ನಕ್ಸಲೇಟ್

Author : ಎನ್ ಶೈಲಜಾ ಹಾಸನ

Pages 118

₹ 100.00




Year of Publication: 2019
Published by: ಅನುಗ್ರಹ ಪ್ರಕಾಶನ
Address: ನಂ. 690, 80 ಅಡಿ ರಸ್ತೆ, ಕನಕದಾಸ ನಗರ,ತ್ರಿವೇಣಿ ಸೂಪರ್‍ ಮಾರ್ಕೆಟ್ ಹತ್ತಿರ, ದತ್ತಗಳ್ಳಿ 3ನೇ ಹಂತ ಮೈಸೂರು – 570022.
Phone: 9980808031

Synopsys

ಕಾದಂಬರಿಗಾರ್ತಿ  ಶೈಲಜಾ ಹಾಸನ್ ರವರ ' ನಕ್ಸ್ ಲೇಟ್ ' ಇವರ ಹದಿನೆಂಟನೇ ಕೃತಿ ಹಾಗೂ ನಾಲ್ಕನೇ ಕಥಾ ಸಂಕಲನ. ಈ ಸಂಕಲನದ ಹನ್ನೊಂದು ಕಥೆಗಳೂ ಕೂಡ ವಿಭಿನ್ನ ಕಥಾ ಹಂದರವನ್ನು ಹೊಂದಿವೆ. ಪ್ರತಿ ಕಥೆಯಲ್ಲೂ ಇವರ ಸಾಮಾಜಿಕ ಕಳಕಳಿ , ತುಡಿತಗಳನ್ನು ಸೂಕ್ಷ್ಮವಾಗಿ ಹಾಗೂ ಪರಿಣಾಮಕಾರಿಯಾಗಿ ದಾಖಲಿಸುವ ರೀತಿ, ನಿಭಾಯಿಸುವ ಸೂಕ್ಷ್ಮದೃಷ್ಟಿಕೋನ ಹಾಗು ಕಲಾತ್ಮಕತೆ ಎದ್ದು ಕಾಣುವುದು. ' ವಿಮಲಿಯ ಸೌಚಾಲ್ಯ ' ಕಥೆಯಲ್ಲಿ ಒಂದು ಹೆಣ್ಣು ಬಯಲು ಶೌಚಾಲಯದಿಂದ ಅನುಭವಿಸುವ ಮುಜುಗರ, ಅನಾನುಕೂಲತೆ... ಶೌಚಾಲಯವಿಲ್ಲದ ಮನೆಗೆ ಮದುವೆಯಾಗಿ ಹೋದಾಗ ತುಂಬಿದ ಮನೆಯಲ್ಲಿ ತನ್ನ ಬೇಡಿಕೆಯನ್ನು ಪೂರೈಸಿಕೊಳ್ಳಲಾಗದೆ ಅನುಭವಿಸುವ ಹತಾಶೆ , ನೋವು , ಅವಮಾನ, ಅಸಹಾಯಕ ಸ್ಥಿತಿ ಪುಟಪುಟದಲ್ಲೂ ತೆರೆದುಕೊಳ್ಳುತ್ತಾ ಹೋಗುವುದು. ಕೊನೆಗೆ ಮನೆಯವರೆಲ್ಲ ಹರಕೆ ತೀರಿಸಲು ತಿರುಪತಿಗೆ ಹೋದಾಗ ಸಂಭವಿಸುವ ಅವಘಡದಿಂದ ರೊಚ್ಚಿಗೆದ್ದು ತನ್ನ ತಾಳಿಸರವನ್ನು ಮಾರಿ ಶೌಚಾಲಯವನ್ನು ಕಟ್ಟಿಸುವ ನಿರ್ಧಾರ .....ಗಂಡಿನ ದರ್ಪ, ಹಿರಿಯರ ದಬ್ಬಾಳಿಕೆಗೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಸ್ತ್ರೀ ಬಂಡಾಯವನ್ನು ತಣ್ಣಗೆ ದಾಖಲಿಸುತ್ತದೆ. ' ನಕ್ಸ್ ಲೇಟ್ ' ಕೂಡ ವಿಭಿನ್ನ ರೀತಿಯಲ್ಲಿ ಮನಸೆಳೆಯುವ ಒಂದು ಉತ್ತಮ ಕಥೆ. ಹೆತ್ತವರನ್ನು ಧಿಕ್ಕರಿಸಿ ಜೀವನ್ ನೊಂದಿಗೆ ಓಡಿಹೋಗುವ ಶಮಂತ ಅವನ ಮೋಸದ ಬಲೆಯಿಂದ ಪಾರಾಗಿ ಮನೆಗೆ ಹಿಂದಿರುಗುತ್ತಾಳೆ. ಮನೆಯ ಶೆಡ್ ನಲ್ಲಿ ಅನಿರೀಕ್ಷಿತವಾಗಿ ಬಂಧಿಯಾಗುವ ವ್ಯಕ್ತಿಯೊಬ್ಬನಿಗೆ ಅನಿವಾರ್ಯವಾಗಿ ಆಸರೆ ನೀಡಿ ಕೆಲ ದಿನಗಳ ನಂತರ ಅವನನ್ನು ಹೊರ ಹಾಕುವಷ್ಟರಲ್ಲಿ ಅವಳ ಹೆತ್ತವರು ಅವನನ್ನೇ ತಮ್ಮ ಅಳಿಯನೆಂದು ಭ್ರಮಿಸಿರುತ್ತಾರೆ. ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ರಕ್ತ ಕ್ರಾಂತಿಗಳಿದು ಪರಿಸ್ಥಿತಿಯ ಕೈಗೊಂಬೆಯಾಗಿದ್ದ ಆ ಯುವಕ ತನ್ನ ಅನಾರೋಗ್ಯದ ಸಮಯದಲ್ಲಿ ಆಸರೆ ನೀಡಿದ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ಶಮಂತಳಿಗೆ ವಿದಾಯ ಹೇಳುವಾಗ ಅವಳ ಬದುಕಿನಲ್ಲಿ ಭರವಸೆಯನ್ನು ಮೂಡಿಸಿ ಹೋಗುತ್ತಾನೆ. ' ಕನಸಿನ ಮರ ' ಮತ್ತೊಂದು ಗಮನ ಸೆಳೆಯುವ ಕಥೆ. ಐನೋರ ಮಗ ಸೇಖರಪ್ಪನಿಂದ ತನ್ನ ಕನಸಿನ ತೆಂಗಿನ ಮರವನ್ನು ಉಳಿಸಿಕೊಳ್ಳಲು ಈರ ಮಾಡುವ ಹೋರಾಟ ಎದೆಯ ಬಾಗಿಲನ್ನು ತಟ್ಟುತ್ತದೆ. ಮಾನವ ಸಹಜ ಮತ್ಸರ, ದ್ವೇಷ, ದಬ್ಬಾಳಿಕೆ, ಪ್ರೀತಿ, ಮಾನವೀಯ ಗುಣ ಎಲ್ಲವೂ ಇದರಲ್ಲಿ ಮಡುಗಟ್ಟಿದೆ. ಪಾತ್ರಗಳು ಜೀವಂತಿಕೆಯನ್ನು ಚಿಮ್ಮಿಸುತ್ತವೆ. ಗ್ರಾಮ್ಯ ಭಾಷೆಯ ಸೂಕ್ಷ್ಮಗಳನ್ನೂ , ಮೇಲ್ವರ್ಗದ ಜನರ ದರ್ಪ, ಅಹಂಕಾರ, ಕ್ರೌರ್ಯವನ್ನು ಯಥಾವತ್ತಾಗಿ ಚಿತ್ರಿಸಲಾಗಿದೆ. ಇದರಲ್ಲಿ ಗ್ರಾಮೀಣ ಸೊಗಡಿನ ಬನಿ ಇದೆ. ಇದೇ ಈ ಕಥೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ. ಹೀಗೆ ಓದುಗನ ಮನಸ್ಸನ್ನು ಪ್ರವೇಶಿಸುವ , ಸಾಹಿತ್ಯದ ಒಳತುಡಿತಗಳನ್ನು ಹಿಡಿದಿಡುವ ಸಾಮರ್ಥ್ಯ ಈ ಕಥಾ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣಿಸುತ್ತದೆ . ಇಂತಹ ಇನ್ನೂ ಹತ್ತು ಹಲವು ಉತ್ತಮ ಕೃತಿಗಳು ಇವರ ಲೇಖನಿಯಿಂದ ಹೊರಬರಲಿ, ಇವರ ಕೃತಿಗಳ ವ್ಯಾಪ್ತಿ ಇನ್ನಷ್ಟು ಮತ್ತಷ್ಟು ಹಿಗ್ಗಲಿ ಎಂದು ಆಶಿಸುವೆ.

Related Books