
’ಕತ್ತಲಂಚಿನ ಕಿಡಿಗಳು’ ಲೇಖಕಿ ಮೀನಾಕ್ಷಿ ಬಳಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ವಿಮಲಾ ಕೆ.ಎಸ್ ಅವರು, ‘ಅಂಕಣ ಬರಹಗಳಿರುವ ಸಕಾರಾತ್ಮಕ ಗತಿಯನ್ನು ಮೀನಾಕ್ಷಿ ಬಾಳಿ ಸರಿಯಾಗಿಯೇ ಹಿಡಿದಿದ್ದಾರೆ. ಅಂಕಣ ಬರಹಗಳಿಗೆ ಕೆಲವು ಮಿತಿಗಳು ಇರುತ್ತವೆ. ಆದರೆ, ಬಾಳಿಯವರು ಸಿಗುವ ಅಲ್ಪ ಜಾಗವನ್ನೇ ಬಳಸಿಕೊಂಡು ಭಾನಾಮತಿಯಂತಹ ಕಂದಾಚಾರವನ್ನೂ ಪ್ರಶ್ನಿಸಿದ್ದಾರೆ. ಧರ್ಮಶಾಸ್ತ್ರವನ್ನು ಆಧರಿಸಿ ನ್ಯಾಯ ನೀಡುವ ವ್ಯವಸ್ಥೆ ಜಾರಿಗೆ ಬರಬೇಕೆನ್ನುವ, ಮನುಸ್ಮೃತಿಯೇ ಸಂವಿಧಾನವಾಗಿ, ಜ್ಯೋತಿಷ್ಯವೇ ವಿಜ್ಞಾನವಾಗಿ ಬಿಡುವ ಪ್ರಯತ್ನಗಳತ್ತಲೂ ಓದುಗರನ್ನು ಎಚ್ಚರಿಸುತ್ತಾರೆ. ವೈದಿಕ ಪರಂಪರೆಯನ್ನು ಮೆರೆಸುವ ತವಕದಲ್ಲಿ ಸಂವಿಧಾನವನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅವಸರದಲ್ಲಿ ರಾಮಾ ಜೋಯಿಸರು ಅಂಬೇಡ್ಕರರನ್ನೇ ಮರೆತು ಬಿಟ್ಟರೆಂಬುದನ್ನು ನಾವ್ಯಾರೂ ಮರೆಯದಂತೆ ನೆನಪಿನಲ್ಲಿ ಉಳಿಸುತ್ತಾ, ಈ ತೆರನ ಬೌದ್ಧಿಕ ಬಾಂಬ್ಗಳ ಬಗ್ಗೆ ಗಮನ ಸೆಳೆದಿದ್ದಾರೆ. ಒಟ್ಟಾರೆ ಪುರುಷ ನಿರ್ಮಿತ, ಪುರುಷ ಪ್ರೇರಿತ, ಪುರುಷ ಪೂಜಿತ ಸಮಾಜದ ಪ್ರತೀ ಹಂದರದಲ್ಲಿ ಮಹಿಳೆಯ ನೋವಿನ ಕತೆಯಿದೆ. ಮಹಿಳೆಯ ಗಟ್ಟಿತನವಿದೆ. ಎಲ್ಲಾ ಯಾತನೆಗಳ ಮಧ್ಯೆಯೂ ಬದುಕು ಕಟ್ಟಿಕೊಳ್ಳುವ ಛಲವಿದೆ. ಕುಂಬಾರ ರಾಚವ್ವನ ಮೂಲಕ ಈ ನೆಲದ ಬೆಳಕಿಗೆ ಬಾರದ ಸಂಗತಿಗಳು, ಆದರೂ ಇಡೀ ಪ್ರಪಂಚಕ್ಕೆ ಗೊತ್ತಿರುವ ಮುಗ್ಧ ಹೆಣ್ಣು ಮಕ್ಕಳ ಬದುಕನ್ನು ಲೇಖಕಿ ಬಿಚ್ಚಿಡುತ್ತಾರೆ. ಯೌವನದ ದೇಹದ ಬಯಕೆಯೋ, ಪರಿಸ್ಥಿಯ ಕೈಗೊಂಬೆಯೋ, ಬದುಕಿಗಾಗಿ, ಅನಿವಾರ್ಯ ಸಮ್ಮತಿಯೋ ಒಟ್ಟಿನಲ್ಲಿ ಮಲ್ಲಪ್ಪನ ಪ್ರೇಯಾಸಿಯಾಗಿ ಬದುಕು ನಡೆಸಿದ ರಾಚವ್ವ, ಅದರಿಂದಾಚೆಗೆ ಅಸ್ತಿತ್ವ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಾಗ ತಾನೇ ತಾನಾಗಿ ಅತ್ತ ನಡೆಯುವ ಮೂಲಕ ವ್ಯಕ್ತಿ ಸ್ವಾತಂತ್ಯ್ರದ ಸಂಕೇತವೆನ್ನಿಸುತ್ತಾಳೆ ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.