್ಕಿಂತ ಅನ್ಯರ ಬಗ್ಗೆ ಆಡಿಕೊಳ್ಳುವುದರಲ್ಲಿ ಆಯುಷ್ಯವನ್ನು ಕಳೆದುಬಿಡುತ್ತೇವೆ. ಕಥೆಯಲ್ಲಿ ಒಂದು ಅದ್ಭುತವಾದ ತರ್ಕವಿದೆ; ಹಾಗೆಯೇ ಅತಾರ್ಕಿಕವಾದ ವಾದವಿವಾದಗಳಿವೆ. ಇದು ಸಾಧ್ಯವಾಗಲು ಕಾರಣ ಪೆಟಿನಾ ವಕೀಲೆಯಾಗಿ ಇರುವುದು.

ಪ್ರೀತಿಯ ಬದುಕು’ ಆಲಿಸ್ ಮುನ್ರೋ

ಆಲಿಸ್ ಮುನ್ರೋ ಕೆನಡಾದ ಲೇಖಕಿ. ನೊಬೆಲ್ ಪ್ರಶಸ್ತಿ ವಿಜೇತೆ. ಸಣ್ಣ ಕಥೆಗಳ ಶಿಲ್ಪನಿರ್ಮಾಣದಲ್ಲಿ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಕಾಲದಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಪ್ರವೃತ್ತಿಯನ್ನು ಒಳಗೊಂಡ ವಿನ್ಯಾಸವೊಂದನ್ನು ತಮ್ಮ ಕಥೆಗಳ ಮೂಲಕ ಕೊಟ್ಟಿದ್ದಾರೆ. ಇವರ ಕಥೆಗಳು ಹೆಚ್ಚಾಗಿ ಘೋಷಣೆಗಿಂತ ಮನಸ್ಸಿಗೆ ನಾಟುವಂಥವು; ಪ್ರದರ್ಶನಕ್ಕಿಂತ ಹೆಚ್ಚಾಗಿ ತಿಳಿವಳಿಕೆ ನೀಡುವಂಥವು. ಗೋಜಲಿಲ್ಲದ ಗದ್ಯಶೈಲಿಯಲ್ಲಿ ಇವರ ಕಥೆಗಳು ಮಾನವೀಯ ಸಂಘರ್ಷಗಳನ್ನು ಪ್ರಕಟಿಸುತ್ತವೆ. ಮುನ್ರೋ ಪ್ರಾದೇಶಿಕ ದೃಷ್ಟಿಕೋನ ಹೊಂದಿರುವಂಥವರು. ಅಮೆರಿಕದ ದಕ್ಷಿಣ ಭಾಗದ ಗ್ರಾಮೀಣ ಬದುಕಿಗೆ ಹತ್ತಿರ ಅವರ ಬರವಣಿಗೆ. ಬಹುಜ್ಞ ನಿರೂಪಕಿ ಇವರು. ಆಳವಾದ ರೂಢಿ ಸಂಪ್ರದಾಯವುಳ್ಳ ಪಾತ್ರಗಳಲ್ಲಿ ಪುರುಷಪಾತ್ರಗಳು ಪ್ರತಿ ಪುರುಷನ ಪರಮ ಸತ್ವವನ್ನು ಹಿಡಿದಿಟ್ಟರೆ, ಸ್ತ್ರೀ ಪಾತ್ರಗಳು ಹೆಚ್ಚು ಸಂಕೀರ್ಣವಾದವುಗಳು.

ಚೆಕಾಫನ ಹಾಗೆ ಬರೆಯುವ ಮುನ್ರೋ ಅವರದು ಸುಭಗ ಶೈಲಿ. ಚೆಕಾಫನ ಕಾಲದೊಂದಿಗಿನ ಗೀಳನ್ನು ಹಂಚಿಕೊಂಡಿದ್ದಾರೆ. ಭಾವನಾತ್ಮಕ ಬರವಣಿಗೆ ಇವರದು; ವಾಸ್ತವತಾವಾದ ಮನುಷ್ಯನ ಭಾವನೆಗಳು ಇವರ ಕಥೆಗಳ ಸರಕು: ಗಂಡು-ಹೆಣ್ಣಿನ ಭಾವನೆಗಳು-ಮುಖ್ಯವಾಗಿ ಪ್ರೀತಿ ಮತ್ತು ಕಾಯಕಗಳು. ಇವರ ಸಣ್ಣ ಕಥೆಗಳಲ್ಲಿ ಕೃಷಿಕರ ರಕ್ಷಣೆ, ಅತ್ಯಾಸಕ್ತಿ, ಮನೆ, ಕಾಡು ಇವು ಮುಖ್ಯವಾಗಿ ಬಹಳ ಚರ್ಚೆಗೆ ಒಳಗಾಗಿವೆ.

‘ಪ್ರೀತಿಯ ಬದುಕು’ ಒಂದು ಮನೆಯ ಸುತ್ತ ಬಿಚ್ಚಿಕೊಂಡ ಕುತೂಹಲಕಾರಿ ಕಥೆ. ಮನೆಯೊಂದಿಗೆ ಆರಂಭದ ಶಾಲಾ ದಿನಗಳು, ಅಲ್ಲಿನ ಅನುಭವಗಳು ದಟ್ಟವಾಗಿ ದಾಖಲಾಗಿವೆ. ಶತಮಾನಕ್ಕೂ ಕಡಿಮೆ ವಯಸ್ಸಿನ ಆ ಮನೆಯನ್ನು ವಸಾಹತುಗಾರ ಸ್ಥಾಪಿಸಿದ್ದು. ಮುಂದೆ ಅದು ಹಳ್ಳಿಯಾದದ್ದು. ಹೋಟೆಲ್, ಚರ್ಚ್, ಮಿಲ್, ಶಾಲೆ ಇತ್ಯಾದಿಗಳೆಲ್ಲಾ ಬಂದದ್ದು ಎಲ್ಲವೂ ನಗರೀಕರಣದ ಪರಿಣಾಮ. ಮನೆಯ ಹುಟ್ಟಿನ ಬಗ್ಗೆ ಹೇಳುವಾಗ ‘ಇದು ಕಥೆಯಲ್ಲ, ಜೀವನ’ ಎಂಬ ಮಾತು ಬರುತ್ತದೆ. ಕಥೆಗಾರ್ತಿಯ ಉದ್ದೇಶವೇ ಅದು. ಕಥೆ ಹೇಳುವುದಲ್ಲ. ಜೀವನವನ್ನು ಪರಿಚಯಿಸುವುದು. ಈ ಪರಿಚಯ ತೀರಾ ಸಹಜವಾಗಿ ನಡೆಯುತ್ತದೆ. ಬೇಸಿಗೆಯಲ್ಲಿ ಮನೆಯ ರಿಪೇರಿ, ಇಟ್ಟಿಗೆ ಮೇಲೆ ಕಂದುಬಣ್ಣದ ಲೇಪನ, ಬಳಕೆಯಾಗದ ಆಹಾರದ ಎಲಿವೇಟರ್‌ನಿಂದ ಅಡುಗೆಮನೆಯ ಬೀರು, ಊಟದ ಕೋಣೆಯ ಒಳ ಮೆಟ್ಟಿಲುಗಳು, ಕೋಣೆಯಾಗಿ ಬದಲು, ಇಂಥ ಮನೆಯಲ್ಲಿ ಹೊಡೆತ ತಿಂದಿದ್ದು, ಅವಮಾನಕ್ಕಾಗಿ ಸಾಯಬೇಕು ಎನಿಸಿದ್ದು, ಆದರೆ ಸಾಯದೆ ಉಳಿದದ್ದು, ಅಪ್ಪನ ಕ್ರೌರ್ಯ, ಇತ್ಯಾದಿ.

ಮ್ಯಾಪಲ್ ಮರಗಳು, ನದಿಯ ದಂಡೆ, ಹುಲ್ಲಿನ ಬೆಟ್ಟ, ಇನಾಕ್ಸ್ಗಳು, ಐರಿಸ್ ಹೂಗಿಡಗಳು, ಬಿಳಿ ಹೆಬ್ಬಾವುಗಳು, ಹೀಗೆ ಪ್ರಕೃತಿ ಕುರಿತ ಪದ್ಯಗಳು ಗದ್ಯಕಥನದೊಂದಿಗೆ ಬೆಸೆದುಕೊಂಡಿವೆ. ಈ ಜೀವನ ಕಥನದಲ್ಲಿ ಮನೆಯೊಂದಿಗೆ ಬಾಲ್ಯ, ಯವ್ವನ, ವೃದ್ಧಾಪ್ಯ, ಶಾಂತಿ, ಹಿಂಸೆ, ಬಡತನ, ಕೃಷಿ, ಕೈಗಾರಿಕೆ, ಮರಗಿಡ, ಹೂಬಳ್ಳಿ, ರಿವಾಲ್ವರ್, ಕರುಳ ಸಂಬಂಧ, ಪ್ರೀತಿ, ದ್ವೇಷಾಸೂಯೆ-ಹೀಗೆ ಎಲ್ಲವೂ ಬರುತ್ತದೆ.

ಮನೆಯೆಂಬುದು ಕೇವಲ ಕಲ್ಲುಗಳ ರಚನೆಯಲ್ಲ, ಭಾವ ಸಂಬಂಧ ನಿರ್ಮಾಣ. ಮನೆ ವಿಲೇವಾರಿ ಮಾಡಿಹೋದ ಹೆಂಗಸಿಗೂ ಅದರೊಂದಿಗೆ ಕಳೆದ ದಿನಗಳ ಭಾವ ಸಂಬಂಧವಿದೆ. ಸದ್ಯ ಬದುಕುತ್ತಿರುವ ನಿರೂಪಕಿಯ ತಾಯಿಗೂ ಅಂಥದೇ ವರ್ತಮಾನದ ಭಾವಸಂಬಂಧ ಏರ್ಪಟ್ಟಿದೆ. ಪ್ರೀತಿ ಎಂಬುದು ನಿರ್ಜೀವ ವಸ್ತುಗಳನ್ನು ಜೀವಂತಗೊಳಿಸುತ್ತದೆ. ಅಂತಹ ಕಡೆಯ ವಾಸ್ತವ್ಯ ಪ್ರೀತಿಯ ಬದುಕಲ್ಲದೇ ಮತ್ತೇನು? ಅದ್ಭುತವಾದ ಒಂದು ಕಥಾನಕ ಇದು.

“ಭಾಷಾಂತರಕಾರರು ಮೂಲಲೇಖಕನ ಪ್ರತಿಭೆಯನ್ನು, ಅವನ ಸಂವೇದನೆಯನ್ನು, ಹಾಗೆಯೇ ನಿರ್ವಹಿಸುತ್ತಿರುವ ಕೃತಿಯ ವಸ್ತುವಿಷಯವನ್ನು, ಕಲಾತ್ಮಕತೆಯನ್ನು ಸಂಪೂರ್ಣವಾಗಿ ಸಮರ್ಪಕವಾಗಿ ಹಿಡಿಯಬಲ್ಲ ಸಮರ್ಥನಿರಬೇಕಾಗುತ್ತದೆ. ಮೂಲವನ್ನೇ ರಚಿಸುತ್ತಿರುವಂತೆ ಅಭಿವ್ಯಕ್ತಿಸಬೇಕು” ಎಂದಿದ್ದಾನೆ ಡ್ರೈಡನ್.

ಇವಾನ್ ಎಸ್ ಕೋನೆಲ್ ‘ಶ್ರೀಮತಿ ಬ್ರಿಡ್ಜ್ ಅವರ ಸುಂದರ ಜಗತ್ತು’

ಇವಾನ್ ಎಸ್ ಕೋನೆಲ್ ಪಶ್ಚಿಮ ಅಮೆರಿಕದ ಜೀವಂತ ಬರಹಗಾರ ಎನಿಸಿದ್ದಾರೆ. ಸುಂದರ ಶೈಲಿ ಮತ್ತು ಅಚ್ಚರಿಯ ವೈವಿಧ್ಯಗಳಿಗೆ ಇವರ ಕಥೆಗಳು ಪ್ರಸಿದ್ಧ. ಮೇಲ್ಮಧ್ಯಮ-ವರ್ಗದ ಕುಟುಂಬಗಳ ಕಥೆ ಇವರ ಬಹುತೇಕ ಆಯ್ಕೆ.

‘ಶ್ರೀಮತಿ ಬ್ರಿಡ್ಜ್ ಅವರ ಸುಂದರ ಜಗತ್ತು’ ಬಿಡಿಬಿಡಿಯಾಗಿ ವಿವರಗಳನ್ನು ಕಟ್ಟಿಕೊಡುವ ಕಥೆ. ಪಾರ್ಕಿಂಗ್, ಮಿನಿಸ್ಟರ್ ಅವರ ಪುಸ್ತಕ, ಮದ್ರಾಸಿನಿಂದ ಸೇವಕಿ, ಹಿಂಭಾಗದಲ್ಲಿ ಅಗಸಗಿತ್ತಿ, ಹಾಳಾದ ಕಫ್ಸ್, ಸಮಾನತೆ, ಗವಸುಗಳು, ಕಾನ್ರಾಡ್, ಮತದಾನ – ಹೀಗೆ ಇವೆಲ್ಲವೂ ಜೀವನಾನುಭವವನ್ನು ಕಟ್ಟಿಕೊಡುವ ಸಂಗತಿಗಳಾಗಿವೆ.

ಶ್ರೀಮತಿ ಬ್ರಿಡ್ಜ್ ಎಲ್ಲ ಹೆಂಗಸರಂತೆ ಅಲ್ಲ. ಆಕೆ ಓದುವ ಪುಸ್ತಕ ಮತ್ತು ಲೇಖಕರ ಬಗ್ಗೆ, ಆಕೃತಿಯ ವಿಶೇಷತೆಯ ಬಗ್ಗೆ ದಾಖಲಿಸುವುದರೊಂದಿಗೆ ಆಕೆಯ ವ್ಯಕ್ತಿತ್ವದ ನಿರೂಪಣೆಯಲ್ಲಿ ಕೋನೆಲ್ ವಿಶೇಷ ಆಸಕ್ತಿ ತೋರುತ್ತಾರೆ.

ಮಾನವಕುಲದ ವರ್ತಮಾನದ ಸ್ಥಿತಿಯ ಬಗ್ಗೆ ಕಥೆಗಾರರಿಗೆ ತುಂಬಾ ಕಳಕಳಿ: ‘ಮಾನವಕುಲದ ಸ್ಥಿತಿಯನ್ನು ಹೆಚ್ಚಾಗಿ ಧ್ಯಾನಿಸುತ್ತೇನೆ’ ಎನ್ನುತ್ತಾರೆ. ಯುದ್ಧ, ಕಮ್ಯುನಿಷ್ಟರು, ಅವರ ಕೊಳಕು ಮನಸುಗಳು ಬ್ರಿಡ್ಜ್ ಅಥವಾ ಕಥೆಗಾರರಿಗೆ ಅಸಹನೀಯ. ಜೀವನವು ಎಲ್ಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂಬುದು ಅವರ ಅಭಿಪ್ರಾಯ. ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆಯೂ ಇದೇ ಆಗಿದೆ.

ಸಾಮಾಜಿಕ ಪಿಡುಗಾದ ಬಡತನ ಕೋನೆಲ್ಲರನ್ನು ಕೆರಳಿಸುತ್ತದೆ. ‘ಬಡವರಾಗಿ ಇರುವುದು ನಾಚಿಕೆಗೇಡು ವಿಚಾರವೇ?’ ಜೊತೆಗೆ ಬಡವರು ಯಾವತ್ತಿಗೂ ಬಡವರು ಎಂಬುದನ್ನು ಒಪ್ಪಿಕೊಳ್ಳದೆ ಪ್ರತಿಭಟಿಸಬೇಕೆಂದು ಅವರ ಒತ್ತಾಸೆ. ಹಾಗಾದಾಗ ಮಾತ್ರ ಬಡವರನ್ನು ನೋಡುವ ಕೀಳುದೃಷ್ಟಿ ಬದಲಾಗಬಹುದೆಂಬ ನಿರೀಕ್ಷೆ ಅವರದು.

ಬ್ರಿಡ್ಜ್ ಮೂಲಕ ಕೋನೆಲ್ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಾರೆ: ‘ವಿವಿಧ ರಾಜ್ಯಗಳ ಪ್ರತ್ಯೇಕತಾ ನೀತಿಗಳು ಹೆಚ್ಚು ಹೆಚ್ಚು ನಾಗರಿಕ ಸಮುದಾಯಗಳಿಂದ ಮತ್ತು ಫೆಡರಲ್ ಸರ್ಕಾರದಿಂದ ಟೀಕೆಗೆ ಗುರಿಯಾಗುತ್ತಿದ್ದಾಗ, ತಾರತಮ್ಯವೂ ಯಥಾಸ್ಥಿತಿಯ ಮುಂದುವರಿಕೆಗೆ ಸಹಕರಿಸುತ್ತದೆ’ ಎಂದು ಬ್ರಿಡ್ಜ್ ನಂಬಿದರೆ, ಆಕೆಯ ಗಂಡ ‘ಎಲ್ಲ ಜನರು ಸಮಾನರಲ್ಲ’ ಎಂಬ ಪ್ರತ್ಯೇಕತಾ ನೀತಿಯನ್ನು ಮಂಡಿಸುತ್ತಾನೆ. ‘ಅಬ್ರಹಾಮ್ ಲಿಂಕನ್ ಬಯಸಿದ್ದು ಸಮಾನ ಹಕ್ಕುಗಳನ್ನು ವಿನಾ ಸಮಾನ ಸಾಮರ್ಥ್ಯವನ್ನಲ್ಲ’ ಎಂದು ಆಕೆ ವಾದಿಸುತ್ತಾಳೆ. ಜೊತೆಗೆ ಕೃಷಿ ಹೆಚ್ಚುವರಿ ಮತ್ತು ವಿದೇಶಿ ಸಬ್ಸಿಡಿಗಳಂತಹ ವ್ಯವಹಾರಗಳ ಬಗ್ಗೆ ತಿಳಿಯಬಯಸುತ್ತಾಳೆ. ‘ಪತ್ರಿಕೆಗಳು ಅವರಿಗೆ ಏನು ಬೇಕು, ಅದನ್ನು ಮಾತ್ರ ಮುದ್ರಿಸುತ್ತವೆ’ ಎಂದು ಅಸಮಾಧಾನವನ್ನು ಹೊರಹಾಕುತ್ತಾಳೆ.

ಕೋನೆಲ್ಲರ ಕಥೆಯಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿಚಾರಗಳೆಲ್ಲವೂ ಅಭಿವ್ಯಕ್ತವಾಗಿವೆ. ಅಮೆರಿಕದ ಬರಹಗಾರರಿಗೆ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಅವಶ್ಯ. ಅದರ ಅರಿವಿಲ್ಲದವನು ಉತ್ತಮ ಲೇಖಕನಾಗಲಾರ. ಅಂತ ಒಬ್ಬ ರಾಜಕೀಯ ಪ್ರಜ್ಞೆಯುಳ್ಳ ಲೇಖಕರಾಗಿದ್ದಾರೆ ಕೋನೆಲ್. ಜಗತ್ತು ಬದಲಾಗಬೇಕೆಂಬುದು ಇಚ್ಛೆಯಾದರು ಅದು ಹಾಗಾಗದೆ ಉಳಿದುಬಿಡುತ್ತದೆ ಎಂಬ ಆತಂಕವು ಈ ಕತೆಯಲ್ಲಿ ಪ್ರಕಟವಾಗಿದೆ.ಜಾಕ್ ಅಲ್ಸನ್ ‘ಅದೃಶ್ಯ ಮನುಷ್ಯ’

ಅಮೆರಿಕದ ಶಿಕಾಗೊ ನಗರದ ಅಪರಾಧ ಸಾಹಿತ್ಯ ಲೇಖಕ ಜಾಕ್ ಅಲ್ಸನ್ ಮುಖ್ಯವಾಗಿ ತನ್ನ ಕಥೆಗಳಲ್ಲಿ ಅಪರಾಧ ಕೃತ್ಯಗಳು, ಕ್ರೌರ್ಯ, ಅಪರಾಧಿಗಳ ಪಾಲುದಾರಿಕೆ ಇತ್ಯಾದಿಗಳನ್ನು ದಾಖಲಿಸುತ್ತಾರೆ.

‘ಅದೃಶ್ಯ ಮನುಷ್ಯ’ ಕಥೆ ಇಡಿಯಾಗಿ ಗ್ರಾಮಾಂತರ ಪ್ಯಾರಿಸ್ಸಿನಲ್ಲಿ ನಡೆಯುತ್ತದೆ. ಅರ್ಥವಾಗದ ಮನುಷ್ಯ, ವ್ಯಕ್ತಿತ್ವ, ಅಪರಾಧ ಕೃತ್ಯ, ಕ್ರೌರ್ಯ, ರಕ್ತ ಸಂಬಂಧ ಇತ್ಯಾದಿ ವಾಸ್ತವ ಮತ್ತು ಭ್ರಮೆಗಳ ಸಂಘರ್ಷದ ಚಿತ್ರಣವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ.

ಅದೃಶ್ಯ ವ್ಯಕ್ತಿಯ ಪ್ರವೇಶ ಮತ್ತು ನಿರ್ಗಮನಗಳು ಸಿನೀಮಯವಾಗಿದೆ. ೭೫ರ ಮುದಿವಯಸ್ಸಿನ ಹೊರತಾಗಿಯೂ ದೇಹರಚನೆಯಲ್ಲಿ ಚುರುಕಾದ ಆತ ಬ್ಯಾಂಕ್ ದರೋಡೆಗೆ ಸಿದ್ಧನಿರುವುದು ಅಚ್ಚರಿ ತರುತ್ತದೆ. ಆತನೇ ಹೇಳುವಂತೆ ಅದೃಶ್ಯವಾಗುವಂತೆ ಗಿಡಮೂಲಿಕೆಗಳಿಂದ ಒಂದು ಪಾಕವನ್ನು ಸಿದ್ಧಗೊಳಿಸಿದ್ದಾನೆ. ಆದರೂ ಆತನ ಮಗ ಮಂಗಿಯಾರೊಟ್ಟಿ ಭಾವಿಸಿದಂತೆ ಅವನು ಮೂರ್ಖ ಮುದಿಯ, ಉಪದ್ರವಿ, ತಲೆಯ ತುಂಬಾ ಅಸಂಬದ್ಧತೆಯನ್ನು ತುಂಬಿಕೊಂಡಿರುವ ಹುಚ್ಚ.

ಮನುಷ್ಯಮಾತ್ರರ ಅಗಾಧ ಶಕ್ತಿಯ ಬಗ್ಗೆ ಕಥೆಗಾರನಿಗೆ ನಂಬಿಕೆಯಿದೆ. ಹಾಗಾಗಿ ಅಂಥವರ ಒಂದು ಪವಾಡಸದೃಶ ಜಗತ್ತನ್ನು ಸೃಷ್ಟಿಸುತ್ತಾನೆ. ಜೊತೆಗೆ ವಾಸ್ತವವೂ ಢಾಳಾಗಿದೆ; ಮುದುಕನ ಒಂದೇ ತೊಡಕು ಸೂಟ್‌ಕೇಸನ್ನು ಅವನು ಅದೃಶ್ಯಗೊಳಿಸಲಾರ.

ದರೋಡೆಯಂತಹ ಒಂದು ಘಟನೆ, ಕುತೂಹಲ ಹುಟ್ಟಿಸುವ ಅದೃಶ್ಯವ್ಯಕ್ತಿಯ ಚಲನವಲನಗಳು, ಗುಟ್ಟಾಗಿ ವ್ಯವಹರಿಸುವ ಸಿಡುಕ ಮಂಗಿಯಾರೊಟ್ಟಿ – ಈ ಮೂಲಕ ಈ ಕಥೆ ಒಂದು ಪತ್ತೇದಾರಿ ಕಥೆಯಂತೆ ಭ್ರಾಮಕ ಪ್ರಪಂಚವನ್ನು ಪರಿಚಯಿಸುತ್ತದೆ. ತುಂಬಾ ಚಿಕ್ಕದಾದ, ತಣ್ಣನೆಯ ಹಾಗೂ ರೋಚಕ ಅನುಭವವನ್ನು ಕಟ್ಟಿಕೊಡುವ ಕಥೆ ಇದು.

ಹೋರ್ಹೆ ಲೂಯಿ ಬೋರ್ಹೆಸ್ ‘ಕವಲು ಹಾದಿಗಳ ಉದ್ಯಾನ’

ಹೋರ್ಹೆ ಲೂಯಿ ಬೋರ್ಹೆಸ್ ಅರ್ಜೆಂಟೀನಾದ ಸಾಹಿತಿ. ಇವರು ದಾರ್ಶನಿಕ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದ ಒಬ್ಬ ಆದರ್ಶವಾದೀ ಲೇಖಕರಾಗಿದ್ದಾರೆ.

ಭ್ರಾಮಕ ವಾಸ್ತವವಾದ ಮತ್ತು ಸಾರ್ವಕಾಲಿಕ ಸತ್ಯಗಳ ಅನ್ವೇಷಣೆ, ಅವುಗಳ ಪ್ರತಿಪಾದನೆ, ಸಮಾಜದ ಸಮಸ್ಯೆಗಳ ಮುಂದೆ ಅವುಗಳ ಗಂಭೀರತೆ ಮತ್ತು ಜವಾಬ್ದಾರಿಕೆ – ಇವೆಲ್ಲವುಗಳೂ ೨೦ನೇ ಶತಮಾನದ ಲ್ಯಾಟಿನ್ ಅಮೆರಿಕನ್ ಸಾಹಿತ್ಯದಲ್ಲಿ ಕಾಣಿಸಿಕೊಂಡ ಭ್ರಾಮಕ ವಾಸ್ತವವಾದಿ ಚಳುವಳಿಯ ಲಕ್ಷಣಗಳು. ಇವು ಕತೆಗಾರಿಕೆಯ ಶೈಲಿಯಾಗಿಯೂ, ಸಾಹಿತ್ಯದ ಒಂದು ಪ್ರಕಾರವಾಗಿಯೂ ಕೆಲಸ ಮಾಡಿದವು. ಬೋರ್ಹೆಸರ ಕಥೆಗಳು ಈ ಜಾಡಿನವು. ಕಥೆಯ ಭಾಷೆಯನ್ನು ನವೀಕರಿಸಿದ ಮತ್ತು ಸ್ಪ್ಯಾನಿಶ್ ಅಮೇರಿಕನ್ ಕಥೆಗಾರರಿಗೆ ಆ ಮೂಲಕ ದಾರಿತೋರಿಸಿದ ಕಥೆಗಾರ ಇವರು.

‘ಕವಲು ಹಾದಿಗಳ ಉದ್ಯಾನ’ ಕಥೆಯ ವಸ್ತು ಸಾಮಾನ್ಯ ಸಂಗತಿಯೇ. ಇಡೀ ಕಥೆ ಒಂದು ಆತ್ಮಕತೆಯ ತುಣುಕಿನಂತೆ ಇದೆ. ಯುದ್ಧ, ಭೀತಿ, ಸೆರೆ, ಸಾವುಗಳ ಬಗ್ಗೆ ಕಥೆಗಾರ ಗಂಭೀರವಾಗಿ ಚರ್ಚಿಸುತ್ತಾರೆ. ಜರ್ಮನಿ ಒಂದು ಅನಾಗರಿಕ ದೇಶವೆಂದೂ, ತನ್ನನ್ನು ಗೂಢಚಾರನನ್ನಾಗಿ ಮಾಡಿ ನೀಚನನ್ನಾಗಿಸಿತೆಂದೂ, ತಾನೊಬ್ಬ ಪುಕ್ಕಲನೆಂದೂ ಹೇಳಿಕೊಳ್ಳುವ ನಿರೂಪಕನ ಪ್ರಾಮಾಣಿಕತೆ ಮೆಚ್ಚುಗೆಗೆ ಒಳಗಾಗುತ್ತದೆ. ಆದರೂ ‘ದೌರ್ಬಲ್ಯದಿಂದಲೇ ನಾನು ಎಂದಿಗೂ ನನ್ನನ್ನು ತೊರೆಯದಂತಹ ಶಕ್ತಿ ಪಡೆದಿದ್ದೇನೆ’ ಎಂಬ ನಿರೂಪಕನ ಮಾತಲ್ಲಿ ದೌರ್ಬಲ್ಯವು ಅನಿವಾರ್ಯವಾಗಿ ಪ್ರಾಬಲ್ಯವಾಗಿ ಮಾರ್ಪಡುತ್ತದೆಂದು ಒಳನೋಟವಿದೆ.

ಕವಲು ಹಾದಿಗಳ ಉದ್ಯಾನವು ನಿರೂಪಕನ ಪೂರ್ವಜ ಟ್ಸು ಯಿ ಪೆನ್ ಗೆ ಸೇರಿದ್ದು. ಆತ ವಿಚಿತ್ರ ವಿಧಿ, ಖಗೋಳವಿಜ್ಞಾನ, ಜ್ಯೋತಿಷ್ಯ ಕಲಿತವರು. ಚೆಸ್ ಆಟಗಾರ, ಕವಿ, ಕ್ಯಾಲಿಗ್ರಾಫರ್. ಆತ ಪುಸ್ತಕ ಮತ್ತು ವ್ಯೂಹರಚನೆಗಾಗಿ ಎಲ್ಲವನ್ನು ತ್ಯಜಿಸಿದವನು. ‘ಪುಸ್ತಕ ಬರೆಯಲು ಏಕಾಂತ’ ಬಯಸಿದವನು. ಆತನಿಗೆ ಇದೊಂದು ವ್ಯೂಹದ ಜಟಿಲ ರಚನೆ. ಆತ ಸತ್ತಮೇಲೆ ಆತ ರಚಿಸಿದ ವ್ಯೂಹ ಯಾರಿಗೂ ಸಿಗಲಿಲ್ಲ. ಭ್ರಾಮಕ ವಾಸ್ತವವಾದೀ ಸಾಹಿತ್ಯ ಚಳುವಳಿಯು ಅಂತಹ ಒಂದು ಗೊಂದಲದ ವ್ಯೂಹ. ಭ್ರಮೆ ಮತ್ತು ವಾಸ್ತವಗಳ ಸಂಘರ್ಷದ ವ್ಯೂಹ.

‘ನಾನು ಭವಿಷ್ಯದ ವಿವಿಧ ಕಾಲಗಳಿಗೆ ಹೋಗುತ್ತೇನೆ-ನನ್ನ ಉದ್ಯಾನದ ಕವಲುಹಾದಿಗಳೆ’ ಎಂಬ ಮಾತಲ್ಲಿ ಉದ್ಯಾನವು ಚಳವಳಿಯ ಸಾಹಿತ್ಯವನ್ನು ಸಂಕೇತಿಸಿದರೆ ಅದರ ಭಾಷೆ, ವಸ್ತು, ತಂತ್ರ ಇತ್ಯಾದಿಗಳು ಕವಲುಹಾದಿಗಳೆ. ಬದಲಾವಣೆ, ನವ್ಯ, ನವೀಕರಣ ಇಂಥವೆಲ್ಲ ಸವಾಲುಗಳು.

‘ಕವಲುಹಾದಿಗಳ ಉದ್ಯಾನ ಅಸ್ತವ್ಯಸ್ತ ಕಾದಂಬರಿಯಾಗಿದೆ’ ಎಂಬ ನಿರೂಪಕನ ಮಾತು ತನ್ನ ಕಾಲದ ಸಾಹಿತ್ಯಲಕ್ಷಣವಾಗಿದೆ. ‘ಮನುಷ್ಯನು ಪರ್ಯಾಯಗಳನ್ನು ಎದುರಿಸಿದಾಗ ಒಂದರ ಬದಲು ಇನ್ನೊಂದನ್ನು ಆರಿಸುತ್ತಾನೆ’. ನಮ್ಮಲ್ಲೂ ಆದಂತಹ ಸಾಹಿತ್ಯಕ ಚಳವಳಿಗಳನ್ನು ಗಮನಿಸಬಹುದು. ಸಾಹಿತ್ಯ ಎಂಬುದು ‘ಅಗಾಧವಾದ ಕಲ್ಪನೆಯ ಆಟ ಅಥವಾ ನೀತಿ ಕಥೆ. ಅದರ ಕೇಂದ್ರ ವಸ್ತು ಕಾಲ. ತ್ಸು ಯಿ ಪೆನ್ ಕಲ್ಪಿಸಿಕೊಂಡ ಅಂತಹ ಬ್ರಹ್ಮಾಂಡದ ಒಂದು ಚಿತ್ರ ‘ಕವಲುಹಾದಿಗಳ ಉದ್ಯಾನ’ ಅಥವಾ ಕಾದಂಬರಿ. ‘ಎ ಹಿಸ್ಟರಿ ಆಫ್ ದಿ ವರ್ಲ್ಡ್ ವಾರ್’ ಕೃತಿ ತನ್ನೆರಡು ಪುಟಗಳನ್ನು ಕಳೆದುಕೊಂಡು, ಉಳಿದಂತೆ ಅದು ಬಿಚ್ಚಿಟ್ಟ ಸತ್ಯಗಳು ದಿನಚರಿಯಂತೆ ದಾಖಲಾಗುವುದು ಈ ಕಥೆಯ ಒಂದು ಶೈಲಿ. ಇಡೀ ಕಥೆ ಓದುಗನಿಗೆ ರೋಮಾಂಚನ ಉಂಟುಮಾಡುವ ಸರಕನ್ನು ಹೊಂದಿದೆ.

ರೊಬರ್ಟೊ ಬುಲಾನ್ಯೋ -1953-2003 ‘ಅಸಹನೀಯ ಗವುಶೋ’

ರೊಬರ್ಟೊ ಬುಲಾನ್ಯೋ ಚಿಲಿ ದೇಶದ ಸಾಹಿತಿ. ಇವರು ಬರೆದದ್ದು ಸ್ಪಾನಿಶ್ ಭಾಷೆಯಲ್ಲಿ. ‘ಆದಷ್ಟು ಬೇಗ ನಾನು ಕಥೆ ಬರೆಯುವ ಕೆಟ್ಟ ಹವ್ಯಾಸಕ್ಕೆ ಬದ್ಧನಾಗುವೆ’ ಎಂಬ ಮಾತು ನಗೆ ಬರಿಸುತ್ತದೆ.

‘ಅಸಹನೀಯ ಗವುಶೋ’ ಕಥೆ ಗ್ರಾಮ್ಯಬದುಕಿನ ಬಯಕೆಯನ್ನು ವಿವರಿಸುತ್ತದೆ. ಮರಳಿ ಮಣ್ಣಿಗೆ ಎಂಬಂತೆ ನಾಗರಿಕ ಪ್ರಪಂಚದಿಂದ ಮುಗ್ಧತೆಯ ಗ್ರಾಮೀಣ ನೆಲೆಗೆ ವಕೀಲನೊಬ್ಬ ವಾಪಸ್ಸಾಗಿ ಗವುಶೋ ಆಗುವ ಪ್ರಕ್ರಿಯೆಯನ್ನು ಹೇಳುತ್ತದೆ. ವಕೀಲನು ಗವುಶೋ ಆಗಿದ್ದು ಹೇಗೆ ಎಂಬುದೇ ಕಥೆಯ ಮುಖ್ಯ ಎಳೆ. ಪಂಪಾಸ್(ವಿಶಾಲ ಹುಲ್ಲುಗಾವಲು)ನ ಗವುಶೋ(ದನಗಾಹಿ ಕುದುರೆ ಸವಾರ)ಗಳು ಅರ್ಜೆಂಟೀನಾ ಮತ್ತು ಉರುಗ್ವೆಯ ರಾಷ್ಟ್ರೀಯ ಸಂಕೇತಗಳು. ಚಿಲಿಯಲ್ಲಿ ಗವುಶೋಗಳನ್ನು ಹೂಶೋ ಎನ್ನುತ್ತಾರೆ. ಇವರು ದೇಸೀ ವ್ಯಕ್ತಿಗಳು. ಸಾಂಪ್ರದಾಯಿಕ ಕೃಷಿಯಲ್ಲಿ ಸಿದ್ಧಹಸ್ತರು.

ಅರ್ಜೆಂಟೀನಾದ ವಕೀಲ ಎಕ್ಟರ್ ಪೆರೀರಾ ಒಬ್ಬ ವಿಧುರ. ಅರ್ಜೆಂಟೀನಾದ ಹೆಚ್ಚಿನ ಸಮಸ್ಯೆಗಳ ಹಿಂದೆ ಮಲತಾಯಿಯ ವ್ಯಕ್ತಿತ್ವದ ನೆರಳಿರುವ ಕಾರಣ ಆತ ಮರುಮದುವೆ ಮಾಡಿಕೊಳ್ಳಲಿಲ್ಲ. ಕುಕಾ ಮತ್ತು ಬೆಬೆ ಅವನ ಮಕ್ಕಳು. ಇವರಿಬ್ಬರೂ ಬೆಳೆದಂತೆ ಕುಕಾ ಮದುವೆಯಾದ. ಬೆಬೆ ಯಶಸ್ವಿ ಲೇಖಕನಾದ. ಪೆರೀರ ಭಾವಿಸಿದಂತೆ ಅರ್ಜೆಂಟೀನಾದ ಅತ್ಯುತ್ತಮ ಲೇಖಕರೆಂದರೆ ಹೋರ್ಹೆಸ್ ಮತ್ತು ಬೆಬೆ ಮಾತ್ರ.

ಅರ್ಜೆಂಟೀನಾದ ಆರ್ಥಿಕತೆ ಕರಗಿ ಅಮೆರಿಕನ್ ಡಾಲರ್ ಖಾತೆಗಳನ್ನು ಬ್ಯಾಂಕುಗಳು ಸ್ಥಗಿತಗೊಳಿಸಿದಾಗ ಸಮಸ್ಯೆ ಶುರುವಾಗುತ್ತದೆ. ಅಧ್ಯಕ್ಷರು ರಾಜೀನಾಮೆ ನೀಡಿ ಕೆಲವೇ ದಿನಗಳಲ್ಲಿ ದೇಶ ಮೂವರು ಬೇರೆಬೇರೆ ಅಧ್ಯಕ್ಷರನ್ನು ಹೊಂದಬೇಕಾಗಿ ಬಂದುದು ರಾಜಕೀಯ ಸ್ಥಿತ್ಯಂತರದ ಪರಿಣಾಮ. ಇಂಥ ಸನ್ನಿವೇಶದಲ್ಲಿ ಪೆರೀರ ನಗರ ಬಿಟ್ಟು ಹಳ್ಳಿಗೆ ಹೋಗಲು ನಿರ್ಧರಿಸಿದ್ದು.

ಆಡಳಿತಗಳು ಹಾದಿ ತಪ್ಪಿದಾಗ ಅಥವಾ ಅನಿರೀಕ್ಷಿತ ಆಘಾತಗಳು ದೇಶವನ್ನು ಛಿದ್ರಗೊಳಿಸಿದಾಗ ದೇಶವಾಸಿಗಳು ಅನುಭವಿಸಬೇಕಾದ ಕಷ್ಟ ಹಿಂಸೆಗಳನ್ನು ಬುಲಾನ್ಯೋ ಅದ್ಭುತವಾಗಿ ನಿರೂಪಿಸುತ್ತಾರೆ. ನೋಟ್ ಬ್ಯಾನ್, ಕೋವಿಡ್, ಪ್ರವಾಹ, ಭೂಕಂಪ – ಇಂಥವೆಲ್ಲ ಇವತ್ತಿನ ಉದಾಹರಣೆಗಳು.

ಮಕ್ಕಳಿಬ್ಬರೂ ವಿದೇಶದಲ್ಲಿದ್ದು ತಾನೊಬ್ಬನೇ ಹಳ್ಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಪೆರೀರ ಓಡುವ ರೈಲಿನೊಂದಿಗೆ ಓಡುತ್ತಿರುವ ಒಂಟಿ ಮೊಲ, ಅದನ್ನಟ್ಟಿ ಓಡುವ ಮೊಲಗಳು, ಅವುಗಳ ಆಕ್ರಮಣ ಎಲ್ಲವನ್ನೂ ನೋಡುತ್ತಾ ಗಾಬರಿಗೊಳ್ಳುತ್ತಾನೆ. ಯಂತ್ರನಾಗರಿಕತೆ ಸಹಜಬದುಕಿನ ಜೀವರಾಶಿಗಳ ಮೇಲೆ ದಾಳಿ ಮಾಡಿದ್ದರ ದ್ಯೋತಕ ಈ ದೃಶ್ಯ. ಅಲ್ಲದೆ ರೈಲಿನೊಂದಿಗೆ ಪೈಪೋಟಿಗೆ ಇಳಿದಿರುವ ಮೊಲಗಳಂತೆ ಪೆರೀರಾ ಬದುಕು ಕೂಡ. ಅವನ ಮನಸ್ಥಿತಿಗೆ ಅನುಗುಣವಾಗಿ ಹಳ್ಳಿಯ ಬಯಲಲ್ಲಿ ನಿಂತ ಒಂಟಿ ಮರ ಕಾವ್ಯಾತ್ಮಕವಾಗಿ ಕಾಣುತ್ತದೆ. ಆ ಮರ ಮತ್ತು ಗ್ರಾಮೀಣ ಪ್ರದೇಶದ ನಿರ್ಜನ ದೃಶ್ಯಗಳು ಅವನಿಗೆ ಮಾತ್ರ ವ್ಯವಸ್ಥೆಗೊಳಿಸಲಾಗಿದೆ ಎನಿಸುತ್ತದೆ. ನಗರದ ಯಾಂತ್ರಿಕತೆ, ಜನದಟ್ಟಣೆ ಇತ್ಯಾದಿಗಳಿಂದ ಕಳಚಿಕೊಂಡು ಬಂದವರಿಗೆ ಉಂಟಾಗುವ ಸಹಜ ಕುತೂಹಲಭಾವ ಇಲ್ಲಿ ಪ್ರಕಟವಾಗಿದೆ.

‘ನಾವು ಅದಃಪತನಗೊಂಡಿದ್ದೇವೆ, ನಾವು ಪಾತಾಳಕ್ಕಿಳಿದಿದ್ದೇವೆ. ಆದರೆ ನಾವು ಇನ್ನೂ ನಮ್ಮನ್ನು ಮೇಲೆತ್ತಿಕೊಂಡು ಮಹಾಪುರುಷರಂತೆ ಸಾವಿನತ್ತ ಹೋಗಬಹುದು’ ಎಂದು ಯಂತ್ರನಾಗರಿಕತೆಯ ಪರಿಣಾಮಗಳ ಬಗ್ಗೆ ಜುಗುಪ್ಸೆ ತೋರುತ್ತಾನೆ. ವಿದೇಶದಿಂದ ವಾಪಸ್ಸಾದ ಮಗನನ್ನ ಗುರುತಿಸಲು ಸಾಧ್ಯವಾಗದಷ್ಟು ಅವನ ವೇಷ ಬದಲಾಗಿದ್ದು ಅತಿನಾಗರೀಕತೆಯ ಪರಿಣಾಮವೇ.

ಗವುಶೋಗಳು ರಾಜಕೀಯದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಅಜ್ಜ ನೆಟ್ಟ ಆಲಕ್ಕೆ ಜೋತುಬಿದ್ದಂತಹ ನಾಸ್ಟಾಲ್ಜಿಕ್ ಹಾಗೂ ತಮಗೆ ಸಮಸ್ಯೆಯಾದರೂ ದೂರು ನೀಡದ ಅಸಹಾಯಕರು ಅವರು.

ಹಸುಗಳ ಜಾಗದಲ್ಲಿ ಮೊಲಗಳು ಬಂದಿದ್ದು, ಪೆರಿರಾನ ಉಗುರು ಕಾಡುಬೆಕ್ಕಿನ ಉಗುರಿನಷ್ಟು ಉದ್ದವಿದ್ದದ್ದು, ಜನ ಪಳಗಿದ ಬೆಕ್ಕುಗಳಂತೆ ರಕ್ತಪಿಪಾಸುಗಳಾಗಿದ್ದು, ಪೆರಿರಾ ಎದುರಾಳಿಯ ಕಿಬ್ಬೊಟ್ಟೆಗೆ ಚಾಕು ಚುಚ್ಚಿದ್ದು, ಕೊಕೇನ್ ವ್ಯಸನಿಗಳು ಅಧಿಕಗೊಂಡಿದ್ದು-ಇಂಥದೆಲ್ಲ ಗ್ರಾಮವಾಸ್ತವ್ಯ ಬಯಸಿ ಬಂದ ಪೆರಿರಾಗೆ ಭೀತಿ ಹುಟ್ಟಿಸಿದ್ದವು.

ಗವುಶೋಗಳ ಬದುಕು ಅಸಹನೀಯ ಎಂಬ ಅರಿವು ಪೆರಿರಾಗೆ ಆಗುವ ಮೂಲಕ ಬದಲಾವಣೆ ಮುಮ್ಮುಖವಾಗಿ ಇರಬೇಕು ವಿನಹ ಹಿಮ್ಮುಖವಾಗಿ ಅಲ್ಲ ಅನಿಸುತ್ತದೆ. ಹಾಗಾಗಿ ಅವನು ಆರಿಸಿಕೊಂಡ ಗವುಶೋ ಬದುಕು ಅವನಿಗೆ ಅಸಹನೀಯವಾಗುತ್ತದೆ. ‘ನಾವು ನಮ್ಮ ಸ್ಮೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ನೋವು ಕಾಡುತ್ತದೆ. ಬದಲಾವಣೆ ಅಥವಾ ಪಲ್ಲಟಗಳಿಗೆ ಒಗ್ಗಿಕೊಂಡು ಜೀವನ ಸಾಗಿಸಬೇಕು ವಿನಹ ಹಳೆಯದೇ ಸರಿಯೆಂದು ಹಿಂದೆ ಸರಿಯುವ ಮೂರ್ಖತನ ಸಲ್ಲದೆಂಬ ಸಂದೇಶ ಕಥೆಗಾರನದು.

ಚಿಮಾಮಂಡ ಗೋಝಿ ಅಧೀಶೆ (1977) ಹಕ್ಕಿಹಾಡು

ಚಿಮಾಮಂಡ ಗೋಝಿ ಅಧೀಶೆ ನೈಜೀರಿಯನ್ ಲೇಖಕಿ. ಕಥೆ, ಕಾದಂಬರಿ ಹಾಗೂ ವಸ್ತುಭೂತ ಕೃತಿಗಳ ರಚನೆಕಾರ್ತಿ. ಟೈಮ್ಸ್ ಪತ್ರಿಕೆ ಹೇಳಿದಂತೆ ಈಕೆ ಅಮೆರಿಕದಲ್ಲಿ ಇದ್ದು ಆಫ್ರಿಕನ್ ಸಾಹಿತ್ಯವನ್ನು ಹೊಸ ಜನಾಂಗಕ್ಕೆ ಪರಿಚಯಿಸಿದ ಇಂಗ್ಲಿಷ್ ಪ್ರಥಮ ಭಾಷೆಯ ಲೇಖಕರ ಸಾಲಿನಲ್ಲಿ ತುಂಬಾ ಮುಖ್ಯರು.

ಅಧೀಶೆ ನೈಜೀರಿಯಾದಲ್ಲಿ ಕಾದಂಬರಿಗಾರ್ತಿಯಾಗಿ ಬೆಳೆದರೂ ಅಮೆರಿಕಕ್ಕೆ ಬಂದಾಗ ತನ್ನ ಕಪ್ಪುಬಣ್ಣದಿಂದಾಗಿ ಅಷ್ಟಾಗಿ ಗುರುತಿಸಿಕೊಳ್ಳಲಾಗಲಿಲ್ಲ. ಜನಾಂಗೀಯವಾದ ತಾರತಮ್ಯವನ್ನು ಆಕೆ ತನ್ನ ‘ಅಮೇರಿಕಾನ’ ಕಾದಂಬರಿಯಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಸಾಂಪ್ರದಾಯಿಕ ನೈಜೀರಿಯನ್ ಸಂಸ್ಕೃತಿ ಹಾಗೂ ಕಟ್ಟುಪಾಡುಗಳಿಲ್ಲದ ಅಮೆರಿಕಾದ ಸ್ವೇಚ್ಛಾಸಂಸ್ಕೃತಿಗಳ ಬಗ್ಗೆ ಕಾದಂಬರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತದೆ.

ಸೆಕ್ಸ್ ಮತ್ತು ಜೆಂಡರ್ ಬಗ್ಗೆ ಇವರ ‘ವಿ ಶುಡ್ ಆಲ್ ಬಿ ಫೆಮಿನಿಸ್ಟ್’ ಕೃತಿ ವಿಶೇಷವಾಗಿ ಚರ್ಚಿಸುತ್ತದೆ. ಇವರ ಮತ್ತೆರಡು ಗಮನಾರ್ಹ ಕೃತಿಗಳೆಂದರೆ ‘ಪರ್ಸನಲ್ ಹೈಬಿಸ್ಕಸ್’ ಮತ್ತು ‘ಹಾಫ್ ಆಫ್ ಎ ಯೆಲ್ಲೋ ಸನ್.’

‘ದಿ ಥಿಂಗ್ ಅರೌಂಡ್ ಯುವರ್ ನೆಕ್’ 12 ಸಣ್ಣ ಕಥೆಗಳ ಸಂಗ್ರಹ. ಈ ಸಂಗ್ರಹದ ಕಥೆಗಳು ಗಂಡು-ಹೆಣ್ಣು ಹೆತ್ತವರು-ಮಕ್ಕಳು ಆಫ್ರಿಕಾ-ಅಮೆರಿಕ ಇವುಗಳ ನಡುವಿನ ಸಂಬಂಧವನ್ನು ವಿಸ್ತೃತವಾಗಿ ವಿವರಿಸುತ್ತವೆ. ಸೀಲಿಂಗ್ ಎಂಬ ಕಥೆ ೨೦೧೧ರ ‘ದಿ ಬೆಸ್ಟ್ ಅಮೇರಿಕನ್ ಶಾರ್ಟ್ ಸ್ಟೋರೀಸ್’ ಸಂಕಲನದಲ್ಲಿ ಸ್ಥಾನ ಪಡೆದಿದ್ದರೆ ‘ಝಿಕೋರಾ’ (2020)ಕಥೆ ಲಿಂಗ ತಾರತಮ್ಯ ಹಾಗೂ ಮಾತೃತ್ವಭಾವವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.

ಅಧೀಶೆ ಅವರು ತಮ್ಮ ಸಾಹಿತ್ಯದ ಧೋರಣೆಯ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ – ‘ನಾನೊಬ್ಬಳು ಸ್ತ್ರೀವಾದಿ ಲೇಖಕಿ. ಜಗತ್ತು ನನ್ನ ಕಾರ್ಯವನ್ನು ಗಮನಿಸಬೇಕು.’

ಹಕ್ಕಿಹಾಡು (ಬರ್ಡ್ಸಾಂಗ್) ಕಥೆಯೂ ಮಹಿಳಾ ಪ್ರಧಾನವೇ. ವಿವಾಹಿತನೂ ವಯಸ್ಸಾದವನೂ ಆದ ವಾಣಿಜ್ಯೋದ್ಯಮಿಯೊಬ್ಬನ ಜೊತೆ ಪ್ರಾಯದ ಕ್ರುದ್ಧ ಮಹಿಳೆಯೊಬ್ಬಳ ಸಂಬಂಧ ಈ ಕಥೆಯ ವಸ್ತು. ಇದರೊಂದಿಗೆ ಈಕೆ ಮತ್ತೆ ಇನ್ನೊಬ್ಬಾಕೆಯ ಜೊತೆ ಸಮಾಜ ಹೇಗೆ ಕೆಟ್ಟದಾಗಿ ನಿಕೃಷ್ಟವಾಗಿ ನಡೆದುಕೊಂಡಿತು ಎಂಬ ವಿವರಗಳು ಬೆರೆತಿವೆ.

ಬದುಕಿನ ಸಂಘರ್ಷ, ನೋಟಗಳು ಮತ್ತು ಪ್ರೇಮಪ್ರಕರಣದ ಭಾವ ಇವುಗಳ ಋಣಾತ್ಮಕ ಮತ್ತು ಧನಾತ್ಮಕ ಪರಿಣಾಮಗಳು. ಲಾಗೋಸ್ ಮತ್ತು ಅಮೆರಿಕಾದಲ್ಲಿನ ಅನುಭವಗಳು ಕಥೆಯಲ್ಲಿ ಪರಿಣಾಮಕಾರಿಯಾಗಿ ಪ್ರಕಟವಾಗಿವೆ. ಮುಖ್ಯಕಥೆಗೆ ಪೂರಕವಾಗುವಂತೆ ಕಥೆಯೊಳಗೆ ಕಥೆ ಎಂಬಂತೆ ಎರಡು ಕಥೆಗಳನ್ನು ಆಕೆ ತರುತ್ತಾರೆ. ಲೈಂಗಿಕತೆಯನ್ನು ಕಥೆಗಾರ್ತಿ ಸಮಯೋಚಿತವಾಗಿ ಹೆಣ್ಣ ಬಾಯಲ್ಲಿ ಆಡಿಸುತ್ತಾರೆ. ಉಳಿದಂತೆ ಯಾವ ತಂತ್ರವೂ ಇಲ್ಲದೆ ಭಾಷೆ ನೇರನಿರೂಪಣೆಗಳು ಇಷ್ಟವಾಗುತ್ತವೆ.

ನಗರಜೀವನದ ಅಗತ್ಯ ಮತ್ತು ಪೌರತ್ವಗಳನ್ನು ಒಟ್ಟೊಟ್ಟಿಗೆ ಈ ಕಥೆಯಲ್ಲಿ ನೋಡುವ ಅದೀಶೆ ಅವರ ನಿಲುವು ಸ್ವಲ್ಪಮಟ್ಟಿಗೆ ನಗರವಿರೋಧಿಯಾಗಿ ತೋರುತ್ತದೆ. ನಗರಗಳಲ್ಲಿ ಸೌಂದರ್ಯವನ್ನು ನೋಡಲು ಸಾಧ್ಯವಿಲ್ಲ; ನಿಸರ್ಗವನ್ನು ಆಧುನಿಕತೆ ಮರೆಮಾಚಿದೆ; ಅಪರಾಧಗಳು ಅಧಿಕವಾಗಿವೆ; ಸ್ನೇಹ ಮತ್ತು ಸಮುದಾಯದ ಮೌಲ್ಯ ಹಾಗೂ ಕಲ್ಪನೆಗಳ ಬಗ್ಗೆ ಜನರಿಗೆ ಅರಿವಿಲ್ಲ; ತಮ್ಮ ಸುತ್ತಲೂ ಗೋಡೆ ಕಟ್ಟಿಕೊಳ್ಳುವ ಜನರು ಸಮುದಾಯಗಳೊಂದಿಗೆ ಬೆರೆಯುವುದಿಲ್ಲ. ಹಾಗಾಗಿ ಜಗತ್ತಿನ ಬಗ್ಗೆ ಇವರಿಗೆ ಅತೀವ ನಿರಾಸಕ್ತಿ ಎಂಬ ಸೂಕ್ಷ್ಮ ಸಂಗತಿಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ. ವ್ಯಕ್ತಿ-ಸಮಾಜಗಳ ಅಧ್ಯಯನಕ್ಕೆ ಇದು ಉತ್ತಮ ಪರಾಮರ್ಶನ ಕಥೆಯಾಗಿದೆ.

ಮೂರು

ಸಣ್ಣಕಥೆಯ ಸೃಜನಾತ್ಮಕ ಪ್ರಕ್ರಿಯೆ ಮತ್ತು ಮನಸ್ಸಿನ ಮೇಲೆ ಮಾಡುವ ಪರಿಣಾಮವು ಒಂದು ಕವನದ ಸೃಜನಾತ್ಮಕ ಪ್ರಕ್ರಿಯೆ ಮತ್ತು ಪರಿಣಾಮಕ್ಕಿಂತ ಮೂಲತಃ ಭಿನ್ನವಾದದ್ದಲ್ಲ. ಹಾಗಾಗಿ ಕಥೆಗಳು ಸಂಕೀರ್ಣವೂ ಕಾವ್ಯಾತ್ಮಕವೂ ಆಗಿವೆ. ಗದ್ಯವನ್ನು ಅದರ ವಿವರಣಾತ್ಮಕ ಸಾಧ್ಯತೆಯನ್ನು ಮೀರಿದ ಸಾಂಕೇತಿಕ ಸ್ತರದಲ್ಲಿ ಅನ್ವಯಿಸಲಾಗಿದೆ. ಕಥೆಯ ವೈವಿಧ್ಯಪೂರ್ಣತೆ ಕಥಾವಸ್ತುವಿಗಿಂತ ಸೃಜನಾತ್ಮಕ ಸಾಧ್ಯತೆಗೆ ಸಂಬಂಧಿಸಿರಬೇಕು. ಇಲ್ಲಿನ ಕಥೆಗಳು ವೈವಿಧ್ಯಪೂರ್ಣವೂ, ಸೃಜನಶೀಲವೂ ಆಗಿವೆ. ಕಥೆಗಾರ ತನ್ನ ಸಂವೇದನಾ ಸೂಕ್ಷ್ಮವನ್ನು ಧ್ವನಿಸುವ ತಂತ್ರಗಾರಿಕೆ ಬಹುತೇಕ ಎಲ್ಲ ಕಥೆಗಳಲ್ಲೂ ಅಡಗಿದೆ. ಔಚಿತ್ಯವರಿತ ಹಾಸ್ಯಮಿಶ್ರಿತ ಗದ್ಯಶೈಲಿ ಇವುಗಳಲ್ಲಿದ್ದು ಆತ್ಮಗತ ಬರವಣಿಗೆ ಮತ್ತು ಚಿಂತನದ್ರವ್ಯದ ಭಾರಕ್ಕೆ ಹೊರತಾದ ನೀತಿಯ ಸಾಧ್ಯತೆಗಳ ಹುಡುಕಾಟ ಈ ಕತೆಗಳಲ್ಲಿ ನಡೆದಿದೆ. ತಾತ್ವಿಕ ಆಯಾಮಗಳನ್ನು ಒಳಗೊಳ್ಳುವ ಯತ್ನ ಹಾಗೂ ಅಂತರ್ಮುಖತೆ ಮತ್ತು ಗುಣಾತ್ಮಕ ನಿರಪೇಕ್ಷತೆ ಈ ಕಥೆಗಳ ಲಕ್ಷಣಗಳಾಗಿವೆ. ಮನುಷ್ಯನ ಸಣ್ಣತನದ ಬಗೆಗಿನ ಕಥೆಗಾರರ ಕಾಳಜಿ ನೇತ್ಯಾತ್ಮಕವಾಗದೆ ಗುಣಾತ್ಮಕವಾಗಿದೆ. ಹೊರಗೆ ನಿಂತು ಸುತ್ತಲಿನ ಬದುಕಿನ ಪರಿಯನ್ನು ಛಾಯಾಚಿತ್ರಗ್ರಾಹಕರ ವಿಶಿಷ್ಟ ದೃಷ್ಟಿಕೋನದಲ್ಲಿ ಹಿಡಿಯುವ ಪ್ರಕ್ರಿಯೆ ಇಲ್ಲಿನ ಕಥೆಗಾರರದು. ಭಾವನೆಗಳ ಹಿಂದಿರುವ ದುರಂತದ ಲಯವನ್ನು ಭಾವೋದ್ವೇಗಕ್ಕೆ ಒಳಗಾಗದೆ ದಾಖಲಿಸುವ ವಿಧಾನವನ್ನು ನಾವಿಲ್ಲಿ ಕಾಣಬಹುದು.

ಜೊತೆಗೆ ಸಾಮಾಜಿಕ ಮೌಲ್ಯವ್ಯವಸ್ಥೆಯ ಬಗ್ಗೆ ಕೆಲವು ಕಥೆಗಳಲ್ಲಿ ವ್ಯಕ್ತವಾಗುವ ಬಂಡಾಯದ ಧೋರಣೆಯನ್ನು ಗಮನಿಸಬೇಕು. ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಸಮಾಜದ ಆರ್ಥಿಕ, ನೈತಿಕ ಮತ್ತು ಸಾಮಾಜಿಕ ವಾಸ್ತವಗಳು ವ್ಯಕ್ತಿ ಅಥವಾ ಸಮೂಹವನ್ನು ಅಮಾನವೀಯವಾಗಿ ಕಾಣುವಿಕೆಯಿರದೆ ಇರಬೇಕು ಎಂಬ ಕಳಕಳಿಯೂ ಕಥೆಗಾರರಿಗೆ ಇದೆ.

ಒಂದೊಂದು ಕಥೆಯೂ ತನ್ನ ವಸ್ತುವಿನಿಂದಾಗಿ ವಿಶಿಷ್ಟವಾಗಿದೆ. ಓದುಗರಿಗೆ ವಿದೇಶಿಯರ ವಿಚಿತ್ರ ಅಥವಾ ವಿಶಿಷ್ಟರೀತಿಯ ಬದುಕು, ಜೀವನಶೈಲಿ, ಮಾತುಕತೆ, ವ್ಯವಹಾರ, ಮನುಷ್ಯ ಸಂಬಂಧಗಳು, ಪುರುಷ-ಮಹಿಳೆಯರ ಪ್ರತ್ಯೇಕ ವ್ಯಕ್ತಿತ್ವಗಳು- ಎಲ್ಲವೂ ಹೊಸ ಅನುಭವ ನೀಡುತ್ತದೆ. ಕನ್ನಡದ ಹಿಂದಿನ ಲೇಖಕರು ಪ್ರಜ್ಞಾಪೂರ್ವಕವಾಗಿ ಇಂಗ್ಲಿಷ್ ಸಾಹಿತ್ಯದ ಗದ್ಯ ಪ್ರಭೇದಗಳನ್ನು, ಅಲ್ಲಿನ ಪ್ರಗತಿಪರ ವಿಚಾರಗಳನ್ನು, ತಂತ್ರ, ಶೈಲಿಗಳನ್ನು ಕನ್ನಡಕ್ಕೆ ತಂದರು. ವ್ಯಕ್ತಿನಿಷ್ಠೆಯ ಕಲಾತ್ಮಕತೆಯನ್ನು ಸಾಧಿಸಲು ತೊಡಗಿದ ನವ್ಯರು ಲೋಹಿಯಾವಾದ, ದಲಿತ, ಬಂಡಾಯ ಎಂಬುದಾಗಿ ಭಿನ್ನ ವಿಚಾರಗಳಿಗೆ ಹೆಚ್ಚು ಗಮನಕೊಟ್ಟರು. ಆದರೆ ನವ್ಯತೆಯ ಗುಂಗು, ಸಂಭ್ರಮದಲ್ಲಿ ಪರಂಪರೆಯನ್ನು ಮರೆತರು ಅಥವಾ ಧಿಕ್ಕರಿಸಿದರು.

ಟಿಎಸ್ ಎಲಿಯಟ್ ಹೇಳುವಂತೆ ಕಥೆಗಾರನಿಗೆ ಪರಂಪರೆ ಮತ್ತು ವ್ಯಕ್ತಿಪ್ರತಿಭೆ ಬಹಳ ಮುಖ್ಯವಾದುದು. ಏನೇ ಬರೆದರೂ ಅದು ಕ್ಲಾಸಿಕ್ ಎನಿಸಬೇಕು. ಕ್ಲಾಸಿಕ್ ದೃಷ್ಟಿಗೆ ಸಾಹಿತ್ಯದ ಜೀವಮಾನದ ದುಡಿಮೆ ಅಗತ್ಯ. ಕ್ಲಾಸಿಕ್ ಗಳ ಲಕ್ಷಣಗಳೆಂದರೆ ಮನಸ್ಸಿನ ಪರಿಪಾಕ, ರೀತಿ-ನೀತಿಗಳ ಪರಿಪಾಕ, ಭಾಷೆಯ ಪರಿಪಾಕ ಮತ್ತು ಸಾಧಾರಣ ಶೈಲಿಯ ಪರಿಪೂರ್ಣತೆ. ಒಂದು ನಾಗರಿಕತೆ, ಒಂದು ಭಾಷೆ ಮತ್ತು ಸಾಹಿತ್ಯ ಪರಿಪಕ್ವವಾದಾಗ ಮಾತ್ರ ಒಂದು ಕ್ಲಾಸಿಕ್ ಘಟಿಸಬಲ್ಲದು. ಆದರೆ ಸಂಪನ್ಮೂಲಗಳ ಪರಿಮಿತಿಗಳು ಇರುವುದರಿಂದ ಕನ್ನಡ ಸಣ್ಣಕಥೆಗಳಲ್ಲಿ ಕ್ಲಾಸಿಕ್ ಎನ್ನಬಹುದಾದ ರಚನೆಗಳು ಕಡಿಮೆ.

ಗಹನವಿಚಾರಗಳನ್ನು ಭರಿಸಿಯೂ ಸರಳವಾಗಿ ಲಲಿತವಾಗಿ ಕಥೆ ಬರೆಯುವುದು, ಗದ್ಯ ಲಕ್ಷಣಗಳಾದ ಸ್ಪಷ್ಟತೆ, ಅಕ್ಲಿಷ್ಟತೆ, ನಿಕೃಷ್ಟತೆಗಳನ್ನು ಅದರಲ್ಲಿ ತರುವುದು, ಹೇಳಬೇಕಾದ್ದನ್ನು ಆಕರ್ಷಕವಾಗಿ, ಖಚಿತವಾಗಿ, ಯಾವ ಸಂದಿಗ್ಧತೆಗೂ ಎಡೆಯಿಲ್ಲದಂತೆ ಹೇಳುವ ಕಲೆ ಪಾಶ್ಚಿಮಾತ್ಯ ಹಾಗೂ ಯುರೋಪಿನ ಕಥೆಗಾರರಿಗೆ ಇರುವಷ್ಟು ವ್ಯಾಪಕವಾಗಿ ಕನ್ನಡದಲ್ಲಿ ಅಷ್ಟಾಗಿ ಸ್ಥಾಪಿತವಾಗಿಲ್ಲ. ಇಲ್ಲಿನ ಕಥೆಗಳು ಈ ದಿಸೆಯಲ್ಲಿ ಕನ್ನಡ ಕತೆಗಾರರಿಗೆ ಒಂದು ಮಾದರಿ ಸಂಹಿತೆ ಆಗಬಹುದು ಎಂಬ ನಿರೀಕ್ಷೆಯಿದೆ.

ಇಂಥ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡದಲ್ಲಿ ಕಥೆ ಬರೆಯುವವರಿಗೆ ಒಂದು ಹೊಸ ದಾರಿ ತೋರಿಸುವ ಕಥೆಗಾರ ಆರ್ ವಿಜಯರಾಘವನ್ ಅಭಿನಂದನೆಗೆ ಪಾತ್ರರಾಗಿದ್ದಾರೆ.

(ಕೃಪೆ : ಕೆಂಡಸಂಪಿಗೆ)

ಚಂದಿರನ ಕುವರಿಯರು’

Related Books