ಮುಗ್ದ ಪ್ರಬುದ್ಧ

Author : ಓ. ಎಲ್. ನಾಗಭೂಷಣಸ್ವಾಮಿ

Pages 168

₹ 150.00

Buy Now


Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

ಅಭಿನವ ಬೆಳ್ಳಿ ಬೆಳಕು ಸರಣಿಯಲ್ಲಿ ಹೊರಬಂದ ಪುಸ್ತಕ ’ಮುಗ್ದ ಪ್ರಬುದ್ಧ’

ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಒರ್ಹಾನ್ ಪಮುಕ್ ನೀಡಿದ ’ದಿ ನಯೀವ್ ಅಂಡ್ ದಿ ಸೆಂಟಿಮೆಂಟಲ್ ನಾವೆಲಿಸ್' 2009ರಲ್ಲಿ ನೀಡಿದ ಚಾರ್ಲ್ ಎಲಿಯಟ್ ನಾರ್ಟನ್ ಭಾಷಣ ಮಾಲಿಕೆಯ ಲಿಖಿತ ರೂಪ. ಇದನ್ನು ಟರ್ಕಿಶ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಿಸಿದವರು ನಝೀಮ್ ದಿಕ್ಬಾಸ್. ಕಾದಂಬರಿ ಬರೆಯುವಾಗ ಮತ್ತು ಓದುವಾಗ ಏನಾಗುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಎಂಬ ಉಪಶೀರ್ಷಿಕೆಯೂ ಪುಸ್ತಕಕ್ಕೆ ಇದೆ. ಉಪಶೀರ್ಷಿಕೆಯೇ ಕೃತಿಯ ವೈಶಿಷ್ಟ್ಯವನ್ನು ಹೇಳುತ್ತದೆ.

ಕಾದಂಬರಿ ಓದುವ ಅನುಭವ ಕುರಿತು ಮುಖ್ಯವಾದ ಬರಹಗಳನ್ನು, ಮತ್ತು ಲೇಖಕರ ಕಾಲದ ಪ್ರಮುಖ ಕಾದಂಬರಿಕಾರನೊಬ್ಬ ಓದುಗನಾಗಿ ಮತ್ತು ಲೇಖಕನಾಗಿ ಉಪನ್ಯಾಸಗಳಲ್ಲಿ ವಿವರಿಸಿರುವ ಅನೇಕ ಸಂಗತಿಗಳನ್ನು  ಮತ್ತು ಅವನ್ನು ವಿವರಿಸಿರುವ ರೀತಿಯನ್ನೂ ಲೇಖಕ, ಅನುವಾದಕ, ವಿಮರ್ಶಕರಾದ ಓ.ಎಲ್. ನಾಗಭೂಷಣಸ್ವಾಮಿ ಅವರ ಕನ್ನಡ ಅನುವಾದ ಕೃತಿ ’ ಮುಗ್ದ ಪ್ರಬುದ್ಧ’ ಪುಸ್ತಕದಲ್ಲಿ ಕಾಣಬಹುದು.

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Reviews

  

ಲೇಖಕನಿಗೆ ಏನಾಗುತ್ತೆ?

ಬರ್ಹಾನ್ ಪಮುಕ್, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ. ಅವರ ಕೃತಿಗಳು, 63ಕ್ಕೂ ಹೆಚ್ಚು ಭಾಷೆಗೆ ಅನುವಾದಗೊಂಡಿವೆ. ಬರಹಗಾರನ ಜಗತ್ತು ಹೇಗಿರುತ್ತದೆ? ಒಂದು ಕತೆಗೆ, ಕವಿತೆಗೆ, ನಾಟಕಕ್ಕೆ ಅಥವಾ ಕಾದಂಬರಿಗೆ ಅಗತ್ಯವಿರುವ ವಸ್ತುವನ್ನು ಆತ ಹೇಗೆ ಹುಡುಕುತ್ತಾನೆ? ಒಂದು ಪಾತ್ರವನ್ನು ಹೇಗೆ ಸೃಷ್ಟಿಸುತ್ತಾನೆ? ಒಂದು ಕತೆಯನ್ನು ಹೇಗೆಲ್ಲಾ ಬೆಳೆಸಬೇಕು ಎಂದು ಬರಹಗಾರ ಪ್ಲಾನ್ ಮಾಡುವುದು ಯಾವಾಗ? - ಇಂಥ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಉದ್ದೇಶದಿಂದಲೇ ಸುದೀರ್ಘ ಭಾಷಣವೊಂದನ್ನು ಮಾಡಿದರು. ಅದರ ಸಂಗ್ರಹ ರೂಪವೇ ಈ ಕೃತಿ. ಒಂದು ಕಾದಂಬರಿ ಬರೆಯಬೇಕೆಂದರೆ, ತಾಳ್ಮೆ ಮತ್ತು ತನ್ಮಯತೆ ಅಗತ್ಯ. ಅಷ್ಟೇ ಅಲ್ಲ ಕಾದಂಬರಿಯನ್ನು ಓದಬೇಕೆಂದರೂ ತಾಳ್ಮೆ- ತನ್ಮಯತೆಗಳು ಅತ್ಯಗತ್ಯ. ಇಲ್ಲಿ

ಬರಹಗಾರ ಮತ್ತು ಓದುಗ, ಇಬ್ಬರಿಗೂ ಅಗತ್ಯವಿರುವುದು ಒಂದೇ ವಸ್ತು ವಿಚಾರ, ಬರೆದು ಮುಗಿಸಿದಾಗ ಲೇಖಕನಿಗೆ ಸಿಗುವ ನಿರಾಳ ಭಾವವೇ, ಅದನ್ನು ಓದಿ ಮುಗಿಸಿದಾಗ ಓದುಗನಿಗೂ ದಕ್ಕುತ್ತದೆ. ಒಂದು ಕಾದಂಬರಿಯ ಅಂತ್ಯ - ಹೇಗಿದೆ ಎಂಬುದರ ಮೇಲೆ, ಕಡೆಯಲ್ಲಿ ಓದುಗ- ಕಾದಂಬರಿಕಾರನನ್ನು ಆವರಿಸಿಕೊಳ್ಳುವ ಭಾವ ಎಂಥದೆಂದು ನಿರ್ಧಾರವಾಗುತ್ತದೆ. ಇಂಥದೊಂದು ಮನೋಭಾವ ಜೊತೆಯಾಗುವ ಮೊದಲು ಬರಹಗಾರ ಮತ್ತು ಓದುಗನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಕೃಪೆ: ಉದಯವಾಣಿ

 ........................................................................................................................................................................................

ಕಾದಂಬರಿ ಕಲೆಯ ಬಗ್ಗೆ ಪಮುಕ್‌ ವಿಚಾರಗಳು 

ಓ.ಎಲ್. ನಾಗಭೂಷಣ ಸ್ವಾಮಿ ಅವರು ಅನುವಾದಿಸಿದ ನೊಬೆಲ್ ಸಾಹಿತ್ಯ ಪುರಸ್ಕೃತ, ಟರ್ಕಿಯ ಸಾಹಿತಿ ಬರ್ಹಾನ್ ಪಮುಕ್‌ ಅವರ 'ಮುಗ್ಧ ಪ್ರಬುದ್ಧ' ಕೃತಿಯ ಮೂಲ ‘The naive and the sentimental novelist’ ಎನ್ನುವ ವೈಚಾರಿಕ ಕೃತಿ, ದ ಸೆಂಟಿಮೆಂಟಲ್ ಎನ್ನುವ ಶಬ್ದ ಪಮುಕ್‌ನ ಕೃತಿಯ ಆವರಣದಲ್ಲಿ ಪ್ರಬುದ್ಧ ಎನ್ನುವ ಶಬ್ದಕ್ಕೆ ಸಮೀಪವಾಗಿದೆ ಎನ್ನುವ ಕಾರಣಕ್ಕೆ ಈ ಶೀರ್ಷಿಕೆಯನ್ನು ಅವರು ಇಟ್ಟಿದ್ದಾರೆ. ಕಾದಂಬರಿಯಲ್ಲಿ ಯಾವ ತಂತ್ರಗಳನ್ನು ತಾವು ಬಳಸಿದ್ದೇವೆ ಎಂದು ಯೋಚಿಸದ ಲೇಖಕರನ್ನೂ, ಅಂತಹ ತಂತ್ರಗಳಿವೆ ಎಂದು ತಿಳಿಯದೆ ಓದುವ ಓದುಗರನ್ನೂ ಸೂಚಿಸುವ ಪದ ಮುಗ್ಧ. ಕಾದಂಬರಿಯಲ್ಲಿ ನಡೆಯುವ ಜಟಿಲ ವ್ಯವಹಾರಗಳ ಅರಿವಿಲ್ಲದೆ ಬರೆಯುವವರು ಮತ್ತು ಓದುವವರು ಮುಗ್ಧರು; ಅದರ ಅರಿವಿದ್ದು ಬರೆಯುವವರು ಮತ್ತು ಓದುವವರು ಪ್ರಬುದ್ದರು.

ಈ ಕೃತಿ ಪಮುಕ್‌ ಅವರು ನೀಡಿದ ನಾರ್ಟನ್ ಉಪನ್ಯಾಸ ಮಾಲಿಕೆಯ ಐದು ಉಪನ್ಯಾಸಗಳ ಸಂಗ್ರಹ. 1, ಕಾದಂಬರಿ ಓದುವುದೆಂದರೆ 2. ಇದೆಲ್ಲ ನಿಜವಾಗಲೂ ನಿಮಗೇ ಆಗಿದ್ದಾ? 3. ಪಾತ್ರ, ಪ್ಲಾಟು, ಟೈಮು 4, ಕಾದಂಬರಿಯೊಳಗಿನ ಲೋಕ: ಪದ, ಚಿತ್ರ, ವಸ್ತುಗಳು. 5. ಮೂಸಿಯಮು ಕಾದಂಬರಿ 6. ಕೇಂದ್ರ. ಇವುಗಳ ಜತೆಗೆ, ಅವರು ನೊಬೆಲ್ ಬಹುಮಾನ ಸ್ವೀಕರಿಸಿ ಮಾಡಿದ ಭಾಷಣದ ಅನುವಾದವೂ ಇದೆ. ನಂತರ ಯಾರಿಗಾಗಿ ಬರೆಯುತ್ತೀರಿ? ಎನ್ನುವ ಸಣ್ಣದೊಂದು ಬರಹವೂ, ಅವರು ಉಲ್ಲೇಖಿಸುವ ಕೃತಿಗಳ ಬಗ್ಗೆ ಟಿಪ್ಪಣಿಗಳೂ ಇವೆ.

ಈ ಪ್ರಬಂಧಗಳಲ್ಲಿ ಬರಹಗಾರರಿಗೆ ಬೇಕಾದ ಮಾರ್ಗದರ್ಶನವಿದೆ. ಜತೆಗೆ ಓದುಗರಿಗೆ, ಸಾಹಿತ್ಯದ ಓದುವಿಕೆಗೆ ತರಬೇತಿಯೂ ಸಿಗುತ್ತದೆ. ಎಲ್ಲ ಪ್ರಬಂಧಗಳ ಮೂಲಕ ಪಮುಕ್‌ ಅವರ ಕಾವ್ಯ ಮೀಮಾಂಸೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ಅವರ ಕೆಲವು ಮಾತುಗಳು ಭಾರತೀಯ ಚಿಂತನೆಗೆ ಹತ್ತಿರವಾಗಿವೆ. ಪಾತ್ರ, ಪ್ಲಾಟ್ (ಸಂವಿಧಾನ) ಇತ್ಯಾದಿ ಅಂಶಗಳ ಕುರಿತು ಮಾತಾಡುವಾಗ ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹತ್ತಿರವೂ ಇದ್ದಾರೆ. ಆದರೆ ಪಮುಕ್‌ ತಮ್ಮ ಅನುಭವದ ಹಿನ್ನೆಲೆಯಲ್ಲಿ ತಮ್ಮದೇ ಆದ ಹೊಸ ಚಿಂತನೆಗಳನ್ನು ಹೇಳಿರುವುದರಿಂದ ಇದು ಮುಖ್ಯವಾದ ಕೃತಿ. ಜತೆಗೆ ತಮ್ಮನ್ನು ತಾವು ಕಾದಂಬರಿಯ ಓದುಗನೆಂದೂ ಗುರುತಿಸಿಕೊಂಡು ಓದುಗನ ದೃಷ್ಟಿಕೋನದಿಂದಲೂ ಹೇಳಿರುವುದರಿಂದ ಸಾಹಿತ್ಯಾಧ್ಯಯನಕ್ಕೆ ಮಾರ್ಗದರ್ಶಕ ಕೃತಿಯಾಗಿ ಇದರ ಮೌಲ್ಯ ಹೆಚ್ಚಿದೆ.

ಪಮುಕ್‌ ತನ್ನ 18ನೆಯ ವಯಸ್ಸಿನಿಂದ 30ನೆಯ ವಯಸ್ಸಿನವರೆಗೆ ಕಾದಂಬರಿಗಳನ್ನು ಓದುತ್ತ ಜೀವನದ ಬಗ್ಗೆ ಅರಿತವರು. 'ಇಸ್ತಾಂಬುಲ್‌ನ ನನ್ನ ಕೋಣೆಯಲ್ಲಿ ಕದಲದೆ ಕೂತು ಓದಿದ ಪ್ರತಿಯೊಂದು ಕಾದಂಬರಿಯೂ ಯಾವುದೇ ವಿಶ್ವಕೋಶ ಯಾವುದೇ ಮ್ಯೂಸಿಯಮ್ಮಿನ ಹಾಗೆ ನನ್ನ ಸುತ್ತಲೂ ಸುವ್ಯವಸ್ಥಿತವಾದ, ಬದುಕಿನ ವಿವರಗಳಿಂದ ಶ್ರೀಮಂತವಾದ ವಿಶ್ವವನ್ನು ನಿರ್ಮಿಸಿತು' ಎಂದು ಪಮುಕ್ ಬರೆಯುತ್ತಾರೆ. ಸಾಹಿತ್ಯದ ಈ ಶಕ್ತಿಯನ್ನು ನಮ್ಮ ಪೂರ್ವಜರು ಗುರುತಿಸಿದ್ದರು. ಕಾಂತಾ ಸಮಿತ ಎನ್ನುವ ಪರಿಕಲ್ಪನೆಯಲ್ಲಿ ಅದು ತಿಳಿಯುತ್ತದೆ. ಸಾಹಿತ್ಯದ ಎರಡು ಮುಖ್ಯ ಬಗೆಗಳನ್ನು ಮತ್ತು ಅವುಗಳ ಪ್ರಯೋಜನವನ್ನು ಒರ್ಹಾನ್ ಪಮುಕ್‌ ಮೊದಲನೆಯ ಭಾಗದಲ್ಲಿ ಹೇಳುತ್ತಾರೆ. ಕಾದಂಬರಿಯ ಗುಪ್ತ ಕೇಂದ್ರ: ಕಾದಂಬರಿಯಲ್ಲಿ ಗುಪ್ತವಾದ ಕೇಂದ್ರವೊಂದಿರುತ್ತದೆ ಎಂಬ ನಂಬಿಕೆಯಿಂದ ಕಾದಂಬರಿಯನ್ನು ಓದುತ್ತೇವೆ ಎನ್ನುವುದು ಈ ಭಾಗದ ಬಹಳ ಮುಖ್ಯವಾದ ಚಿಂತನೆ. ಮಹಾಭಾರತದಿಂದ ಪ್ರಾರಂಭಿಸಿ ಇದುವರೆಗೂ ಕೃತಿಗಳಲ್ಲಿ ಆ ಅನ್ವೇಷಣೆ ನಡೆದಿರುವುದನ್ನು ಗಮನಿಸಬಹುದು. ''ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ, ಮುರಿದು ಬಿದ್ದ ಕೊಂಬೆಯನ್ನೂ, ಹುಷಾರಾಗಿ ಗಮನಿಸುತ್ತಾ ಸುಳಿವು ಹುಡುಕುವ ಬೇಟೆಗಾರನ ಹಾಗೆ ಇರುತ್ತೇವೆ. ಈ ಕಾದಂಬರಿಯ ಕೇಂದ್ರ ಎಂದರೆ ಟಾಲ್‌ಸ್ಟಾಯ್ ಯಾವುದನ್ನು ಬದುಕಿನ ಅರ್ಥ ಎನ್ನುತ್ತಾರೋ ಅದು

ಎಂದು ಪಮುಕ್‌ ಸೂಚಿಸಿದ್ದಾರೆ. "ಫಿಲಾಸಫಿಯ ಕಷ್ಟಗಳಲ್ಲಿ ನರಳದೆ, ನಮ್ಮದೇ ಬುದ್ದಿ ಬಳಸಿಕೊಂಡು ಲೋಕದ ಆಪ್ತವಾದ, ಗಹನವಾದ ಜ್ಞಾನವನ್ನು ಪಡೆಯುವ ಕನಸು ಕಾದಂಬರಿಯ ಓದಿನಲ್ಲಿ ನಿಜವಾಗುತ್ತದೆ.' (ಪುಟ 30). ಫಿಲಾಸಫಿಯ ಕಷ್ಟಗಳಲ್ಲಿ ನರಳದೆ ಎಂಬ ಮಾತು ಪ್ರಭು ಸಂಮಿತೆಯನ್ನು ಕುರಿತದ್ದು. ಅದು ಶಾಸ್ತ್ರದ ಮಾದರಿಯಾದರೆ ಕಾಂತಾ ಸಂಮಿತೆಯು ಕಾವ್ಯ (ಅಂದರೆ ಸಾಹಿತ್ಯ) ಮಾದರಿ ಎನ್ನುವ ಭಾರತೀಯ ಕಾವ್ಯ ಮೀಮಾಂಸೆಗೆ ಸಂವಾದಿಯಾದ ಚಿಂತನೆ ಇದು.

ಸಾಹಿತ್ಯದ ಇನ್ನೊಂದು ಪ್ರಕಾರ ಚರಿತ್ರೆ ಅಥವಾ ಜೀವನ ಚರಿತ್ರೆ. ಅದರ ಪ್ರಯೋಜನವನ್ನು ಮಹಾಭಾರತದ ಪ್ರಾರಂಭದಲ್ಲಿ ಸೂಚಿಸಿರುವುದನ್ನು ಗಮನಿಸಬಹುದು. ಪಮುಕ್‌ ಅವರ ಪ್ರಕಾರ ಕಳೆದುಹೋದ ಮೌಲ್ಯದ ಅರಸುವಿಕೆಗೆ ತಕ್ಕದ್ದು ಎಂದರೆ ಜರ್ಮನಿಯ ಬಿಲ್ಲಿಂಗ್ಸ್ ರೊಮಾನ್ ಅಥವಾ ರೂಪ ನಿರ್ಮಾಣ ಮಾದರಿ. ಇದರಲ್ಲಿ ಪ್ರಮುಖ ಪಾತ್ರಗಳ ವ್ಯಕ್ತಿತ್ವ ರೂಪುಗೊಂಡ ಬಗೆ, ಪಡೆದ ಶಿಕ್ಷಣ ಇತ್ಯಾದಿಗಳು ಚಿತ್ರಿತವಾಗುತ್ತವೆ. ಮಹಾಭಾರತದ ನಿಜವಾದ ಕತೆ ಪ್ರಾರಂಭವಾಗುವುದಕ್ಕಿಂತ ಮುಂಚೆ ವ್ಯಕ್ತಿ ಚರಿತ್ರೆಗಳನ್ನು ಹೇಳುವುದು ಬಿಲ್ಲಿಂಗ್ಸ್ ರೊಮಾನ್ ಅನ್ನು ಹೋಲುತ್ತದೆ.

ಒರ್ಹಾನ್ ಪಮುಕ್‌ ಬಹಳ ಮುಖ್ಯವಾದ ದ್ವಂದ ವೊಂದನ್ನು ಈ ಕೃತಿಯ ಎಲ್ಲ ಪ್ರಬಂಧಗಳಲ್ಲಿ ಒಟ್ಟಾಗಿ ಹೇಳುತ್ತಿದ್ದಾರೆ ಅನಿಸುತ್ತದೆ. ಅದೇನೆಂದರೆ ಮುಗ್ಧ ಮತ್ತು ಪ್ರಬುದ್ಧ ಎರಡರ ಅಂಶಗಳೂ ಪ್ರತಿಯೊಬ್ಬ ಓದುಗ ಮತ್ತು ಬರಹಗಾರನಲ್ಲಿ ಇರುತ್ತದೆ ಎನ್ನುವುದೇ ಆ ದ್ವಂದ್ವ 'ನಮ್ಮ ಮನಸ್ಸಿನ ಮುಗ್ಧವಾಗಿರುವ ಭಾಗ...” (ಪುಟ 81): ''ಸಾಹಿತ್ಯ ಸಿದ್ದಾಂತ, ಕಾದಂಬರಿಯ ಸ್ವರೂಪ ಇವನ್ನೆಲ್ಲ ಅರಿತಿದ್ದರೂ ನಾನು ನನ್ನ ಕಾದಂಬರಿಯ ನಾಯಕ ಕೆಮಾಲ್ ಅಲ್ಲ ಅನ್ನುವುದನ್ನು ಮರೆತಿದ್ದ ಪ್ರೊಫೆಸರನ ಹಾಗೆ ಇರುತ್ತಾರೆ (ಪುಟ 81). 

ಮ್ಯೂಸಿಯಮ್ಮು ಕಾದಂಬರಿ ಎಂಬ ಭಾಗದಲ್ಲಿ ಪಮುಕ್ ಓದುವಾಗ ಒಂದು ಮಾತು ಹೇಳುತ್ತಾರೆ: ''ಪಶ್ಚಿಮದವರಲ್ಲದ ಎಲ್ಲ ಲೇಖಕರು ಕಾದಂಬರಿ ಮಾಧ್ಯಮದ ಮೂಲಕವೇ ಸಾಗುತ್ತದೆ) ಪಶ್ಚಿಮವನ್ನು ಕಂಡಿದ್ದಾರೆ''. ಮಿಲನ್ ಕುಂದೇರ ಕೂಡ ಕಾದಂಬರಿ ಮಾಧ್ಯಮದ ಶಕ್ತಿಯ ಬಗ್ಗೆ ಇಂತಹ ಮಾತುಗಳನ್ನು ಹೇಳಿದ್ದಿದೆ. 

ಕಾದಂಬರಿಯ ಕೇಂದ್ರಕ್ಕೂ, ಕಾದಂಬರಿಯ ಕಥೆಗೂ ಇರುವ ಅಂತರವನ್ನು ಪಮುಕ್‌ ಬಹಳ ಚೆನ್ನಾಗಿ ಚರ್ಚಿಸಿದ್ದಾರೆ. ಈ ಕೇಂದ್ರವನ್ನು ಕಂಡುಕೊಳ್ಳುವುದು ಮತ್ತು ಫೋಕಸಿಗೆ  ತರುವುದು ಬರಹಗಾರನ ಬಹುದೊಡ್ಡ ಸವಾಲು ಎಂದು ಅವರು ಹೇಳುತ್ತಾರೆ. ಪ್ರಬುದ್ಧ ಓದುಗನಿಗೆ ಅದನ್ನು ಕಂಡುಕೊಳ್ಳುವ ಸವಾಲು ಇರುತ್ತದೆ. (ಮಹಾಭಾರತದ ಕೃತಿಯ ಕೇಂದ್ರ ಯಾವುದು ಎಂದು ನೀಲಕಂಠ - ಭಾರತ ಭಾವದೀಪದಲ್ಲಿ ಹೇಳಿದ ಮಾತು ಈ ಬಗೆಯದು). 'ಕಾದಂಬರಿಯ ಕೇಂದ್ರ ಇದು ಎಂದು ಮೊದಲೇ ಸ್ಪಷ್ಟವಾಗಿಬಿಟ್ಟರೆ ಓದುವುದು ಪುನರುಕ್ತಿ ಎನಿಸಿಬಿಡುತ್ತದೆ.' 'ವೈಜ್ಞಾನಿಕ, ಪತ್ತೇದಾರಿ, ಪ್ರಣಯ ಕಾದಂಬರಿ ಇಂಥವನ್ನು ಓದುವಾಗ ಈ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದೇ ಇಲ್ಲ, ನಾವು ಈಗಾಗಲೇ ಓದಿರುವ ಇಂತಹ ಕಾದಂಬರಿಗಳ ಕೇಂದ್ರವನ್ನು ಎಲ್ಲಿ ಕಂಡಿದ್ದೆವೋ ಈಗಲೂ ಅಲ್ಲೇ ಅದನ್ನು ಕಾಣುತ್ತೇವೆ. ಕೇವಲ ಸಾಹಸಗಳ ವಿವರ, ದೃಶ್ಯ, ಮುಖ್ಯ ಪಾತ್ರ ಮತ್ತು ಕೊಲೆಗಳು ಮಾತ್ರ ಬೇರೆಯಾಗಿರುತ್ತವೆ'' ( ಪುಟ 100) ಇಂತಹ ಒಳನೋಟಗಳು ಇಲ್ಲಿವೆ. ನಾವಿರುವ ಜಗತ್ತಿನಲ್ಲಿ ನೆಮ್ಮದಿ ಇಲ್ಲ ಎಂದು ತಿಳಿದುಕೊಂಡಿರುವ ಓದುಗ ಬದುಕಿನ ಅರ್ಥವನ್ನು ಅರಿಯಲು ಸಾಹಿತ್ಯಕ ಕಾದಂಬರಿಗಳನ್ನು ಓದುತ್ತಾನೆ ಎಂದು ಪಮುಕ್‌ ಹೇಳುತ್ತಾರೆ.

ಪಮುಕ್, ದಾಂತವೊಂದನ್ನು ಹೇಳುತ್ತೇನೆಂಬ ಜಿಗುಟುತನದಿಂದ ಹೇಳದೆ, ಮಿಲನ್ ಕುಂದೇರನ ರೀತಿಯಲ್ಲಿ ಅನುಭವಜನ್ಯವಾದ ಉದಾಹರಣೆಗಳು ಮೂಲಕವೇ ಚಿಂತನೆ ನಡೆಸುವುದರಿಂದ ಈ ಕೃತಿ ಆಪ್ತವಾಗುತ್ತದೆ. ಇಲ್ಲಿ ಹೊಸ ಹೊಸ ಒಳನೋಟಗಳೂ ಸಿಗುತ್ತವೆ. ಅನುವಾದಕ ಡಾ. ನಾಗಭೂಷಣಸ್ವಾಮಿಯವರು ಹೇಳುವಂತೆ, ಪಮುಕ್ ಯಾವುದೇ ಸಿದ್ದಾಂತ ಪ್ರತಿಪಾದಿಸುವುದಿಲ್ಲ, ಆದರೆ ಈ ಬರವಣಿಗೆ ಓದುತ್ತಾ ಕಾವ್ಯ ಮೀಮಾಂಸೆಯ ಪ್ರಮುಖ ನಿಲುವುಗಳು ಹೊಸ ಬೆಳಕಿನಲ್ಲಿ ಹೊಳೆಯುತ್ತವೆ. 

ಡಾ. ಬಿ. ಜನಾರ್ದನ ಭಟ್

ಕೃಪೆ : ಹೊಸ ದಿಗಂತ (2020 ಫೆಬ್ರವರಿ 23)



 

Related Books