ಮೊಕಾಶಿ ಕಥನ

Author : ಟಿ.ಪಿ. ಅಶೋಕ

Pages 104

₹ 100.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, ಮುಖ್ಯರಸ್ತೆ ಮಾರೇನಹಳ್ಳಿ ವಿಜಯನಗರ ಬೆಂಗಳೂರು - 560040
Phone: 9448804905

Synopsys

ಖ್ಯಾತ ಲೇಖಕ, ವಿಮರ್ಶಕ ಡಾ. ಟಿ.ಪಿ ಅಶೋಕ ಅವರು ಬರೆದ ’ಮೊಕಾಶಿ ಕಥನ’ ಶಂಕರ ಮೊಕಾಶಿ ಪುಣೆಕರ್ ಅವರ ಕುರಿತಾದ ಸಮಗ್ರ ಸಾಹಿತ್ಯ ಅಧ್ಯಯನ ಕೃತಿ. ನಲವತ್ತರ ದಶಕದಲ್ಲಿಯೇ ಬರವಣಿಗೆಯನ್ನು ಆರಂಭಿಸಿದ್ದ ಮೊಕಾಶಿಯವರು ಆರು ದಶಕಗಳ ಕಾಲ ತಮ್ಮ ಸುತ್ತಲಿನ ವಿಚಾರಗಳಿಗೆ ಪ್ರತಿಕ್ರಿಯಿಸುತ್ತ, ಪ್ರತಿಸ್ಪಂದಿಸುತ್ತ ಕ್ರಿಯಾಶೀಲರಾಗಿದ್ದರು. ‘ಒಂಟಿ ಸಲಗ’ ಎಂದು ಖ್ಯಾತಿಯಾಗಿದ್ದರು. ಮೊಕಾಶಿ ಅವರ ಬರವಣಿಗೆಯಿಂದ ಆಕರ್ಷಿತರಾಗಿ, ಅವರ ಕುರಿತಾಗಿ ಅಧ್ಯಯನ ಮಾಡಿ ಲೇಖಕರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಇಲ್ಲಿ ಅವರ ಬದುಕು-ಬರಹಗಳ ಸಾಧನೆಯ ಚಿತ್ರಣವಿದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Reviews

ಮೊಕಾಶಿ ಕಥನದ ಮಿಮರ್ಶೆ- ಹೊಸ ಮನುಷ್ಯ

ಟಿ.ಪಿ ಅಶೋಕರು ಈಚಿನ ವರ್ಷಗಳಲ್ಲಿ ಪ್ರಕಟಿಸುತ್ತಿರುವ ಕನ್ನಡದ ಹಲವು ಮುಖ್ಯ ಲೇಖಕರನ್ನು ಕುರಿತು ಕಿರು ಅಧ್ಯಯನ ಗ್ರಂಥಗಳ ಸರಣಿಯಲ್ಲಿ ಶಂಕರ ಮೊಕಾಶಿ ಪುಣೇಕರರನ್ನು ಕುರಿತ ಈ ಗ್ರಂಥವು ಮೊದಲಿನದಾಗಿರುವುದು ಆಶ್ಚರ್ಯವೇನಲ್ಲ. ಮೇಲಿನ ಬೊಳುವಾರು ಪುಸ್ತಕವನ್ನೂ ಒಳಗೊಂಡಂತೆ ಎಲ್ಲ ಲೇಖಕರನ್ನು ಕುರಿತು ಚರ್ಚಿಸುವಾಗ ನವ್ಯ ವಿಮರ್ಶೆಯ ಮೊಕಾಶಿ ಕಥನ ಪರಿಕರಗಳನ್ನು ಬಳಸಿಕೊಳ್ಳುತ್ತಲೇ ಬಂದಿರುವ ಅಶೋಕರಿಗೆ, ನವ್ಯಸಾಹಿತ್ಯವನ್ನು ಉಗ್ರವಾಗಿ ವಿರೋಧಿ ಸುತ್ತಿದ್ದ, ನವ್ಯವಿಮರ್ಶೆಯನ್ನು 'ರಂಡಿಸಮ್ಮಿತಿ'ಯೆಂದು ಝಂಕಿಸುವ ಪುಣೇಕರರನ್ನು ಕುರಿತು ಬರೆಯುವಾಗ ಪರವಿರೋಧಗಳಿಗಿಂತ ಮುಖ್ಯವಾಗಿ ವಿವರವಾದ ಕೃತಿವಿಶ್ಲೇಷಣೆಯೇ ಮುಖ್ಯವಾಗಿದೆ. ಅಶೋಕರ ವಿಮರ್ಶೆ ಎಷ್ಟು ಆವೃತವಾಗಿಸಂಚಯಿತವಾಗಿರುತ್ತದೆ ಎಂದರೆ ಪುಣೇಕರರ ಕೃತಿಶ್ರೇಣಿ ಮಾತ್ರವಲ್ಲ ಅವರನ್ನು ಕುರಿತು ಪ್ರಮುಖ ವಿಮರ್ಶಾ ಮಾದರಿಗಳ ವಿಸ್ತತ ಪರಿಚಯವೂ ಓದುಗರಿಗೆ ಲಭ್ಯವಾಗುತ್ತದೆ. ಒಂದೆರಡು ಬಿಡಿ ಕೃತಿಗಳನ್ನು ಕುರಿತ ಒಪಿನಿಯನೇಟೆಡ್ ವಿಮರ್ಶೆಗಿಂತ ಇಂಥ ಬರಹಗಳು ಶೈಕ್ಷಣಿಕವಾಗಿ, ಸಾಹಿತ್ಯದ ಅಭಿರುಚಿಯನ್ನು ಪೋಷಿಸುವ ಬಹುಮುಖ್ಯ ಆಕರಗಳಾಗಿ ಬಳಕೆಯಾಗುತ್ತವೆ.

'ಮಾಯಿಯ ಮೂರು ಮುಖಗಳು' ಮೊದಲಾದ ಮಹತ್ವದ ಕವಿತೆಗಳನ್ನು ಹೊರತುಪಡಿಸಿ, ಪುಣೇಕರರ ಇತರ ಕವಿತೆಗಳನ್ನು ವಿಶ್ಲೇಷಿಸುತ್ತಾ ಅವರ ನವ್ಯವಿರೋಧಿ ವಿಡಂಬನಾತ್ಮಕ ನಿಲುವು ಅಡಿಗ, ರಾಮಾನುಜನ್ ಮೊದಲಾದವರ ಅತ್ಯುತ್ತಮ ನವ್ಯಕಾವ್ಯಕ್ಕೆ ಹೇಗೆ ಮುಖಾಮುಖಿಯಾಗುವುದಿಲ್ಲ ಎನ್ನುತ್ತಾರೆ. ಪುಣೇಕರರ ಚರ್ಚಿತವಲ್ಲದ ಕತೆಗಳು ಹಾಗೂ ಈಗಾಗಲೇ ಶ್ರೇಷ್ಠ ಕೃತಿಗಳೆಂದು ಪರಿಗಣಿತವಾಗಿರುವ ಕಾದಂಬರಿಗಳ ಚರ್ಚೆಯ ಮೂಲಕ ನವ್ಯದ ದುರ್ಬಲ-ಉದ್ವಿಗ್ನ ನಾಯಕರಿಗಿಂತ ಭಿನ್ನವಾದ, ಜೀವವಿರೋಧಿಯಲ್ಲದ ಸಾಂಪ್ರದಾಯಿಕತೆಯನ್ನು ಪೋಷಿಸುವ ಪುಣೇಕರ ಕಥನಲೋಕವೊಂದರ ದರ್ಶನವನ್ನು ನೀಡುತ್ತಾರೆ. ನಟನಾರಾಯಣಿ ಕಾದಂಬರಿಯ ಮೂಲಕ ಸಂಸ್ಕೃತಿಯ ವಿಶಿಷ್ಟರೂಪಗಳಾದ ಕಲೆ-ನಟನೆಗಳು ರಸಿಕ ವ್ಯವಹಾರದ ಸರಕಾಗುವ ದುರಂತವನ್ನು ಬಹಳ ಸಮರ್ಥವಾಗಿ ನಿರೂಪಿಸುತ್ತಾರೆ. ಕೃತಿವಿಮರ್ಶೆಗೆ ಅಶೋಕರು ಒಡ್ಡಿಕೊಳ್ಳುವ ಪರಿ ಎಷ್ಟು ಮುಕ್ತವಾಗಿರುತ್ತದೆಯೆಂದರೆ, ಸಾಮ್ಯ-ವೈಷಮ್ಯಕ್ಕಾಗಿ ನೀಡುವ ಇತರ ಕತೆಕಾದಂಬರಿಗಳ ಸಲ್ಲೇಖಗಳು ಬೇಸಗೆಯ ವಿರಾಮದಲ್ಲಿ ಮೀಯುತ್ತಿರುವ ಅನುಭೂತಿಯನ್ನು ನೀಡುತ್ತವೆ. ವ್ಯಕ್ತಿತ್ವದ ಅಭಿವ್ಯಕ್ತಿಯನ್ನೇ ಮೂಲದ್ರವ್ಯವಾಗಿಸಿಕೊಂಡ ನವ್ಯಸಾಹಿತ್ಯ, ಸ್ವಂತವನ್ನು ಮೀರಿದ ಹಲವು ಗುಣಾವಗುಣಗಳ ವ್ಯಕ್ತಿತ್ವಗಳನ್ನು ಸೃಷ್ಟಿಸುವ ಶೇಕ್ಸ್ಪಿಯರ್, ಟಾಲ್‌ಸ್ಟಾಯ್‌ರಂಥ ಲೇಖಕರ ಹೋಲಿಕೆಯಲ್ಲಿ ಹೇಗೆ ಸೋಲುತ್ತದೆ ಎಂದು ಉಲ್ಲೇಖಿಸುತ್ತಲೇ ಪುಟ್ಟಸ್ವಾಮಯ್ಯನವರ ಕಾದಂಬರಿಗಳಿಗೆ ಅಂತರಾಷ್ಟ್ರೀಯ ಮನ್ನಣೆ ದೊರಕಬೇಕು ಎಂಬ ಪುಣೇಕರರ ಅಭಿಪ್ರಾಯ, ಇತರ ಅಭಿಪ್ರಾಯಗಳಂತೆ ಕೃತಿಯ ವಿವರವಾದ ಓದು, ಒಪ್ಪಿತ ಸಿದ್ದಾಂತಗಳ ಮರುಪರಿಶೀಲನೆಯ ಬೆಳಕಿನಲ್ಲಿ ಹುಟ್ಟುವುದಿಲ್ಲ ಎಂಬುದನ್ನು ವಿವರವಾದ ಕೃತಿಪರಿಶೀಲನೆಯ ಮೂಲಕವೇ ಅಶೋಕರು ತೀರ್ಮಾನಿಸುತ್ತಾರೆ. ಸಾಹಿತ್ಯಕ ಆಧುನಿಕತೆ-ನವ್ಯತೆಗಳನ್ನು ಉಗ್ರವಾಗಿ ವಿರೋಧಿಸುತ್ತಿದ್ದ ಮಣೇಕರರ ಅತಿರೇಕದ ಅಭಿಪ್ರಾಯಗಳನ್ನು ವಸಾಹತುಶಾಹಿ ಆಧುನಿಕತೆ'ಯ ವಿರುದ್ದ ಮಾಡಿದ ಮುನ್ನೋಟದ ಚಿಂತನೆಗಳ ಫಲವೆಂಬಂತೆ ನೋಡಿದಲ್ಲಿ ಇನ್ನಷ್ಟು ಹೊಸನೋಟಗಳು ದೊರಕಬಹುದು.

(ಕೃಪೆ: ಪುಸ್ತಕಾವಲೋಕನ, ಬರಹ: ಎಸ್, ಸಿರಾಜ್ ಅಹಮದ್)





 

Related Books