ನ್ಯಾಯನಿಷ್ಠುರಿಗಳ ಜತೆಯಲ್ಲಿ

Author : ರಹಮತ್ ತರೀಕೆರೆ

Pages 308

₹ 300.00




Year of Publication: 2019
Published by: ಅಭಿನವ ಪ್ರಕಾಶನ
Address: 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

’ಪಂಡಿತ ತಾರಾನಾಥ್ ವಾಸ್ ಮೈ ಬಯಲಾಜಿಕಲ್ ಫಾದರ್: ಈ ಅಲಿ ಅಕ್ಬರ್‌ ಖಾನ್ ಕೂಡ ನಮ್ಮಪ್ಪ. ನನ್ನ ಪ್ರತಿ ಕಣಕಣವೂ ಅವರೇ-ರಾಜೀವ ತಾರಾನಾಥ’ ’ಚಳವಳಿ ಅಂತಂದಾಗ ಅದನ್ನ ಮಾಡ್ತಾ ಮಾಡ್ತಾ ಅದರಲ್ಲೇ ಸುಸ್ತಾಗ್ಬಿಟ್ಟು ಏಳ್ತಾಬೀಳ್ತಾ ಇರಬೇಕಾಗುತ್ತೆ. ರಾಜಕಾರಣ ಮಾಡ್ತಾ ಹೋದ್ರೆ ಚಳುವಳಿ ನಲುಗೋಯ್ತವೆ -ದೇವನೂರ ಮಹಾದೇವ’. ಹೀಗೆ ವಿವಿಧ ಚಿಂತಕರ ಬರಹಗಾರರನ್ನು ಸಂದರ್ಶನ ನಡೆಸಿ ರಚಿಸಿರುವ ಸಂಕಲನ ’ನ್ಯಾಯನಿಷ್ಠುರಿಗಳ ಜತೆಯಲ್ಲಿ’. ಇದೊಂದು ವಿವಿಧ ತೆರನಾದ ಆಲೋಚನೆಗಳ ಮೂಲಕ ಸಮಾಜವನ್ನು ನೋಡುವ ಪ್ರಗತಿಪರ ಚಿಂತಕರ ಚಿಂತನೆಗಳನ್ನು ರಹಮತ್‌ ತರೀಕೆರೆ ಅವರ ಬರವಣಿಗೆಯ ಮೂಲಕ ಅಕ್ಷರರೂಪಕ್ಕಿಳಿಸಿದ್ದಾರೆ.

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Reviews

ನ್ಯಾಯನಿಷ್ಟುರಿಗಳ ಜತೆ ಮಾತು-ಕತೆ

ಹಿಂದೆ 'ಲೋಕ ವಿರೋಧಿಗಳ ಜತೆಯಲ್ಲಿ ಎನ್ನುವ ಈ ಸಂಪುಟದಲ್ಲಿ ಸಾರ್ವಜನಿಕ ಮಹತ್ವದ ವ್ಯಕ್ತಿಗಳನ್ನು ರಹಮತ್ ತರೀಕೆರೆ ಮಾತನಾಡಿಸಿದ್ದರು. ಆ ವ್ಯಕ್ತಿಗಳ ನೆನಪುಗಳನ್ನು ಕೆದಕಿ, ವರ್ತಮಾನದ ತಲ್ಲಣಗಳಿಗೆಬ ಪ್ರತಿಕ್ರಿಯೆಗಳನ್ನು ಪಡೆದಿದ್ದರು. ಇದರ ಮುಂದುವರಿದ ಜತೆಯಲ್ಲಿ ಭಾಗದಂತೆ 'ನ್ಯಾಯನಿಷ್ಟುರಿಗಳ ಜತೆಯಲ್ಲಿ' ಎನ್ನುವ ಎರಡನೇ ಸಂಪುಟ ಈಗ ಬಿಡುಗಡೆಯಾಗಿದೆ. ರಾಜೀವ ತಾರಾನಾಥ, ದೇವನೂರ ಮಹಾದೇವ, ಜಿ.ಎಸ್.ಶಿವರುದ್ರಪ್ಪ ಎಂ.ಎಂ.ಕಲಬುರ್ಗಿ, ಚಂದ್ರಕಾಂತ ಕುಸನೂರ, ಶಾಂತರಸ, ಕುಸುಮಾಕರ ದೇವರಗೆಣ್ಣೂರು, ಗಣೇಶ್ ದೇವಿ, ಮಾಣಿಕ್ ಸರ್ಕಾರ್ ಸೇರಿದಂತೆ ಹದಿನೈದು ನ್ಯಾಯನಿಷ್ಟುರಿಗಳ ನೇರ ಮಾತನ್ನು ರಹಮತ್ ಅವರು ಓದುಗರ ಮುಂದಿಟ್ಟಿದ್ದಾರೆ. ಸೂಕ್ಷ್ಮ ಮನಸ್ಸಿನ ರಹಮತ್ ಅವರು, ಸಮಾಜದ ತುರ್ತುಗಳಿಗೆ ಪೂರಕವಾದ ಪ್ರಶ್ನೆಗಳನ್ನು ನ್ಯಾಯನಿಷ್ಟುರಿಗಳ ಮುಂದಿಟ್ಟಿದ್ದಾರೆ. ಪ್ರಶ್ನೆಗಳಲ್ಲಿ ಉದ್ದೇಶಪೂರ್ವಕ ಕೆಣಕುತನ ಮತ್ತು ವಾಗ್ವಾದತನವಿದೆ. ಇದು ಬೆಂಕಿಹುಳಕ್ಕೆ ಕಡ್ಡಿಯನ್ನು ತಾಗಿಸಿ ಬೆಳಕು ಹೊಮ್ಮಿಸುವಂತೆ, ಸಾಧಕರ ಅನುಭವ ಮತ್ತು ಚಿಂತನೆಗಳನ್ನು ಓದುಗರಿಗೆ ದಕ್ಕಿಸುವ ತಂತ್ರ' ಎಂದು ರಹಮತ್ ಹೇಳಿಕೊಂಡಿದ್ದಾರೆ. ಪುಸ್ತಕದಲ್ಲಿನ ಟಿಪ್ಪಣಿಗಳು ಮತ್ತು ಅನುಬಂಧಗಳು ಓದುಗರ ಅರಿವನ್ನು ಗಟ್ಟಿಗೊಳಿಸಲು ಪೂರಕವಾಗಿವೆ.

ಕೃಪೆ : ವಿಜಯ ಕರ್ನಾಟಕ (2020 ಫೆಬ್ರವರಿ 09)

.............................................................................................................

ನ್ಯಾಯನಿಷ್ಠುರಿಗಳ ಜತೆಯಲ್ಲಿ

ಅಭಿನವ ಪ್ರಕಾಶನಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ‘ಬೆಳ್ಳಿ ಬೆಗಡು ಮಾಲಿಕೆ’ಯಡಿ ಹೊರತಂದ ಹತ್ತನೆಯ ಕೃತಿ ಇದು. ಲೇಖಕರು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕ ಮಹತ್ವದ ವ್ಯಕ್ತಿಗಳ ಜತೆ ನಡೆಸಿದ ಮಾತುಕತೆಯ ಸಂಪುಟವಿದು. ಇದರಲ್ಲಿರುವ ಮಹತ್ವದ ವ್ಯಕ್ತಿಗಳ ಪೈಕಿ ಕುಸುಮಾಕರ ದೇವರಗೆಣ್ಣೂರ, ಜಿ.ಎಸ್‌. ಶಿವರುದ್ರಪ್ಪ, ಪಿ.ಎಸ್‌.ಪಾಟೀಲ, ಢೆರೆ, ಅಸಘರಲಿ, ಶಾಂತರಸ, ಕೋ. ಚೆನ್ನಬಸಪ್ಪ ಹಾಗೂ ಎಂ.ಎಂ. ಕಲಬುರ್ಗಿ ಅಗಲಿದ್ದಾರೆ. ಲೇಖಕರು ಹೇಳಿರುವಂತೆ ಪ್ರತಿ ಮಾತುಕತೆಯೂ ಆಯಾ ವ್ಯಕ್ತಿಯ ವಿಶಿಷ್ಟ ಚಿಂತನೆ, ಸಾಧನೆ ಮತ್ತು ಪರಿಮಿತಿಗಳ ಬಿಂಬವಾಗಿದೆ. ಸಿದ್ಧ ಪ್ರಶ್ನೆಗಳನ್ನು ಕೇಳಿ ಉತ್ತರ ದಾಖಲಿಸುವ ವಿಧಾನಕ್ಕಿಂತ ಅವರು ನೀಡಿದ ಉತ್ತರದೊಳಗಿನಿಂದಲೇ ಹೊಸ ಪ್ರಶ್ನೆ ಹುಟ್ಟಿಸಿ ಮಾತುಕತೆಯನ್ನು ಬಳ್ಳಿಯಂತೆ ಬೆಳೆಸಿರುವುದು ಓದಿನ ಓಘಕ್ಕೆ ಹಿತವೆನಿಸುತ್ತದೆ.  ದಾರ್ಶನಿಕ ಗ್ರಹಿಕೆ, ಜ್ಞಾನಶಾಸ್ತ್ರ, ಸಾಹಿತ್ಯ, ನಾಗರಿಕತೆ ಹಾಗೂ ಮನುಕಲ ಕುರಿತ ಚಾಚು, ಅಷ್ಟೇ ಏಕೆ, ರಾಜಕಾರಣದ ಚರ್ಚೆ, ಸಾಮಾಜಿಕ ಚಿಂತನೆ, ಭಾಷೆ ಮತ್ತು ಕಲಾ ಮೀಮಾಂಸೆಯ ಹೊಳವುಗಳು ಓದಿಗೆ ದಕ್ಕುತ್ತವೆ.

ಕೃಪೆ : ಪ್ರಜಾವಾಣಿ (2020 ಮಾರ್ಚಿ 22)

Related Books