ದ್ರೌಪದಿ

Author : ಕೆ. ಶಾರದಾ ಭಟ್

₹ 210.00




Published by: ಸಾಹಿತ್ಯ ಅಕಾಡೆಮಿ ನವದೆಹಲಿ

Synopsys

ಕೆ. ಶಾರದಾ ಅವರು ಅನುವಾದಿಸಿರುವ ಕೃತಿ ದ್ರೌಪದಿ. ತೆಲುಗು ಮೂಲದ ಲೇಖಕಿ ಯಾರ್ಲಗದ್ದ ಲಕ್ಷ್ಮೀಪ್ರಸಾದ್ ಅವರ ಕೃತಿಯನ್ನು ಕೆ. ಶಾರದಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಸ್ತಕದ ಮುಖಪುಟ ಮತ್ತು ಬೆನ್ನುಡಿಗಳನ್ನು ಓದಿ ಈ ಕೃತಿಯು ಮಹಾಭಾರತದ ಘಟನಾವಳಿಗಳನ್ನು ದ್ರೌಪದಿಯ ಕಣ್ಣಿನ ಮೂಲಕ ಹೇಳುತ್ತದೆ ಎಂದು ತಿಳಿಯುತ್ತದೆ. ಅಂದುಕೊಂಡಂತೆ ದ್ರೌಪದಿಯ ಹುಟ್ಟಿನಿಂದ ಮಹಾಪ್ರಸ್ಥಾನದವರೆಗಿನ ಎಲ್ಲಾ ಘಟನೆಗಳನ್ನು ದ್ರೌಪದಿಯ ಅವಲೋಕನದಂತೆ ಹೆಣೆಯಲಾಗಿದೆ. ಅನುವಾದಕಾರರು ಇದನ್ನು ಕನ್ನಡದ್ದೇ ಕೃತಿ ಎನ್ನುವಷ್ಟು ಸಮರ್ಥವಾಗಿ ಅನುವಾದಿಸಿದ್ದಾರೆ. 

ತನ್ನ ಐವರು ಮಕ್ಕಳು ಅಶ್ವತ್ಥಾಮನಿಂದಾಗಿ ಹತರಾದರು ಎಂಬ ಸುದ್ದಿಯು ದ್ರೌಪದಿಯನ್ನು ತಲ್ಲಣಗೊಳಿಸುವುದರ ಮೂಲಕ ಕೃತಿಯು ಪ್ರಾರಂಭವಾಗುತ್ತದೆ. ತನ್ನ ಐವರು ಮಕ್ಕಳು ಸತ್ತಿರುವುದು ಇಷ್ಟು ದುಃಖಕ್ಕೆ ಕಾರಣವಾದರೆ ಒಬ್ಬ ಮಗನನ್ನು ಉಳಿಸಿಕೊಳ್ಳಲಾಗದ ಗಾಂಧಾರಿಯ ದುಃಖ ಎಷ್ಟಿರಬಹುದು ಎಂಬ ಪ್ರಶ್ನೆ ಅವಳನ್ನು ಕಾಡುತ್ತದೆ. ಅಲ್ಲಿಂದ ಅವಳು ಇಡೀ ಯುದ್ಧದ ಕುರಿತಾಗಿ ಆತ್ಮಾವಲೋಕನಕ್ಕೆ ಮುಂದಾಗುತ್ತಾಳೆ. ಇಡೀ ಕುರುಕ್ಷೇತ್ರ ಸ್ಮಶಾನ ಸದೃಶವಾಗಿ ತನ್ನ ಗಂಡನನ್ನು ಹುಡುಕುವ ಹೆಂಡತಿ, ತಂದೆಯನ್ನು ಹುಡುಕುವ ಪುಟ್ಟ ಮಕ್ಕಳು, ಮಗನನ್ನು ಹುಡುಕುವ ವೃದ್ಧ ತಂದೆ ತಾಯಂದಿರು ವಿಕಾರವಾಗಿರುವ ಹೆಣಗಳ ನಡುವೆ ರೋಧಿಸುತ್ತಾ ತಮ್ಮವರನ್ನು ಹುಡುಕುವ ಬಂಧು ಬಾಂಧವರ ದೃಶ್ಯಾವಳಿಗಳು ದ್ರೌಪದಿಯ ಮನದೊಳಗೆ ಕಲಮಲವನ್ನುಂಟುಮಾಡಿ ಈ ಯುದ್ಧಕ್ಕೆ ಕಾರಣವಾದ ವಿಚಾರಗಳು ಅವಳ ಕಣ್ಣಮುಂದೆ ಒಂದೊಂದಾಗಿ ಸುಳಿದಾಡಲಾರಂಭಿಸುತ್ತವೆ. ಯುಧ್ಧಭೂಮಿಯ ಚಿತ್ರಣವನ್ನು ಓದಿದಾಗ ಬಹಳ ಸಲ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡ ಅನುಭವವಾಯಿತು. ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದುಕೊಂಡು ವಾಪಾಸು ಬಂದು ಭೀಮಾರ್ಜುನರು ತಾಯಿಗೆ ವಿಶೇಷವಾದ ಭಿಕ್ಷೆಯನ್ನು ತಂದಿದ್ದೇವೆ ಎಂದಾಗ ಎಲ್ಲರೂ ಸಮನಾಗಿ ಹಂಚಿಕೊಳ್ಳಿ ಕುಂತಿ ಹೇಳಿದ ಮಾತುಗಳು ದ್ರೌಪದಿಯ ಮನದಲ್ಲಿ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ. ಕುಂತಿಗೆ ತನ್ನ ಮಕ್ಕಳು ಸ್ವಯಂವರಕ್ಕೆ ಹೋಗಿದ್ದು ಗೊತ್ತಿಲ್ಲವೇ? ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಹೇಳಿದಳೇ? ತಾಯಿಯಾದವಳು ಅರಿಯದೇ ಹೇಳಿದ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುವುದು ಧರ್ಮವೇ? ಮುಂತಾದ ಧರ್ಮ ಸೂಕ್ಷ್ಮಗಳನ್ನು ಕುರಿತಾಗಿ ವಿಚಾರ ಮಾಡುತ್ತಾಳೆ…. ಹೀಗೆ ಐವರು ಗಂಡಂದಿರು ಜೊತೆ ಸಂಸಾರ ಮಾಡುವಾಗಲೂ ಅವಳ ದ್ವಂದ್ವಗಳು ಸ್ತ್ರೀ ಸಹಜವಾಗಿ ಕಾಣುತ್ತವೆ. ತುಂಬಿದ ಸಭೆಯಲ್ಲಿ ಅವಳ ಮಾನಾಪಹರಣವಾಗುವಾಗ,ವನವಾಸದ ಸಂದರ್ಭದಲ್ಲಿ ಅವಳು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಧಾರ್ತರಾಷ್ಟ್ರರನ್ನು ನಿಶ್ಯೇಷ ಮಾಡುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ದ್ರೌಪದಿಯ ಕೋಪ,ಅಸಹನೆ,ಸೇಡು,ಧೈರ್ಯ,ದಿಟ್ಟತನ, ಧರ್ಮದ ಕುರಿತಾದ ಜಿಜ್ಞಾಸೆಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ದ್ರೌಪದಿಯು ಐದು ಜನ ವೀರರನ್ನು ಪತಿಯಾಗಿ ಪಡೆಯಲು ಏನು ಕಾರಣವಾಯಿತು? ಪೂರ್ವ ಜನ್ಮದಲ್ಲಿ ಅವಳ ಈಡೇರದ ಅಭಿಲಾಷೆಗಳಿಗೆ ಮತ್ತು ಇದಕ್ಕೆ ಏನಾದರೂ ಸಂಬಂಧವಿದೆಯೇ? ಮುಂತಾದ ಸಾಮಾನ್ಯವಾಗಿ ಎಲ್ಲೂ ಕೇಳಿರದ ಕಥೆಯ ಉಲ್ಲೇಖವಿದೆ. ಕೇವಲ ದ್ರೌಪದಿಯ ಮನದ ಭಾವನೆಗಳ ತಾಕಲಾಟವನ್ನು ಮಾತ್ರ ಬಿಂಬಿಸದೇ ಕುಂತಿಯ ಮಾನಸಿಕ ತುಮುಲಗಳು ಮತ್ತು ಜೂಜಿನಲ್ಲಿ ದ್ರೌಪದಿಯನ್ನು ಪಣಕ್ಕಿಟ್ಟು ಸೋತು ಮುಂದೆ ವನವಾಸವನ್ನು ಅನುಭವಿಸುವಾಗ ಪಂಚ ಪಾಂಡವರು ಅನುಭವಿಸುವ ಅಸಹಾಯಕತೆಯನ್ನು ಸಹ ಅಷ್ಟೇ ಚೆನ್ನಾಗಿ ಲೇಖಕರು ವಿವರಿಸುತ್ತಾರೆ. ದ್ರೌಪದಿಯ ಆಸೆ ಆಕಾಂಕ್ಷೆಗಳನ್ನು ಭಾವನೆಗಳನ್ನು ಪರಿಗಣಿಸದೇ ಅವಳೊಬ್ಬ ಸತಿಸಾಧ್ವಿ ಎಂದು ಪರಿಗಣಿಸುವುದು ಎಷ್ಟು ಸಮಂಜಸ ಎಂದೆನಿಸಿತು. ದ್ರೌಪದಿ ಎತ್ತುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ಧರ್ಮ ಸೂಕ್ಷ್ಮಗಳಿಗೆ ಸಕಲ ವಿದ್ಯಾಪಾರಂಗತರು ಸಹ ಉತ್ತರಿಸುವಲ್ಲಿ ವಿಫಲರಾಗುವುದು ಬಹಳ ನೈಜತೆಯಿಂದ ಕೂಡಿವೆ…. ದ್ರೌಪದಿಯ ದೈಹಿಕ ಕಾಮನೆಗಳನ್ನು ಮತ್ತು ಅವಳ ಸೌಂದರ್ಯವನ್ನು ಅಬಾಲವೃಧ್ಧರಾದಿಯಾಗಿ ಎಲ್ಲರೂ ಮೋಹಿಸುತ್ತಿದ್ದರು ಎಂಬುದನ್ನು ಹೇಳುವಾಗ ಸ್ವಲ ಎಚ್ಚರಿಕೆಯಿಂದ ಚಿತ್ರಿಸುತ್ತದ್ದರೆ ಉತ್ತಮವಾಗಿರುತ್ತಿತ್ತು. ಏಕೆಂದರೆ ಕೆಲವೊಂದು ವಿಚಾರಗಳನ್ನು ಒಪ್ಪಲು ಬಹಳ ಕಷ್ಟವಾಗುತ್ತದೆ. ಇವಿಷ್ಟು ಬಿಟ್ಟರೆ ಒಂದು ಅದ್ಭುತವಾದ ಅನುಭವವನ್ನು ನೀಡುವ ಕೃತಿ…

About the Author

ಕೆ. ಶಾರದಾ ಭಟ್
(24 October 1949)

ಲೇಖಕಿ ಶಾರದಾಭಟ್ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಕೋಟೇಶ್ವರದವರು. ತಂದೆ- ಕೆ. ವಿಠಲಭಟ್, ತಾಯಿ ಕಾವೇರಿಯಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ ಪಡೆದ ಅವರು ದೂರಸಂಪರ್ಕ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಉದ್ಯೋಗದ ಜೊತೆಗೆ ಬೆಂಗಳೂರಿನ ಆಚಾರ‍್ಯ ಪಾಠಶಾಲಾ ಸಂಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿಪಡೆದರು. ಜೊತೆಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವಿದ್ದ ಶಾರದ ಅವರು ಮಹಿಳೆಯರ ಶೋಷಣೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಮಹಿಳಾ ಸಂಘಟನೆಗಳೊಡನೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಶೋಷಣೆ ಕುರಿತು ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ಉದ್ಯೋಗದ ...

READ MORE

Related Books