ಹಿತ್ತಾಳೆ ಬಣ್ಣದ ಪುಸ್ತಕ

Author : ಕೋಡಿಬೆಟ್ಟು ರಾಜಲಕ್ಷ್ಮಿ

Pages 244

₹ 270.00




Year of Publication: 2022
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್‌ ಎದುರು ವಿದ್ಯಾ ನಗರ ಶಿವಮೋಗ್ಗ.
Phone: 9449174662

Synopsys

ಭಾರತದ ಆರ್ಥಿಕ ತಜ್ಞೆ ದೇವಕಿ ಜೈನ್ ಅವರ ‘ದಿ ಬ್ರಾಸ್ ನೋಟ್ ಬುಕ್’ ಅವರ ಆತ್ಮಕಥನದ ಈ ಕೃತಿಯನ್ನು ಲೇಖಕಿ ಕೋಡಿಬೆಟ್ಟು ರಾಜೇಶ್ವರಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹಿತ್ತಾಳೆ ಬಣ್ಣದ ಪುಸ್ತಕ. ಸಂವೇದನಾಶೀಲ ಘಟನೆಗಳು, ಬರಹ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.

About the Author

ಕೋಡಿಬೆಟ್ಟು ರಾಜಲಕ್ಷ್ಮಿ
(26 May 1978)

ಪತ್ರಕರ್ತೆ, ಲೇಖಕಿ ಕೋಡಿಬೆಟ್ಟು ರಾಜಲಕ್ಷ್ಮಿ ಜನಿಸಿದ್ದು 1978 ಮೇ 26 ರಂದು ಮಂಗಳೂರಿನ ಕೋಡಿಬೆಟ್ಟು. ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನ ವಿಜಯಕರ್ನಾಟಕದಲ್ಲಿ ಸಿನಿಯರ್ ಕಾಪಿ ಎಡಿಟರ್‍ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ಮುಷ್ಟಿ ನಕ್ಷತ್ರ ಇವರು ಬರೆದ ಕಥಾ ಸಂಕಲನವಾಗಿದೆ. ...

READ MORE

Reviews

‘ಹಿತ್ತಾಳೆ ಬಣ್ಣದ ಪುಸ್ತಕ’ ಕೃತಿಯ ವಿಮರ್ಶೆ

ಮೈಸೂರು ನಾಗರಿಕ ಸೇವೆಯ ಪ್ರೊಬೇಷನರಿ ಕಲಿಕೆಯಲಿದ್ದಾಗ, ಅಪ್ಪ ಕುದುರೆ ಸವಾರಿ ಕಲಿತಿದ್ದರು. ಈ ಕತೆಯನ್ನು ಹೇಳುತ್ತ ಹೇಳುತ್ತ ಅಮ್ಮ ನಗುತ್ತಿದ್ದಳು. ‘ನೋಡು, ನಾನು ಅವರನ್ನು ಮೊದಲು ಹರಿವಾಣದಲ್ಲಿ ತುಂಬಿದ್ದ ನೀರಿನಲ್ಲಿ ನೋಡಿದ್ದೆ’. ಸಾಮಾನ್ಯವಾಗಿ ಆ ಕಾಲದಲ್ಲಿ ಸಾಂಪ್ರದಾಯಿಕ ಮದುವೆಗಳಲ್ಲಿ ಸಂಬಂಧಗಳು ಮಧುರವಾಗಿರುವುದು ಅಪರೂಪ. ಆದರೆ ನನ್ನ ಅಪ್ಪ ಅಮ್ಮನ ಸಂಬಂಧ ಬಹಳ ಮಧುರವಾಗಿ ಆರಂಭವಾಗಿ, ಅವರ ಬದುಕಿನುದ್ದಕ್ಕೂ ಮಧುರವಾಗಿಯೇ ಸಾಗಿತು. ದೇವಕಿ ಜೈನ್ ಅವರ ಆತ್ಮಕತೆ ‘ದ ಬ್ರಾಸ್ ನೋಟ್‍ ಬುಕ್’ ಅನ್ನು ಕೋಡಿಬೆಟ್ಟು ರಾಜಲಕ್ಷ್ಮಿ ‘ಹಿತ್ತಾಳೆ ಬಣ್ಣದ ಪುಸ್ತಕ’ ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದು, ಆ ಪುಸ್ತಕದ ಕೆಲವು ಪುಟಗಳು ಇಲ್ಲಿವೆ.

ತಿರುಪತಿ ರಾಜಕುಮಾರಿ

ಬೆಟ್ಟಗಳ ನಗರ ತಿರುಪತಿಯ ರಾಜಕುಮಾರಿ ಎಂಬುದಾಗಿಯೇ ನಾನು ಅವಳನ್ನು ಕಲ್ಪಿಸಿಕೊಳ್ಳಬಯಸುತ್ತೇನೆ. ಚಿಕ್ಕಂದಿನಿಂದಲೂ ಆಕೆ ಅತ್ಯಂತ ಚೆಲುವೆಯಾಗಿದ್ದಳು. ಆಕರ್ಷಕಳಾಗಿದ್ದಳು. ಆದ್ದರಿಂದಲೇ ಆಕೆಯನ್ನು ಎಲ್ಲರೂ ರಾಜಕುಮಾರಿ ಎಂದೇ ಕರೆಯುತ್ತಿದ್ದರು. ನನಗೂ ಹಾಗೆಯೇ ಕರೆಯಲು ಇಷ್ಟ. ಆಕೆ ನನ್ನಮ್ಮನಾದರೂ, ಅಕ್ಕನೆಂದು ಕರೆಯುವುದೇ ರೂಢಿಯಾಗಿದೆ ನನಗೆ. ಆಕೆಯ ಅಪ್ಪ, ಎಂದರೆ ನನ್ನ ಅಜ್ಜ, ಆಕೆ ಮೇಲೆ ಸದಾ ಒಂದು ಕಣ್ಣಿಟ್ಟಿದ್ದರಂತೆ. ಅಜ್ಜನ ಮನೆಯ ನೆರೆಹೊರೆಯವರು ಮತ್ತು ದೇವಸ್ಥಾನದ ಆಸುಪಾಸಿನ ಜನರು, ನನ್ನ ಅಮ್ಮನಲ್ಲಿ ಏನೋ ಒಂದು ದೈವೀಕಳೆಯಿದೆ ಎಂದೇ ಭಾವಿಸಿದ್ದರು. ಆಕೆಯ ಸೌಂದರ್ಯದಲ್ಲಿ ಮಿಂಚಿನ ಹೊಳಪಿತ್ತು. ಅದು ಪ್ರಶಾಂತವಾದ ಸೌಂದರ್ಯಕಳೆ. ಆದ್ದರಿಂದ ಪ್ರೇಮ ಸೂಸುವ ಚೆಲುವು. ಹಾಗಾಗಿ ದೇವಸ್ಥಾನದ ಜನರಿಗೂ ಆಕೆಯು ಅಚ್ಚುಮೆಚ್ಚಿನ ಕೂಸು.

ಆಕೆಯನ್ನು ಬಣ್ಣಿಸಲೊಂದು ದಾರಿಯಿದ್ದರೆ, ಅವಳು ಪ್ರಶಾಂತ ದೀಪದ ಬೆಳಕು. ನಿಜಕ್ಕೂ ಆಕೆ ಬೆಳಕಿನ ಸಾಕಾರ ಮೂರ್ತಿಯಾಗಿದ್ದಳು. ಆಕೆಯ ಚಿಕ್ಕ ತಂಗಿ ಅಂದರೆ ನನ್ನ ಚಿಕ್ಕಮ್ಮ ಕೂಡ ನಮ್ಮೊಂದಿಗೇ ಇದ್ದರು ಮತ್ತು ಅವರು ನನ್ನ ಅಮ್ಮನನ್ನು ಸಹಜವಾಗಿ ಅಕ್ಕ ಎಂದೇ ಕರೆಯುತ್ತಿದ್ದರು. ನನ್ನ ಅಮ್ಮನ ಮೊದಲ ಮಗು, ನನ್ನ ಅಣ್ಣ ಅನಂತ, ಚಿಕ್ಕಮ್ಮನನ್ನೇ ಅನುಕರಿಸಲು ಶುರು ಮಾಡಿ ‘ಅಕ್ಕ’ ಎಂದೇ ಕರೆಯುತ್ತಿದ್ದ. ಹಿರಿಯಣ್ಣನ ಚಾಳಿ ಮನೆಮಂದಿಗೆ ಎಂಬಂತೆ, ಉಳಿದ ಮಕ್ಕಳಿಗೂ ಅಣ್ಣನ ಗುಣವೇ ಬಂದಿತ್ತು.

‘ಆಕೆಯೆಂದರೆ ಪ್ರೇಮ ಮೂರ್ತಿ’ ಎಂದು ಆಕೆಯ ಗಂಡ ಅಂದರೆ, ನನ್ನ ಅಣ್ಣ (ಅಪ್ಪ) ಬಣ್ಣಿಸುತ್ತಿದ್ದರು. ಅಕ್ಕನ ಹೆಸರು ಸಿಂಗಮ್ಮ. ಅಜ್ಜಿ ಮತ್ತು ಆಕೆಯ ಸೋದರ ಸೋದರಿಯರು ಪ್ರೀತಿಯಿಂದ ಚಿಂಗು ಎಂದು ಕರೆಯುತ್ತಿದ್ದರು. ಸಿಂಗಮ್ಮ ಎಂದರೆ ನರಸಿಂಹ ದೇವರ ಸ್ತ್ರೀ ರೂಪಕ್ಕೆ ಇರುವ ಹೆಸರು. ನರಸಿಂಹ ದೇವರು ಅತ್ಯಂತ ಕಾರಣಿಕದ ದೇವರು ಎಂಬ ನಂಬಿಕೆ ಇದೆ. ಕೆಡಕನ್ನು, ದುಷ್ಟ ರಾಕ್ಷಸನನ್ನು, ದುಷ್ಟ ದೈತ್ಯರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ದೇವರು.

ಸಿಂಗ್ಲಾಚಾರ್ ಮತ್ತು ಯೆದುಗಿರಿ ದಂಪತಿಯ ದ್ವಿತೀಯ ಪುತ್ರಿ ಸಿಂಗಮ್ಮ 1903ರಲ್ಲಿ ದೇವಸ್ಥಾನ ನಗರಿ ತಿರುಪತಿಯಲ್ಲಿ ಜನಿಸಿದ್ದು. ಸಿಂಗ್ಲಾಚಾರ್ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಮ್ಯಾನೇಜರ್ ಆಗಿ ತಿರುಪತಿ ಶ್ರೀನಿವಾಸ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಕನ ನಂತರ ಇನ್ನಿಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಹುಟ್ಟಿದ್ದರು. ಆಕೆಯ ದೊಡ್ಡ ಅಕ್ಕನನ್ನು ಒಬ್ಬರು ಕ್ರಿಮಿನಲ್ ವಕೀಲರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಹುಟ್ಟಿದ್ದ. ನನ್ನ ಅಕ್ಕನ ನಂತರ ಹುಟ್ಟಿದಾಕೆ- ಅಂದರೆ ನನ್ನ ಚಿಕ್ಕಮ್ಮ ಶ್ರೀರಂಗುವಿಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಹುಡುಗ ಹುಟ್ಟಿದ್ದರು. ಅನಂತರ ಹುಟ್ಟಿದಾಕೆ ಕ್ಷಯ ರೋಗದಿಂದ ಬಳಲಿ ತೀರಿಕೊಂಡಿದ್ದರು. ಕೊನೆಯಾಕೆಯೇ ಆಂಡಾಳ್, ಮದುವೆಯಾಗದೇ ಬಹಳ ದೀರ್ಘಕಾಲ ಉಳಿಯಬೇಕಾಯಿತು.

ಅಕ್ಕ ಹೆತ್ತ ಮಕ್ಕಳಲ್ಲಿ ಏಳು ಮಂದಿ ಬದುಕಿ ಉಳಿದರು. ಹೆರಿಗೆಗಳೆಲ್ಲ ಮನೆಯಲ್ಲಿಯೇ ಮಿಡ್ ವೈಫ್ ಅಥವಾ ಸ್ತ್ರೀ ವೈದ್ಯರ ಉಪಸ್ಥಿತಿಯಲ್ಲಿ ಆಗುತ್ತಿದ್ದವು.

ಚಿಕ್ಕ ಹುಡುಗಿಯಾಗಿದ್ದಾಗಲೇ ಮದುವೆಯಾಗಿ, ತುಂಬಾ ಮಂದಿ ಮಕ್ಕಳನ್ನು ಪಡೆಯುವುದು ಹೇಗಿರುತ್ತದೆ ? ಎಂದು ನಾನೊಮ್ಮೆ ಅಕ್ಕನನ್ನು ಕೇಳಿದ್ದೆ. ಅಕ್ಕಂಗೆ ನಗು ಉಕ್ಕುಕ್ಕಿ ಬಂದು, ತನ್ನ ಬಾಲ್ಯದತ್ತ ಹೊರಳಿದಳು.

ಅಕ್ಕ ಅಂದರೆ ನನ್ನಮ್ಮ್ಮನದ್ದು ಮೃದುವಾದ ಮಾತುಗಳು:‘ನಾನು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದೆ. ನಾವು ಸಾಮಾನ್ಯವಾಗಿ ಕುಂಟಾಬಿಲ್ಲೆ, ಕೋಲಾಟ ಆಡುತ್ತಿದ್ದೆವು. ತಿರುಪತಿಯಲ್ಲಿ ವರ್ಷದ ಬಹುತೇಕ ಸಮಯ ತುಂಬ ಸೆಕೆಯ ಮತ್ತು ತೇವಾಂಶದ ವಾತಾವರಣ. ಆದ್ದರಿಂದ ನನ್ನ ಸೊಂಟಕ್ಕೆ ಒಂದು ದಾರ ಬಿಗಿದು, ‘ರ‍್ಣ ಕಾಯಿರೆ’ ಅಂದರೆ ಎಲೆಯಂತಹ ಒಂದು ಬೆಳ್ಳಿಯ ಬಿಲ್ಲೆಯನ್ನು ನೇತುಹಾಕುತ್ತಿದ್ದರು. ಆಗೆಲ್ಲ ಈ ಬಿಲ್ಲೆಯೇ ಮಕ್ಕಳ ಮಾನ ಮುಚ್ಚುವ ಸಾಧನವಾಗಿತ್ತು.

ರಸ್ತೆಯಲ್ಲೇ ತುಸು ದೂರ ಕೆಳಭಾಗದಲ್ಲಿ ಕೆಲವು ಹುಡುಗರು ಮತ್ತೇನೋ ಬೀದಿ ಆಟಗಳನ್ನು ಆಡುತ್ತಿದ್ದರು. ಇತರ ಮಕ್ಕಳಿಗೆ ಹೋಲಿಸಿದರೆ ನಾನು ಬಹಳ ಬೆಳ್ಳಗಿನ ಹುಡುಗಿಯಾಗಿದ್ದೆ. ಆದ್ದರಿಂದ ಕೆಳರಸ್ತೆಯಲ್ಲಿ ಆಡುತ್ತಿದ್ದ ಆ ಹುಡುಗರು, ಏನಾದರೂ ನಗೆಚಟಾಕಿ ಹೇಳುವ ಮೂಲಕ ಅಥವಾ ಮತ್ತೇನಾದರೂ ನೆಪದೊಂದಿಗೆ ನನ್ನನ್ನು ಮಾತನಾಡಿಸಲು ಹವಣಿಸುತ್ತಿದ್ದರು.

ಚಿಕ್ಕ ಹುಡುಗಿಯಾಗಿದ್ದಾಗಲೇ ಮದುವೆಯಾಗಿ, ತುಂಬಾ ಮಂದಿ ಮಕ್ಕಳನ್ನು ಪಡೆಯುವುದು ಹೇಗಿರುತ್ತದೆ? ಎಂದು ನಾನೊಮ್ಮೆ ಅಕ್ಕನನ್ನು ಕೇಳಿದ್ದೆ. ಅಕ್ಕಂಗೆ ನಗು ಉಕ್ಕುಕ್ಕಿ ಬಂದು, ತನ್ನ ಬಾಲ್ಯದತ್ತ ಹೊರಳಿದಳು.

ಆ ಗುಂಪಿನಲ್ಲಿ ಒಬ್ಬ ಹುಡುಗ ನಮ್ಮ ಜಾತಿಗೆ ಸೇರಿದವನಾಗಿದ್ದ. ಅವನ ಅಪ್ಪ ಅಮ್ಮ ಕೂಡ ನಮ್ಮ ಕುಟುಂಬಕ್ಕೆ ಪರಿಚಿತರಾಗಿದ್ದರು. ನಮ್ಮಿಬ್ಬರ ನಡುವೆ ಮಾತಿಲ್ಲದೇ, ಪ್ರೇಮದ ಕೆಲವು ಸಂಕೇತಗಳ ವಿನಿಮಯವಾಗಿದ್ದುಂಟು. ನಾವು ದೊಡ್ಡವರಾದ ಮೇಲೆ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂಬ ಆಸೆ ಅವನಲ್ಲಿತ್ತು ಅನಿಸುತ್ತದೆ.

ಮದುವೆಯೆಂದರೆ, ಸಮರ್ಥ ಹುಡುಗ ಯಾರಾಗಬಹುದು ಎಂಬುದನ್ನು ಆರಂಭದಲ್ಲಿ ಸಂಬಂಧಿಕರು ಸ್ನೇಹಿತರು ಗುರುತಿಸುತ್ತಾರೆ. ಆಮೇಲೆ, ನಿನಗೆ ಗೊತ್ತಲ್ಲ.. ಜ್ಯೋತಿಷಿಗಳೇ ಮದುವೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು..’

‘ಮದ್ರಾಸಿನಲ್ಲಿ ತಮಿಳು ಬ್ರಾಹ್ಮಣರ ಸಮುದಾಯ ದೊಡ್ಡದಾಗಿದೆ. ಅಯ್ಯಂಗಾರ್ ಉಪಜಾತಿಯ ಬ್ರಾಹ್ಮಣರೇ ಅಲ್ಲಿ ಹೆಚ್ಚು. ನನ್ನ ತಂದೆಯವರು ಮದ್ರಾಸಿಗೆ ಪ್ರಯಾಣಿಸಿ, ತಮ್ಮ ಪುತ್ರಿಯರಿಗಾಗಿ ಸಮರ್ಥ ಹುಡುಗರ ಬಗ್ಗೆ ವಿಚಾರಿಸುತ್ತಿದ್ದರು. ಹೀಗೆ ಹುಡುಕಾಟದ ಸಂದರ್ಭದಲ್ಲಿ, ಮೈಸೂರು ನಗರದಲ್ಲಿ ಸರ್ಕಾರದ ಕೆಲಸ ಮಾಡುತ್ತಿರುವ ಸಿವಿಲ್ ಎಂಜಿನಿಯರ್ ಒಬ್ಬರ ಮಗನ ಬಗ್ಗೆ ಅವರಿಗೆ ತಿಳಿಯಿತು. ಹುಡುಗ ಬೆಂಗಳೂರಿನಲ್ಲಿ ಚೆನ್ನಾಗಿ ಓದುತ್ತಿದ್ದಾನೆ ಎಂಬ ವಿಚಾರವೂ ಗೊತ್ತಾಯಿತು.

ಈ ಹುಡುಗನನ್ನು ಭೇಟಿಯಾಗಲು ಅಪ್ಪ ಬೆಂಗಳೂರಿಗೆ ಹೋಗಿ ಮಾತನಾಡಿಸಿಕೊಂಡು ಬಂದರು. ಈ ಭೇಟಿಯಾದ ಬಳಿಕ ಅಪ್ಪನಿಗೆ ಭಾರೀ ಖುಷಿಯಾಗಿತ್ತು. ಹುಡುಗ ಬೆಂಗಳೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಓದುತ್ತಿದ್ದುದರಿಂದ, ಅಪ್ಪ ಆ ಮನೆಗೇ ತೆರಳಿದ್ದರು. ತಾವು ಭೇಟಿ ನೀಡಿದ್ದಾಗ, ಹುಡುಗ ಎರಡು ಮರಗಳ ನಡುವೆ ಕಟ್ಟಿದ ಹಗ್ಗದ ಮೇಲೆ ದೈಹಿಕಸಮತೋಲನ ಮಾಡಿಕೊಂಡು ನಡೆಯುತ್ತಿದ್ದುದನ್ನು ಕಂಡದ್ದಾಗಿಯೂ, ಇಂತಹುದೇ ಹುಡುಗನನ್ನು ತಾವು ಹುಡುಕುತ್ತಿದ್ದುದಾಗಿಯೂ ಅಪ್ಪ ಹೇಳಿದರು.’

ಈ ಮಾತು ಹೇಳುತ್ತಿದ್ದಂತೆಯೇ ಅಮ್ಮನಿಗೆ ನಗು ಉಕ್ಕಿ ಬಂತು. ಆದರೆ ಅವಳಪ್ಪ ಈ ಪ್ರಯತ್ನವನ್ನು ನಿಲ್ಲಿಸಲಿಲ್ಲವಲ್ಲ ಎಂದು ತನಗೆ ಖುಷಿಯಾಯಿತು ಎಂದಳು.

‘ಆಸಕ್ತಿದಾಯಕ ವ್ಯಕ್ತಿತ್ವದ ಆ ಹುಡುಗನ ಸ್ವಭಾವ ಅಪ್ಪನಿಗೆ ಬಹಳ ಇಷ್ಟವಾಯಿತು. ಓದುವುದರಲ್ಲಿಯೂ ಭಾರಿ ಚುರುಕು ಹುಡುಗ ಮಾತ್ರವಲ್ಲದೇ, ಅವನು ನಾಗರಿಕ ಸೇವಾ ಪರೀಕ್ಷೆಗೆ ಸ್ವಯಂ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿಯೂ ಅಪ್ಪನಿಗೆ ಗೊತ್ತಾಯಿತು. ಅಪ್ಪನ ಖುಷಿಗೆ ಇನ್ನೂ ಹೆಚ್ಚಿನ ಕಾರಣ ಬೇಕೇ ?

ಅಪ್ಪ ಬೆಂಗಳೂರಿನಿಂದ ಮರಳಿ ಬಂದ ಕೂಡಲೇ, ನನ್ನ ಭವಿಷ್ಯವನ್ನು ತಿಳಿದುಕೊಳ್ಳಲು ನಾವೆಲ್ಲ ನಮ್ಮ ಕೌಟುಂಬಿಕ ಜ್ಯೋತಿಷಿಯನ್ನು ಭೇಟಿಯಾದೆವು. ಜ್ಯೋತಿಷಿಯವರ ಬಳಿ ಜಾತಕ ಅದಾಗಲೇ ಇದ್ದಿತ್ತು. ತಂದೆಯವರು ತಂದಿದ್ದ ಹುಡುಗನ ಜಾತಕ ಎಷ್ಟು ‘ಗುಣ’ ಹೊಂದುತ್ತದೆ ಎಂದು ನೋಡುವುದಷ್ಟೇ ಬಾಕಿಯಿತ್ತು.

ಆ ಜ್ಯೋತಿಷಿ ಏನು ಹೇಳಿದರು ಎಂಬುದನ್ನು ಅಮ್ಮ ವಿವರಿಸಿದಳು: ಅವರು ಹಿತ್ತಾಳೆಯ ದೊಡ್ಡದೊಂದು ಹರಿವಾಣವನ್ನು ತಂದು ಅದಕ್ಕೆ ನೀರು ತುಂಬಿದರಂತೆ. ಅದರಲ್ಲಿ ಅಮ್ಮನಿಗೆ ಮುಖ ನೋಡುವಂತೆ ಸೂಚಿಸಿ, ಏನು ಕಾಣಿಸುತ್ತದೆ ಎಂದು ಪ್ರಶ್ನಿಸಿದರು. ಹರಿವಾಣದ ನೀರಿನಲ್ಲಿ ಕಣ್ಣಿರಿಸಿದ ಅಮ್ಮನಿಗೆ ಒಬ್ಬ ವ್ಯಕ್ತಿ ಕುದುರೆ ಸವಾರಿ ಮಾಡುತ್ತಿರುವುದು ಕಾಣಿಸಿತಂತೆ.

ಹೀಗೆ ಕತೆಯು ಸಾಗುತ್ತ, ಕೊನೆಗೆ ಈ ಯುವಕನೇ ಅಮ್ಮನ ಜೀವನಸಂಗಾತಿಯಾಗಿ ಆಯ್ಕೆಯಾದರು ಮತ್ತು ಮದುವೆಗಾಗಿ ತಿರುಪತಿಗೆ ಬಂದರು ಎಂಬಲ್ಲಿಗೆ ತಲುಪಿತು. ಬೆಂಗಳೂರಿನಿಂದ ತಿರುಪತಿಗೆ ರೈಲಿನಲ್ಲಿ ಬಂದ ಯುವಕ, ತಿರುಪತಿಗೆ ಹತ್ತಿರದ ರೈಲು ನಿಲ್ದಾಣದಲ್ಲಿ ಇಳಿದ ಕೂಡಲೇ, ಇನ್ನೊಂದು ಬೋಗಿಯನ್ನು ತೆರೆಯುವಂತೆ ಸೇವಕನೊಬ್ಬನಿಗೆ ತಿಳಿಸಿದ. ಅಲ್ಲಿದ್ದ ಕುದುರೆಯು ಚಂಗನೆ ಹೊರ ಜಿಗಿಯಿತು. ಆ ಕುದುರೆಯೇರಿದ ಹುಡುಗ ತಿರುಪತಿಯ ಪುಟ್ಟ ನಗರಿಯಲ್ಲಿರುವ ಮದುವೆ ಮನೆಗೆ ಸವಾರಿ ಹೊರಟ. ಹುಡುಗಿಯ ಅಪ್ಪನಿಗೆ ಅಚ್ಚರಿ, ವಿಸ್ಮಯ..ಸಂತೋಷ ಕೂಡ.

ಮೈಸೂರು ನಾಗರಿಕ ಸೇವೆಯ ಪ್ರೊಬೇಷನರಿ ಕಲಿಕೆಯಲಿದ್ದಾಗ, ಅಪ್ಪ ಕುದುರೆ ಸವಾರಿ ಕಲಿತಿದ್ದರು. ಕಚೇರಿ ಪ್ರಯಾಣಕ್ಕಾಗಿ ಕುದುರೆಯೊಂದನ್ನು ಖರೀದಿಸಿದ್ದರು. ಈ ಕತೆಯನ್ನು ಹೇಳುತ್ತ ಹೇಳುತ್ತ ಅಮ್ಮ ನಗುತ್ತಿದ್ದಳು. ‘ನೋಡು, ನಾನು ಅವರನ್ನು ಮೊದಲು ಹರಿವಾಣದಲ್ಲಿ ತುಂಬಿದ್ದ ನೀರಿನಲ್ಲಿ ನೋಡಿದ್ದೆ’. ಸಾಮಾನ್ಯವಾಗಿ ಆ ಕಾಲದಲ್ಲಿ ಸಾಂಪ್ರದಾಯಿಕ ಮದುವೆಗಳಲ್ಲಿ ಸಂಬಂಧಗಳು ಮಧುರವಾಗಿರುವುದು ಅಪರೂಪ. ಆದರೆ ನನ್ನ ಅಪ್ಪ ಅಮ್ಮನ ಸಂಬಂಧ ಬಹಳ ಮಧುರವಾಗಿ ಆರಂಭವಾಗಿ, ಅವರ ಬದುಕಿನುದ್ದಕ್ಕೂ ಮಧುರವಾಗಿಯೇ ಸಾಗಿತು.

ಮದುವೆಯ ಬಳಿಕ ಮದುಮಗಳು ಹುಡುಗನ ಅಮ್ಮನ ಮನೆಗೆ ಹೋಗುವ ಸಂಪ್ರದಾಯವೊಂದಿದೆ. ಆದರೆ ಹೀಗೆ ಹೋಗುವುದು ಅಲ್ಲಿ ಸಹಬಾಳ್ವೆಗಾಗಿ ಅಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿಯು ಋತುಮತಿಯಾಗುವ ಮುನ್ನವೇ ಮದುವೆಯಾಗಿರುತ್ತದೆ. ಹಾಗಿದ್ದಾಗ, ಅತ್ತೆ ಮನೆಗೆ ಭೇಟಿ ನೀಡಿ ಅಲ್ಲಿನ ಪದ್ಧತಿಗಳನ್ನು ಅರಿತು ಬರುವ ಉದ್ದೇಶದಿಂದ ಹೀಗೆ ಭೇಟಿ ನೀಡುವ ಸಂಪ್ರದಾಯ ಇದ್ದಿರಬಹುದು. ಅಮ್ಮನೂ ಮೈನೆರೆಯುವ ಮುನ್ನವೇ ಮದುವೆಯಾಗಿದ್ದಳು. ಮದುವೆಯು ಪರಿಪೂರ್ಣವಾಗಬೇಕಾದರೆ ಹುಡುಗಿಯು ಮೈನೆರೆಯುವವರೆಗೆ ಕಾದು, ಮೊದಲ ಮುಟ್ಟು ಕಾಣಿಸಿಕೊಂಡ ಬಳಿಕ ‘ಪ್ರಸ್ತ’ ನಡೆಸಬೇಕು. ಆ ಕಾಲದಲ್ಲಿ ಬಳಸುತ್ತಿದ್ದ ಪರಿಪೂರ್ಣತೆ ಎಂಬ ಪದ ಬಹಳ ಕಟುವಾದುದು ಎನಿಸುತ್ತದೆ. ಆದರೆ ಮದುವೆ ಪರಿಪೂರ್ಣಗೊಳಿಸುವ ಸಮಾರಂಭ ನಡೆಯುವವರೆಗೆ ಹುಡುಗ ಹುಡುಗಿ ಪರಸ್ಪರ ಸ್ಪರ್ಶಿಸುವುದೂ ನಿಷಿದ್ಧವಾಗಿತ್ತು.

ನನ್ನ ಅಮ್ಮ ಕಣ್ಣಲ್ಲಿ ಹೊಳಪು ಸೂಸುತ್ತ, ತಾನು ಗಂಡನ ಮನೆಗೆ ಹೋದ ಮತ್ತು ಅಲ್ಲಿ ನಡೆದ ಘಟನೆಗಳನ್ನು ವಿವರಿಸಿದಳು. ‘ಒಂದು ಲೋಟ ಹಾಲು ತೆಗೆದುಕೊಂಡು ಗಂಡನ ಕೊಠಡಿಗೆ ಹೋಗುವಂತೆ ಆಕೆಗೆ ಗಂಡನ ತಾಯಿ ಅಂದರೆ ಅತ್ತೆಯವರು ತಿಳಿಸುತ್ತಿದ್ದರು. ‘ಅವರು’ ಮಹಡಿ ಮೇಲಿನ ಕೊಠಡಿಯಲ್ಲಿ ನಾಗರಿಕ ಸೇವೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತ ಕುಳಿತಿರುತ್ತಿದ್ದರು.’

(ಕೃಪೆ : ಕೆಂಡಸಂಪಿಗೆ)

ಹಿತ್ತಾಳೆ ಬಣ್ಣದ ಪುಸ್ತಕ

---

‘ಹಿತ್ತಾಳೆ ಬಣ್ಣದ ಪುಸ್ತಕ’ ವಿಮರ್ಶೆ ವಾರ್ತಾಭಾರತಿ

Related Books