ಕಾಲಿದಾಸ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 208

₹ 100.00




Year of Publication: 2007
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು -560040
Phone: 9448804905

Synopsys

ಆಧುನಿಕ ಕನ್ನಡ ಸಾಹಿತ್ಯದ ನಿರ್ಮಾಪಕರೂ, ನಾಟಕಕಾರರೂ ಆದ ಶ್ರೀರಂಗರು ರಚಿಸಿದ ಕೃತಿ ’ಕಾಲಿದಾಸ’.

ಸಂಸ್ಕೃತ ಕವಿ ಕಾಲಿದಾಸನ ಕೃತಿಗಳ , ಪ್ರತಿಭೆಯ ಬಗ್ಗೆ , ಕಾಲಿದಾಸನ ಕಾಲ ಮತ್ತು ವ್ಯಕ್ತಿತ್ವ, ಕಾಲಿದಾಸನ ನಾಯಕರು, ಕಾಲಿದಾಸ ಮತ್ತು ಪ್ರಣಯ ವಿಚಾರ, ಕಾಲಿದಾಸನ ಕಥಾ ಬೆಳವಣಿಗೆಯ ತಂತ್ರ, ಸಮಕಾಲೀನ ಜೀವನದ ಶೈಲಿ, ಕಾಲಿದಾಸ ರಚಿಸಿದ ಮೇಘದೂತ, ಕುಮಾರಸಂಭವ, ರಘುವಂಶದ ವಿಶ್ವಕವಿಯಾಗಿದ್ದ ಕಾಲ ಮತ್ತು ವಿವರಣೆ, ಕಾಲಿದಾಸ ಒಂದು ವ್ಯಕ್ತಿಚಿತ್ರ, ಕಾಲಿದಾಸನ ಕಾವ್ಯಗಳಲ್ಲಿನ ಪಾತ್ರಸೃಷ್ಟಿ, ಇವುಗಳ ಬಗ್ಗೆ ಕುರಿತು ಚರ್ಚಿಸುವ, ವಿಶ್ವೇಷಣೆ ನೀಡುವ ಕೃತಿಯಾಗಿದೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Awards & Recognitions

Reviews

ಕಾಲಿದಾಸ

ಇಂಗ್ಲಿಷರಿಗೆ ಷೇಕ್ಸ್‌ಪಿಯರ್, ಭಾರತೀಯರಿಗೆ ಕಾಲಿದಾಸ- ಜನಪ್ರಿಯತೆಯನ್ನು ಶಾಶ್ವತವಾಗಿ ಗಳಿಸಿಕೊಂಡಿರುವ ಮಹಾಕವಿಗಳು. ಸಾಹಿತ್ಯ ವಿಮರ್ಶಕರಾದ ಸಾವಿರಾರು ಜನ ಷೇಕ್ಸ್‌ಪಿಯರನ ಕಾವ್ಯರಹಸ್ಯದ ವಿವರಣೆಗೆ ಕೈ ಹಾಕಿದ್ದಾರೆ; ಆದರೆ ಕಾಲಿದಾಸನ ವಿಮರ್ಶೆಯನ್ನು ಸಾಹಿತ್ಯದೃಷ್ಟಿಗಿಂತ ಹೆಚ್ಚಾಗಿ ವಿದ್ವಾಂಸರ ಸಂಶೋಧನ ದೃಷ್ಟಿಯಿಂದ ಬೆಳೆಸಿರುವುದನ್ನೇ ಈ ಶತಮಾನದಲ್ಲಿ ನೋಡುತ್ತೇವೆ. ಹೀಗೆ ಅನೇಕ ವಿದ್ವತ್ಪೂರ್ಣ ಗ್ರಂಥಗಳು ಕಾಲಿದಾಸನ ಕಾಲ, ದೇಶ, ಗ್ರಂಥಾನುಕ್ರಮ, ಶಾಸ್ತ್ರವ್ಯುತ್ಪತ್ತಿ, ಸಾಮಾಜಿಕ ನೆಲೆ-ಬೆಲೆಗಳು-ಮುಂತಾದ ಚರ್ಚೆಗಳಿಗೆ ಮೀಸಲಾಗಿದ್ದರೂ ಅವನ ನಾಟಕಗಳ ಹಾಗೂ ಕಾವ್ಯಗಳ ಸಾರ್ವಕಾಲಿಕ ಸಾಹಿತ್ಯ ಮೌಲ್ಯಗಳ ವಿವೇಚನೆಗೆ

ಮಾತ್ರ ಹೊರಟ ಗ್ರಂಥಗಳ ಸಂಖ್ಯೆ ಇಂಗ್ಲಿಷ್ ಮುಂತಾದ ಆಧುನಿಕ ಪಾಶ್ಚಾತ್ಯ ಭಾಷೆಗಳಲ್ಲಿ ಹಾಗೂ ಹಿಂದಿ, ಮರಾಠಿ ಮುಂತಾದ ಆಧುನಿಕ ಭಾರತೀಯ ಭಾಷೆಗಳಲ್ಲಿ ಸಹ ಸಣ್ಣದೇ. ಈ ದೃಷ್ಟಿಯಿಂದ ಕನ್ನಡದಲ್ಲಿ ಬಂದಿರುವ ನಾಲ್ಕಾರು ಗ್ರಂಥಗಳಿವೆಯಾದರೂ-ಎಂ. ಲಕ್ಷ್ಮೀನರಸಿಂಹಯ್ಯ, ಸಿ. ಕೆ. ವೆಂಕಟರಾಮಯ್ಯ ಮುಂತಾದವರವು-ಅವು ವಿದ್ವತ್ತಿನ ಹೊರೆಯಿಂದ ಇಲ್ಲವೆ ಅಳತೆ ಮೀರಿದ ಹೊಗಳಿಕೆಯ ಹೊರೆಯಿಂದ-ಶುದ್ದ ಸಾಹಿತ್ಯ ವಿಮರ್ಶೆ ಗುಣಗಳಿಗೆ ಎರವಾಗಿರುವುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಆದ್ಯ ರಂಗಾಚಾರ್ಯರ ’ಕಾಲಿದಾಸ' ಅದ್ವೀತಿಯವಾದ ಒಂದು ಉತ್ತಮ ಸಾಹಿತ್ಯ ವಿಮರ್ಶೆಯ ನಿದರ್ಶನವಾಗಿ ಎದ್ದು ಕಾಣುತ್ತದೆ.

ಗ್ರಂಥದುದ್ದಕ್ಕೂ ಲೇಖಕರು ಕಾಲಿದಾಸನ ಗ್ರಂಥಗಳ ಆಳವಾದ ಪುನಃ ಪುನರನುಸಾಧನದ ಫಲವಾಗಿ, ಹಾಗೂ ಪ್ರಭುದ್ದ ಬೌದ್ಧಿಕ ವಿಶ್ಲೇಷಣೆ- ಚಿಂತನೆಗಳ ಪರಿಣಾಮವಾಗಿ ಮೂಡಿಬಂದ ಸ್ವಂತ ವಿವೇಚನೆಗೆ ಮಾತ್ರ ಹಿತ-ಮಿತವಾದ ಸ್ಥಾನವಿರುವುದು ಇಲ್ಲಿಯ ವಿಶೇಷ. ಇಲ್ಲಿ ಸಂಶೋಧನಾ ಪ್ರಬಂಧಗಳ ಪುಟಗಟ್ಟಲೆಯು ಆಕರ ಗ್ರಂಥ ಸೂಚಿಗಾಗಲಿ, ಮೂಗಿಗಿಂತ ಮೂಗುತಿ ಭಾರವೆನ್ನುವಂತಹ ಅಡಿಟಿಪ್ಪಣಿಗಳ ಹಾವಳಿಗಾಗಲಿ ಎಡೆಯಿಲ್ಲ. ಕಾಲಿದಾಸನ ಕೇವಲ ಸಾಂಪ್ರದಾಯಿಕ ಸರಸ ಕವಿಯೆಂದಾಗಲಿ, ಸಾಂಪ್ರದಾಯಿಕ ವ್ಯವಸ್ಥೆಯ ಮುಖವಾಣಿಯೆಂದಾಗಲಿ, ಸರಸ್ವತಿಯ ಅಪರಾವತಾರವೆಂದಾಗಲಿ ಆದ್ಯರು ಭಾವಿಸುವುದಿಲ್ಲ. ಅವರ ವಿಚಾರ ಸರಣಿಯ ವಸ್ತುನಿಷ್ಟತೆ ವ್ಯಕ್ತವಾಗುವುದು ಅವನನ್ನು ಭಾರತೀಯ ಸಂಸ್ಕೃತಿಯ ಅವನತಿ ಕಾಲದ ಒಬ್ಬ ಸೂಕ್ಷ್ಮ ವಿಮರ್ಶಕನೆಂದು ಭಾವಿಸಿರುವಲ್ಲಿ ಭಾರತೀಯ ಮೌಲ್ಯಗಳಿಗೆ ಧಕ್ಕೆ ಬಂದು ಜನಜೀವನ ದುರ್ಭರವಾದ ಸ್ಕಂದಗುಪ್ತನ (ಕ್ರಿ.ಶ. 500) ಕಾಲದಲ್ಲಿ ಕಾಲಿದಾಸ ಮತ್ತೆ ಹಿಂದಿನ ಮೌಲ್ಯಗಳನ್ನು ಎತ್ತಿ ತೋರಿಸಲು ತಮ್ಮ ಸಮಕಾಲೀನ ಮೌಲ್ಯ ವಿಪರ್ಯಾಸವೇ ಕಾರಣವೆಂಬುದನ್ನು ಸಮರ್ಥವಾಗಿ ಅವರು ಮಂಡಿಸಿದ್ದಾರೆ. ಆದ್ಯರ ವಿವೇಚನದಲ್ಲಿ ಕಾಲಿದಾಸ ಕ್ರಾಂತದರ್ಶಿಯಷ್ಟೇ ಅಲ್ಲ, ಕ್ರಾಂತಿದರ್ಶಿಗಳಿಗೂ ಮಾರ್ಗದರ್ಶಿ !

ಹಾಗಿದ್ದುದರಿಂದಲೇ ಅವನು ಜೀವನ, ಧರ್ಮ, ಸಮಾಜ, ನೀತಿ, ರಾಜನೀತಿಗಳ ಬಗ್ಗೆ ತಳೆದ ಅಭಿಪ್ರಾಯಗಳು ಇಂದಿಗೂ ನಮಗೆ-ಮನನೀಯ ಎಂಬುದನ್ನು ಮನಗಂಡು ಈ ಹೊಸದೃಷ್ಟಿಯಿಂದ ಕಾಲಿದಾಸನ ಶೃಂಗಾರ ನಾಯಕರನ್ನು ಆದ್ಯರು ಪುನರವಲೋಕಿಸಿದ್ದಾರೆ. ಅವರ ನ್ಯೂನತೆಗಳನ್ನು ಅಂದಿನ ಯುಗದ ಪ್ರಾತಿನಿಧಿಕ ದೋಷಗಳೆಂದು ಸಿದ್ಧ ಮಾಡಿದ್ದಾರೆ. ಪ್ರಣಯದ ಕತೆಗಿಂತ ಪ್ರಣಯದ ವಿಚಾರವೇ ವಿವಕ್ಷಿತವೆಂದು ಎತ್ತಿ ತೋರಿಸಿದ್ದಾರೆ. ಪ್ರಣಯದ ಪಥದಲ್ಲಿ ಬರುವ ವಿಘ್ನ, ಅದರ ನಿವಾರಣೆಗೆ ಕವಿಯ ತಂತ್ರ, ಇವುಗಳಲ್ಲಿ ಕಾಣುವ ವೈವಿಧ್ಯ ಅಥವಾ ವ್ಯತ್ಯಾಸ ಹಾಗೂ ಅದರ  ಮೇಲಿಂದ ಕವಿಯು ಪ್ರತಿಭಾ ವಿಕಾಸದ ಕ್ರಮಗಳನ್ನು ಇವರು ಖಚಿತವಾಗಿ ಚಿತ್ರಿಸಿದ್ದಾರೆ. 'ಶಾಕುಂತಲ' ಶ್ರೇಷ್ಟತಮ ಕೃತಿಯೆನ್ನಲು ಹೊಸ ಕಾರಣಗಳನ್ನಿತ್ತು ವಿವೇಚಿಸಿದ್ದಾರೆ. ಅಂತಃಕರಣ ಪ್ರೇರಣೆಯಿಲ್ಲದ ಬರಿಯ ಬಾಹ್ಯಾಕರ್ಷಣೆ ಪ್ರೇಮವಲ್ಲವೆಂಬುದನ್ನೇ ಅವನ ಕಾವ್ಯಗಳೂ ಸೂಚ್ಯವಾಗಿ ನಿದರ್ಶಿಸುವತ್ತ ಆದ್ಯರು ಕೈಮಾಡಿ ತೋರಿಸಿದ್ದಾರೆ. ಕಾಲಿದಾಸನಿಗೆ ವಿಶ್ವಕವಿ ಪಟ್ಟವನ್ನು ದೊರಕಿಸಿಕೊಡುವಲ್ಲಿ 'ರಘುವಂಶ'ಕ್ಕೂ ಹಿರಿದಾದ ಪಾತ್ರವಿದೆಯೆಂಬುದನ್ನು, ಬಹಳ ವಿವರವಾದ ಪಾತ್ರ ವಿವೇಚನೆಯಿಂದ ಸಮರ್ಥಿಸಿದ್ದಾರೆ. ಪ್ರಾರಂಭದ ಅಧೈರ್ಯದಿಂದ ಮೇಧಾವಿಯ ವಿನಯದವರೆಗೆ ಬೆಳೆಯುತ್ತ ಹೋದ ಕಾಲಿದಾಸನ ವ್ಯಕ್ತಿತ್ವ ಅವನ ಮಾತುಗಳಿಂದಲೇ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ.

ಮೇಲೆ ನೋಡಿದಂತೆ ಗತಾನುಗತಿಕವಲ್ಲದ, ಅಸಂಪ್ರದಾಯಿಕವಾದ ವಿಮರ್ಶನವಿಧಾನ ಲೇಖಕರದು. ಅವರು ಮೊದಲಿನಿಂದ ಕಡೆಯವರೆಗೆ ಬಳಸಿರುವ ಕನ್ನಡದ ಶೈಲಿ ಹೊಚ್ಚ ಹೊಸದಾಗಿರುವಷ್ಟೇ ಅಚ್ಚುಕಟ್ಟಾದದು; ಮೆಚ್ಚುನುಡಿಯ ಸರಮಾಲೆಗಾಗಲಿ ಮುಚ್ಚುನುಡಿಯ ಅಚ್ಚರಿಗಾಗಲಿ ಅದು ಒಳಗಾಗದು. ಮೂಲ ಗ್ರಂಥಗಳ ಮಾರ್ಮಿಕ ಅನುಸಂಧಾನ ಪರಿಪಕ್ವವಾಗಿ ಹೂವರಳಿದಂತೆ ಸಹಜವಾಗಿ ಮೂಡಿಬರುವ ಅವರ ಆಡುನುಡಿಯ ಆಕರ್ಷಣೆ ಆದ್ಯರ ವಿವೇಚನಾ ತರಂಗಗಳಿಗೆ ಕಳೆಯೇರಿಸಿದೆ. ಅವರ ಬಿಚ್ಚುಮಾತು ಕಾಲಿದಾಸನ ಹೃದಯವನ್ನೂ ಬಿಚ್ಚಿ ತೋರಿಸುವಲ್ಲಿ ಯಶಸ್ವಿಯಾಗಿದೆಯೆಂದು ಸಾಮಾನ್ಯ ವಾಚಕನಿಗೂ ಭಾಸವಾಗುತ್ತದೆ. ಇದೇ ಈ ಸಾಹಿತ್ಯ ವಿಮರ್ಶೆಯ ಜೀವಾಳ, ಸಾಹಿತ್ಯ ವಿಮರ್ಶೆಯ ಹೊಸದೊಂದು ಆಯಾಮ ಈ ಅಧ್ಯಯನದಲ್ಲಿ ಅಡಗಿದೆಯೆಂಬುದನ್ನು ವಿದ್ವಾಂಸರೂ ಅಲ್ಲಗಳೆಯುವಂತಿಲ್ಲ. ಆಳವಾದ ಚಿಂತನೆಯನ್ನು ಸರಳವಾದ ನುಡಿಯಲ್ಲಿ ಮಂಡಿಸುವ ಕಲೆ ಆದ್ಯರಿಗಿಲ್ಲಿ ಕರಗತವಾಗಿದೆ.

-ಕೆ. ಕೃಷ್ಣಮೂರ್ತಿ 

ಕಾಲಿದಾಸ (ವಿಮರ್ಶೆ) 

ಮೊದಲನೆಯ ಆವೃತಿ 1970 ಉಷಾ ಸಾಹಿತ್ಯ ಮಾಲೆ ಚಂದ್ರಗುಪ್ತ ರಸ್ತೆ, ಮೈಸೂರು 570001 

ಡೆಮ್ಮಿ ಅಷ್ಟ  203 ಪುಟಗಳು ಬೆಲೆ ರೂ. 3-00 10-00 

ಕೃಪೆ: ಗ್ರಂಥಲೋಕ, ಜನೆವರಿ 1981

Related Books