‘ನಾವು ಮೂರ್ಖ ಮಾನವರಲ್ಲವೇ?’ ವಿನಯ್ ಅವರ ಲೇಖನ ಕೃತಿಯಾಗಿದೆ. ಆ ಕ್ಷಣದ ಸತ್ಯಗಳಿವು. ಥಟ್ಟನೆ ಹೊಳೆದದ್ದನ್ನು ಹೊಳಪಾಗಿಸಲು ಹೋಗದೇ ಹೊಳೆದಂತೆ ಬರೆದಂಥ ಟಿಪ್ಪಣಿಗಳು. ಇಲ್ಲಿ ದಿನನಿತ್ಯದ ಸಂಭ್ರಮ, ಉಲ್ಲಾಸ, ದುಗುಡ, ಆತಂಕ, ಉಪದೇಶ, ಪ್ರಶ್ನೆ, ಬೆರಗು ಎಲ್ಲವೂ ಇದೆ. ಸಾವು, ಬದುಕು, ವೇದಾಂತ, ತಮಾಷೆ, ಏಕಾಂತ, ವಿಷಾದ-ಎಲ್ಲವನ್ನೂ ವಿನಯ್ ಅವರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿದ್ದಾರೆ. ಅವರದು ಉಪದೇಶದ ಧಾಟಿ ಅಲ್ಲ, ಅರಿತುಕೊಳ್ಳುವ ಹಾದಿ. ತನಗೆ ಅನ್ನಿಸದ್ದಿನ್ನು ಓದುಗರ ಮುಂದಿಟ್ಟು ವಿಧೇಯ ವಿದ್ಯಾರ್ಥಿಯಂತೆ ಕೈ ಕಟ್ಟಿ ನಿಲ್ಲುವ ಅವರ ಸಜ್ಜನಿಕೆ ಮತ್ತು ಸರಳತೆ ಈ ಬರಹಗಳಲ್ಲೂ ಕಾಣಿಸುತ್ತದೆ. ಇವು ಎಲ್ಲರಲ್ಲೂ ಅನೇಕ ನೆನಪುಗಳನ್ನು ಉಕ್ಕಿಸಬಹುದು. ಎಲ್ಲರಲ್ಲೂ ಆಲೋಚನೆಗೆ ಹಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವಿಚಿತ್ರವಾದ ನಡವಳಿಕೆಗಳನ್ನು ಮತ್ತೊಮ್ಮೆ ನೋಡಿಕೊಂಡು ತಮಾಷೆ ಮಾಡಿಕೊಳ್ಳುವ ಸದ್ಗುಣವನ್ನು ಕರುಣಿಸಬಹುದು. ಅಷ್ಟರ ಮಟ್ಟಿಗೆ ಇವು ಸಾರ್ಥಕ.