ನಾರಾಯಣಗುರುಗಳ ಆಪ್ತ ಡಾ. ಪದ್ಮನಾಭನ್ ಪಲ್ಪು

Author : ಲಕ್ಷ್ಮಣ ಕೊಡಸೆ

Pages 108

₹ 115.00




Year of Publication: 2020
Published by: ವಿಕ್ರಂ ಪ್ರಕಾಶನ
Address: ನಂ- 23, ಅರ್ಕ, 18ನೇ ಎ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಹೆಬ್ಬಾಳ, ಭುವನೇಶ್ವರಿ ನಗರ, ಕಾಫಿಬೋರ್ಡ್ ಪಾರ್ಕ್ ಲೇಔಟ್ ಪಾರ್ಕ್ ಹತ್ತಿರ, ಬೆಂಗಳೂರು- 560024

Synopsys

‘ನಾರಾಯಣ ಗುರುಗಳ ಆಪ್ತ ಡಾ. ಪದ್ಮನಾಭನ್ ಪಲ್ಪು’ ಲೇಖಕ ಲಕ್ಷ್ಮಣ ಕೊಡಸೆ ಅವರು ರಚಿಸಿರುವ ವ್ಯಕ್ತಿಚಿತ್ರ. ಪತ್ರಕರ್ತ ಚ.ಹ. ರಘುನಾಥ ಅವರು ಮುನ್ನುಡಿ ಬರೆದು ‘ಕೇರಳದಿಂದ ಬಂದು ಮೈಸೂರು ಪ್ರಾಂತ್ಯವನ್ನು ಕರ್ಮಭೂಮಿಯನ್ನಾಗಿಸಿಕೊಂಡ ಪಲ್ಪು ಅವರ ಸಾಧನೆ ಎರಡು ರೂಪಗಳಲ್ಲಿ ಗಮನ ಸೆಳೆಯುತ್ತದೆ. ಮೊದಲನೆಯದು, ಓರ್ವ ಅಧಿಕಾರಿಯಾಗಿ ಅವರು ತಮ್ಮ ವೃತ್ತಿಯಲ್ಲಿ ಮಾಡಿದ ಸಾಧನೆ. ಎರಡನೆಯದು, ತಾನು ಹುಟ್ಟಿ ಬೆಳೆದ ಸಮಾಜದ ಏಳಿಗೆಗಾಗಿ ಬದುಕನ್ನೇ ಅರ್ಪಿಸಿಕೊಂಡ ಬಗೆ. ತಿರುವಾಂಕೂರು(ತಿರುವನಂತಪುರ) ಸಂಸ್ಥಾನದ ಪೇಟ್ಟಾಯಿಲ್ನ ನೆಡುಂದೋಡಿ ಎಂಬಲ್ಲಿ ಜನಿಸಿದ ಪದ್ಮನಾಭನ್ ಪಲ್ಪು (1863-1950) ಈಳವ ಸಮುದಾಯಕ್ಕೆ ಸೇರಿದವರು. ಅಂದಿನ ತಿರುವಾಂಕೂರು ಸಂಸ್ಥಾನದ `ಮಡಿ ಮರ್ಯಾದಸ್ಥರು' ಈಳವರೆಂದರೆ ಹಾರಿ ಬೀಳುತ್ತಿದ್ದರು. ಸಮಾಜದ ಕಡೆಗಣನೆಯ ನಡುವೆಯೂ ಕ್ರೈಸ್ತ ಮಿಷನರಿಗಳ ಸಂಪರ್ಕಕ್ಕೆ ಬಂದ ಪದ್ಮನಾಭನ್ ರ ತಂದೆ ಇಂಗ್ಲಿಷ್ ಕಲಿತಿದ್ದರು. ತಮ್ಮ ಮಕ್ಕಳು ಇಂಗ್ಲಿಷ್ ಕಲಿಯುವ ಮೂಲಕ ತಮ್ಮ ಸಾಮಾಜಿಕ ಸ್ಥಾನಮಾನ ಸುಧಾರಿಸಿಕೊಳ್ಳಬಹುದೆನ್ನುವುದು ಅವರ ನಂಬಿಕೆಯಾಗಿತ್ತು. ಆ ನಂಬಿಕೆಯೇ ಪದ್ಮನಾಭನ್ ಅವರನ್ನು ವೈದ್ಯಕೀಯ ಪದವಿಯ ದಾರಿಯಲ್ಲಿ ಕರೆದೊಯ್ದಿತು. ಆದರೆ, ಪದ್ಮನಾಭನ್ ವೈದ್ಯರಾಗುವುದು ಸುಲಭದ ಸಂಗತಿಯಾಗಿರಲಿಲ್ಲ. ತಿರುವಾಂಕೂರು ಸರ್ಕಾರ ನಡೆಸಿದ ವೈದ್ಯಕೀಯ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಎರಡನೇ ರ್‍ಯಾಂಕ್ ಪಡೆದರೂ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಅಸ್ಪೃಶ್ಯ ವ್ಯಕ್ತಿಯೊಬ್ಬ ವೈದ್ಯನಾಗಿ ಔಷಧಿಗೆ ಸೇರಿಸುವ ನೀರನ್ನು ಸವರ್ಣೀಯರು ಸೇವಿಸಲು ಒಪ್ಪುವುದಿಲ್ಲ ಎನ್ನುವ ಕಾರಣಕ್ಕಾಗಿ ಪಲ್ಪು ಅವರಿಗೆ ವೈದ್ಯನಾಗುವ ಅವಕಾಶ ನಿರಾಕರಿಸಲಾಯಿತು. ಇದರಿಂದ ಧೃತಿಗೆಡದ ಪಲ್ಪು, ಮದ್ರಾಸಿಗೆ ಬಂದು ಅಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡರು. ವೈದ್ಯ ಪದವಿಯೊಂದಿಗೆ 1889ರಲ್ಲಿ ತಿರುವಾಂಕೂರು ಸಂಸ್ಥಾನಕ್ಕೆ ಮರಳಿದರು. ಇಡೀ ಸಂಸ್ಥಾನದಲ್ಲಿ ವೈದ್ಯಕೀಯ ಪದವಿ ಪಡೆದ ಈಳವ ಸಮುದಾಯದ ಮೊದಲಿಗ ಎನ್ನುವ ಕೀರ್ತಿಗೆ ಪಾತ್ರರಾದರೂ, ಜಾತಿಯ ಕಾರಣದಿಂದಾಗಿ ಉದ್ಯೋಗ ದೊರೆಯಲಿಲ್ಲ. ಮತ್ತೆ ಮದ್ರಾಸಿಗೆ ತೆರಳಿದ ಅವರು, `ವ್ಯಾಕ್ಸಿನೇಷನ್ ಇಲಾಖೆ'ಯಲ್ಲಿ ಸೂಪರಿಂಟೆಂಡೆಂಟ್ ಹುದ್ದೆಗೆ ನೇಮಕಗೊಂಡರು. ಆ ಇಲಾಖೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೂಲಕ ಪಲ್ಪು ಅವರಿಗೆ ಕನ್ನಡನಾಡಿನ ಸಂಪರ್ಕ ದೊರೆಯಿತು. ಅಲ್ಲಿಂದ ಮುಂದೆ ಮೈಸೂರು ಸಂಸ್ಥಾನದ ಸೇವೆಗೆ ಸೇರಿಕೊಂಡ ಅವರು, ಸಂಸ್ಥಾನದ ವೈದ್ಯಕೀಯ ಹಾಗೂ ಆಡಳಿತ ವಿಭಾಗದಲ್ಲಿ ತಮ್ಮ ಛಾಪು ಮೂಡಿಸಿದ್ದರು ಹಾಗೂ ಅರಸರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂತಹ ಮಹಾನ್ ಚೇತನ ಡಾ. ಪದ್ಮನಾಭನ್ ಪಲ್ಪು ಅವರ ವ್ಯಕ್ತಿ ಚಿತ್ರವನ್ನು ಲೇಖಕ ಲಕ್ಷ್ಮಣ ಕೊಡಸೆ ಅವರು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books