ನುಡಿ ಸಂಕರ ಸಾಹಿತ್ಯ

Author : ರಹಮತ್ ತರೀಕೆರೆ

Pages 264

₹ 120.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583278

Synopsys

ಕನ್ನಡ ಭಾಷಾಭಿವೃದ್ಧಿಯ ಯೋಜನೆಯ ಅಡಿಯಲ್ಲಿ ಪ್ರಕಟಿಸಲಾದ ಕೃತಿ. ಒಂದು ಭಾಷೆಯು ಮತ್ತೊಂದು ಭಾಷೆಯ ಜೊತೆ ಬೆರೆತು ಸಂಕರವಾಗುವ ಪರಿಯನ್ನು ಲೇಖಕರು ವಿಶ್ಲೇಷಿಸಿದ್ದಾರೆ. ಎರಡು ಮತ್ತು ಎರಡಕ್ಕಿಂತ ಹೆಚ್ಚು ಭಾಷಿಕ ಪರಿಸರದಲ್ಲಿ ವಾಸಿಸುವ, ಜೀವಿಸುವ ಜನರು ಹೇಗೆ ಭಾಷೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುತ್ತಾರೆ ಮತ್ತು ಅದು ಹೇಗೆ ವಿಭಿನ್ನ ಭಾಷಿಕ ನೆಲೆಯಲ್ಲಿ ರೂಪು ತಳೆಯುತ್ತದೆ ಎಂಬ ವಿವರಗಳನ್ನು ಒಳಗೊಂಡಿದೆ. ಗ್ರಂಥವನ್ನು ಆರ ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಭಾಗ ‘ಕಥೆ’ಯಲ್ಲಿ ಶಿವಕೋಟ್ಯಾಚಾರ್ಯ, ಗುಲ್ವಾಡಿ ವೆಂಕಟರಾವ್, ಕುಂ. ವೀರಭದ್ರಪ್ಪ, ನೂರ್ ಜಹಾನ್ ಬಗ್ಗೆ ಇದ್ದರೆ, ಎರಡನೇ ಭಾಗ ಕಥನದಲ್ಲಿ ಸಿದ್ಧಲಿಂಗ ಕವಿ, ಬೆಟ್ಟದಬೀಡು ಸಿದ್ಧಶೆಟ್ಟಿ, ಅಜ್ಞಾತ ಜನಪದ ಕವಿ, ಧೋಂಡಿಬಾ ಧರಮಾಜಿ ಕಾಳೆ ಅವರ ಸಾಹಿತ್ಯಕೃತಿಗಳನ್ನು ವಿಶ್ಲೇಷಣೆಗೆ ಬಳಸಲಾಗಿದೆ. ಮೂರನೇ ಭಾಗ ‘ಪದ’ದಲ್ಲಿ ಕೈವಾರ ನಾರೇಯಣ, ಕಾಡಸಿದ್ಧ, ಮಹಿಪತಿರಾಯ, ತಿಂತಿಣಿ ಮೋನಪ್ಪ, ಅಲ್ಲಿಪೀರಾ ಸಾಹೇಬ, ಚನ್ನೂರು ಜಲಾಲ, ಬೇನೂರ ಹಜರತ್ ಕಾಕಿಪೀರಾ, ಮಂಜರ್ಲಾ ಖಾದರಸಾಹೇಬ, ಕೂಡಲೂರು ಬಸವಲಿಂಗ ಶರಣ, ಶಿಶುನಾಳ ಶರೀಫ್, ಗುರುಖಾದರಿ ಪೀರಾ ಅವರ ರಚನೆಗಳಲ್ಲಿ ಭಾಷೆ ಹೇಗೆ ಸಂಕರದ ರೂಪ ತಳೆದಿದೆ ಎಂಬ ವಿಶ್ಲೇಷಣೆಯಿದೆ. ನಾಲ್ಕನೆಯ ಭಾಗ ‘ಹಾಡು’ದಲ್ಲಿ ಜನಪದ ಕವಿಗಳು, ದಾವುಲ್ ನದಾಫ್, ಕೋನಾಪುರದ ಕಾಸೀಮ ಸಾಹೇಬ, ಲಾಡಮದನಸಾ, ಮಹಮ್ಮದ ಸಾಹೇಬ, ಸದಾನಂದಶಾಸ್ತ್ರಿ, ನಿಸಾರ್ ಅಹ್ಮದ್, ಕೆಎಂ ಅನಿಲ್, ಪದ್ಮನಾಭನ್ ಅವರ ಬರಹಗಳನ್ನು ಬಳಸಿಕೊಳ್ಳಲಾಗಿದೆ. ಐದನೆಯ ‘ಆಟ’ ಭಾಗದಲ್ಲಿ ಕುಡುತಿನಿ ನರಸಿಂಗರಾಯ, ಟಿ.ಪಿ. ಕೈಲಾಸಂ, ದ.ರಾ.ಬೇಂದ್ರೆ, ಜಯಂತ ಕಾಯ್ಕಿಣಿ, ಚಿ. ಉದಯಶಂಕರ್ ಅವರ ರಚನೆಗಳ ಹಿನ್ನೆಲೆಯಲ್ಲಿ ಚರ್ಚೆಯನ್ನು ವಿಸ್ತರಿಸಲಾಗಿದೆ. ಆರನೆಯ ‘ದಾಖಲೆ’ ಭಾಗದಲ್ಲಿ ಶಾಸನಕವಿಗಳ, ಎ.ಎನ್. ಮೂರ್ತಿರಾವ್, ಅಜ್ಞಾತ ಕರಪತ್ರಕಾರರ ಭಾಷಿಕರ ರಚನೆಗಳನ್ನು ಬಳಸಿ ಚರ್ಚೆ ವಿಸ್ತರಿಸಲಾಗಿದೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Reviews

(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)

ಭಾಷೆಗಳನ್ನು ಸಾಮಾನ್ಯವಾಗಿ ಬೇರೆ ಭಾಷೆಯ ಪದಗಳನ್ನು ಬೆರೆಸದೆ ಶುದ್ಧವಾಗಿ ಬಳಸಬೇಕೆಂಬ ಅಪೇಕ್ಷೆಯೇನೊ ಸರಿಯೆ. ಎಲ್ಲ ಭಾಷೆಗಳೂ ಯಾವುದೇ ಎರವಲು ಪದಗಳಿಲ್ಲದೆ ಇಂದು ಸ್ವತಂತ್ರವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ನುಡಿಸಂಕರ ಅರ್ಥಾತ್ ಭಾಷಾ ಬೆರಕೆ ಇಂದು ನಿನ್ನೆಯ ವಿಚಾರವೇನಲ್ಲ. ನಾವಾಡುವ ಇಂದಿನ ಕನ್ನಡದಲ್ಲಿ ನಮ್ಮ ದೇಶದ ಭಾಷೆಗಳಷ್ಟೇ ಅಲ್ಲದೆ ಅನ್ಯದೇಶಗಳ ಭಾಷಾ ಪದಗಳು ಹೇರಳವಾಗಿದ್ದು "ಎರವಲು ಪದಕೋಶ''ವೆಂಬ ಶಬ್ದಕೋಶವನ್ನೇ ನವಕರ್ನಾಟಕ ಪ್ರಕಟಿಸಿದೆ. ದಕ್ಷಿಣ ಭಾರತದ ನಾಲ್ಕು ಪ್ರಾದೇಶಿಕ ಭಾಷೆಗಳಲ್ಲಿ ಪದ ಉಚ್ಚಾರ - ಅರ್ಥಗಳಿಗೆ ತೀರ ಸಾಮೀಪ್ಯವಿದ್ದು ದ್ರಾವಿಡ ಭಾಷೆಗಳೆನಿಸಿವೆ. ನುಡಿಸಂಕರವು ಯಾವುದೇ ಭಾಷೆಯನ್ನು ಹಾಳುಮಾಡಬೇಕೆಂಬ ಉದ್ದೇಶದಿಂದ ಆದದ್ದಲ್ಲ ಒಂದು ಪ್ರದೇಶದ ಜನರು ಇನ್ನೊಂದು ಕಡೆಗೆ ವಲಸೆ ಹೋದಾಗ, ಗಡಿ ಪ್ರದೇಶಗಳ ಜನರು ಪರಸ್ಪರ ವ್ಯವಹರಿಸುವಾಗ ಎರಡು ಭಾಷೆಗಳ ಪದಗಳು ಸೇರ್ಪಡೆಗೊಳ್ಳುತ್ತವೆ. ಜನರಿಗೆ ಭಾಷಾಶುದ್ಧಿಗಿಂತ ವಿಷಯದ ಅರಿವಾಗುವುದು ಮುಖ್ಯ. ಈ ಪುಸ್ತಕವು ಭಾಷೆಗಳ ಪದಗಳು ಪರಸ್ಪರ ಮಿಳಿತವಾಗಲು ಕಾರಣಗಳನ್ನೂ ಅದು ಎಂದಿನಿಂದ ಪ್ರಾರಂಭವಾಗಿರಬಹುದೆಂಬ ಕಾಲದ ವ್ಯಾಪ್ತಿಯನ್ನೂ ಶೋಧಿಸುತ್ತ ಸಾಗಿದೆ. ಇಲ್ಲಿ ಸಂಗ್ರಹಿಸಲಾದ ತತ್ವಪದ, ಶಾಸನ, ವಚನ ಮುಂತಾದ ವಿವಿಧ ಆಕರಗಳು ಇದನ್ನು ಸ್ಪಷ್ಟಪಡಿಸಿವೆ. ಒಂದಲ್ಲ - ಎರಡಲ್ಲ ಅದ್ಭುತ ಮಾಹಿತಿಗಳ ಭಂಡಾರವನ್ನೇ ಬೃಹತ್ ಪ್ರಮಾಣದಲ್ಲಿ ಸಾದರಪಡಿಸಿ ಓದುಗನ ಕುತೂಹಲ ತಣಿಸಿದೆ.

Related Books