ಪ್ರೀತಿ, ವಿರಹ, ಕನಸು, ಕನವರಿಕೆ ಮುಂತಾದ ಭಾವನೆಗಳ ಹಾಗೂ ಉರಿವ ವರ್ತಮಾನದ ತಲ್ಲಣ, ಸಾಮಾಜಿಕ ವೈರುಧ್ಯಗಳ ಕುರಿತ 60 ಗಜಲ್‌ಗಳ ಸಂಕಲನ ’ಗೋರಿ ಮೇಲಿನ ಹೂ’. ದೇಶದೆಲ್ಲೆಡೆ ದೇವರು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ದೌರ್ಜನ್ಯ, ಹಿಂಸೆ ನಡೆಯುತ್ತಿದೆ. ಪ್ರೀತಿ ಕರುಣೆಯಂತಹ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಸೌಹಾರ್ದತೆ ಸಾರುವ ಗಜಲ್, ಸಹಜವಾಗಿ ಹುಟ್ಟುವ ಪ್ರೀತಿಯ ಬಗ್ಗೆ ಹೇಳುತ್ತಲೇ, ತನ್ನ ಜೀವದ ಗೆಳತಿಯ ಬಗೆಗಿನ ಭಾವತೀವ್ರತೆಯನ್ನು ಮುಖಾಮುಖಿಯಾಗಿಸುವಂತಹ ಹಲವಾರು ಗಜಲ್‌ಗಳು ಈ ಕೃತಿಯಲ್ಲಿವೆ.
ಸೌಹಾರ್ದತೆ ಬಗ್ಗೆ ಇರುವ ಗಜಲ್ ನಿಮ್ಮ ಓದಿಗಾಗಿ: ಗಣಪನ ಶರೀಫನ ಕುಲ ಒಂದೇ, ಮಂದಿರ ಮಸೀದಿ ಕಟ್ಟುವ ನೆಲ ಒಂದೇ, ಧರ್ಮ ಗ್ರಂಥಗಳ ನಾಲಿಗೆ ಹರಿತವಾಗಿದೆ, ಇಂದು ಬಾಯಾರಿಕೆ ನೀಗುವ ಜಲ ಒಂದೇ, ಎಲ್ಲರ ಮನದಿ ನಾಟಲಿ ವಿಶ್ವಮಾನವತೆಯ ತತ್ವ, ಸತ್ತಾಗ ಎಲ್ಲರ ದಫನ್ ಮಾಡುವ ಸ್ಥಳ ಒಂದೇ, ಹಿಂದೂ-ಮುಸ್ಲಿಂ ಎಂಬ ಭೇದ-ಭಾವ ಯಾಕೆ? ಜಂಗಮ ಫಕೀರ ಜೋಳಿಗೆಯ ತಳ ಒಂದೇ, ಮೂರು ದಿನದ ಜಿಂದಗಿಯಲಿ ಬಾಳಲು ಬಂದ ನಮ್ಮೆಲ್ಲರ ಬದುಕಿನ ಮೂಲ ಒಂದೇ. ಹೀಗೆ ಇಲ್ಲಿಯ ಗಜಲ್ ಗಳು ಆಪ್ತವಾಗುತ್ತಾ ಹೋಗುತ್ತವೆ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ ದೊರೆತಿದೆ.
©2023 Book Brahma Private Limited.