ಜಗತ್ಪ್ರಸಿದ್ಧ ಸಣ್ಣ ಕತೆಗಳು

Author : ಬಿ. ಜನಾರ್ದನ ಭಟ್

Pages 712

₹ 640.00




Year of Publication: 2018
Published by: ಶ್ರೀರಾಮ ಪ್ರಕಾಶನ
Address: ಮಂಡ್ಯ
Phone: 9448930173

Synopsys

ಲೇಖಕ ಡಾ. ಬಿ. ಜನಾರ್ದನ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಜಗತ್ಪ್ರಸಿದ್ಧ ಸಣ್ಣ ಕತೆಗಳು. ಈ ಕೃತಿಯಲ್ಲಿವಿವಿಧ ದೇಶಗಳ 63 ಕತೆಗಳಿವೆ. ಓ ಹೆನ್ರಿ, , ಲಿಯೋ ಟಾಲ್ ಸ್ಟಾಯ್, ಕಾಫ್ಕಾ, ಚೆಖಾವ್, ಐಸಾಕ್ ಸಿಂಗರ್, ಸಾಮರ್ಸೆಟ್ ಮಾಮ್, ಮೊಪಾಸಾ, ಅಗಾಥಾ ಕ್ರಿಸ್ಟೀ,ಚಿನುಅ, ಅಚೆಬೆ, ಎಚ್.ಜಿ. ವೆಲ್ಸ್, ಹೀಗೆ ವಿಶ್ವದ ಮೂಲೆ ಮೂಲೆಯ ಕಥೆಗಾರರ ಹೃದಯಸ್ಪರ್ಶಿ ಕತೆಗಳನ್ನು ಆಯ್ದು ಅನುವಾದಿಸಿದ್ದಾರೆ. ಸಾಹಿತಿ ಜಿ.ಎನ್. ಉಪಾಧ್ಯ ಅವರು ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ‘ ಈ ಕೃತಿಯಲ್ಲಿಇರುವ ಕತೆಗಳಲ್ಲಿ ಕ್ಲಾಸಿಕಲ್ ಅಥವಾ ಹಳೆಯ ಶೈಲಿಯ ಕಥೆಗಳು, ಎಂದರೆ ಜೀವನಾನುಭವದ ಸರಳ ರೇಖಾತ್ಮಕ ಕತೆಗಳು, ಆಶ್ಚರ್ಯದ ಅಂತ್ಯ ಕೊಡುವ ಕತೆಗಳು, ಬದುಕಿನ ವಿಶಿಷ್ಟ ಸತ್ಯಗಳನ್ನು ಮತ್ತು ಅನುಭವಗಳನ್ನು ಹೊಸಬೆಳಕಿನಲ್ಲಿ ನೋಡುವ ಕತೆಗಳು, ಹಳೆಯ ಮತ್ತು ಹೊಸ ಮಾದರಿಯ ಫಾಂಟಸಿ ಕತೆಗಳು, ಮ್ಯಾಜಿಕ್ರಿಯಲಿಸಮ್ ಕತೆಗಳು, ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯಿಸುವ ಕತೆಗಳು ಹೀಗೆ ಸಾಕಷ್ಟು ವೈವಿಧ್ಯ ಮಯವಾದ ಕತೆಗಳು ಇವೆ. ಜಗತ್ತಿನ ಬೇರೆ ಬೇರೆ ಸಂಸ್ಕೃತಿ, ಪರಂಪರೆಗಳನ್ನು ಪರಿಚಯಿಸುವ ಈ ಕತೆಗಳನ್ನು ಓದುವುದರಲ್ಲಿಯೇ ಒಂದು ಬಗೆಯ ಸುಖವಿದೆ. ನಿಜವಾದ ಅರ್ಥದಲ್ಲಿ ಇದೊಂದು ವಿಶ್ವಕಥಾಕೋಶ. ಸೊಗಸಾದ ಅನುವಾದದಿಂದ ಎಲ್ಲ ಕತೆಗಳೂ ವಾಚನೀಯವಾಗಿವೆ. ಕತೆಗಾರರ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ, ಇವು ನಮ್ಮ ನಾಡಿನ ಕತೆಗಳೇ ಎಂಬಂತೆ ಕನ್ನಡಕ್ಕೆ ತಂದ ಡಾ. ಜನಾರ್ಧನ ಭಟ್ ಅವರ ಶ್ರಮ, ಸಾಧನೆ ಅಭಿನಂದನೀಯ. ಕನ್ನಡಕ್ಕೆ ಇದೊಂದು ಮೌಲಿಕ ಕೊಡುಗೆ’ ಎಂದು ಪ್ರಶಂಸಿಸಿದ್ದಾರೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Reviews

 ರೋಚಕ-ವಿಶ್ವ ಕಥಾಕೋಶ ‘ಜಗತ್ಪ್ರಸಿದ್ಧ ಸಣ್ಣ ಕತೆಗಳು’

ಕತೆಗಳನ್ನು ಕೇಳುವುದು, ಕತೆಗಳನ್ನು ಹೇಳುವುದು ಮನುಷ್ಯನ ಸಹಜಸ್ವಭಾವ. ಕತೆಗಳು ಅಬಾಲವೃದ್ಧರಾದಿಯಾಗಿಎಲ್ಲರಿಗೂ ಪ್ರಿಯವಾದವೇ. `ನಮ್ಮ ಪ್ರತಿಯೊಬ್ಬರಲ್ಲೂ ಒಂದುಕತೆಯಿದೆ. ಕತೆ ಮನುಷ್ಯನಿಗೆ ಮನುಷ್ಯನಕತೆ ಹೇಳುತ್ತದೆ. ಅನುಭವವಿದ್ದಲ್ಲಿ ಕತೆ ಇರಲೇಬೇಕು' ಎಂಬುದಾಗಿಕನ್ನಡದ ಹಿರಿಯಕತೆಗಾರಯಶವಂತಚಿತ್ತಾಲ ಅವರುಅಭಿಪ್ರಾಯ ಪಟ್ಟಿದ್ದಾರೆ. ಲಾಗಾಯ್ತಿನಿಂದಲೂಕಥಾ ಪರಂಪರೆಜಗತ್ತಿನಎಲ್ಲ ಭಾಷೆಗಳಲ್ಲೂ ಅಸ್ತಿತ್ವದಲ್ಲಿರುವುದನ್ನು ಕಾಣಬಹುದು. ಜಾಗತಿಕ ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತಜನ ಪ್ರಿಯವಾದ ಮಾಧ್ಯಮ ಸಣ್ಣಕತೆ. ಕತೆ ಕೇಳದ ಮನುಷ್ಯನಿಲ್ಲ. ಕತೆಗಳಿಲ್ಲದ ಭಾಷೆಗಳಿಲ್ಲ. ಹಿಂದಿನದು ಜನಪದ, ಪೌರಾಣಿಕ ಐತಿಹಾಸಿಕ ಕಥೆಗಳಾದರೆ ಇವತ್ತಿನದು ಹೆಚ್ಚಾಗಿ ಸಾಮಾಜಿಕವಾದ ಕಥಾಲೋಕ. "ಸಣ್ಣಕತೆ ಎಂದರೆ ವಸ್ತು, ಪಾತ್ರ, ಘಟನೆ ಮತ್ತು ಸನ್ನಿವೇಶ ಈ ನಾಲ್ಕು ಅಂಶಗಳು ಆಧುನಿಕ ಪ್ರಜ್ಞೆಯಿಂದ ಉದ್ದೇಶಿತ ಪರಿಣಾಮಕ್ಕಾಗಿ ದುಡಿಯುವ ಗದ್ಯ" ಎಂಬುದಾಗಿ ಹಿರಿಯ ಸಾಹಿತಿಡಾ. ಜನಾರ್ದನ ಭಟ್ಅವರು ಹೇಳಿರುವ ಮಾತು ಉಲ್ಲೇಖನೀಯವಾಗಿದೆ.
 `ಜಗತ್ ಪ್ರಸಿದ್ಧ ಸಣ್ಣಕತೆಗಳು ಇದು ಡಾ. ಬಿ. ಜನಾರ್ದನ ಭಟ್ ಅವರು ಅನುವಾದಿಸಿ ಕೊಟ್ಟ ಅಮೂಲ ್ಯಕೃತಿ. ಇದರಲ್ಲಿ ಜಗದಗಲದ ವೈವಿಧ್ಯಮಯವಾದ ಅರವತ್ತಮೂರು ಸ್ವಾರಸ್ಯಪೂರ್ಣ ಕತೆಗಳಿವೆ. ವಿಭಿನ್ನದೇಶ ಭಾಷೆ ಪರಂಪರೆಗಳನ್ನು ಒಡಲೊಳಗಿಟ್ಟುಕೊಂಡು ಸೃಷ್ಟಿಯಾದ ಜಗತ್ತಿನ ಅತ್ಯುತ್ತಮ ಸಣ್ಣಕತೆಗಳನ್ನು ಜನಾರ್ದನ ಭಟ್ ಅವರು ಅನುವಾದಿಸಿ ಈ ಸಂಕಲನದಲ್ಲಿ ಕಲೆಹಾಕಿ ಕನ್ನಡಿಗರಿಗೆ ಉಣಬಡಿಸಿದ್ದಾರೆ. ಅನ್ಯದೇಶಗಳ ಅನನ್ಯ ಕತೆಗಳು ಈ ಮೂಲಕ ಕನ್ನಡ ವಾಙ್ಮಯಕ್ಕೆ ಸರ್ಪಡೆಗೊಂಡಿರುವುದು ಗಮನೀಯ ಸಂಗತಿ.
 ಜಗತ್ತಿನ ಶ್ರೇಷ್ಠ ಕತೆಗಾರರಾದ ಲಿಯೋಟಾಲ್ಸ್ಟಾಯ್, ಕಾಷ್ಕಾ, ಚೆಖಾವ್, ಸಾಮರ್ಸೆಟ್ ಮಾಮ್, ಮೊಪಾಸಾ, ಅಗಾಥಾ ಕ್ರಿಸ್ಟೀ, ಚಾರ್ಲ್ಸ್ಡಿಕನ್ಸ್, ಓ ಹೆನ್ರಿ, ಚಿನುಅ, ಅಚೆಬೆ, ಎಚ್.ಜಿ. ವೆಲ್ಸ್, ಐಸಾಕ್ ಸಿಂಗರ್ ಮೊದಲಾದವರ ಮನೋಜ್ಞವೂ ಮನೋರಮಣೀಯವೂ ಆದ ಕತೆಗಳು ಈ ಸಂಕಲನದಲ್ಲಿರುವುದು ಈ ಕೃತಿಯ ಹೆಚ್ಚುಗಾರಿಕೆ.
 ವಿಶ್ವದ ಮೂಲೆ ಮೂಲೆಯ ಹೃದಯಸ್ಪರ್ಶಿ ಕತೆಗಳನ್ನು ಆಯ್ದು ಅನುವಾದಿಸಿ ಕೊಟ್ಟಿರುವಡಾ. ಜನಾರ್ದನ ಭಟ್ ಅವರು ಈ ಕೃತಿಯ ಮುಮ್ಮಾತಿನಲ್ಲಿ "ಇದು ಸಮಗ್ರ ಅನುವಾದ ಕಥಾಸಂಪುಟ ಎನ್ನುವಂತಿಲ್ಲ, ಆದರೂ ಜಗತ್ಪçಸಿದ್ಧ ಸಣ್ಣಕತೆಗಳು ಎಂದು ಹೇಳಬಹುದಾದ ಸಂಪುಟ. ಈ ಕೃತಿಯಲ್ಲಿಇರುವ ಕತೆಗಳಲ್ಲಿ ಕ್ಲಾಸಿಕಲ್ ಅಥವಾ ಹಳೆಯ ಶೈಲಿಯ ಕಥೆಗಳು, ಎಂದರೆಜೀವನಾನುಭವದ ಸರಳ ರೇಖಾತ್ಮಕ ಕತೆಗಳು, ಆಶ್ಚರ್ಯದ ಅಂತ್ಯ ಕೊಡುವ ಕತೆಗಳು, ಬದುಕಿನ ವಿಶಿಷ್ಟ ಸತ್ಯಗಳನ್ನು ಮತ್ತು ಅನುಭವಗಳನ್ನು ಹೊಸಬೆಳಕಿನಲ್ಲಿ ನೋಡುವ ಕತೆಗಳು, ಹಳೆಯ ಮತ್ತು ಹೊಸ ಮಾದರಿಯ ಫಾಂಟಸಿ ಕತೆಗಳು, ಮ್ಯಾಜಿಕ್ರಿಯಲಿಸಮ್ ಕತೆಗಳು, ಜಗತ್ತಿನ ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯಿಸುವ ಕತೆಗಳು ಹೀಗೆ ಸಾಕಷ್ಟು ವೈವಿಧ್ಯ ಮಯವಾದ ಕತೆಗಳು ಇವೆ" ಎಂಬುದಾಗಿ ಸರಿಯಾಗಿಯೇ ಗುರುತಿಸಿದ್ದಾರೆ. ಕಾಷ್ಕಾ ಮಾರ್ಕ್ವೆಸ್, ಸೊರೆಂಟಿನೊ ಮುಂತಾದ ಮಾಂತ್ರಿಕ ವಾಸ್ತವ ಶೈಲಿಯ ಲೇಖಕರ ಕಥೆಗಳು ಓ ಹೆನ್ರಿ, ಮೊಪಾಸಾ, ಚೆಖಾವ್, ಸಾಕಿ ಮುಂತಾದ ಹಳೆಯ ಪ್ರಸಿದ್ಧ ಕತೆಗಾರರ ಕತೆಗಳು, ಕನ್ನಡಕ್ಕೆ ಅಷ್ಟಾಗಿ ಪರಿಚಿತರಲ್ಲದಎಲ್. ತಯ್ಯಬ್ ಸಾಲಿ ಮೊದಲಾದ ಪ್ರತಿಭೆಗಳು ರಚಿಸಿದ ಅಪೂರ್ವ ಕತೆಗಳು ಈ ಸಂಕಲದಲ್ಲಿರುವುದು ವಿಶೇಷ.
 ರಿಪ್ವ್ಯಾನ್ ವಿಂಕಲ್ ಈ ಕೃತಿಯ ಮೊದಲ ಕತೆ. ಇದನ್ನು ಬರೆದವನುಅಮೇರಿಕಾದಆದ್ಯ ಸಾಹಿತಿ ವಾಪಿಂಗ್ಟನ್ ಐರ್ವಿಂಗ್. ಈ ನೀಳ್ಗತೆ ಪ್ರಕಟವಾದುದು 1819ರಲ್ಲಿ. ವೃತ್ತಿಯಲ್ಲಿ ವಕೀಲನಾದಈತ ಬರೆದ ಪ್ರಸ್ತುತಕತೆ ಸರಳ ಸುಂದರ ವಾಚನೀಯವಾಗಿದೆ. ಜಗತ್ತಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬನಾದರಷ್ಯಾದ ಲಿಯೋಟಾಲ್ಸ್ಟಾಯ್ ಬರೆದ ಮೂರು ಒಳ್ಳೆಯ ಕತೆಗಳನ್ನು ಹೆಕ್ಕಿ ಅನುವಾದಿಸಿ ಕೊಟ್ಟಿರುವುದರಿಂದ ಈ ಕೃತಿಯ ಶೋಭೆಯನ್ನು ಹೆಚ್ಚಿಸಿದೆ. "ಟಾಲ್ಸ್ಟಾಯ್ ಬಹಳ ದೊಡ್ಡ ಸಾಹಿತಿ. ಅವನದು ಋಷಿ ಚೇತನ. ವ್ಯಾಸರಿಗಿದ್ದಂತಹ ವಿಶಾಲ ದೃಷ್ಟಿಯನ್ನು ಸ್ವಲ್ಪಮಟ್ಟಿಗೆಟಾಲ್ಸ್ಟಾಯ್ನಲ್ಲಿಕಾಣಬಹುದು. ‘ದೇವರು ಸತ್ಯವನ್ನು ನೋಡುತ್ತಾನೆ, ಆದರೆ ನಿಧಾನಿಸುತ್ತಾನೆ’ ಎಂಬ ಕತೆ ಭಾರತೀಯರ ಕರ್ಮ ಸಿದ್ಧಾಂತವನ್ನು ಹೋಲುತ್ತದೆ ಎಂಬ ತೌಲನಿಕ ಚಿಂತನೆ ಕತೆಯ ಕೊನೆಯಲ್ಲಿರುವುದು ಡಾ. ಭಟ್ ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಇಂಗ್ಲೆAಡ್ನ ಪ್ರಸಿದ್ಧ ಸಾಹಿತಿ ಆಸ್ಕರ ವೈಲ್ಡ್ ನಾಟಕಕಾರನಾಗಿ ಮಿಂಚಿದವನು ಅವನು ಬರೆದ ‘ಕೋಗಿಲೆ ಮತ್ತು ಗುಲಾಬಿ’ ಈ ಸಂಕಲನದ ಉತ್ತಮ ಕತೆಗಳಲ್ಲಿ ಒಂದು. ಬಿಗಿ ಬಂಧ, ಕಲಾತ್ಮಕತೆ ಇಲ್ಲಿ ಎದ್ದು ಕಾಣುತ್ತದೆ.
 ಜರ್ಮನಿಯ ಹೆಸರಾಂತಕಥೆಗಾರ ಗಾಟ್ ಫ್ರೀಡ್ ಕೆಲರ್ನ ಎರಡು ಒಳ್ಳೆಯ ಕತೆಗಳು ಬಲು ಸೋಗಸಾಗಿದ್ದು ಜಾನಪದ, ಐತಿಹ್ಯಗಳನ್ನು ಬಳಸಿಕೊಂಡು ಕತೆಯನ್ನು ಪೋಣಿಸಿದ ಪರಿ ಮನಮೋಹಕವಾಗಿದೆ. ಡೆನ್ಮಾರ್ಕ್ದೇಶದ ಹ್ಯಾನ್ಸ್ ಅ್ಯಂಡರ್ಸನ್ ಬರೆದಕತೆ ‘ಭೂತ ಮತ್ತು ವ್ಯಾಪಾರಿ’ ಬಹಳ ರೋಚಕವಾಗಿದ್ದು ಮಕ್ಕಳಿಗಾಗಿ ಬರೆದಂತಿದೆ. ಸ್ಟಾಕ್ಟನ್ನ ‘ಹೆಣ್ಣೋ ಹುಲಿಯೋ’  ಕಥೆಯೂ ಸಹ ಮಕ್ಕಳ ಮನೋವಿಕಾಸಕ್ಕೆ ಪ್ರೇರಣೆ ನೀಡಬಲ್ಲದು. ಸಾಹಿತ್ಯದ ನೊಬೆಲ್ ಬಹುಮಾನ ವಿಜೇತ ಬಟ್ರಾಂಡ್ ರಸೆಲ್ ಜಗತ್ಪçಸಿದ್ಧ ಚಿಂತಕ, ತತ್ವಜ್ಞಾನಿ. ರಸೆಲ್ತನ್ನ ಇಳಿವಯಸ್ಸಿನಲ್ಲಿ ಬರೆದಕತೆಯೊಂದನ್ನುಇಲ್ಲಿ' `ವಾಗ್ದೇವಿಯ ವೀರಭಟರು' ಎಂಬುದಾಗಿ ಅನುವಾದಿಸಿ ಕೊಡಲಾಗಿದೆ. ಆಂಗ್ಲ ಸಾಹಿತಿಕಾಸ್ಮೋ ಹ್ಯಾಮಿಲ್ಟನ್ ಬರೆದ ಕತೆಯನ್ನು ಚಿಕ್ಕ ಚಿನ್ನದುಂಗುರ ಎಂದು ಅನುವಾದಿಸಿಕೊಡಲಾಗಿದ್ದು ಇದೊಂದುಕುತೂಹಲಕರವಾದ ಪ್ರೇಮಕತೆಯಾಗಿದ್ದುಓದುಗನನ್ನು ಬಹುವಾಗಿ ಕಾಡಬಲ್ಲ ತಾಕತ್ತನ್ನು ಹೊಂದಿದೆ. ಜಾಗತಿಕಕಥಾ ಸಾಹಿತ್ಯದಲ್ಲಿ ಮಿಂಚಿದಘಟಾನುಘಟಿ ಸಾಹಿತಿಗಳ, ಲೇಖಕರ ವೈವಿಧ್ಯಮಯವಾದ ಕಥಾಲೋಕವನ್ನು ಈ ಸಂಪುಟದ ಮೂಲಕ ಕನ್ನಡ ಓದುಗರಿಗೆ ದಕ್ಕುವಂತೆ ಮಾಡಿದ ಶ್ರೇಯಸ್ಸು ಡಾ. ಜನಾರ್ದನ ಭಟ್ ಅವರಿಗೆ ಸಲ್ಲುತ್ತದೆ. ಇಲ್ಲಿ ಪುರಾಣ, ಐತಿಹ್ಯ, ಕಾಲ್ಪನಿಕ, ಇತಿಹಾಸ, ಜಾನಪದಧಾರ್ಮಿಕ, ಸಾಮಾಜಿಕ, ವಾಸ್ತವ ಹೀಗೆ ಬೆರಗುಗೊಳಿಸುವ ಸಾರ್ವಕಾಲಿಕ ಶ್ರೇಷ್ಠ ಕತೆಗಳ ದೊಡ್ಡ ಪಟ್ಟಿಯನ್ನೇಕೊಡಬಹುದು. ಪ್ರತಿಯೊಂದುಕತೆಯ ಕೊನೆಗೆ ಆ ಕತೆಯ ಲೇಖಕನ ಜೀವನ ವೃತ್ತಾಂತ, ಕತೆಯ ಅನನ್ಯತೆ ವಿಮರ್ಶಾತ್ಮಕವಾಗಿ ನೀಡಿರುವುದು ಈ ಕೃತಿಯ ಧನಾತ್ಮಕ ಅಂಶ. 
 ಡಾ. ಜನಾರ್ಧನ ಭಟ್ಅವರು ಕಳೆದ ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯ ವಾಹಿನಿಯನ್ನು ನಾನಾ ನೆಲೆಗಳಲ್ಲಿ ಸಮೃದ್ಧಗೊಳಿಸಲು ಶ್ರಮಿಸುತ್ತಾ ಬಂದ ಪ್ರತಿಭಾಶಾಲಿ ಲೇಖಕ, ಸಾಹಿತಿ. ವೃತ್ತಿಯಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅವರು ಗೈದದ್ದು ಮಾತ ್ರಕನ್ನಡದ ಪರಿಚಾರಿಕೆ. ಸ್ವತಃ ಒಳ್ಳೆಯ ವಿದ್ವಾಂಸರೂ ವಿಮರ್ಶಕರೂ ಕತೆಗಾರರೂ ಅನುವಾದಕರೂ ಆಗಿರುವ ಡಾ. ಭಟ್ ಅವರು ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಸೈ ಎನಿಸಿಕೊಂಡಿದ್ದಾರೆ. ವಿಶ್ವದ ಅತ್ಯುತ್ತಮ ಕತೆ ಎಂದು ಪರಿಗಣಿಸಿರುವ ನೂರಾರು ಕತೆಗಳನ್ನು ಅವರು ಅನುವಾದಿಸಿದ್ದು ಅವು ನಾಡಿನ ಬೇರೆ ಬೇರೆ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವುಗಳಿಂದ ಆಯ್ದ ಪ್ರಸಿದ್ಧ ಮತ್ತುಅಪರೂಪದ ಕತೆಗಳ ಸಂಪುಟ ಪ್ರಸ್ತುತಗ್ರಂಥ. ಜಗತ್ತಿನ ಬೇರೆ ಬೇರೆ ಸಂಸ್ಕೃತಿ, ಪರಂಪರೆಗಳನ್ನು ಪರಿಚಯಿಸುವ ಈ ಕತೆಗಳನ್ನು ಓದುವುದರಲ್ಲಿಯೇ ಒಂದು ಬಗೆಯ ಸುಖವಿದೆ. ನಿಜವಾದ ಅರ್ಥದಲ್ಲಿ ಇದೊಂದು ವಿಶ್ವಕಥಾಕೋಶ. ಸೊಗಸಾದ ಅನುವಾದದಿಂದ ಎಲ್ಲ ಕತೆಗಳೂ ವಾಚನೀಯವಾಗಿವೆ. ಕತೆಗಾರರ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ, ಇವು ನಮ್ಮ ನಾಡಿನ ಕತೆಗಳೇ ಎಂಬಂತೆ ಕನ್ನಡಕ್ಕೆ ತಂದ ಡಾ. ಜನಾರ್ಧನ ಭಟ್ ಅವರ ಶ್ರಮ, ಸಾಧನೆ ಅಭಿನಂದನೀಯ. ಕನ್ನಡಕ್ಕೆ ಇದೊಂದು ಮೌಲಿಕ ಕೊಡುಗೆ. ಈ ಕೃತಿಯನ್ನು ಅಷ್ಟೇ ಸುಂದರವಾಗಿ ಪ್ರಕಟಿಸಿದ ಶ್ರೀರಾಮ ಪ್ರಕಾಶನ, ಮಂಡ್ಯ ಇವರ ಶ್ರಮವೂ ಸಾರ್ಥಕವಾಗಿದೆ. 

-ಡಾ. ಜಿ.ಎನ್. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿ.ವಿ, ವಿದ್ಯಾನಗರಿ, ಮುಂಬೈ- 400098

Related Books