ಹಲ್ಲಾಬೋಲ್: ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು

Author : ಎಂ.ಜಿ. ವೆಂಕಟೇಶ್

Pages 280

₹ 250.00




Year of Publication: 2020
Published by: ಕ್ರಿಯಾ ಮಾಧ್ಯಮ ಪ್ರೈ.ಲಿ.
Address: ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-562123
Phone: 9916595916

Synopsys

‘ಹಲ್ಲಾ ಬೋಲ್-ಸಫ್ದರ್ ಹಾಶ್ಮಿ ಅವರ ಸಾವು ಮತ್ತು ಬದುಕು ಕುರಿತು ಸುಧನ್ವ ದೇಶಪಾಂಡೆ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಎಂ.ಜಿ. ವೆಂಕಟೇಶ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಫ್ದರ್ ಹಾಶ್ಮಿ-ಒಬ್ಬ ನಾಟಕ ರಚನೆಕಾರ. ವ್ಯವಸ್ಥೆಯ ವಿರುದ್ಧ ಬಂಡೆದ್ದು, ಜನಜಾಗೃತಿ ಮೂಡಿಸಲು ಬೀದಿ ನಾಟಕ ಆಡುವಾಗ ದುಷ್ಕರ್ಮಿಗಳ ಕತ್ಯಕ್ಕೆ ಬಲಿಯಾದರು. ಹಾಶ್ಮಿಯಂತಹ ಚಟುವಟಿಕೆಗಳನ್ನು ಸಹಿಸದ ಹಾಗೂ ವ್ಯವಸ್ಥೆಯ ಭಾಗವಾದ ಸರ್ಕಾರ ಅವರನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಂಡಿತು. ಈ ಬಗ್ಗೆ ಲೇಖಕರು ‘ಪೋಸ್ಟ್ ಮಾರ್ಟ್ಂ ವರದಿ ಸಹ, ನಾವು ಎತ್ತಿಕೊಂಡು ಆಸ್ಪತ್ರೆಗೆ ಹೋದಾಗ ಅವನ ಕಿವಿ, ಮೂಗು ಮತ್ತು ಗಂಟಲಿನಿಂದ ರಕ್ತ ಸ್ರಾವ ವಾಗುತ್ತಿದ್ದನ್ನು ಗುರುತಿಸಿತ್ತು. ವರದಿಯಲ್ಲಿ ಮೆದುಳು ಚಿಪ್ಪು ಮತ್ತು ಹಣೆಗೆ ಆಳವಾದ ಸೀಳು ಗಾಯದ ಬಗ್ಗೆ ವಿವರಣೆಯಿತ್ತು. ಅವನ ತಲೆಗೆ ಕನಿಷ್ಟ ಇಪ್ಪತ್ತು ಬಾರಿಯಾದರೂ ಕಬ್ಬಿಣ ರಾಡಿನಿಂದ ಹೊಡೆದಿರಬಹುದು ಎಂದು ಅದರಲ್ಲಿ ಬರೆದಿತ್ತು’ ಹೀಗೆ ಉಲ್ಲೇಖಿಸುತ್ತಾರೆ. ಸಫ್ದರ್ ಹಾಶ್ಮಿಯ ಹತ್ಯೆಯ ಪ್ರಕರಣದ ಮೂಲಕ ವ್ಯವಸ್ಥೆಯ ಕರಾಳ ಮುಖವನ್ನು ಕೃತಿಯಲ್ಲಿ ಅನಾವರಣಗೊಳಿಸಲಾಗಿದೆ ಮತ್ತು ಒಂದು ಕರಾಳ ವ್ಯವಸ್ಥೆಯು ಕಲೆ-ಕಲಾವಿದರ ಬಾಯಿ ಮುಚ್ಚಿಸಲು ಅಸಾಧ್ಯ ಎಂಬ ಸಂದೇಶ ರವಾನಿಸುವ ಸಂಕೇತವಾಗಿಯೂ ಈ ಕೃತಿ ಕೆಲಸ ಮಾಡುತ್ತದೆ. 

 

About the Author

ಎಂ.ಜಿ. ವೆಂಕಟೇಶ್

ಲೇಖಕ ಎಂ.ಜಿ. ವೆಂಕಟೇಶ್ ಅವರು ಭಾರತದ ಮುಖ್ಯ ಲೆಕ್ಕಪತ್ರ ಪರಿಶೋಧಕರ (ಸಿಎಜಿ) ಕಚೇರಿಯಲ್ಲಿ ಲೆಕ್ಕ ಪರಿಶೋಧಕರಾಗಿ ನಿವೃತ್ತರು. ದಕ್ಷಿಣ ಭಾರತದಲ್ಲಿ ಸಮುದಾಯ ನಾಟಕ ಆಂದೋಳನದೊಂದಿಗೆ ಸಕ್ರಿಯರು. ಸದ್ಯ, ಸಮುದಾಯದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು.  ‘ಹಲ್ಲಾ ಬೋಲ್ : ಸಫ್ದರ್ ಹಾಶ್ಮಿ ಸಾವು-ಬದುಕು’ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.  ...

READ MORE

Excerpt / E-Books

೧೯೮೦ರ ದಶಕದ ಮಧ್ಯಾವಧಿ. ಕೋಮು ಸೌಹಾರ್ದತಾ ಸಮಿತಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಟೋಬರ್ ೩೧, ೧೯೮೪ರಂದು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ಆ ನಂತರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಾರಂಭವಾಗಿ ಸುಮಾರು ಮೂರು ಸಾವಿರ ಜೀವಗಳನ್ನು ಬಲಿತೆಗೆದುಕೊಳ್ಳುವುದು ಅಲ್ಲದೇ ನಮ್ಮ ಸಮಾಜ, ಹಿಂದೂ-ಸಿಖ್ ಬಾಂಧವ್ಯ, ದೆಹಲಿ ನಗರದ ಬಗ್ಗೆ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಬಹಳ ಕಾಲದಿಂದ ಇದ್ದ ನಂಬಿಕೆಗಳು ನುಚ್ಚುನೂರಾದವು. ಈ ಮಾರಣ ಹೋಮಕ್ಕೆ ತತ್ತರಿಸಿದ ಸಾವಿರಾರು ಸಿಖ್ಖರು ನಗರದ ತಮ್ಮ ಪ್ರೀತಿಯ ಬಂಧುಗಳನ್ನು, ಮನೆ, ವ್ಯವಹಾರಗಳನ್ನು ಕಳೆದುಕೊಂಡು ನಗರದ ವಿವಿಧ ಕಡೆಗಳಲ್ಲಿ ರಚಿಸಲಾದ ಕ್ಯಾಂಪ್‌ಗಳಿಗೆ ಹೋಗಬೇಕಾಯಿತು. ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ಸಿನಲ್ಲಿ ಮೊದಲು ಶಾಂತಿ ಮೆರವಣಿಗೆ ನಡೆದಾಗ ಉರಿದಿದ್ದ ಕೆಂಡ ಹೊಗೆಯಾಡುತ್ತಲೇ ಇತ್ತು. ಗಾಯ ಹಸಿಯಾಗಿಯೇ ಇತ್ತು. ಶಾಂತಿ ಮೆರವಣಿಗೆ ಕ್ಯಾಂಪಸ್‌ನ ಎಲ್ಲ ಕಾಲೇಜುಗಳನ್ನು ಮತ್ತು ಮುಖ್ಯ ವಿಭಾಗಗಳನ್ನು ಮುಟ್ಟುತ್ತಲೇ ಸಾಗಿತು. ಶಾಲಾ ಕಾಲೇಜಿನಲ್ಲಿ ಮೆರವಣಿಗೆ ಕೊನೆಗೊಂಡು ಸಾರ್ವಜನಿಕ ಸಭೆ ನಡೆಯಿತು. ಕೆಲವು ಭಾಷಣಕಾರರು ಸಭೆಯನ್ನು ಉದ್ದೇಶಿಸಿ ಮಾತನಾಡುವವರಿದ್ದು ಆ ವೇಳೆಗೆ ಅತಿಥೇಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಸೇರಿದ್ದರು. ಅವರಲ್ಲಿ ಬಹುತೇಕರು ಯುವಜನರು. ಅವರು ಕೋಪಗೊಂಡಿದ್ದು ಪ್ರತಿಕಾರಕ್ಕಾಗಿ ಕುದಿಯುತ್ತಿದ್ದರು. ಅವರ ಕಣ್ಣುಗಳು ನೋವಿನಿಂದ ಉರಿಯುತ್ತಿದ್ದು, ದ್ವೇಷ ಮತ್ತು ದುಃಖಭರಿತವಾಗಿದ್ದವು. ಪ್ರತೀಕಾರದ ವಾತಾವರಣವಿತ್ತು. ಭಾಷಣಗಳ ಮೊದಲು ‘ಪರ್ಚಮ್’ ಗುಂಪಿನಿಂದ ಹಾಡುಗಳ ಕಾರ್ಯಕ್ರಮವಿತ್ತು. ಹಾಡುವುದು ಅಸಾಧ್ಯವಾಗಿತ್ತು. ಅವರ ಬಹಳಷ್ಟು ಕೋಪ ಅಲ್ಲಿ ಬಹುಸಂಖ್ಯೆಯಲ್ಲಿ ನೆರೆದಿದ್ದ ಪೋಲಿಸರ ವಿರುದ್ಧವಿತ್ತು. ವಿದ್ಯಾರ್ಥಿಗಳು ಉದ್ರಿಕ್ತರಾಗಿದ್ದರು. ಹಿಂದಿನ ದಿನಗಳಲ್ಲಿ ನಡೆದ ಆಸ್ತಿಹಾನಿಯಲ್ಲಿ ರಕ್ತ ಹರಿಯುತ್ತಿದ್ದಾಗ ದುಷ್ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿದ್ದರು. ಒಂದು ಅಪಾಯಕಾರಿ ಸನ್ನಿವೇಶ ಪ್ರಾರಂಭವಾಗುತ್ತಿತ್ತು. ಶಾಂತಿ ಮೆರವಣಿಗೆ ಸಂಘಟಕರಿಗೆ ಮುಂದಿನ ಆಗುಹೋಗುಗಳ ಬಗ್ಗೆ ಆತಂಕವಿತ್ತು. ಸಫ್ದರ್ ‘ಪರ್ಚಮ್’ನ ಅತ್ಯಂತ ಕಿರಿಯ ಸದಸ್ಯಳಾದ, ತೆಳ್ಳಗಿನ ಪದವಿಪೂರ್ವ ವಿದ್ಯಾರ್ಥಿನಿ ಸುಮಂಗಲಾ ದಾಮೋದರನ್ (ಇಎಂಎಸ್ ಅವರ ಮೊಮ್ಮಗಳು) ಕಡೆಗೆ ತಿರುಗಿದನು. ಅವನು ಮೈಕ್ ಕೈಗೆತ್ತಿಕೊಂಡು ‘ಜಾನೆವಾಲೇ ಸಿಪಾಯಿ’ ಹಾಡನ್ನು ಹಾಡಲು ಹೇಳಿದ. ೧೯೪೦ರಲ್ಲಿ ಈ ಯುದ್ಧ ವಿರೋಧಿ-ಗೀತೆಯನ್ನು ರಚಿಸಿದ್ದು ಹೈದರಾಬಾದ್‌ನ ಕಮ್ಯೂನಿಸ್ಟ್ ಕವಿ ಮಕ್ದೂಮ್ ಮೋಹಿಯುದ್ದೀನ್. ಅದನ್ನು ಸಲೀಲ್ ಚೌಧರಿ ೧೯೬೦ರಲ್ಲಿ ’ಉಸ್ನೇ ಕಹಾ ಥಾ’ ಚಿತ್ರಕ್ಕೆ ಅಳವಡಿಸಿ ಸಂಗೀತ ನೀಡಿದ್ದರು. ಅಲ್ಲಿವರೆಗೆ ‘ಪರ್ಚಮ್’ ಯಾವಾಗಲೂ ಗುಂಪು ಗಾಯನ ಮಾಡುತ್ತಿದ್ದರು. ತಂಡದಿಂದ ಒಬ್ಬರೇ ಹಾಡಿದ ಮೊದಲ ಗೀತೆ ಇದಾಗಿತ್ತು. ಅದನ್ನು ಅವರು ಹಿಂದೆ ಎಂದೂ ಹಾಡಿರಲಿಲ್ಲ. ಯುವ ಗಾಯಕಿ ತಬ್ಬಲಿಯಂತೆ ಭಯಭೀತಳಾಗಿದ್ದಳು. ‘ಹಾಡು, ಹೆದರಬೇಡ ಹಾಡು’ ಸಫ್ದರ್ ಉತ್ತೇಜಿಸಿದನು. ಸುಮಂಗಲ ಹಿಂಜರಿಯುತ್ತಿದ್ದಳು. ಸಫ್ದರ್ ಅವಳ ಹಿಂದೆಯೇ ಇದ್ದ. ಅವಳು ಮತ್ತೆ ಹಾಡಲು ಪ್ರಾರಂಭಿಸಿದಳು. ಅವಳ ಮಧುರ ಧ್ವನಿ ಇದ್ದಕ್ಕಿದಂತೆ ಶಕ್ತಿಶಾಲಿಯಾಯಿತು. ಅವಳ ಅಂತರಂಗದ ಆಳದಿಂದ ಹೊರಟ ಆ ಪೂರ್ಣಧ್ವನಿ ಅವಳ ಸಣ್ಣ ಆಕಾರವನ್ನು ಮುಚ್ಚಿತ್ತು. ಅದು ಅಲ್ಲಿದ್ದ ಎಲ್ಲರನ್ನೂ ತಲುಪಿ ಶಾಂತವಾಗಿಸಿತು. ಹಾಡು ಮುಂದುವರೆದಂತೆ ಯುವಕ ಯುವತಿಯರು ಸ್ತಂಭಿತರಾಗಿದ್ದರು. ಸಿಪಾಯಿ ಯುದ್ಧಕ್ಕೆ ಹೊರಡುವಾಗ ಅವನ ದುಃಖಿತ ಹೆಂಡತಿ ಮತ್ತು ಹಸಿದ ಮಕ್ಕಳ ಕುರಿತಾದ ಹಾಡು, ಸುಡುತ್ತಿದ್ದ ಹೆಣಗಳ ವಾಸನೆ – ಎಲ್ಲಾ ಕಡೆಯಿಂದ ಎದ್ದು ಬದುಕೇ ಅಳುತ್ತಿರುವಂತೆ ಭಾಸವಾಗುತ್ತಿತ್ತು. ಪ್ರೇಕ್ಷಕರಲ್ಲಿ ಯಾರೋ ಒಬ್ಬರು ಅಳತೊಡಗಿದರು. ಮುಂದಿನ ಕೆಲವು ನಿಮಿಷಗಳಲ್ಲಿ ಸುಮಾರು ಜನ ಅಳುತ್ತಿದ್ದರು. ಅಳದಿದ್ದವರೂ ಉಕ್ಕಿಬರುತ್ತಿದ್ದ ಭಾವನೆಯನ್ನು ತಡೆಯಲು ಯತ್ನಿಸುತ್ತಿದ್ದರು. ಅಲ್ಲಿ ಒದ್ದೆಯಾಗದಿದ್ದ ಕಣ್ಣುಗಳೇ ಇರಲಿಲ್ಲ. ಸಂಪೂರ್ಣವಾಗಿ ಕಾರ್ಯಾಚರಣೆಗಾಗಿ ಸಿದ್ಧರಾಗಿದ್ದ ಪೋಲಿಸರು, ಅಲ್ಲಿ ಬದಲಾದ ಮನಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾದರು. ಅಸಾಧ್ಯವೆನಿಸಿದ್ದು ನಡೆದಿತ್ತು. ೧೯೪೦ರಲ್ಲಿ ಮುಸ್ಲಿಂ ಹೆಸರಿನ ಹೈದರಾಬಾದಿ ಕಮ್ಯುನಿಸ್ಟ್ ಕವಿಯಿಂದ ರಚಿತವಾದ ಒಂದು ಹಾಡು, ೧೯೬೦ರ ಒಂದು ಚಲನಚಿತ್ರಕ್ಕೆ ಒಬ್ಬ ಬಂಗಾಳಿ ಅಳವಡಿಸಿದ್ದ, ಪದವಿಪೂರ್ವ ತರಗತಿಯ ಹಿಂದು ಹೆಸರಿನ ಮಲೆಯಾಳಿ ಯುವತಿ ಹಾಡಿದ ಹಾಡು, ಹತ್ಯಾಕಾಂಡದಿಂದ ಕುದಿಯುತ್ತಿದ್ದ ಕೋಪೋದ್ರಿಕ್ತರಾಗಿದ್ದ ನೂರಾರು ಸಿಖ್ ಯುವಕರಲ್ಲಿ ಬದಲಾವಣೆ ತಂದಿತ್ತು. ಇಲ್ಲಿ ಹೋಲಿಸಬಹುದಾದ್ದು, ಹೊಂದಿಕೆಯಾಗಬಹುದಾದ್ದು ಏನೂ ಇಲ್ಲ. ಆದರೂ ಈ ಹಾಡು, ಭಾವಪೂರ್ಣ ಮತ್ತು ಮನಕಲಕುವ ಹಾಡು-ನೊಂದವರ ಎರಡು ಗುಂಪುಗಳನ್ನು, ಪೀಳಿಗೆಗಳು, ಭೂಗೋಳ ಮತ್ತು ಹಿಂಸಾಚಾರದ ಎಲ್ಲೆಗಳನ್ನೂ ಮೀರಿ ಜೋಡಿಸಿತ್ತು.

- -ಪುಸ್ತಕದಿಂದ

Related Books