ಗಿರಗಿಟ್ಟಿ

Author : ತಮ್ಮಣ್ಣ ಬೀಗಾರ

Pages 100

₹ 90.00




Year of Publication: 2020
Published by: ಪ್ರೇಮ ಪ್ರಕಾಶನ
Address: ಶಿಕ್ಷಕರ ಬಡಾವಣೆ ಮೈಸೂರು- 570029
Phone: 9886026080

Synopsys

‘ಗಿರಗಿಟ್ಟಿ’ ಲೇಖಕ ತಮ್ಮಣ್ಣ ಬೀಗಾರ ಅವರ ಎಂಟನೆಯ ಮಕ್ಕಳ ಕತಾ ಸಂಕಲನ. ಬೀಗಾರ ಅವರು ಮೊದಲಿನಿಂದಲೂ ಮಲೆನಾಡನ್ನು ಅಲ್ಲಿಯ ಪರಿಸರವನ್ನು ಹಾಗೂ ಪರಿಸರದೊಂದಿಗೆ ಮಕ್ಕಳ ಸಂಬಂಧವನ್ನು ತಮ್ಮ ಬರಹಗಳಲ್ಲಿ ತೆರೆದಿಡುತ್ತಾ ಬಂದಿದ್ದಾರೆ. ಅವರ ‘ಕಪ್ಪೆಯ ಪಯಣ’ ‘ಹಸಿರೂರಿನ ಹುಡುಗ’ ‘ಮಲ್ನಾಡೇ ಮಾತಾಡು’ ‘ಅಮ್ಮನ ಚಿತ್ರ’ ‘ಉಲ್ಟಾ ಅಂಗಿ’ ಮುಂತಾದ ಎಲ್ಲ ಕಥಾ ಸಂಕಲನಗಳು ಓದುಗರ ಪ್ರೀತಿಗೆ ಪಾತ್ರವಾಗಿವೆ.

ಪ್ರಸ್ತುತ ಸಂಕಲನದಲ್ಲಿ ಹದಿನೈದು ಕತೆಗಳಿವೆ. ಇಲ್ಲಿನ ಕಥೆಗಳಲ್ಲಿ ಕೆಲವು ಕಟು ವಾಸ್ತವವಾದರೆ ಇನ್ನು ಕೆಲವು ವಾಸ್ತವದೊಂದಿಗೆ ಹದವಾಗಿ ಫ್ಯಾಂಟಸಿ ಬೆರೆಸಿ ಬರೆದವುಗಳಾಗಿವೆ. ಕತೆಗಳು ಹಸಿರಿನ ಪರಿಸರದಲ್ಲೇ ಅರಳುತ್ತ... ಮಕ್ಕಳ ಖುಷಿ, ಪ್ರಾಣಿಗಳೊಂದಿಗಿನ ಸಂಬಂಧ, ಪರಿಸರದ ಕುತೂಹಲ ಜಗತ್ತು, ಓತಿಕ್ಯಾತ, ಕಪ್ಪೆ, ಮಂಗಟ್ಟೆ ಮುಂತಾದವುಗಳ ಮುಖಾಮುಖಿ ಎಲ್ಲ ಮಕ್ಕಳ ಸಂಗಡವೇ, ಮಕ್ಕಳ ಸುತ್ತಲೇ ಹರಡಿಕೊಂಡವು. ಕತೆಗಳನ್ನು ಓದುತ್ತ ಹಿರಿಯರಾದರೆ ಬಾಲ್ಯಕ್ಕೆ ಮರಳಿ ಖುಷಿಪಡುತ್ತೀರಿ, ಮಕ್ಕಳಾದರೆ ಕತೆಯ ಪಾತ್ರಗಳೇ ಆಗಿ ಕತೆಯ ಪರಿಸರದಲ್ಲಿ ಓಡಾಡಿ ಸಂತಸ ಹೊಂದುತ್ತೀರಿ. ಇಲ್ಲಿ ನೀತಿ ಬೋಧನೆಯಾಗಲಿ, ಉಪದೇಶವಾಗಲಿ ಇಲ್ಲ. ಕತೆ ಓದುತ್ತಿದ್ದಂತೆಯೇ ಮಗು ತಾನೇ ತಾನಾಗಿ ವಿಸ್ತರಿಸಿಕೊಳ್ಳುವಂತಹವುಗಳಾಗಿವೆ. ಮುಖಪುಟ ಸಂತೋಷ ಸಸಿ ಹಿತ್ಲು ಅವರದಾದರೆ ಒಳಬದಿಯ ಚಿತ್ರ ಲೇಖಕರೇ ಬಿಡಿಸಿದ್ದಾರೆ.

About the Author

ತಮ್ಮಣ್ಣ ಬೀಗಾರ
(22 November 1959)

ಕತೆಗಾರ ತಮ್ಮಣ್ಣ ಬೀಗಾರ  ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರು. ವೃತ್ತಿಯಿಂದ ಶಿಕ್ಷಕರು. ಪ್ರಸ್ತುತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.  ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ...

READ MORE

Conversation

Reviews

ಮಕ್ಕಳ ಮನಸಿಗೆ ಮುದಕೊಡುವ ಬೀಗಾರರ ಗಿರಗಿಟ್ಟಿ 

ತಮ್ಮಣ್ಣ ಬೀಗಾರ ಎಂಬ ಹೆಸರು ಮಕ್ಕಳ ಸಾಹಿತ್ಯಿಕ ಲೋಕದಲ್ಲಿ ತುಂಬ ಚಿರಪರಿಚಿತವಾದದ್ದು. ನಮ್ಮ ನಡುವೆ ಇರುವ ಮಕ್ಕಳ ಮನಸಿನ, ಮುಗ್ಧತೆಯೇ ಮೈತಳೆದಂಥ ಅಪ್ಪಟ ಕವಿ, ಕಥೆಗಾರರು. ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಮಕ್ಕಳ ಏಳ್ಗೆಗಾಗಿಯೇ ದುಡಿದು, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದರೂ ಮಕ್ಕಳ ಸಾಹಿತ್ಯದ ಬರವಣಿಗೆ ನಿರಂತರ. ಬಹುಮುಖ ಪ್ರತಿಭೆಯ ತಮ್ಮಣ್ಣ ಬೀಗಾರ ಅಪರೂಪದ ಚಿತ್ರಕಲಾವಿದರೂ ಕೂಡ. ಮಕ್ಕಳ ಸಾಹಿತ್ಯ ಎಂದು ಮೂಗು ಮುರಿಯುತ್ತಿರುವವರ ನಡುವೆಯೇ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಕೃಷಿ ಮಾಡುತ್ತಿರುವ ಇವರಿಗೆ ರಾಜ್ಯ, ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮುಡಿಗೇರಿವೆ. ಇದುವರೆಗೂ ೨೨ ಕ್ಕೂ ಹೆಚ್ಚು ವಿವಿಧ ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಸಂಕಲನಗಳನ್ನು ಪ್ರಕಟಿಸಿದ ಇವರು ಈಗ ಮತ್ತೆ ’ಗಿರಗಿಟ್ಟಿ’ ಎಂಬ ತಮ್ಮ ೮ ನೇ ಕಥಾ ಸಂಕಲನ ಹಿಡಿದು ಓದುಗರಿಗೆ ಇದಿರಾಗಿದ್ದಾರೆ. ’ಮಕ್ಕಳಿಗಾಗಿ ಬರೆಯುತ್ತ ಬಾಲ್ಯದ ಖುಷಿಯನ್ನು ಇನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿರುವುದೇ ನನಗಂತೂ ಸಂತಸದ ವಿಷಯ’ ಎಂದು ಹೆಮ್ಮೆಯಿಂದ ಬರೆದುಕೊಳ್ಳುವ ಅವರು ಮಕ್ಕಳ ಸೂಕ್ಷ್ಮ ಮನಸು ಅರಿತುಕೊಂಡವರು. ಮಕ್ಕಳೊಡನೆ ಹತ್ತಿರದ ಒಡನಾಟ, ಅವರೊಡನೆ ಭಾವಾನುಸಂಧಾನ ಮಾಡುತ್ತಲೇ ಅಪರೂಪದ, ಅನನ್ಯ ವಸ್ತು ವಿಷಯಗಳನ್ನು ಎತ್ತಿಕೊಂಡು ಮಕ್ಕಳಿಗಾಗಿ ಕಥೆ ಹೆಣೆದಿದ್ದಾರೆ. ಇವರ ಕತೆ, ಕವಿತೆಗಳಲ್ಲಿ ಮಲೆನಾಡಿನ ದಟ್ಟ ಹಸಿರಿನ ಪರಿಸರ ಸದಾ ಇಣುಕಿ ಓದುಗರನ್ನು ಹಚ್ಚ ಹಸಿರಾಗಿಸುತ್ತದೆ.

ಡಾ. ಬಸು ಬೇವಿನಗಿಡದ ಅವರು ಹೇಳುವಂತೆ ನಿಸರ್ಗ ಪ್ರೀತಿ, ಬಾಲ್ಯದ ಹುಡುಗಾಟ, ಮೋಜು, ಮಾನವೀಯತೆ, ಅಂತಃಕರಣ ಮತ್ತು ಜೀವನದ ವಾಸ್ತವಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಎರಕ ಹೊಯ್ಯುತ್ತಾ ಮೊದಲಿನಿಂದಲೂ ಮಕ್ಕಳಿಗೆ ತುಂಬಾ ವಿಶಿಷ್ಟವಾದ ಕಥೆಗಳನ್ನು ಕೊಡುತ್ತಾ ಬಂದವರು ತಮ್ಮಣ್ಣ ಬೀಗಾರ. ಮಕ್ಕಳ ಮನಸಿಗೆ ಮುದ ಕೊಡುವಂತೆ ಬರೆಯುವ ಶಕ್ತಿ ಅವರಿಗಿದೆ. ಹಿಂದಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. ಒಂದು ರೀತಿಯಲ್ಲಿ ಅದು ಯಾವುದೇ ನಿಡುಸುಯ್ಯುವಿಕೆ ಇಲ್ಲದ ನಿಸರ್ಗದ ನಿತ್ಯೋತ್ಸವ. ಇದಕ್ಕೆ ಸಾಕ್ಷಿಯೆಂಬಂತೆ ಮಕ್ಕಳಷ್ಟೇ ಅಲ್ಲದೆ ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತಿರುವ ಸಂಕಲನದಲ್ಲಿನ ೧೫ ಕಥೆಗಳು.
ಇಶಾನ್ ನಾಯಿಮರಿ ಸಲುವಾಗಿ ಸ್ಕೂಲ್ ವ್ಯಾನ್ ಹತ್ತದೇ ನಡೆಯುತ್ತಲೇ ಮನೆ ಸೇರುವ, ಜೊತೆಗೆ ನಾಯಿಮರಿಯನ್ನು ಜೊತೆಗೆ ಕರೆದೊಯ್ಯುವ ಪ್ರಸಂಗ ’ಕತ್ತಲು’ ಕಥೆಯಲ್ಲಿ ಮೂಡಿ ಬಂದಿದೆ. ಮಕ್ಕಳ ಕಣ್ಣಿಗೆ ಕಾಣಿಸುವ ಸೂಕ್ಷ್ಮ ಸಂಗತಿಗಳನ್ನು ಅವರ ಕಣ್ಣಿನಿಂದಲೇ ರಸವತ್ತಾಗಿ ಕಟ್ಟಿಕೊಡುತ್ತಾರೆ ಬೀಗಾರ. ಒಂದು ಪುಟ್ಟ ನಾಯಿಮರಿ ಸಲುವಾಗಿ ಮನ ಮಿಡಿಯುವ, ಅಂತಃಕರಣದ ಘಟನೆಯನ್ನೇ ಕಥೆಯಾಗಿಸುವ ಕಲೆ ಇಲ್ಲಿ ಕಾಣಬಹುದು. ಕೆಲವೊಂದು ವಾಸ್ತವಗಳನ್ನು ಮಕ್ಕಳ ಮೂಲಕವೇ ಹೇಳಿಸುವ ಕಥೆಗಾರರು ಇಷ್ಟವಾಗುತ್ತಾರೆ. ಸ್ಕೂಲ್ ವ್ಯಾನ್ ಡ್ರೈವರ್‌ನ ಸ್ವಭಾವ, ಸ್ಕೂಲ್ ಬಸ್‌ನಲ್ಲಿ ಮಕ್ಕಳನ್ನು ಉಸಿರುಗಟ್ಟಿಸುವಂತೆ ತುಂಬುವ ಸ್ಥಿತಿ, ಮಕ್ಕಳ ಮನಸನ್ನು ಅರ್ಥ ಮಾಡಿಕೊಳ್ಳದ ಅಪ್ಪ ಎಲ್ಲವೂ ಸಹಜವಾಗಿ ಬಂದು ಹೋಗಿವೆ. ಡ್ರೈವರ್ ಮತ್ತು ಇಶಾನ್‌ನ ಅಪ್ಪ ಪುಟ್ಟ ನಾಯಿಮರಿಯನ್ನು ಬಲವಾಗಿ ಕಾಲಿನಿಂದ ಒದೆಯುವ, ಪೆಟ್ಟಿಗೆ ನಾಯಿಮರಿ ನೋವಿನಿಂದ ಚೀರುವ ದೃಶ್ಯಗಳು ಮನ ಕಲಕುತ್ತವೆ. ಕಪ್ಪೆಯ ಕುರಿತಾಗಿ ಮಕ್ಕಳಿಗೆ ಸದಾ ಕುತೂಹಲ ಇದ್ದೇ ಇರುತ್ತದೆ. ಆ ಕುತೂಹಲ ಯಾವ ತೆರನಾಗಿ ಇರುತ್ತದೆ ಎಂಬುದಕ್ಕೆ ’ಕಪ್ಪೆಯ ಕಣ್ಣು’ ಕಥೆ ಓದಬೇಕು. ನನಗೆ ತಮ್ಮಣ್ಣ ಬೀಗಾರ ಅವರು ತುಂಬ ಇಷ್ಟವಾಗುವುದು, ಪ್ರತಿಯೊಂದು ಕಥೆಯಲ್ಲಿಯೂ ಮಕ್ಕಳಿಂದಲೇ ಮಾತಾಡಿಸುವ ಪರಿ. ಅವರ ಕುತೂಹಲಗಳನ್ನು ಹೊರಗೆಳೆದು ಅವರಿಂದಲೇ ತಣಿಸುವ ವಿಧಾನ. 

ಧೈರ್ಯವಂತೆ ಪುಟ್ಟಿಯ ಪ್ರಾಣಿ-ಕೀಟಗಳ ಮೇಲಿನ ಪ್ರೀತಿಯನ್ನು ’ಓತಿ ರಾಜ’ ಕಥೆಯಲ್ಲಿ ತಿಳಿಯಬಹುದು. ಹಿರಿಯರು ಹೇಳಿದ ದೆವ್ವದ ಕಥೆಗಳು ಮಕ್ಕಳ ಮನಸಿನ ಮೇಲೆ ತುಂಬ ಗಾಢವಾದ ಪರಿಣಾಮ ಬೀರುತ್ತವೆ. ದಟ್ಟವಾಗಿ ಬೆಳೆದಿರೋ ಹುಣಸೇ ಮರದಲ್ಲೋ, ಬಸರಿ ಮರದಲ್ಲೋ ದೆವ್ವಗಳಿದ್ದಾವೆ ಎಂಬ ಪ್ರತೀತಿ ಈಗಲೂ ಹಳ್ಳಿಗಳಲ್ಲಿ ಇದೆ. ಏನೇ ಅಂದರೂ ಮಕ್ಕಳಿಗೆ ದೆವ್ವ ಎಂದರೆ ಭಯ. ಅಂತಹ ದೆವ್ವಗಳ ಕುರಿತಾಗಿ ಇರುವ ಭಯವನ್ನು ಹೋಗಲಾಡಿಸಲು ಶಾಲೆಯ ಮೇಷ್ಟ್ರು ಮಾಡಿದ ಉಪಾಯ, ಹಾಗೂ ಮಕ್ಕಳು ಖುಷಿಯಿಂದ ಅದನ್ನು ಆಸ್ವಾದಿಸಿದ ಬಗೆಯನ್ನು ’ದೆವ್ವದ ಮರ’ ಕಥೆ ಬಣ್ಣಿಸುತ್ತದೆ. ಶಾಲೆಯಲ್ಲಿ ಶಿಕ್ಷಕರು ಪ್ರಾಯೋಗಿಕವಾಗಿ ಮಕ್ಕಳಿಗೆ ಪಾಠದ ವಿಷಯಗಳನ್ನು ಅರ್ಥ ಮಾಡಿಸಿದರೆ ಎಷ್ಟು ನೈಜ ಹಾಗೂ ವಿಭಿನ್ನವಾಗಿರುತ್ತದೆ ಎಂಬುದಕ್ಕೆ ’ಗಿರಗಿಟ್ಟಿ’ ಕಥೆ ಉದಾಹರಣೆ. ಭೂಮಿಯ ದೈನಂದಿನ ಚಲನೆ, ವಾರ್ಷಿಕ ಚಲನೆ, ಭೂಮಿಯ ಗುರುತ್ವಾಕರ್ಷಣಶಕ್ತಿ ಎಲ್ಲವುಗಳ ಬಗ್ಗೆ ಮಕ್ಕಳಿಗೆ ಅರ್ಥೈಸುವ ಪರಿ ಸ್ವಾರಸ್ಯಕರವಾಗಿದೆ.
  

ನಾಯಿ ತನ್ನ ಆತ್ಮಕಥನವನ್ನು ಹೇಳುವ ರೀತಿಯಲ್ಲಿ ಪ್ರತಿಬಿಂಬಿತವಾಗುವ ’ಹೆಗಲ ಮೇಲೆ ಕುಳಿತು...’, ಹಲಸಿನ ಹಣ್ಣನ್ನು ಮಂಗಗಳು, ಅಳಿಲು ತಿನ್ನೋ ಪರಿಯನ್ನು ಮಕ್ಕಳ ಕಣ್ಣಿನಲ್ಲಿ ಒಡಮೂಡಿಸುವ ’ಹಣ್ಣು ತಿನ್ನೋ ಆಸೆ’, ಮರ ಕಥೆ ಹೇಳುತ್ತಾ? ಅಂತ ನೀವು ಕೇಳಬಹುದು. ಹೌದು ಮರ ಕಥೆ ಹೇಳುತ್ತದೆ. ಹಾಗಿದ್ದರೆ ನೀವು ಕೇಳಿಸಿಕೊಳ್ಳಬೇಕೆಂದರೆ ಸಂಕಲನದಲ್ಲಿನ ’ಕಥೆ ಹೇಳುವ ಮರ’ ಕಥೆಯನ್ನು ಓದಬೇಕು. ಹೀಗೆ ಸಂಕಲನದಲ್ಲಿನ ಬಹುಪಾಲು ಕಥೆಗಳು ಓದಿಸಿಕೊಂಡು ಹೋಗುತ್ತವೆ. ಮಕ್ಕಳ ಕುತೂಹಲ ಹೆಚ್ಚಿಸುವ, ಕಲ್ಪನೆ ಗರಿಗೆದರಿಸುವ, ವಾಸ್ತವತೆಯ ಅರಿವು ಮೂಡಿಸುವ, ಮಾನವೀಯತೆಯ ಮೌಲ್ಯ ಬಿತ್ತುವ ಎಲ್ಲ ಪ್ರಯತ್ನಗಳು ಸಂಕಲನದ ಕತೆಗಳಲ್ಲಾಗಿದೆ. ಮಕ್ಕಳೊಂದಿಗೆ ಮಕ್ಕಳಾಗಿ, ಅವರದೇ ಅಚ್ಚರಿ, ಬೆರಗು, ಮುಗ್ಧತೆಯ ನೋಟದಿಂದ ನೋಡಿದಾಗ ಮಾತ್ರ ಇಂತಹ ವಿಷಯವಸ್ತುಗಳು ಕಥೆಗಳಾಗಿ ರೂಪುತಾಳಲು ಸಾಧ್ಯ. ಅದರಲ್ಲಿ ಬೀಗಾರ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು. ಮತ್ತಷ್ಟು ಮಕ್ಕಳನ್ನು ಆಕರ್ಷಿಸುವ ಕಥೆಗಳ ಕಟ್ಟನ್ನು ಹಿಡಿದು ಬರಲಿ ಎಂಬ ಹಾರೈಕೆಯೊಂದಿಗೆ ತಮ್ಮಣ್ಣ ಬೀಗಾರ ಅವರನ್ನು ಅಭಿನಂದಿಸುವೆ.

ನಾಗೇಶ್ ಜೆ. ನಾಯಕ 

ಕೃಪೆ : ಜವಜೀವಾಳ (2020 ನವೆಂಬರ್‌  08)

Related Books