ಕಲಾ ಲೋಕ

Author : ಎಚ್.ಎಸ್. ರಾಘವೇಂದ್ರರಾವ್

Pages 290

₹ 300.00
Year of Publication: 2019
Published by: ಕಲಾಮಂದಿರ
Address: ನಂ.43, ಕಲಾಮಂದಿರ, 5ನೇ ಅಡ್ಡರಸ್ತೆ, ಅ.ನ.ಸು ರಸ್ತೆ, ಹನುಮಂತನಗರ, ಬೆಂಗಳೂರು
Phone: 9886330207

Synopsys

ಕಲಾಮಂದಿರ ಶತಮಾನೋತ್ಸವ ಸಂದರ್ಭದಲ್ಲಿ ಅ.ನ. ಸುಬ್ಬರಾಯರ ಮಾರ್ಗದರ್ಶನದಲ್ಲಿ ಎಚ್.ಎಸ್. ರಾಘವೇಂದ್ರರಾವ್‌ ಅವರು ಸಂಪಾಧಿಸಿರುವ ಕಲಾ ಪತ್ರಿಕೆಯಲ್ಲಿ ಪ್ರಕಟವಾದ ಆಯ್ದ ಬರಹಗಳ ವಾಚಿಕೆ ’ಕಲಾ ಲೋಕ’. 

ಸ್ವದೇಶಿಯೂ ಭಾರತೀಯವೂ ಆದ ಕಲೆಯ ಮುಖ್ಯ ನೆಲೆಗಳ ಹುಡುಕಾಟವು ಈ ಕೃತಿಯ ಅನೇಕ ಲೇಖನಗಳಲ್ಲಿ ನಡೆದಿದೆ. ಪ್ರಾಚೀನ ಕಲೆಯಲ್ಲಿ ಅಡಕವಾಗಿರುವ ವೈಜ್ಞಾನಿಕ ಸಂಗತಿಗಳ ಬಗ್ಗೆ ಇಲ್ಲಿನ ಬರಹಗಳು ವಿವರಿಸುತ್ತವೆ. ಬಂಗಾಳದಲ್ಲಿ ಬೆಳೆದು ಬಂದ ಕಲಾವಿದರಾದ ನಂದಲಾಲ ಬೋಸ್, ದೇವೀಪ್ರಸಾದ್ ರಾಯ್‌ ಚೌಧರಿ, ಜೆಮಿನಿ ರಾಯ್‌ ಮುಂತಾದ ಕಲಾವಿದರು ಹಾಗೂ ಆನಂದ ಕುಮಾರಸ್ವಾಮಿಯವರಂತಹ ದೇಶಿ ಚಿಂತಕರ ಪ್ರಭಾವವು ಈ ಕೃತಿಯಲ್ಲಿ ದಟ್ಟವಾಗಿದೆ. 

ಸ್ವಾತಂತ್ಯ್ರ ಹೋರಾಟಗಾರ ಮಹಾತ್ಮ ಗಾಂಧೀಜಿಯವರ ವಿಚಾರಗಳು, ಜೀವನ ಮತ್ತು ದೈನಿಕಗಳ ಪ್ರಸ್ತಾಪ ಈ ಕೃತಿಯಲ್ಲಿ ಸಿಗುತ್ತದೆ. ತೊಡಕು ಬಿಡಿಸಿ ಎಂಬ ಶೀರ್ಷಿಕೆಯಲ್ಲಿ ಒಂದು ವಿಷಯವನ್ನು ಕೊಟ್ಟು ಅದರ ಬಗ್ಗೆ ಲೇಖನಗಳನ್ನು ಆಹ್ವಾನಿಸಿ ಅದರಲ್ಲಿ ಬಂದ ವ್ಯಾಪಾರದ ಮೇಲೆ ಈಗಿನ ರಾಜಕೀಯ, ಚಳವಳಿಯ ಪರಿಣಾಮ, ಕತ್ತರಿಯೂ ಕೈಗಾರಿಕೆಯೂ, ಬ್ಯಾಂಕುಗಳಿಂದ ಏನು ಪ್ರಯೋಜನ? ಮುಂತಾದ ವಿಷಯಗಳ ಕುರಿತು ಗಂಭೀರವಾದ ಚರ್ಚೆ ನಡೆಸಲಾಗಿದೆ. ಎನ್.ಎಸ್. ಸುಬ್ಬರಾವ್‌ ಅವರ ’ಆರ್ಥಿಕ ಪರಿವರ್ತನೆ ಮತ್ತು ವಿದ್ಯಾವ್ಯವಸ್ಥೆ’ ವಿಷಯದ ಕುರಿತ ಲೇಖನಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. 

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Reviews

30ರ ದಶಕದತ್ತ 'ಕಲಾ'ಯಾನ

ಸ್ವಾತಂತ್ರ್ಯ ಪೂರ್ವದಲ್ಲಿ ಅದರಲ್ಲೂ 1931-33ರಲ್ಲಿ ದೇಶದ ಸ್ಥಿತಿ-ಗತಿ ಹೇಗಿತ್ತು, ಜನರ ಆಲೋಚನೆಗಳು ಹೇಗಿದ್ದವು? ನಮ್ಮ ಕನ್ನಡ ಸಾಹಿತ್ಯಲೋಕ ಆಗಿನ ಪರಿಸ್ಥಿತಿಯನ್ನು ಗ್ರಹಿಸಿದ್ದು ಹೇಗೆ ಅನ್ನುವುದನ್ನು ’ಕಲಾ’ ಪತ್ರಿಕೆಯು ಬಿಂಬಿಸಿದೆ. ಅದರಲ್ಲಿ ಪ್ರಕಟವಾದ ಆಯ್ದ ಬರಹಗಳ ವಾಚಿಕೆಯು ’ಕಲಾ ಲೋಕ’ವಾಗಿ ಈಗಿನ ಓದುಗರಿಗೆ ಸಿಕ್ಕಿದೆ. ಡಾ. ಎಚ್. ಎಸ್‌. ರಾಘವೇಂದ್ರರಾವ್ ಸಂಪಾದನೆಯ ಈ ಪುಸ್ತಕಕ್ಕೆ ಸಾಹಿತ್ಯಕ/ಚಾರಿತ್ರಿಕ ಮಹತ್ವವಿದೆ. 

ನಿನ್ನೆ ಕಂಡ ಕನಸುಗಳನ್ನು ಇಂದು ಅರ್ಥಮಾಡಿಕೊಳ್ಳಲು, ನಾಳೆಗಳ ಕನಸುಗಳನ್ನು ಪರಿಷ್ಕರಿಸಲು ಇಲ್ಲಿನ ಬರಹಗಳು ಸಹಕಾರಿಯಾಗಿವೆ.  'ಅಂದಿನ ಗಂಧಗಾಳಿಯಲ್ಲಿಯೇ ಜೀವಂತವಾಗಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವದ ಪ್ರಭಾವಗಳನ್ನು ಈ ಪತ್ರಿಕೆಯಲ್ಲಿಯೂ ಗುರುತಿಸಬಹುದು,' ಎನ್ನುವುದು ರಾಘವೇಂದ್ರ ರಾವ್ ಅವರ ಅಭಿಮತ. ರವೀಂದ್ರನಾಥ ಟ್ಯಾಗೋರ್, ಅ.ನ.ಕೃಷ್ಣರಾಯರು, ಎ.ಎನ್.ಸುಬ್ಬರಾವ್, ದೇವುಡು, ಮಧುರಚೆನ್ನ, ಜಿ.ಪಿ.ರಾಜರತ್ನಂ ಮತ್ತಿತರರ ಬರಹಗಳು ಇಲ್ಲಿವೆ. ಪತ್ರಿಕೆಯ ಅಂದಿನ ಮುಖಪುಟಗಳು ಮತ್ತು ಮೂಲಸ್ವರೂಪವನ್ನು ಅನ್ನುವುದನ್ನು ಈ ಪುಸ್ತಕ ಪ್ರತಿಬಿಂಬಿಸಿದೆ. 

ಹ.ಚ.ನಟೇಶ ಬಾಬು 01 ಡಿಸೆಂಬರ್‌ 2019

ಕೃಪೆ : ವಿಜಯ ಕರ್ನಾಟಕ

 

Related Books