ಎದೆಯ ಕದ

Author : ರಮೇಶಬಾಬು ಯಾಳಗಿ

Pages 72

₹ 120.00




Year of Publication: 2022
Published by: ಬನಶಂಕರಿ ನಿಲಯ
Address: ರಾಯಚೂರು ಜಿಲ್ಲೆ, ಪಂಪಾ ಹೌಸಿಂಗ್ ಕಾಲೋನಿ, ಮಾನವಿ, - 584123
Phone: 9845509264

Synopsys

‘ಎದೆಯ ಕದ’ ಕವಿ, ಲೇಖಕ ರಮೇಶಬಾಬು ಯಾಳಗಿ ಅವರ ದ್ವಿಪದಿಗಳ ಸಂಕಲನ. ಈ ಕೃತಿಗೆ ಕವಿ, ನಟ, ನಾಟಕಕಾರ ಸೂರ್ಯಕಾಂತ ಗುಣಕಿಮಠ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಸಾವಿರಾರು ಜನರ ನಡುವೆ ಮಾತನಾಡಬೇಕೆ ನಿಂತು, ನೂರಾರು ಪುಸ್ತಕ ಓದು ಏಕಾಗ್ರತೆಯಿಂದ ನೀ ಕುಂತು’ ಬದುಕೊಂದು ಭಾವಗೀತೆಯಲ್ಲಿ ಹಾಡಿದ ಕವಿ ಸಮತೂಕದ, ಸಮಗಾತ್ರದ ಆಪ್ಯಾಯಮಾನವಾದ ಪದಪುಂಜಗಳ ಪೋಣಿಸಿ ಕೇಳುಗರನ್ನು ಕ್ಷಣಾರ್ಧದಲ್ಲಿ ತನ್ನತ್ತ ಸೆಳೆವ, ಸುಂದರವಾದ ಉಪನ್ಯಾಸಕ್ಕೆ ಗಂಭೀರವಾದ ಚಿಂತನೆ, ಅಧ್ಯಯನಗಳೇ ಅಡಿಗಲ್ಲು ಎಂಬ ನಿರಂತರ ಪ್ರಜ್ಞೆಯನ್ನಿಟ್ಟುಕೊಂಡೇ ಸಭಿಕರನ್ನು ಜಾಗ್ರತೆಗೊಳಿಸಿ ತನ್ನತ್ತ ಸೆಳೆವ ಸಾತ್ವಿಕ ಚಿಂತನೆಯ ವಾಗ್ಮಿ, ಆಕರ್ಷಕ ಹಾಡುಗಾರ ರಮೇಶಬಾಬು ಯಾಳಗಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಹತ್ತು ಹಲವಾರು ಕೃತಿಗಳ ಮೂಲಕ ಚಿರಪರಿಚಿತರು. ಈಗ ಹೊಸದೊಂದು ದ್ವಿಪದಿಗಳ ಸಂಕಲನ ಎದೆಯ ಕದ ತೆರೆದು. ಎಲ್ಲರಿಗೂ ಗೊತ್ತು ಎಲ್ಲರನ್ನು ಎಲ್ಲವನ್ನು ಬಿಟ್ಟು ಹೋಗಬೇಕು ಒಂದಿನ ಸತ್ತು ಇನ್ನೂ ನಾಲ್ಕು ಒಪ್ಪತ್ತು ಇರಬೇಕಿತ್ತು ಅನಬೇಕು ಹೊತ್ತೊಯ್ಯುವಾಗ ಜನ ಅತ್ತು ಎಂದು ಅನಾವರಣಗೊಳಿಸುತ್ತಾರೆ ಸಾರ್ಥಕ ಬದುಕಿನ ಅಡಗುತಾಣವನ್ನು. ಯಾಳಗಿ ಅವರ ಚಿಂತನೆಗಳಲ್ಲಿ ಮೈಮುರಿದು ದುಡಿಯುವವರ ಬೆವರೇ ದೇವರು ಎಂಬ ಕಾಯಕ ಪ್ರಜ್ಞೆಯಿದೆ. ಉತ್ತಮ ನಡತೆಯೇ ಸಂಪತ್ತು ಎನ್ನುವ ಸಂತೃಪ್ತಿಯಿದೆ. ನಿಂದಿಸುವವರ ಕೆಲಸ ಸಂಬಳರಹಿತ ಸಾಹಸ ಎಂಬ ತಾತ್ಸಾರವಿದೆ. ಕಾವ್ಯದ ತೆನೆ ಹೊಯ್ದಾಡಲು ಭಾವ ಬೀಜ ಬಿತ್ತಬೇಕೆಂಬ ಹಸಿವಿದೆ. ಇತ್ತೀಚಿನ ದಿನಗಳಲ್ಲಿ ಸನ್ಮಾನಕ್ಕೆ ಬಳಸುವ ಶಾಲು ಅನರ್ಹರ ಪಾಲಾಗುವುದು, ಹಲ್ಲುಗಿಂಜುವವರಿಗೆ ಹಾರ ತುರಾಯಿ ಹಾಕುವುದು ಕಂಡು ಪ್ರಶಸ್ತಿ ಪುರಸ್ಕಾರಗಳ ಬಗ್ಗೆ ಅಸಡ್ಡೆಯಿದೆ. ಕೇಡು ಬಯಸದಿರುವುದು, ಸರಳತೆಯಲ್ಲಿ ಘನತೆಯನ್ನು ಕಾಣುವುದೇ ಬದುಕಿನ ಬಹುದ್ದೊಡ್ಡ ಸಾಧನೆ. ಆಸೆ ಕಡಿಮೆ, ಆನಂದ ಜಾಸ್ತಿ, ಚಿಂತೆ ಕಡಿಮೆ, ಆರೋಗ್ಯ ಜಾಸ್ತಿ, ನಮ್ಮೊಳಗಿನ ಸಾಧಕನನ್ನು ಜಾಗ್ರತಗೊಳಿಸಲು ನಿಂದಕರು ಇರಲೇಬೇಕು, ಒಂದಿನ ಸೇರಲೇಬೇಕು ಸುಡುಗಾಡು, ಏಕೀ ಕೇಡಿನ ಸೇಡು, ಸಂಬಂಧಗಳಿಗೆ ಜೀವವೇ ಇರಲಿಕ್ಕಿಲ್ಲ ಅದಕ್ಕೆ ಏನೋ ಸಂಬಂಧಿಕರು ಸ್ಪಂದಿಸುತ್ತಿಲ್ಲ ಎಂಬ ಸುಂದರ ಅಭಿವ್ಯಕ್ತಿಯ ತುಡಿತಗಳಿವೆ. ಸಂಕಲನದುದ್ದಕ್ಕೂ ಭಾವಸ್ಫುರಣದ ಗೊಂಚಲುಗಳು ಹೊಯ್ದಾಡಿವೆ. ಮಿಂಚು ಹುಳುಗಳ ದಾರ್ಶನಿಕತೆಯೂ, ಕ್ಷಕಿರಣಗಳ ಚಿಕಿತ್ಸಕ ಗುಣವೂ ಇದೆ. ಇವೆಲ್ಲವೂ ಮೃದು ಮನದ ರಮೇಶಬಾಬು ಯಾಳಗಿಯವರ ವ್ಯಕ್ತಿತ್ವದಲ್ಲಿಯ ಪಾಂಡಿತ್ಯಪ್ರಭೆ, ವೈಚಾರಿಕತೆ, ಶರಣ ಬದುಕಿನ ಹಂಬಲ, ಆಧ್ಯಾತ್ಮಿಕ ಚಿಂತನೆ, ಸದುವಿನಯ, ಸದಾಚಾರಗಳ ಸಮಾಗಮದ ಫಲವಾಗಿದೆ. ಆಯಸ್ಕಾಂತೀಯ ವಾಕ್ಛರಿ ನಡು ನಡುವೆ ಗೀತಲಹರಿ, ಇವುಗಳ ನುಸುಳು ದಾರಿಯಲಿ ಗುಂಯ್ ಗುಡುತ್ತ ರಸಿಕ ಮನದ ಭಾವಭೃಂಗಿ ಇನ್ನಷ್ಟು ಕೃತಿ ಪುಂಜಗಳಿಂದ ಮನುಜ-ಮನುಜರ ನಡುವಿನ ಗಿರಿ-ಗಹ್ವರಗಳ ಕಗ್ಗತ್ತಲೆಗೆ ಸೊಡರಾಗಿ ಸೃಜಿಸಲಿ ಎಂದು ಸೂರ್ಯಕಾಂತ ಗುಣಕಿಮಠ ಹಾರೈಸಿದ್ದಾರೆ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books